Categories: ಲೇಖನ

“ಬಿಗ್ ಬಾಸ್: ಸಾಮಾನ್ಯ ಜನರ ಮುಗ್ಧತೆ ಮತ್ತು ಮೂರ್ಖತನದ ದುರುಪಯೋಗ”…

ಬಿಗ್ ಬಾಸ್……

ಕಾರ್ಪೊರೇಟ್ ಜಗತ್ತಿನ ಸಂಪತ್ತು,
ಬಿಗ್ ಬಾಸ್ ಹನುಮಂತು, ಟ್ರ್ಯಾಪ್ ಆದ ಕೆಲವು ಪ್ರಗತಿಪರ ಚಿಂತಕರು……

ಕಾರ್ಪೊರೇಟ್ ಜಗತ್ತಿನ ಸೂಕ್ಷ್ಮಗಳನ್ನು ಅರ್ಥ ಮಾಡಿಕೊಳ್ಳಲು ಅತ್ಯಂತ ಸಂವೇದನಾಶೀಲತೆ, ಚಲನಶೀಲತೆ, ಪ್ರಬುದ್ಧತೆ ಬೇಕಾಗುತ್ತದೆ. ಅವರುಗಳು ಅತ್ಯಂತ ನಾಜೂಕಾಗಿ ಇಡೀ ವ್ಯವಸ್ಥೆಯನ್ನು ಜನರ ಬೆಂಬಲದೊಂದಿಗೆ ಆಪೋಶನ ತೆಗೆದುಕೊಳ್ಳುತ್ತಾರೆ…….

ಬಿಗ್ ಬಾಸ್ ಎಂಬ ಒಂದು ಕಾರ್ಯಕ್ರಮದ ಪರಿಕಲ್ಪನೆ ಮತ್ತು ವಿನ್ಯಾಸವೇ ಹುಚ್ಚುತನದ ಪರಮಾವಧಿ. ಮೌಲ್ಯಗಳ ಅಧ್ಹ:ಪತನ, ಮನರಂಜನೆಯ ಹೆಸರಿನ ಆರ್ಥಿಕ ದರೋಡೆ ಮತ್ತು ಸಾಮಾನ್ಯ ಜನರ ಮುಗ್ಧತೆ ಮತ್ತು ಮೂರ್ಖತನದ ದುರುಪಯೋಗ. ಅಂತಹ ಕಾರ್ಯಕ್ರಮದಲ್ಲಿ ಯಾರೇ ಭಾಗವಹಿಸಿದ್ದರೂ, ಯಾರೇ ಗೆದ್ದರೂ ಅಂತಹ ವ್ಯತ್ಯಾಸವೇನು ಆಗುವುದಿಲ್ಲ…..

ಗ್ರಾಮೀಣ ಭಾಗದ, ಮುಗ್ಧ ಮನಸ್ಸಿನ, ಅತ್ಯಂತ ತಳ ಸಮುದಾಯದ, ಬಡತನದಿಂದ ಬೆಳೆದು ಬಂದ ಕುರಿಗಾಹಿ ಹನುಮಂತು ಗೆದ್ದ ಮಾತ್ರಕ್ಕೆ ಇಡೀ ಕಾರ್ಯಕ್ರಮ ಸಾರ್ಥಕತೆ ಪಡೆಯಿತು. ಆತ ಗೆದ್ದಿದ್ದು ಈ ಸಮಾಜ ಬಹುದೊಡ್ಡ ಪರಿವರ್ತನೆಯ ಹಾದಿಯಲ್ಲಿದೆ. ಬಡವರೂ ಆ ಬೃಹತ್ ಜನಪ್ರಿಯತೆಯ ಮನರಂಜನಾ ಕಾರ್ಯಕ್ರಮವನ್ನು ಗೆಲ್ಲಬಹುದು ಮತ್ತು ನಗರದ ಕೃತಕ ಸ್ವಭಾವದ, ಮುಖವಾಡ ಮನಸ್ಥಿತಿಯ ಜನರನ್ನು ಮೀರಿ ಸಾರ್ವಜನಿಕ ಬೆಂಬಲದ ಆಧಾರದ ಮೇಲೆ ಹನುಮಂತು ಗೆಲುವು ಒಂದು ದೊಡ್ಡ ಸಾಮಾಜಿಕ ಕ್ರಾಂತಿ, ಬಂಡವಾಳ ಶಾಹಿ ವ್ಯವಸ್ಥೆ ಅಥವಾ ಶ್ರೀಮಂತರಿಗೆ ಕೊಟ್ಟ ಹೊಡೆತ ಎಂಬುದಾಗಿ ಕೆಲವು ಪ್ರಗತಿಪರ ಚಿಂತಕರು ಸಾಮಾಜಿಕ ಜಾಲತಾಣಗಳಲ್ಲಿ ಬರೆಯುತ್ತಿರುವುದನ್ನು ನೋಡಿದೆ……

ಮೇಲ್ನೋಟಕ್ಕೆ ಇದು ಸರಿ ಅನಿಸಬಹುದು. ಕೆಲವು ಅಲ್ಲಿನ ಸೋತ ಸ್ಪರ್ಧಿಗಳ ಅಸೂಯೆ ಮತ್ತು ಅವರ ಅಹಂಕಾರದ ಮಾತುಗಳು ಹಾಗು ಬಡವರ ಬಗೆಗಿನ ತಿರಸ್ಕಾರ ಇದನ್ನು ದೃಢಪಡಿಸುತ್ತದೆ. ಆದರೆ ಹನುಮಂತು ಗೆಲುವು ಈ ಕಾರ್ಪೊರೇಟ್ ಸಂಸ್ಕೃತಿ ಇಂತಹ ಮನಸ್ಸುಗಳಿಗೆ ಹಾಕುವ ಬಿಸ್ಕೆಟ್ ರೀತಿಯ ಅಮಲು ಎಂಬುದನ್ನು ಮರೆಯಬಾರದು. ಏಕೆಂದರೆ ಹೀಗೆ ಒಮ್ಮೊಮ್ಮೆ ಗ್ರಾಮೀಣ ಭಾಗದ, ಶೋಷಿತ ಸಮುದಾಯದ ಮುಗ್ಧ ವ್ಯಕ್ತಿಗಳನ್ನು ಉಪಯೋಗಿಸಿಕೊಂಡು ಕಾರ್ಪೊರೇಟ್ ಸಂಸ್ಕೃತಿ ಮುಂದೆ ಭವಿಷ್ಯದಲ್ಲಿ ತನ್ನ ವಿರಾಟ್ ರೂಪವನ್ನು ಪ್ರದರ್ಶಿಸುತ್ತದೆ…..

ಈ ಬಂಡವಾಳಶಾಹಿ ವ್ಯವಸ್ಥೆಯ ಚಿಂತನೆ ಹೇಗಿರುತ್ತದೆ ಎಂದರೆ ಅದು ಎಂದೂ ನೇರ ಘರ್ಷಣೆಗೆ ಇಳಿಯುವುದಿಲ್ಲ. ಜನರ ಮನಸ್ಥಿತಿಯನ್ನು ನೋಡಿಕೊಂಡು, ಅವರದೇ ದಾರಿಯಲ್ಲಿ ಹೆಜ್ಜೆ ಹಾಕುತ್ತಾ, ಅವರ ಮನಸ್ಸುಗಳನ್ನು ನಿಯಂತ್ರಿಸಿ, ಅನಿವಾರ್ಯಗೊಳಿಸಿ, ದೇಹವನ್ನು ನಿರ್ವೀರ್ಯಗೊಳಿಸಿ, ಕೊನೆಗೆ ಭಾವನಾತ್ಮಕವಾಗಿ ತನ್ನ ಗುಲಾಮರನ್ನಾಗಿ ಮಾಡಿಕೊಳ್ಳುವ ವ್ಯವಸ್ಥಿತ ಸಂಚು ಕಾರ್ಪೊರೇಟ್ ಉದ್ಯಮಗಳು ಮಾಡುತ್ತವೆ. ಅದರ ಒಂದು ಭಾಗವೇ ಬಿಗ್ ಬಾಸ್ ಎಂಬ ಕಾರ್ಯಕ್ರಮ ಮತ್ತು ಅದರಲ್ಲಿ ಹನುಮಂತು ಗೆದ್ದಿದ್ದು….

ಅತಿ ಬುದ್ದಿವಂತ ಯುವಕರನ್ನು, ಅತಿಹೆಚ್ಚು ಸಂಬಳ ನೀಡಿ ಉದ್ಯೋಗಿಗಳಾಗಿ ಮಾಡಿಕೊಳ್ಳುವ ಜಗತ್ತಿನ ಈ ಕಾರ್ಪೊರೇಷನ್ ಸಂಸ್ಕೃತಿ ಇಡೀ ವಿಶ್ವದ ಮೇಲೆ ಬಿಗಿಹಿಡಿತ ಸಾಧಿಸುತ್ತಿರುವುದು, ಇದರ ಸಂಕೇತವೇ ಈ ರೀತಿಯ ಕಾರ್ಯಕ್ರಮಗಳು‌. ಇದೊಂದು ಸಾಂಕೇತಿಕತೆ ಮಾತ್ರ. ಇದರ ಒಳಗಡೆ ಇನ್ನೂ ಆಳವಾದ ಸೂಕ್ಷ್ಮತೆ ಅಡಗಿರುತ್ತದೆ…..

ನೀವೇ ಗಮನಿಸಿ, ಬಿಗ್ ಬಾಸ್ ನಲ್ಲಿ ಭಾಗವಹಿಸುವ ಯಾವುದೇ ಸ್ಪರ್ಧಿಗಳು ಅಧ್ಯಯನ ನಿರತರಲ್ಲ, ಬಹುದೊಡ್ಡ ಅನುಭವಿಗಳಲ್ಲ, ಸಮಾಜ ಸುಧಾರಕರಲ್ಲ, ಚಿಂತಕರಲ್ಲ, ದಾರ್ಶನಿಕರಲ್ಲ, ಉದ್ಯಮಿಗಳಲ್ಲ, ಯಾವುದೇ ವೃತ್ತಿಯ ಶ್ರೇಷ್ಠ ಸಾಧಕರು ಅಲ್ಲ, ಚಿಂತನಶೀಲರೂ ಅಲ್ಲ. ಬಹುತೇಕ ಕಿರುತರೆ, ಚಲನಚಿತ್ರ ರಂಗ ಅಥವಾ ಸಾಮಾಜಿಕ ಜಾಲತಾಣದ ಕ್ರೇಜಿ ಬಾಯ್ಸ್ ಅಂಡ್ ಗರ್ಲ್ಸ್ ಗಳೇ ಆಗಿರುತ್ತಾರೆ. ಅವರಿಗೆ ಈ ಸಮಾಜದ ಆಗುಹೋಗುಗಳ ಯಾವ ಸೂಕ್ಷ್ಮತೆಯ ಅರಿವೂ ಇರುವುದಿಲ್ಲ, ಜವಾಬ್ದಾರಿಯೂ ಇರುವುದಿಲ್ಲ. ಕೇವಲ ತಾವು ಬದುಕಿನಲ್ಲಿ ಯಶಸ್ವಿಯಾಗಬೇಕು, ಅದಕ್ಕಾಗಿ ಕೆಲವು ಮನರಂಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಮನಸ್ಥಿತಿ ಮಾತ್ರ ಇರುತ್ತದೆ……

ಇದು ಕುರಿಗಾಹಿ ಹನುಮಂತು ಅವರಿಗೂ ಸಹ ಅನ್ವಯಿಸುತ್ತದೆ. ಏಕೆಂದರೆ ಆತ ಒಬ್ಬ ಮುಗ್ಧ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಮುಗ್ಧತೆಯಷ್ಟೇ ಮೂರ್ಖತನ ಮತ್ತು ಸ್ವಾರ್ಥವೂ ಅಡಗಿರುತ್ತದೆ‌. ಅದು ವೈಯಕ್ತಿಕ ಮಟ್ಟದಲ್ಲಿದೆ ನಿಜ, ಆದರೆ ಈ ರೀತಿಯ ಕಾರ್ಯಕ್ರಮದಲ್ಲಿ ಅತ್ಯಂತ ಸಣ್ಣತನ, ದ್ವೇಷ, ಅಸೂಯೆ, ಹಿಂಸೆ, ಕ್ರೌರ್ಯ, ಮೌಢ್ಯ, ಅಜ್ಞಾನ ಎಲ್ಲವನ್ನೂ ಕೆರಳಿಸಿ, ಜನರಿಗೆ ಮನರಂಜಿಸಿ, ಅದರಲ್ಲಿ ಹನುಮಂತು ಗೆದ್ದರೂ ಒಂದೇ, ಇತರರು ಗೆದ್ದರೂ ಒಂದೇ. ಇದೆಲ್ಲವೂ ಕಾರ್ಪೊರೇಟ್ ಲಾಭಿಗಳ ವಂಚಕ ಪ್ರಪಂಚದ ವಿವಿಧ ಮುಖಗಳು ಮಾತ್ರ….

ಇವತ್ತು ಹನುಮಂತುವನ್ನು ಗೆಲ್ಲಿಸಿ, ನಾಳೆ ಹುಚ್ಚ ವೆಂಕಟ್ ಅನ್ನು ಗೆಲ್ಲಿಸಿ, ಮತ್ತೊಮ್ಮೆ ಪ್ರಥಮನನ್ನು ಗೆಲ್ಲಿಸಿ, ಇನ್ನೊಮ್ಮೆ ಇನ್ಯಾರನ್ನೋ ಗೆಲ್ಲಿಸಿ ಹೀಗೆ ಆಟ ಮುಂದುವರೆಯುತ್ತಲೇ ಇರುತ್ತದೆ. ಇಡೀ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭಾರತೀಯ ಮೌಲ್ಯಗಳಾಗಲಿ, ಮಾನವೀಯ ಮೌಲ್ಯಗಳಾಗಲಿ, ಸಾಮಾಜಿಕ ಮೌಲ್ಯಗಳಾಗಲಿ, ವ್ಯಕ್ತಿಗತ ಮೌಲ್ಯಗಳಾಗಲಿ, ಭವಿಷ್ಯದ ಕನಸುಗಳಾಗಲಿ ಎಲ್ಲಿವೆ ಹುಡುಕಿ ನೋಡಿ. ಸಮಾಜದ ಮೇಲೆ ಈ ಕಾರ್ಯಕ್ರಮ ಬೀರುತ್ತಿರುವ ಒಳ್ಳೆಯ ಮತ್ತು ಕೆಟ್ಟ ಅಂಶಗಳನ್ನು ಪಟ್ಟಿ ಮಾಡಿ ನೋಡಿ…..

ಅಷ್ಟೇ ಅಲ್ಲ, ನಿರೂಪಣೆ ಮಾಡುವ ಖ್ಯಾತ ಚಿತ್ರನಟ ಸಹ ಇಡೀ ಕಾರ್ಯಕ್ರಮವನ್ನು ತನ್ನ ಅಹಂಮಿಕೆಯಲ್ಲಿ, ತಾನೊಬ್ಬ ಅತಿಮಾನುಷ ವ್ಯಕ್ತಿಯಂತೆ, ರಿಂಗ್ ಮಾಸ್ಟರ್ ನಂತೆ, ಒಳಗಿರುವ ವ್ಯಕ್ತಿಗಳನ್ನು ಪ್ರಾಣಿಗಳಂತೆ ಹಿಂಸಿಸಿ, ಚಿತ್ರಿಸಿ, ಬುದ್ಧಿ ಹೇಳಿ ಕಲಿಸಿ, ತಾನು ಮಾತ್ರ ದೇವದೂತನಂತೆ, ತನ್ನ ಕುಟುಂಬ ಅತ್ಯಂತ ಶ್ರೇಷ್ಠ ಎಂಬಂತೆ ಬಿಂಬಿಸಿಕೊಂಡು ನಿರೂಪಿಸುತ್ತಾರೆ. ಅದಕ್ಕೆ ವಿವಿಧ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು ವಿಚಿತ್ರ ರೀತಿಯಲ್ಲಿ ಸಮರ್ಥನೆ ಅಥವಾ ವಿರೋಧ ವ್ಯಕ್ತಪಡಿಸುತ್ತವೆ…..

ಜೊತೆಗೆ ಅದರಲ್ಲಿ ಭಾಗವಹಿಸಿದ ಸ್ಪರ್ಧಿಗಳು ಹೊರಗೆ ಬಂದ ನಂತರ ಮಹಾನ್ ಸಾಧಕರಂತೆ ಸಮಾಜದ ಕೆಲವರು ಮತ್ತು ಮಾಧ್ಯಮಗಳು ಅವರನ್ನು ಸ್ವಾಗತಿಸುತ್ತಾರೆ, ಪ್ರಶ್ನೆಗಳನ್ನು ಕೇಳುತ್ತಾರೆ. ಒಬ್ಬ ಜಾಡಮಾಲಿ, ಒಬ್ಬ ಕೂಲಿ, ಒಬ್ಬ ರೈತ, ಒಬ್ಬ ಉಪಾಧ್ಯಾಯ, ಒಬ್ಬ ವೈದ್ಯ, ಒಬ್ಬ ಸಾಹಿತಿ, ಒಬ್ಬ ಕಥೆಗಾರ, ಒಬ್ಬ ಪತ್ರಕರ್ತ ಹೀಗೆ ಸಾಮಾನ್ಯ ವ್ಯಕ್ತಿಗಳಿಗಿಂತ ಯಾವುದೇ ರೀತಿಯ ವಿಶೇಷ ವೈಶಿಷ್ಟ್ಯ ವ್ಯಕ್ತಿತ್ವ ಹೊಂದಿಲ್ಲದ ಈ ಸ್ಪರ್ಧಿಗಳನ್ನು ಕೇವಲ ಇಡೀ ರಾಜ್ಯಾದ್ಯಂತ ಜನಪ್ರಿಯರಾಗುತ್ತಾರೆ, ಆ ಕಾರ್ಯಕ್ರಮವನ್ನು ಹೆಚ್ಚು ಜನ ನೋಡುತ್ತಾರೆ ಎನ್ನುವ ಒಂದೇ ಆಧಾರದ ಮೇಲೆ ಅವರನ್ನು ಸಮಾಜ ಬಹಳ ಎತ್ತರಕ್ಕೆ ನೋಡುವುದು ವಿಚಿತ್ರವೆನಿಸುತ್ತದೆ…..

ಅವರುಗಳು ಕೂಡ ಅತ್ಯಂತ ಬಾಲಿಶವಾಗಿ, ಸಣ್ಣ ವಿಷಯಗಳಿಗೂ ಕೆಟ್ಟ ರೀತಿಯ ಪ್ರತಿಕ್ರಿಯೆ ಕೊಡುವುದನ್ನೇ ಚರ್ಚೆಯ ವಿಷಯವಾಗಿಸುವುದು, ಈ ಸಮಾಜದ ದುರಂತ. ಪ್ರಗತಿಪರರೆನಿಸಿಕೊಂಡ ಕೆಲವರು ಸಹ ಈ ಕಾರ್ಯಕ್ರಮದಲ್ಲಿ ಹನುಮಂತು ಗೆದ್ದಿದ್ದು ಒಂದು ದೊಡ್ಡ ಸಾಧನೆ ಎಂಬಂತೆ ಚಿತ್ರಿಸುತ್ತಿರುವುದು ಆಶ್ಚರ್ಯವಾಗುತ್ತದೆ. ಹನುಮಂತು ಸಹ ಒಂದು ದಿನಕ್ಕೂ ಇಲ್ಲಿನ ಭ್ರಷ್ಟಾಚಾರ, ಇಲ್ಲಿನ ಜಾತಿ ವ್ಯವಸ್ಥೆ, ಇಲ್ಲಿನ ಅನ್ಯಾಯ ಅಕ್ರಮಗಳ ಬಗ್ಗೆ ಧ್ವನಿ ಎತ್ತಿಲ್ಲ. ಬಹುಶಃ ಆತನಿಗೆ ಅದರ ಅರಿವೂ ಇಲ್ಲ. ಕೇವಲ ಒಂದು ಮುಗ್ಧತೆ ಮಾತ್ರ ಅವರನ್ನು ಈ ಹಂತಕ್ಕೆ ತೆಗೆದುಕೊಂಡು ಬಂದಿದೆ. ಅದಕ್ಕೆ ಸಂತೋಷಪಡೋಣ…..

ಅನೇಕ ಕೃತಕ ಮುಖವಾಡಗಳ ಮಧ್ಯೆ ಹನುಮಂತ ಗೆದ್ದಿದ್ದು ಉತ್ತಮವೇ ಇರಬಹುದು. ಆದರೆ ಆ ಇಡೀ ಕಾರ್ಯಕ್ರಮದ ವಿನ್ಯಾಸ ಒಂದು ರೀತಿ ಇಡೀ ಸಮಾಜಕ್ಕೆ ಬಿಸ್ಕೆಟ್ ಎಸೆದಂತೆ. ಕಾರ್ಪೊರೇಷನ್ ಸಂಸ್ಕೃತಿ ಒಬ್ಬ ನಟ ಮತ್ತು ಒಂದು ವಾಹಿನಿಯ ಮೂಲಕ ಇಡೀ ಸಮಾಜವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಮತ್ತು ತನ್ನ ಆರ್ಥಿಕ ಅಭಿವೃದ್ಧಿಯನ್ನು ಹೊಂದುವ ಪರೋಕ್ಷ ಉದ್ದೇಶ ಹೊಂದಿರುತ್ತದೆ ಎಂಬುದನ್ನು ಮರೆಯಬಾರದು….

ಈಗಿನ ಸಾಮಾಜಿಕ ವ್ಯವಸ್ಥೆ ಬದುಕನ್ನು ಸಂಕೀರ್ಣಗೊಳಿಸಿ ಬಹುತೇಕ ಜನ ಮನರಂಜನೆಗಾಗಿ ತಹತಹಿಸುವಂತೆ ಮಾಡುತ್ತಿದೆ. ತಾವು ಮಾಡಬೇಕಾದ, ಯೋಚಿಸಬೇಕಾದ ಅನೇಕ ಒಳ್ಳೆಯ ಕೆಲಸಗಳನ್ನು ಮರೆಮಾಚಿಸಿ ಬಸ್ಸು, ರೈಲು, ಪಾರ್ಕು, ವಿಶ್ರಾಂತಿಗೃಹ, ಶಾಲಾ ಕಾಲೇಜು ಎಲ್ಲೆಂದರಲ್ಲಿ ಜೋಕುಗಳು, ರೀಲ್ಸ್ಗಳು, ಮುಂತಾದ ಮನರಂಜನೆಯನ್ನೇ ಹೆಚ್ಚು ಮಾಡಿ ಜನರನ್ನು ಒಂದು ರೀತಿ ಮಾನಸಿಕ ರೋಗಿಗಳನ್ನಾಗಿ ಮಾಡುತ್ತಿದೆ. ಈ ಬಗ್ಗೆ ಜಾಗೃತರಾಗಿ, ಎಚ್ಚರಗೊಳ್ಳಿ. ಇಲ್ಲದಿದ್ದರೆ ಈಗಾಗಲೇ ಕಾರ್ಪೊರೇಟ್ ಸಂಸ್ಕೃತಿ ನಮ್ಮನ್ನು ವಿನಾಶದೆಡೆಗೆ ಕೊಂಡೊಯ್ಯುತ್ತಿದೆ. ನಮ್ಮ ಆಂತರಿಕ ಮತ್ತು ಬಾಹ್ಯ ಶಕ್ತಿಯನ್ನೇ ಕುಗ್ಗಿಸುತ್ತಿದೆ.
ಈ ಬಗ್ಗೆ ಎಚ್ಚರಿಕೆಗೊಳ್ಳದಿದ್ದರೆ ಇಡೀ ಭಾರತೀಯತೆಯೇ ಕುಸಿಯುವ ದಿನಗಳು ದೂರವಿಲ್ಲ, ಎಚ್ಚರ…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಸಿಂಗ್ರಹಳ್ಳಿ ಗ್ರಾಮದ ಗೋಮಾಳ ಜಮೀನು ಉಳ್ಳವರಿಂದಲೇ ಒತ್ತುವರಿ- ಮುನಿಆಂಜಿನಪ್ಪ ಆರೋಪ

ದೇವನಹಳ್ಳಿ: ತಾಲೂಕಿನ ಜಾಲಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಸಿಂಗರಹಳ್ಳಿ ಗ್ರಾಮದ ಸರ್ವೆ ನಂಬರ್ -6 ರಲ್ಲಿ ಸುಮಾರು 60…

37 minutes ago

ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರವಾಗಿ ನಟ ಪ್ರಥಮ್ ವ್ಯಂಗ್ಯ ಆರೋಪ: ದಲಿತ ಸಂಘಟನೆ ಆಕ್ರೋಶ: ಠಾಣೆ ಮುಂದೆ ಪ್ರಥಮ್ ಗೆ ಮಸಿ ಬಳಿಯುವ ಯತ್ನ

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರವಾಗಿ ವ್ಯಂಗ್ಯವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಪ್ರಥಮ್ ಗೆ ಅಂಬೇಡ್ಕರ್ ಸೇನೆ ಹೋರಾಟಗಾರರು ದೊಡ್ಡಬಳ್ಳಾಪುರ…

11 hours ago

ನಟ ಪ್ರಥಮ್ ಗೆ ಜೀವ ಬೆದರಿಕೆ ಪ್ರಕರಣ: ಸ್ಥಳ ಮಹಜರಿನಲ್ಲಿ ಘಟನೆ ಬಗ್ಗೆ ಪೊಲೀಸರಿಗೆ ಇಂಚಿಂಚು ಮಾಹಿತಿ ನೀಡಿದ ಪ್ರಥಮ್

ನಟ ಪ್ರಥಮ್ ಗೆ ಜೀವ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ದೊಡ್ಡಬಳ್ಳಾಪುರ ತಾಲೂಕಿನ ರಾಮಯ್ಯನಪಾಳ್ಯ ಸಮೀಪವಿರುವ ರೇಣುಕಾ ಯಲ್ಲಮ್ಮ ದೇವಾಲಯದ…

14 hours ago

ನಟ ಪ್ರಥಮ್ ಗೆ ಜೀವ ಬೆದರಿಕೆ ಪ್ರಕರಣ: ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಟ ಪ್ರಥಮ್

ನಟ ಪ್ರಥಮ್ ಗೆ ಜೀವ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆಂದು ನಟ ಪ್ರಥಮ್…

16 hours ago

ನಟ ಪ್ರಥಮ್ ಗೆ ಜೀವ ಬೆದರಿಕೆ ಪ್ರಕರಣ: ಯಶಸ್ವಿನಿ, ಬೇಕರಿ ರಘುಗೆ ಷರತ್ತುಬದ್ಧ ಜಾಮೀನು ಮಂಜೂರು

ನಟ ಪ್ರಥಮ್ ಗೆ ಜೀವ ಬೆದರಿಕೆ ಪ್ರಕರಣ, ದೊಡ್ಡಬಳ್ಳಾಪುರ ಪ್ರಧಾನ ಸಿವಿಲ್ ನ್ಯಾಯಾಲಯದ ವತಿಯಿಂದ ಯಶಸ್ವಿನಿ, ಬೇಕರಿ ರಘುಗೆ ಷರತ್ತುಬದ್ಧ…

16 hours ago

ನಟ ಪ್ರಥಮ್ ಗೆ ಜೀವ ಬೆದರಿಕೆ ಪ್ರಕರಣ: ಆರೋಪಿಗಳಾದ ಯಶಸ್ವಿನಿ, ಬೇಕರಿ ರಘು ದೊಡ್ಡಬಳ್ಳಾಪುರ ಕೋರ್ಟ್ ಗೆ ಶರಣು

ನಟ ಪ್ರಥಮ್ ಗೆ ಜೀವ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆ ಇಂದು…

20 hours ago