
ಬೆಂಗಳೂರು: ಕರ್ನಾಟಕದ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರಕ್ಕೆ ಮತ್ತಷ್ಟು ಬಲ ತುಂಬುವ ನಿಟ್ಟಿನಲ್ಲಿ ಬೆಂಗಳೂರು ಮೂಲದ ಆಸ್ಟ್ರೋಬೇಸ್ ಸ್ಪೇಸ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ₹500 ಕೋಟಿ ಹೂಡಿಕೆ ಮಾಡಲು ಮುಂದಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ಆದಿನಾರಾಯಣ ಹೊಸಹಳ್ಳಿ ಫೇಸ್-II ವಿಶೇಷ ಆರ್ಥಿಕ ವಲಯದಲ್ಲಿ (SEZ) 10 ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ಉತ್ಪಾದನಾ ಘಟಕ ಸ್ಥಾಪಿಸಲು ಸಂಸ್ಥೆ ಉದ್ದೇಶಿಸಿದೆ. ಇಲ್ಲಿ ರಾಕೆಟ್ ಎಂಜಿನ್ಗಳು, ಪ್ರೊಪಲ್ಷನ್ ವ್ಯವಸ್ಥೆಗಳು ಹಾಗೂ ಉಡಾವಣಾ ವಾಹನಗಳ ರಚನಾತ್ಮಕ ಬಿಡಿಭಾಗಗಳನ್ನು ಉತ್ಪಾದಿಸುವ ಯೋಜನೆ ರೂಪಿಸಲಾಗಿದೆ.
ಸಂಸ್ಥೆಯ ಹಿರಿಯ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಹೂಡಿಕೆ ಹಾಗೂ ಕಂಪನಿಯ ವಿಸ್ತರಣಾ ಯೋಜನೆಗಳ ಕುರಿತು ಸುದೀರ್ಘ ಚರ್ಚೆ ನಡೆಸಲಾಗಿದೆ. ಘಟಕ ಸ್ಥಾಪನೆಗೆ ಅಗತ್ಯವಿರುವ ಮೂಲಸೌಕರ್ಯ ಸೌಲಭ್ಯಗಳ ಬಗ್ಗೆಯೂ ಸಮಾಲೋಚನೆ ನಡೆಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಜಾಗತಿಕ ಮಟ್ಟದಲ್ಲಿ ಬೆರಳೆಣಿಕೆಯಷ್ಟು ಬಾಹ್ಯಾಕಾಶ ತಂತ್ರಜ್ಞಾನ ಕಂಪನಿಗಳು ಮಾತ್ರ ಅಭಿವೃದ್ಧಿಪಡಿಸುತ್ತಿರುವ ಅತ್ಯಂತ ಸಂಕೀರ್ಣ ತಂತ್ರಜ್ಞಾನವಾದ ‘ಫುಲ್-ಫ್ಲೋ ಸ್ಟೇಜ್ಡ್ ಕಂಬಸ್ಟನ್’ (FFSC) ರಾಕೆಟ್ ಎಂಜಿನ್ ಅನ್ನು ಭಾರತದಲ್ಲೇ ಮೊದಲ ಬಾರಿಗೆ ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ಆಸ್ಟ್ರೋಬೇಸ್ ಸಂಸ್ಥೆ ತೊಡಗಿಸಿಕೊಂಡಿದೆ. ಇದರ ಜತೆಗೆ ಮರುಬಳಕೆ ಮಾಡಬಹುದಾದ ಮಧ್ಯಮ ಸಾಮರ್ಥ್ಯದ ಉಡಾವಣಾ ವಾಹನಗಳ (Medium-lift Launch Vehicles) ಅಭಿವೃದ್ಧಿಯಲ್ಲಿಯೂ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.
ಈ ಹೂಡಿಕೆಯು ಕರ್ನಾಟಕದ ಖಾಸಗಿ ಬಾಹ್ಯಾಕಾಶ ಉದ್ಯಮದ ಬೆಳವಣಿಗೆಗೆ ಮಹತ್ವದ ಉತ್ತೇಜನ ನೀಡಲಿದೆ. ಸ್ವದೇಶಿ ತಂತ್ರಜ್ಞಾನ ಮತ್ತು ಆವಿಷ್ಕಾರಗಳಿಗೆ ಪ್ರೋತ್ಸಾಹ ನೀಡುವ ಮೂಲಕ ರಾಜ್ಯವನ್ನು ಜಾಗತಿಕ ಏರೋಸ್ಪೇಸ್ ಹಾಗೂ ಬಾಹ್ಯಾಕಾಶ ತಂತ್ರಜ್ಞಾನ ಉತ್ಪಾದನೆಯ ಪ್ರಮುಖ ಕೇಂದ್ರವನ್ನಾಗಿ ರೂಪಿಸಲು ಸರ್ಕಾರ ಬದ್ಧವಾಗಿದೆ ಎಂದು ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.