ದೇವನಹಳ್ಳಿ–ದೊಡ್ಡಬಳ್ಳಾಪುರದ ಹಲವು ಗ್ರಾಮಗಳ ಮೇಲೆ KIADB ಕಣ್ಣು: ಕೃಷಿ ಭೂಮಿ ಉಳಿಸಿಕೊಳ್ಳಲು ಮತ್ತೆ ಹೋರಾಟದ ಸದ್ದು

ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ಕೃಷಿ ಭೂಮಿಯ ಮೇಲೆ ಮತ್ತೊಮ್ಮೆ ಭೂಸ್ವಾಧೀನದ ಆತಂಕ ಆವರಿಸಿದೆ. ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ತಾಲೂಕುಗಳ ವ್ಯಾಪ್ತಿಯಲ್ಲಿ ಸುಮಾರು 1,200 ಎಕರೆ ಭೂಮಿಯನ್ನು ಕೈಗಾರಿಕಾ ಉದ್ದೇಶಕ್ಕಾಗಿ ಸ್ವಾಧೀನಪಡಿಸಿಕೊಳ್ಳಲು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB) ಮುಂದಾಗಿದೆ ಎಂಬ ಮಾಹಿತಿ ರೈತರು ಮತ್ತು ಪರಿಸರಾಸಕ್ತರಲ್ಲಿ ಆತಂಕ ಮೂಡಿಸಿದೆ.

ದೇವನಹಳ್ಳಿ ತಾಲೂಕಿನ ಕೊಯಿರಾ, ಮಾಯಸಂದ್ರ, ಮೀಸಗಾನಹಳ್ಳಿ ಹಾಗೂ ದೊಡ್ಡಬಳ್ಳಾಪುರ ತಾಲೂಕಿನ ಸೊಣ್ಣಮಾರನಹಳ್ಳಿ, ದಂಡದಾಸಕೊಡಿಗೇನಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಉದ್ದೇಶಿತ ಭೂಸ್ವಾಧೀನಕ್ಕೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗುತ್ತಿದೆ. ಕೃಷಿ ಮತ್ತು ತೋಟಗಾರಿಕೆಗೆ ಹೆಸರಾದ ಈ ಪ್ರದೇಶದಲ್ಲಿ ಕೈಗಾರಿಕಾ ವಿಸ್ತರಣೆಗೆ ಭೂಮಿ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಬಾರದು ಎಂಬುದು ರೈತರ ಒತ್ತಾಯವಾಗಿದೆ.

ಈ ನಡುವೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಅವರು ದೇವನಹಳ್ಳಿ ತಾಲೂಕಿನಲ್ಲಿ ಮತ್ತಷ್ಟು ಭೂಸ್ವಾಧೀನ ಪ್ರಕ್ರಿಯೆ ಕೈಗೊಳ್ಳದಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿರುವುದು ಭೂಸ್ವಾಧೀನ ವಿಚಾರಕ್ಕೆ ಮತ್ತಷ್ಟು ಮಹತ್ವ ತಂದಿದೆ. ಸಚಿವರು ದೇವನಹಳ್ಳಿಯಲ್ಲಿ ಈಗಾಗಲೇ ವಿವಿಧ ಯೋಜನೆಗಳಿಗೆ ವ್ಯಾಪಕ ಪ್ರಮಾಣದಲ್ಲಿ ಭೂಮಿ ಸ್ವಾಧೀನವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿ, ಮತ್ತೊಮ್ಮೆ 1,200 ಎಕರೆ ಸ್ವಾಧೀನದ ಪ್ರಸ್ತಾವನೆಯನ್ನು ಮರುಪರಿಶೀಲಿಸುವಂತೆ ಮನವಿ ಮಾಡಿದ್ದಾರೆ.

ಈಗಾಗಲೇ ಸಾವಿರಾರು ಎಕರೆ ಭೂಮಿ ಬಳಕೆ

ವಿಮಾನ ನಿಲ್ದಾಣ ಸೇರಿದಂತೆ ವಿವಿಧ ಕೈಗಾರಿಕಾ ಮತ್ತು ಮೂಲಸೌಕರ್ಯ ಯೋಜನೆಗಳಿಗೆ ದೇವನಹಳ್ಳಿ ತಾಲೂಕಿನಲ್ಲಿ ದೊಡ್ಡ ಪ್ರಮಾಣದ ಭೂಮಿ ಬಳಕೆಯಾಗಿದೆ. ಸಚಿವ ಮುನಿಯಪ್ಪ ಅವರ ಪತ್ರದ ಪ್ರಕಾರ, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 4,417 ಎಕರೆ, ಕುಂದಾಣ ಹೋಬಳಿಯ ದೇವನಹಳ್ಳಿ ಕೈಗಾರಿಕಾ ಪ್ರದೇಶ–1 ಮತ್ತು 2ಕ್ಕೆ 2,100 ಎಕರೆ, ಚನ್ನರಾಯಪಟ್ಟಣ ಹೋಬಳಿಯಲ್ಲಿ 1,200 ಎಕರೆ ಹಾಗೂ ಕರ್ನಾಟಕ ಗೃಹ ನಿರ್ಮಾಣ ಮಂಡಳಿಗೆ ಸುಮಾರು 1,200 ಎಕರೆ ಸೇರಿದಂತೆ ಒಟ್ಟು ಸುಮಾರು 9,000 ಎಕರೆ ಭೂಮಿ ಈಗಾಗಲೇ ವಿವಿಧ ಉದ್ದೇಶಗಳಿಗೆ ಒಳಪಟ್ಟಿದೆ ಎಂದು ತಿಳಿಸಲಾಗಿದೆ.

ಈ ಪ್ರಮಾಣದ ಭೂಬಳಕೆಯಿಂದ ಜನಸಂದಣಿ, ಸಂಚಾರ ದಟ್ಟಣೆ, ವಾಯುಮಾಲಿನ್ಯ ಹಾಗೂ ಆರೋಗ್ಯ ಸಂಬಂಧಿತ ಸಮಸ್ಯೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದು ಸೂಕ್ತವಲ್ಲ ಎಂಬುದು ಸಚಿವರ ವಾದವಾಗಿದೆ.

ಜಲಾನಯನ ಪ್ರದೇಶಕ್ಕೆ ಧಕ್ಕೆ?

ಉದ್ದೇಶಿತ ಪ್ರದೇಶವು ಅರ್ಕಾವತಿ–ಕುಮುದ್ವತಿ ನದಿ ಜಲಾನಯನ ವ್ಯವಸ್ಥೆ, ಕೊಯಿರಾ ಮತ್ತು ಮೀಸಗಾನಹಳ್ಳಿ ಕೆರೆಗಳ ಜಲಾನಯನ ಪ್ರದೇಶ ಹಾಗೂ ಅಂತರ್ಜಲ ಮರುಪೂರಣ ವಲಯಕ್ಕೆ ಸಂಬಂಧಿಸಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಈ ಭಾಗದ ಜಮೀನುಗಳು ಕೇವಲ ಕೃಷಿ ಉತ್ಪಾದನೆಯ ತಾಣವಾಗಿರದೆ, ಸುತ್ತಮುತ್ತಲಿನ ಕೆರೆಗಳು, ಜಲಮೂಲಗಳು ಹಾಗೂ ಅಂತರ್ಜಲ ವ್ಯವಸ್ಥೆಯ ಮೇಲೂ ಪರಿಣಾಮ ಬೀರುವ ಪ್ರದೇಶವಾಗಿದೆ ಎಂಬುದು ಪರಿಸರಾಸಕ್ತರ ಅಭಿಪ್ರಾಯ.

ಪ್ರದೇಶದಲ್ಲಿ ನವಿಲು, ಕಾಡುಹಂದಿ ಸೇರಿದಂತೆ ವಿವಿಧ ವನ್ಯಜೀವಿಗಳ ಸಂಚಾರವಿದ್ದು, ಕೆಲವೆಡೆ ಚಿರತೆ, ತೋಳ, ಕರಡಿ ಕಾಣಿಸಿಕೊಂಡಿರುವುದಾಗಿ ಗ್ರಾಮಸ್ಥರು ಹೇಳುತ್ತಾರೆ. ಹೀಗಾಗಿ ಕೈಗಾರಿಕಾ ಚಟುವಟಿಕೆ ವಿಸ್ತರಣೆಯಿಂದ ಕೃಷಿ ಭೂಮಿಯಷ್ಟೇ ಅಲ್ಲದೆ ಸ್ಥಳೀಯ ಪರಿಸರ ವ್ಯವಸ್ಥೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಕುರಿತು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಕೃಷಿ–ತೋಟಗಾರಿಕೆಯೇ ಬದುಕಿನ ಆಧಾರ

ಕೊಯಿರಾ, ಮಾಯಸಂದ್ರ, ಮೀಸಗಾನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ದಾಳಿಂಬೆ, ದ್ರಾಕ್ಷಿ, ಹೂವು, ತೆಂಗು, ಶ್ರೀಗಂಧ, ರೇಷ್ಮೆ ಸೇರಿದಂತೆ ವಿವಿಧ ಕೃಷಿ ಮತ್ತು ತೋಟಗಾರಿಕಾ ಚಟುವಟಿಕೆಗಳು ನಡೆಯುತ್ತಿವೆ.

ನೂರಾರು ಕುಟುಂಬಗಳು ನೇರವಾಗಿ ಕೃಷಿ ಮತ್ತು ತೋಟಗಾರಿಕೆಯನ್ನು ಅವಲಂಬಿಸಿದ್ದು, ಫಲವತ್ತಾದ ಜಮೀನು ಕೈತಪ್ಪಿದರೆ ಕೇವಲ ಭೂಮಿ ಮಾತ್ರವಲ್ಲದೆ ಹಲವು ಕುಟುಂಬಗಳ ಜೀವನೋಪಾಯಕ್ಕೂ ಹೊಡೆತ ಬೀಳಲಿದೆ ಎಂಬ ಆತಂಕ ಗ್ರಾಮಸ್ಥರದ್ದಾಗಿದೆ.

ಇದರ ಜೊತೆಗೆ ಕೊಯಿರಾ ಹಾಗೂ ಮೀಸಗಾನಹಳ್ಳಿ ಭಾಗದ ಕೆಲವು ಜಮೀನುಗಳು ಸೂಕ್ಷ್ಮ ಭದ್ರತಾ ಪ್ರದೇಶಗಳ ಸಮೀಪದಲ್ಲಿವೆ ಎಂಬ ಅಂಶವನ್ನೂ ಸ್ಥಳೀಯರು ಪ್ರಸ್ತಾಪಿಸುತ್ತಿದ್ದಾರೆ.

ಭೂಮಿ ಉಳಿಸಿಕೊಳ್ಳಲು ಜಾಗೃತಿ

ಈಗಾಗಲೇ ಜಿಲ್ಲೆಯ ವಿವಿಧ ಭಾಗಗಳಲ್ಲಿ ಕೈಗಾರಿಕಾ ಪ್ರದೇಶಗಳಿಗಾಗಿ ಭೂಸ್ವಾಧೀನ ನಡೆದಿದ್ದು, ಕೃಷಿ ಭೂಮಿ ಉಳಿಸಿಕೊಳ್ಳುವ ವಿಚಾರವಾಗಿ ರೈತರ ಹೋರಾಟಗಳು ನಡೆದಿವೆ. ಚನ್ನರಾಯಪಟ್ಟಣ ಹೋಬಳಿಯ ಭೂಸ್ವಾಧೀನದ ವಿಚಾರದಲ್ಲಿಯೂ ರೈತರ ಪ್ರತಿಭಟನೆಗಳು ನಡೆದಿದ್ದವು. ಆ ಸಂದರ್ಭದಲ್ಲಿ ಸರ್ಕಾರ ಕೆಲವು ಪ್ರದೇಶಗಳ ಭೂಮಿಯನ್ನು ಸ್ವಾಧೀನ ಪ್ರಕ್ರಿಯೆಯಿಂದ ಹೊರಗಿಟ್ಟಿರುವ ಬಗ್ಗೆ ವರದಿಯಾಗಿತ್ತು.

ಇದೀಗ 1,200 ಎಕರೆ ಭೂಸ್ವಾಧೀನದ ಪ್ರಸ್ತಾವನೆ ಹಿನ್ನೆಲೆಯಲ್ಲಿ ದೇವನಹಳ್ಳಿ–ದೊಡ್ಡಬಳ್ಳಾಪುರ ಭಾಗದ ಗ್ರಾಮಗಳಲ್ಲಿ ಭೂಮಿ ಉಳಿಸಿಕೊಳ್ಳುವ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ರೈತರು, ಪರಿಸರಾಸಕ್ತರು ಹಾಗೂ ಸ್ಥಳೀಯರು ಒಗ್ಗೂಡಿ ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸುವ ಚರ್ಚೆಗಳು ನಡೆಯುತ್ತಿವೆ.

“ಕೃಷಿ ಭೂಮಿಗೆ ಕೈಗಾರಿಕೆ ಬೇಡ”

ದೇವನಹಳ್ಳಿ, ಕೊಯಿರಾ ಸೇರಿದಂತೆ ಈ ಭಾಗದಲ್ಲಿ ದಾಳಿಂಬೆ, ದ್ರಾಕ್ಷಿ ಸೇರಿದಂತೆ ಹಲವು ಬೆಳೆಗಳನ್ನು ಬೆಳೆಯಲಾಗುತ್ತಿದೆ. ಕೃಷಿಗೆ ಅನುಕೂಲವಾಗಿರುವ ಇಂತಹ ಫಲವತ್ತಾದ ಭೂಮಿಯನ್ನು ಭೂಸ್ವಾಧೀನಕ್ಕೆ ಒಳಪಡಿಸಬಾರದು. ರೈತರ ಜೀವನೋಪಾಯದ ದೃಷ್ಟಿಯಿಂದ ಸರ್ಕಾರ ಈ ವಿಚಾರವನ್ನು ಮರುಪರಿಶೀಲಿಸಬೇಕು ಎಂದು ದಾಳಿಂಬೆ ಬೆಳೆಗಾರ ಮುನೇಗೌಡ ಹೇಳಿದ್ದಾರೆ.

“ಜಲಾನಯನ ಪ್ರದೇಶವನ್ನು ರಕ್ಷಿಸಬೇಕು”

ಅರ್ಕಾವತಿ ಜಲಾನಯನ ಪ್ರದೇಶ ಹಾಗೂ ಕೃಷಿಗೆ ಯೋಗ್ಯವಾದ ಭೂಮಿಯಲ್ಲಿ ಕೈಗಾರಿಕಾ ಅಭಿವೃದ್ಧಿಗಾಗಿ ಭೂಸ್ವಾಧೀನಕ್ಕೆ ಮುಂದಾಗಿರುವುದು ಸರಿಯಲ್ಲ. ಯಾವುದೇ ಕಾರಣಕ್ಕೂ ಈ ಭಾಗದ ಕೃಷಿ ಭೂಮಿಯನ್ನು ನೀಡಲು ಸಿದ್ಧರಿಲ್ಲ. ಪರಿಸರ ಮತ್ತು ಜಲಮೂಲಗಳ ರಕ್ಷಣೆಗೆ ಸರ್ಕಾರ ಆದ್ಯತೆ ನೀಡಬೇಕು ಎಂದು ಪರಿಸರವಾದಿ ಚಿಕ್ಕೇಗೌಡ ತಿಳಿಸಿದ್ದಾರೆ.

ಮುಂದೇನು?

1,200 ಎಕರೆ ಭೂಸ್ವಾಧೀನದ ಪ್ರಸ್ತಾವನೆಗೆ ಸ್ಥಳೀಯ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸಚಿವರ ಮನವಿಗೆ ಸರ್ಕಾರದ ಪ್ರತಿಕ್ರಿಯೆ ಏನು? KIADB ಭೂಸ್ವಾಧೀನ ಪ್ರಕ್ರಿಯೆಯನ್ನು ಮುಂದುವರಿಸಲಿದೆಯೇ? ಅಥವಾ ಕೃಷಿ ಮತ್ತು ಪರಿಸರದ ಹಿತದೃಷ್ಟಿಯಿಂದ ಪ್ರಸ್ತಾವನೆ ಮರುಪರಿಶೀಲನೆಯಾಗಲಿದೆಯೇ? ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ.

ಕೃಷಿ, ಜಲಮೂಲ, ಪರಿಸರ ಹಾಗೂ ಕೈಗಾರಿಕಾ ಅಭಿವೃದ್ಧಿ—ಈ ನಾಲ್ಕರ ನಡುವೆ ಸಮತೋಲನ ಸಾಧಿಸುವುದು ಸರ್ಕಾರದ ಮುಂದಿರುವ ಪ್ರಮುಖ ಸವಾಲಾಗಿದೆ.

Leave a Reply

Your email address will not be published. Required fields are marked *

error: Content is protected !!