Categories: ಲೇಖನ

ನೆಮ್ಮದಿಯ ಬದುಕಿನತ್ತಾ ಸಾಗೋಣ: ಸೃಷ್ಟಿಯಲಿ ಲೀನವಾಗುವವರೆಗೂ….

ಜುಲೈ 1………..ಒಂದು ಕೃತಜ್ಞಾ ಪೂರ್ವಕ ಧನ್ಯವಾದಗಳು ಮತ್ತು ಆತ್ಮಾವಲೋಕನದ ಮನವಿ…….

ವೈದ್ಯರ ದಿನ – ಪತ್ರಕರ್ತರ ದಿನ – ಲೆಕ್ಕಪರಿಶೋಧಕರ ದಿನ –
ಅಂಚೆ ಕಾರ್ಮಿಕರ ದಿನ…..

ಎಲ್ಲವೂ ಜುಲೈ 1 ಎಂದು ಕ್ಯಾಲೆಂಡರ್ ತೋರಿಸುತ್ತಿದೆ. ಇನ್ನಷ್ಟು ವಿಶೇಷ ವೃತ್ತಿಗಳ ದಿನವೂ ಇರಬಹುದು……..

ಇರಲಿ, ಸಮಾಜದ ವಿವಿಧ ವೃತ್ತಿಗಳು ಮತ್ತು ಅದರಲ್ಲಿ ತೊಡಗಿಸಿಕೊಂಡಿರುವವರಿಗೆ ಒಂದು ಗೌರವ ಮತ್ತು ಕೃತಜ್ಞತೆ ಅರ್ಪಿಸುವ ದೃಷ್ಟಿಯಿಂದ ಈ ವಿಭಾಗದಲ್ಲಿ ನಡೆದ ಮಹತ್ವದ ಘಟನೆಯ ದಿನವನ್ನು ನೆಪವಾಗಿ ಇಟ್ಟುಕೊಂಡು ಆಚರಿಸಲಾಗುತ್ತದೆ.

ಶತಮಾನಗಳಿಂದ ಶತಮಾನಕ್ಕೆ, ದಶಕಗಳಿಂದ ದಶಕಕ್ಕೆ, ವರ್ಷಗಳಿಂದ ವರ್ಷಕ್ಕೆ ವೃತ್ತಿಗಳು ಏರಿಕೆಯಾಗುತ್ತಿದ್ದರೆ ಅದೇ ಸಮಯದಲ್ಲಿ ವೃತ್ತಿಯ ನೈತಿಕ ಮೌಲ್ಯಗಳು ಕುಸಿಯುತ್ತಾ ಸಾಗುತ್ತಿದೆ. ಇದನ್ನು ವಿವಿಧ ರೀತಿಯಲ್ಲಿ ಅರ್ಥೈಸಬಹುದು. ಅಭಿವೃದ್ಧಿ, ಆಧುನಿಕತೆ ಎಂದೂ ಕರೆಯಬಹುದು ಅಥವಾ ವಿನಾಶದ ಅಂಚಿನತ್ತ ಎಂದೂ ಭಾವಿಸಬಹುದು.

ಬಹುಮುಖ್ಯವಾಗಿ ಜನಸಂಖ್ಯೆಯ ಸ್ಪೋಟ, ಅದರಿಂದಾಗಿ ಸಂಪನ್ಮೂಲಗಳ ಕೊರತೆ, ಆ ಕಾರಣದಿಂದಾಗಿ ವಾಣಿಜ್ಯೀಕರಣ, ಅದಕ್ಕಾಗಿಯೇ ಏರ್ಪಟ್ಟ ಸ್ಪರ್ಧೆ, ಅದನ್ನು ಗೆಲ್ಲಲು ತಂತ್ರ ಕುತಂತ್ರ ಕೊನೆಗೆ Success at any cost ಸಿದ್ದಾಂತಕ್ಕೆ ಶರಣು….

ಆರೋಗ್ಯ ಎಂಬುದು ಮನುಷ್ಯನ ಮೂಲಭೂತ ಅವಶ್ಯಕತೆ. ಅದರಲ್ಲಿ ಏರುಪೇರಾದರೆ ಆತ ನೆಮ್ಮದಿಯಿಂದ ಇರಲಾರ. ಅದರಿಂದಾಗಿಯೇ ವೈದ್ಯರನ್ನು ದೇವರ ಸಮಾನರು ಎಂದು ಕರೆಯಲಾಗುತ್ತದೆ. ವೈದ್ಯಕೀಯ ಕ್ಷೇತ್ರ ಅತ್ಯಂತ ಕಠಿಣ ಶೈಕ್ಷಣಿಕ ಅಧ್ಯಯನ ವಿಭಾಗ ಎಂದೂ ಪರಿಗಣಿಸಲ್ಪಟ್ಟಿದೆ. ಆದ್ದರಿಂದ ಬಹಳ ಬುದ್ದಿವಂತರು ಮಾತ್ರ ಅದನ್ನು ಓದಲು ಸಾಧ್ಯ. ಅಂದರೆ ಅಂಕಗಳ ಲೆಕ್ಕದಲ್ಲಿ ಅತಿಹೆಚ್ಚು ಪಡೆದವರ ಮೊದಲ ಆಯ್ಕೆ ಡಾಕ್ಟರ್ ಎಂದು ಹೇಳಲಾಗುತ್ತಿತ್ತು. (ಈಗ ಸ್ವಲ್ಪ ಬದಲಾವಣೆ ಆಗಿದೆ.)

” ವೈದ್ಯಕೀಯ ಕ್ಷೇತ್ರ ಎಷ್ಟು ಮುಂದುವರಿದಿದೆ ಎಂದರೆ, ಈಗ ವಿಶ್ವದಲ್ಲಿ ಕೆಲವೇ ಆರೋಗ್ಯವಂತರು ಮಾತ್ರ ಕಾಣ ಸಿಗುತ್ತಾರೆ ” ಎಂಬ ಹಾಸ್ಯ ಮತ್ತು ವ್ಯಂಗ್ಯದ ಮಾತು ಪ್ರಚಲಿತದಲ್ಲಿದೆ. ಕಾರಣ ಈ ಕ್ಷೇತ್ರ ವಾಣಿಜ್ಯೀಕರಣಗೊಂಡಿರುವುದರಿಂದ ಕಾರ್ಪೊರೇಟ್ ಮಾಫಿಯಾಗಳು ಇದನ್ನು ಆಳುತ್ತಿದ್ದಾರೆ. ಇದೊಂದು ದಂಧೆ, ಅನಾವಶ್ಯಕ ಚಟುವಟಿಕೆಗಳೇ ಹೆಚ್ಚು ಕಾಣುತ್ತಿವೆ ಎಂಬ ಆರೋಪ ಬಲವಾಗಿ ಕೇಳಿಬರುತ್ತಿದೆ.

ಹಾಗೆಯೇ, ಬುದ್ದಿವಂತರ ಮತ್ತೊಂದು ಕ್ಷೇತ್ರ ಪತ್ರಿಕೋದ್ಯಮ. ಸಮಾಜದ ಸ್ವಾಸ್ಥ್ಯ ಕಾಪಾಡುವ ಗುರುತರ ಜವಾಬ್ದಾರಿಯನ್ನು ಹೊತ್ತಿದೆ. ವೈದ್ಯಕೀಯ ಕ್ಷೇತ್ರದಂತೆ ಇದೂ ಸಹ ಕಾರ್ಪೊರೇಟ್ ಮಾಫಿಯಾಗಳ ಕೈಗೆ ಸಿಲುಕಿ ಕಲುಷಿತಗೊಂಡಿರುವುದು ದಿನನಿತ್ಯದ ಅನುಭವಕ್ಕೆ ಬರುತ್ತಿದೆ. ಇತ್ತೀಚೆಗೆ ಇವರ ಅತಿರೇಕದ, ವಿವೇಚನಾ ರಹಿತ ನಡವಳಿಕೆಯಿಂದ ಜನರ ಆಕ್ರೋಶ ಮತ್ತು ಅಪಹಾಸ್ಯಕ್ಕೆ ಗುರಿಯಾಗುತ್ತಿದ್ದಾರೆ.

ಇನ್ನು ಸಾಮಾನ್ಯರಿಗೆ ಅಷ್ಟೇನು ಮಹತ್ವವಿಲ್ಲದ ಆದರೆ ಇತ್ತೀಚಿನ ಡಿಜಿಟಲ್ ಇಂಡಿಯಾ ಕಾರಣದಿಂದಾಗಿ ಒಂದಷ್ಟು ಮಹತ್ವ ಪಡೆದ ಕ್ಷೇತ್ರ ಲೆಕ್ಕಪರಿಶೋಧಕರದು. ಇಲ್ಲಿ ಅಂಕಿಅಂಶಗಳ ಆಟವೇ ಮುಖ್ಯವಾದ್ದರಿಂದ ಇದು ಸಮಾಜದ ಮಾನಸಿಕತೆಯ ಪ್ರತಿಬಿಂಬ. ಸದ್ಯ ತುಂಬಾ ಪ್ರಾಮಾಣಿಕತೆ ಇಲ್ಲಿ ನಿರೀಕ್ಷಿಸಲಾಗದು. ಬ್ಯಾಲೆನ್ಸ್ ಶೀಟ್ ರೀತಿ ವ್ಯವಹಾರಗಳು ಸಹ ಬ್ಯಾಲೆನ್ಸ್ ಆಗಿಯೇ ಇರುತ್ತದೆ.

ಆಧುನಿಕ ತಂತ್ರಜ್ಞಾನದ ಭರದಲ್ಲಿ ಹಿನ್ನೆಲೆಗೆ ಸರಿಯುತ್ತಿರುವ ವಿಭಾಗ ಅಂಚೆ ಕಾರ್ಮಿಕರದು. ಕೆಲ ಕಾಲದ ಹಿಂದೆ ಸುದ್ದಿಯ ಮೂಲದ ಬಹುಮುಖ್ಯ ಪಾತ್ರದಾರಿಯಾಗಿದ್ದ ಅಂಚೆಯೊಂದಿಗೆ ನಮ್ಮೆಲ್ಲರದು ಭಾವನಾತ್ಮಕ ಸಂಬಂಧ. ವೈಯಕ್ತಿಕ, ಉದ್ಯೋಗದ ಮತ್ತು ಕೌಟುಂಬಿಕ ಯೋಗಕ್ಷೇಮಗಳ, ದುಃಖ ದುಮ್ಮಾನಗಳ ಅಕ್ಷರ ರೂಪದ ಅಂಚೆ ಇಂದು ಬಹುತೇಕ ಇಂಟರ್ ನೆಟ್ ರೂಪವಾಗಿ ಬದಲಾಗಿದೆ.

ಈಗ ಇದೆಲ್ಲಾ ಇತಿಹಾಸ,
2024 ರ ವರ್ತಮಾನ, ಈ ಸಮಾಜ ಮತ್ತೆ ಯು ಟರ್ನ್ ತೆಗೆದುಕೊಂಡು ಸಾಗುವ ಮುನ್ಸೂಚನೆ ದೊರೆಯುತ್ತಿದೆ. ಮಾನವೀಯ ಮೌಲ್ಯಗಳ ವಿರುದ್ಧ ವೇಗವಾಗಿ ಸಾಗುತ್ತಿದ್ದ ವೃತ್ತಿಗಳು ದಿಢೀರ್ ಸ್ತಬ್ಧವಾಗಿದೆ. ಜನರಿಗೆ ದಿಕ್ಕು ತೋಚದಂತಾಗಿದೆ.

ಹೊಟ್ಟೆ ಪಾಡಿನ ವೃತ್ತಿಗಳು ಕ್ರಮೇಣ ಕೊಳ್ಳುಬಾಕ ಸಂಸ್ಕೃತಿಯ ಫಲವಾಗಿ ಭ್ರಷ್ಟಗೊಂಡು ಮುನ್ನಡೆಯುತ್ತಿದ್ದಾಗ ಅನಿವಾರ್ಯವಾಗಿ ಮತ್ತು ನಿಧಾನವಾಗಿ ಮತ್ತೆ ಮನುಷ್ಯನ ವೃತ್ತಿಗಳ ನೈಜ ಪ್ರಾಮುಖ್ಯತೆಯನ್ನು ನೆನಪಿಸುತ್ತಿದೆ.

ದೇಹದ ಅನಾರೋಗ್ಯಕ್ಕೆ ಔಷಧಿ ನೀಡುವ ವೈದ್ಯ, ಸಮಾಜದ ಆರೋಗ್ಯಕ್ಕೆ ಕಾವಲುಗಾರನಾಗಬೇಕಾದ ಪತ್ರಕರ್ತ, ವ್ಯಾವಹಾರಿಕ ಕ್ರಮಬದ್ದತೆಯನ್ನು ಪಾಲಿಸಲು ಸಹಕರಿಸಬೇಕಾದ ಲೆಕ್ಕಪರಿಶೋಧಕ, ನಮ್ಮ ನಡುವಿನ ಸಂಪರ್ಕ ಸೇತುವೆಯಾದ ಅಂಚೆಯಣ್ಣ ಸೇರಿ ಎಲ್ಲರೂ ಮಹತ್ವದ ವೃತ್ತಿಗಳಿಗೆ ಸೇರಿದವರೆ, ಸಮಾಜದಲ್ಲಿ ಪ್ರತಿ ವೃತ್ತಿಯೂ ತನ್ನ ಪಾಲಿನ ಕರ್ತವ್ಯ ನಿರ್ವಹಿಸಿದರೆ ಮಾತ್ರ ಅದು ಮುಂದುವರಿಯಲು ಸಾಧ್ಯ.

ಸಮಾಜ ಈ ವೃತ್ತಿಗಳಲ್ಲಿ ಪ್ರಾಮಾಣಿಕತೆಯನ್ನು, ಮಾನವೀಯ ಮೌಲ್ಯಗಳನ್ನು, ಜನಪರ ಸೇವೆಗಳನ್ನು ಮತ್ತೆ ಪುನರುಜ್ಜೀವನ ಗೊಳಿಸಿಕೊಳ್ಳಲು ಒಂದು ನೆಪವಾಗಲಿ,
ಆ ಮುಖಾಂತರ ಸಮಾಜದ ಶಾಂತಿ ಮತ್ತು ನೆಮ್ಮದಿಯ ಜೀವನ ಮಟ್ಟ ಸುಧಾರಿಸಲಿ ಎಂದು ಆಶಿಸುತ್ತಾ……

ನನಗೂ…………

ವೈದ್ಯನಾಗಬೇಕೆಂಬಾಸೆಯಾಗುತ್ತಿದೆ,..

ಎಂಬಿಬಿಎಸ್ ಮಾಡಿ ಅಲ್ಲ,
ಪಿಹೆಚ್‌ಡಿ ಓದಿ ಅಲ್ಲ,
ಗೌರವ ಡಾಕ್ಟರೇಟ್ ಪಡೆದು ಅಲ್ಲ,…..

ಜನರ ಮನಸ್ಸುಗಳ ರೋಗ ಗುರುತಿಸುವ,
ಸಮಾಜದ ನರಗಳ ದೌರ್ಬಲ್ಯ ಪತ್ತೆ ಹಚ್ಚುವ,
ಜೀವ ಸಂಕುಲದ ವಿನಾಶ ತಡೆಯುವ,
ಸಸ್ಯ ಸಂಕುಲದ ಜೀವ ಉಳಿಸುವ,
ಪ್ರಕೃತಿ ಮಾತೆಯ ಆರೋಗ್ಯ ಕಾಪಾಡುವ,
ಭೂತಾಯಿಯ ಒಡಲು ತಂಪಾಗಿಸುವ,
ವೈದ್ಯನಾಗಬೇಕೆಂಬಾಸೆಯಾಗುತ್ತಿದೆ.

ಕೊಳೆತ ಮನಸುಗಳ ಚಿಕಿತ್ಸೆ ಮಾಡಬೇಕೆಂಬಾಸೆ,
ನೆರೆತ ಕನಸುಗಳ ಚಿಗುರೊಡೆಯಿಸಬೇಕೆಂಬಾಸೆ,
ಮಲಿನ ಗಾಳಿಗೆ ಶುಧ್ದ ಆಮ್ಲಜನಕ ನೀಡುವಾಸೆ,
ಕಲ್ಮಶ ನೀರಿಗೆ ಗ್ಲೂಕೋಸ್ ಕೊಡುವಾಸೆ,
ಕಲಬೆರಕೆ ಆಹಾರಕ್ಕೆ ಕಿಮೋಥೆರಪಿ ಮಾಡುವಾಸೆ,
ಇಡೀ ಬದುಕಿಗೇ ಚೈತನ್ಯ ನೀಡಬೇಕೆಂಬಾಸೆ,
ಅದಕ್ಕಾಗಿ,
ವೈದ್ಯನಾಗಬೇಕೆಂಬಾಸೆಯಾಗುತ್ತಿದೆ…..

ನೊಂದ ಪ್ರೇಮಿಗಳಿಗೆ ಹೃದಯದ ಬೈಪಾಸ್ ಶಸ್ತ್ರಚಿಕಿತ್ಸೆ ಮಾಡುವಾಸೆ,
ಬೆಂದ ಜೀವಗಳಿಗೆ ಅಂಗಾಂಗ ಮರುಜೋಡಣೆ ಮಾಡುವಾಸೆ,
ಮುಖವಾಡದ ಮನುಷ್ಯರಿಗೆ ಅದನ್ನು ಕಿತ್ತೆಸೆದು ಸಹಜತೆ ಕೊಡುವಾಸೆ,
ಭರವಸೆ ಇಲ್ಲದ ಪೊರೆ ಬಂದಿರುವ ಕಣ್ಣುಗಳಿಗೆ ಭವಿಷ್ಯದ ಸ್ಪಷ್ಠಿ ದೃಷ್ಠಿ ನೀಡುವಾಸೆ,
ಕಿವಿ ಕೇಳಿದರೂ ಜಾಣ ಕಿವುಡಾದವರಿಗೆ ಶ್ರವಣ ಸಾಧನ ಅಳವಡಿಸಬೇಕೆಂಬಾಸೆ,
ಅದಕ್ಕಾಗಿ,
ವೈದ್ಯನಾಗಬೇಕೆಂಬಾಸೆಯಾಗುತ್ತಿದೆ.

ಬನ್ನಿ ಗೆಳೆಯರೆ ನನ್ನೊಂದಿಗೆ,.
ನಾನು ಸೇರುವೆನು ನಿಮ್ಮೊಂದಿಗೆ,
ಹೊಸ ಮನ್ವಂತರಕ್ಕೆ ನಾಂದಿಯಾಡುವ,
ವೈದ್ಯಾಲಯ ತೆರೆಯೋಣ,

ಕುಣಿಯುತ್ತಾ – ನಲಿಯುತ್ತಾ – ಬದುಕೋಣ,
ನೆಮ್ಮದಿಯ ಬದುಕಿನತ್ತಾ ಸಾಗೋಣ,
ಸೃಷ್ಟಿಯಲಿ ಲೀನವಾಗುವವರೆಗೂ….

ಇದು ಕನಸಲ್ಲ – ಕಾಲ್ಪನಿಕವಲ್ಲ.
ಮುದೊಂದು ದಿನ ನನಸಾಗಬಲ್ಲದು…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್.ಕೆ

Ramesh Babu

Journalist

Recent Posts

ರಾಹುಲ್ ಗಾಂಧಿ ಸೈದ್ಧಾಂತಿಕ ಬದ್ಧತೆಯಿರುವ ವ್ಯಕ್ತಿ….

ರಾಹುಲ್ ಗಾಂಧಿ...... ಬಿಹಾರ ಚುನಾವಣೆಯಲ್ಲಿ, ಸೀಟುಗಳ ಲೆಕ್ಕದಲ್ಲಿ ಕಾಂಗ್ರೆಸ್ ಪಕ್ಷದ ಸೋಲಿನ ನಂತರ ಶ್ರೀ ರಾಹುಲ್ ಗಾಂಧಿಯವರ ನಾಯಕತ್ವದ ಸಾಮರ್ಥ್ಯದ…

1 hour ago

ಇಬ್ಬರು ಏರೋಸ್ಪೇಸ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕಾಲೇಜಲ್ಲಿ ಶೋಕಿ ಮಾಡೋ ಖಯಾಲಿ: ಆದ್ರೆ ಜೇಬಲ್ಲಿ ಕಾಂಚಾಣ ಇಲ್ಲ: ಕಾಸಿಗಾಗಿ ಏನು ಮಾಡಿದ್ರು ಗೊತ್ತಾ……

ಕಾಲೇಜಿನಲ್ಲಿ ಶೋಕಿಗಾಗಿ ಮನೆಗಳ್ಳತನಕ್ಕೆ ಇಳಿದಿದ್ದ ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನ (Aerospace Engineering Student) ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ. ಚೇತನ್ ಹಾಗೂ…

14 hours ago

ಕನ್ನಡ ರಾಜ್ಯೋತ್ಸವ ಪ್ರಯುಕ್ತ ಹೀಲಿನ್ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಸಣಾ ಶಿಬಿರ

ಕನ್ನಡ ರಾಜ್ಯೋತ್ಸವ ಅಂಗವಾಗಿ ದೊಡ್ಡಬಳ್ಳಾಪುರದ ಹೀಲಿನ್ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಸಣಾ ಶಿಬಿರವನ್ನು ಆಸ್ಪತ್ರೆಯಲ್ಲೇ ಆಯೋಜನೆ ಮಾಡಲಾಗಿತ್ತು. ಸಾರ್ವಜನಿಕರಿಗೆ…

15 hours ago

ದೇಶದ ಅತ್ಯುತ್ತಮ ಪೊಲೀಸ್ ಠಾಣಾ ಪ್ರಶಸ್ತಿಗೆ ರಾಯಚೂರಿನ ಕವಿತಾಳ ಪೊಲೀಸ್ ಠಾಣೆ ಆಯ್ಕೆ

ಕೇಂದ್ರ ಸಚಿವಾಲಯ ನೀಡುವ ಅತ್ಯುತ್ತಮ ಪೊಲೀಸ್ ಠಾಣಾ ಪ್ರಶಸ್ತಿಗೆ ಕರ್ನಾಟಕದ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕವಿತಾಳ ಪೊಲೀಸ್ ಠಾಣೆ…

19 hours ago

ನಾಯಿ, ಹಾವು/ ಇತರೆ ಪ್ರಾಣಿಗಳ ದಾಳಿ ಪ್ರಕರಣಗಳಲ್ಲಿ ಚಿಕಿತ್ಸೆ ನೀಡುವ ಬಗ್ಗೆ ಸರ್ಕಾರಿ- ಖಾಸಗಿ ಆಸ್ಪತ್ರೆಗಳು ಅನುಸರಿಸಬೇಕಾದ ಕ್ರಮಗಳು

ನಮ್ಮ‌ ದೇಶದ ಸರ್ವೋಚ್ಚ ನ್ಯಾಯಾಲಯವು, ನಾಯಿ ಕಡಿತಕ್ಕೆ ಚಿಕಿತ್ಸೆ ನೀಡುವ ಬಗ್ಗೆ ಸರ್ಕಾರಿ- ಖಾಸಗಿ ಆಸ್ಪತ್ರೆಗಳು ಅನುಸರಿಸಬೇಕಾದ ಕ್ರಮಗಳಿಗೆ ಸಂಬಂಧಿಸಿದಂತೆ…

21 hours ago

ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಚಲಿಸುವುದು ಮನಸ್ಸು….ಮನಸ್ಸಿನ ದಾರಿಯಲ್ಲಿ ಅನಂತ ಪಯಣ….

ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಚಲಿಸುವುದು ಮನಸ್ಸು. ಕ್ಷಣ ಮಾತ್ರದಲ್ಲಿ ಲೆಕ್ಕಕ್ಕೂ ಸಿಗದಷ್ಟು ದೂರ ಚಲಿಸಬಲ್ಲದು. ಬೆಳಕಿನ ವೇಗವೂ ಅದಕ್ಕೆ ಸಾಟಿಯಲ್ಲ.....…

24 hours ago