
ನಾಡಿನ ಹೈನುಗಾರರು ಇಂದು ಮೇವು, ಪಶು ಆಹಾರ, ವೈದ್ಯಕೀಯ ಚಿಕಿತ್ಸೆ ಹಾಗೂ ನಿರ್ವಹಣಾ ವೆಚ್ಚದ ಹೆಚ್ಚಳದಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಇದರ ಜೊತೆಗೆ ಬರ ಪರಿಸ್ಥಿತಿಯೂ ಅವರ ಬದುಕನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ. ಇಂತಹ ಸಂದರ್ಭದಲ್ಲಿ ಹೈನುಗಾರರ ಕಷ್ಟಕ್ಕೆ ಸ್ಪಂದಿಸಿ, ಅವರಿಗೆ ಹೆಚ್ಚಿನ ಆದಾಯ ದೊರೆಯುವಂತೆ ಮಾಡುವ ಉದ್ದೇಶದಿಂದ ನಮ್ಮ ಸರ್ಕಾರ ಹಾಲಿನ ದರ ಪರಿಷ್ಕರಿಸಿದೆ. ಈ ವಾಸ್ತವವನ್ನು ಅರ್ಥಮಾಡಿಕೊಳ್ಳದೆ ಕೇವಲ ದರ ಏರಿಕೆಯನ್ನೇ ಮುಂದಿಟ್ಟುಕೊಂಡು ಬಿಜೆಪಿ ನಾಯಕರು ಟೀಕೆ ಮಾಡುತ್ತಿರುವುದು ಸರಿಯಲ್ಲ ಎಂದು ಡಿಸಿಎಂ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ.
ಕೃಷಿಯ ಜೊತೆಗೆ ಹೈನುಗಾರಿಕೆಯನ್ನು ನಂಬಿಕೊಂಡು ನಮ್ಮ ನಾಡಿನ ಲಕ್ಷಾಂತರ ರೈತ ಕುಟುಂಬಗಳು ಬದುಕುತ್ತಿವೆ. ಆದರೆ ಮೇವು, ಪಶು ಆಹಾರ, ಪಶುಗಳ ವೈದ್ಯಕೀಯ ಚಿಕಿತ್ಸೆ ಮತ್ತು ನಿರ್ವಹಣಾ ವೆಚ್ಚ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರ ಜೊತೆಗೆ ಬರದಿಂದ ಹಸಿರು ಮೇವು ಮತ್ತು ನೀರಿನ ಕೊರತೆ ಎದುರಾಗಿದೆ. ಪೆಟ್ರೋಲ್, ಡೀಸೆಲ್ ಹಾಗೂ ಸಾಗಣೆಯ ಖರ್ಚು ಹೆಚ್ಚಿರುವುದರಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳ ಸಾಗಣೆಯೂ ದುಬಾರಿಯಾಗಿದೆ. ಇಷ್ಟೆಲ್ಲ ಖರ್ಚು ಮಾಡಿ ಹಾಲು ಉತ್ಪಾದಿಸುವ ರೈತರಿಗೆ ಅದಕ್ಕೆ ತಕ್ಕ ಆದಾಯ ಸಿಗದಿದ್ದರೆ ಹೈನುಗಾರಿಕೆಯನ್ನು ಮುಂದುವರಿಸುವುದಾದರೂ ಹೇಗೆ? ಎಂದು ಪ್ರಶ್ನಿಸಿದ್ದಾರೆ.
ಹೆಚ್ಚಳವಾದ ₹8ರಲ್ಲಿ ₹7 ನೇರವಾಗಿ ರೈತರಿಗೆ :
ಹಾಲು ಉತ್ಪಾದಕರು ಹಾಗೂ ಹಾಲು ಒಕ್ಕೂಟಗಳು ದರ ಪರಿಷ್ಕರಣೆಗೆ ಬೇಡಿಕೆ ಇಟ್ಟಿದ್ದವು. ಗ್ರಾಹಕರ ಮೇಲಿನ ಹೆಚ್ಚುವರಿ ಖರ್ಚನ್ನೂ ಪರಿಗಣಿಸಿ ರಾಜ್ಯ ಸರ್ಕಾರ ₹8 ಹೆಚ್ಚಳಕ್ಕೆ ನಿರ್ಧರಿಸಿದೆ. ಇದರಲ್ಲಿ ₹7 ನೇರವಾಗಿ ರೈತರಿಗೆ ದೊರೆಯಲಿದ್ದು, ಉಳಿದ ₹1 ಹಾಲು ಒಕ್ಕೂಟಗಳ ನಿರ್ವಹಣೆಗೆ ಬಳಕೆಯಾಗಲಿದೆ. ಇದುವರೆಗೆ ರೈತರಿಗೆ ಪ್ರತಿ ಲೀಟರ್ಗೆ ಸಿಗುತ್ತಿದ್ದ 36 ರೂಪಾಯಿ 20 ಪೈಸೆ ಖರೀದಿ ದರ ಈಗ 43 ರೂಪಾಯಿ 20 ಪೈಸೆಗೆ ಏರಿಕೆಯಾಗಿದೆ. ಸರ್ಕಾರದ ₹5 ಪ್ರೋತ್ಸಾಹಧನ ಸೇರಿ ಒಟ್ಟು 48 ರೂಪಾಯಿ 20 ಪೈಸೆ ದೊರೆಯಲಿದೆ. ಹಾಲಿನ ದರ ಏರಿಕೆಯ ಬಗ್ಗೆ ಚರ್ಚಿಸುವಾಗ ಈ ಹಣ ಯಾರಿಗೆ ತಲುಪುತ್ತಿದೆ ಎಂಬುದನ್ನು ಗಮನಿಸುವುದು ಮುಖ್ಯ. ಹಾಲು ಪ್ರತಿಯೊಂದು ಮನೆಯ ಅಗತ್ಯ ವಸ್ತು. ಆದ್ದರಿಂದ ಗ್ರಾಹಕರಿಗೆ ಆಗುವ ಹೆಚ್ಚುವರಿ ಖರ್ಚಿನ ಬಗ್ಗೆಯೂ ನಮಗೆ ಕಾಳಜಿಯಿದೆ. ಅದೇ ಸಮಯದಲ್ಲಿ ಹಾಲು ಉತ್ಪಾದಿಸುವ ರೈತರಿಗೆ ನ್ಯಾಯಯುತ ಆದಾಯ ಸಿಗುವಂತೆ ನೋಡಿಕೊಳ್ಳಬೇಕಿದೆ. ಈ ಎರಡೂ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡೇ ಸರ್ಕಾರ ನಿರ್ಧಾರ ಕೈಗೊಂಡಿದೆ. ದರ ಹೆಚ್ಚಳದ ನಂತರವೂ ನಂದಿನಿ ಟೋನ್ಡ್ ಹಾಲಿನ ಬೆಲೆ ಪ್ರತಿ ಲೀಟರ್ಗೆ ₹54 ಆಗಿದ್ದು, ಹಲವು ರಾಜ್ಯಗಳ ಕೆಲವು ಪ್ರಮುಖ ಹಾಲಿನ ಬ್ರ್ಯಾಂಡ್ಗಳ ದರಕ್ಕಿಂತ ಕಡಿಮೆಯಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ನಂದಿನಿ ಹಾಲಿನ ಬೆಲೆ ಪ್ರತಿ ಲೀಟರ್ಗೆ ₹54 ಇದ್ದರೆ, ಆಂಧ್ರಪ್ರದೇಶದಲ್ಲಿ ₹66, ತೆಲಂಗಾಣದಲ್ಲಿ ₹66, ಕೇರಳದಲ್ಲಿ ₹56, ಗುಜರಾತ್ನಲ್ಲಿ ₹57, ಮಧ್ಯಪ್ರದೇಶದಲ್ಲಿ ₹58, ಮಹಾರಾಷ್ಟ್ರದಲ್ಲಿ ₹58, ಪಂಜಾಬ್ನಲ್ಲಿ ₹59 ಹಾಗೂ ಉತ್ತರಪ್ರದೇಶದಲ್ಲಿ ₹59 ಇದೆ. ಈ ರಾಜ್ಯಗಳ ಪ್ರಮುಖ ಹಾಲಿನ ಬ್ರ್ಯಾಂಡ್ಗಳ ದರಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ನಂದಿನಿ ಹಾಲು ಕಡಿಮೆ ಬೆಲೆಗೆ ದೊರೆಯುತ್ತಿದೆ. ಗ್ರಾಹಕರ ಹಿತವನ್ನು ಗಮನದಲ್ಲಿಟ್ಟುಕೊಂಡೇ ಹೈನುಗಾರರಿಗೆ ಹೆಚ್ಚಿನ ಆದಾಯ ಸಿಗುವಂತೆ ದರ ಪರಿಷ್ಕರಿಸಲಾಗಿದೆ ಎಂದಿದ್ದಾರೆ.
ಪ್ರೋತ್ಸಾಹಧನ ಬಾಕಿ ಕುರಿತು ಬಿಜೆಪಿ ತನ್ನ ಆಡಳಿತದ ಲೆಕ್ಕವನ್ನೂ ನೀಡಲಿ :
ಹೈನುಗಾರರ ಹಿತದ ಬಗ್ಗೆ ಬಿಜೆಪಿ ನಾಯಕರು ಎತ್ತಿರುವ ಪ್ರಶ್ನೆಗಳ ಜೊತೆಗೆ, ತಮ್ಮ ಆಡಳಿತದ ಅವಧಿಯಲ್ಲಿ ಬಾಕಿ ಉಳಿದಿದ್ದ ಹಾಲಿನ ಪ್ರೋತ್ಸಾಹಧನದ ವಿಚಾರಕ್ಕೂ ಉತ್ತರ ನೀಡಬೇಕು. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸುಮಾರು ₹700 ಕೋಟಿ ಪ್ರೋತ್ಸಾಹಧನ ಬಾಕಿ ಉಳಿದಿತ್ತು. ರೈತರಿಗೆ ಸಕಾಲದಲ್ಲಿ ಸಿಗಬೇಕಾದ ಹಣ ಬಾಕಿ ಉಳಿದಾಗ ಅವರ ಜೀವನಕ್ಕೆ ಆಗುವ ತೊಂದರೆಯ ಅರಿವು ಅವರಿಗಿತ್ತೆ? ಎಂದು ಪ್ರಶ್ನಿಸಿದ್ದಾರೆ.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಾಕಿ ಪ್ರೋತ್ಸಾಹಧನ ಪಾವತಿಗೆ ಕ್ರಮ ಕೈಗೊಂಡಿದೆ. ಪ್ರೋತ್ಸಾಹಧನ ಪಾವತಿಯನ್ನು ಮುಂದುವರಿಸುವುದರ ಜೊತೆಗೆ ಈಗ ಹಾಲಿನ ಖರೀದಿ ದರವನ್ನೂ ಹೆಚ್ಚಿಸಲಾಗಿದೆ. ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ಗೆ ನೀಡುತ್ತಿದ್ದ ₹2 ಪ್ರೋತ್ಸಾಹಧನವನ್ನು ನಮ್ಮ ಸರ್ಕಾರ ಹಂತ ಹಂತವಾಗಿ ₹5ಕ್ಕೆ ಹೆಚ್ಚಿಸಿತ್ತು. ಆ ಪ್ರೋತ್ಸಾಹಧನವನ್ನು ಮುಂದುವರಿಸಲಾಗಿದೆ. ಈಗ ಖರೀದಿ ದರ ಹೆಚ್ಚಿಸಿರುವುದರಿಂದ ರೈತರಿಗೆ ಪ್ರತಿ ಲೀಟರ್ ಹಾಲಿಗೆ ಹೆಚ್ಚಿನ ಹಣ ದೊರೆಯಲಿದೆ. ಹೈನುಗಾರರಿಗೆ ಸಕಾಲದಲ್ಲಿ ಹಣ ಪಾವತಿಸುವುದು ಹಾಗೂ ಅವರ ಉದ್ಯಮಕ್ಕೆ ಸರಿಯಾದ ಆದಾಯ ಸಿಗುವಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿಗಳಾಗಿವೆ ಎಂದು ಹೇಳಿದ್ದಾರೆ.
ಹಾಲಿನ ದರ ಏರಿಕೆಯನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರವನ್ನು ಟೀಕಿಸುತ್ತಿರುವ ಬಿಜೆಪಿ ನಾಯಕರು, ರಸಗೊಬ್ಬರ ಪೂರೈಕೆಯಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆಯೂ ಗಮನ ಹರಿಸಬೇಕು. ರಾಜ್ಯಕ್ಕೆ ಅಗತ್ಯವಿರುವ ರಸಗೊಬ್ಬರವನ್ನು ಸಕಾಲದಲ್ಲಿ ಪೂರೈಸುವಂತೆ ಕೇಂದ್ರ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದ್ದೇವೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರ ವ್ಯಕ್ತಪಡಿಸಿರುವ ಆತಂಕಗಳಿಗೆ ಕೇಂದ್ರದಿಂದ ಸ್ಪಷ್ಟ ಪರಿಹಾರ ದೊರೆಯಬೇಕಿದೆ. ಕೇಂದ್ರದಲ್ಲಿ ತಮ್ಮದೇ ಪಕ್ಷದ ಸರ್ಕಾರವಿರುವುದರಿಂದ ರಸಗೊಬ್ಬರ ಪೂರೈಕೆಯ ಸಮಸ್ಯೆ ಬಗೆಹರಿಸಲು ಬಿಜೆಪಿ ನಾಯಕರು ಯಾವ ಕ್ರಮ ಕೈಗೊಂಡಿದ್ದಾರೆ ಎಂಬುದನ್ನೂ ಜನರಿಗೆ ತಿಳಿಸಬೇಕು ಎಂದು ತಿಳಿಸಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯೂ ಹೈನುಗಾರರ ಮೇಲೆ ಪರಿಣಾಮ ಬೀರುತ್ತಿವೆ. ಹಾಲು ಮತ್ತು ಅದರ ಉತ್ಪನ್ನಗಳ ಸಾಗಾಟ ವೆಚ್ಚದಲ್ಲಿ ಗಣನೀಯ ಹೆಚ್ಚಳವಾಗಿದೆ. ಇದರ ಜೊತೆಗೆ ಪಶು ಆಹಾರದ ಬೆಲೆ, ಪಶುಗಳ ವೈದ್ಯಕೀಯ ಚಿಕಿತ್ಸೆ ಮತ್ತು ನಿರ್ವಹಣಾ ವೆಚ್ಚವೂ ಗಣನೀಯವಾಗಿ ಹೆಚ್ಚಾಗಿದೆ. ಜಾನುವಾರುಗಳನ್ನು ಸಾಕಿ ಸಲಹುವುದೇ ಹೈನುಗಾರರಿಗೆ ದುಬಾರಿಯಾಗಿದ್ದು, ಇಂತಹ ಪರಿಸ್ಥಿತಿಯಲ್ಲಿ ಹೈನುಗಾರಿಕೆಯನ್ನು ಮುಂದುವರಿಸುವುದೇ ರೈತರಿಗೆ ಸವಾಲಾಗಿ ಪರಿಣಮಿಸಿದೆ ಎಂದಿದ್ದಾರೆ.
ಹಾಲಿನ ದರ ಏರಿಕೆಯನ್ನು ಪ್ರಶ್ನಿಸುವ ಬಿಜೆಪಿ ನಾಯಕರು, ರೈತರ ಉತ್ಪಾದನಾ ವೆಚ್ಚ ಕಡಿಮೆ ಮಾಡಲು ಕೇಂದ್ರ ಸರ್ಕಾರದ ಮುಂದೆ ಯಾವ ಬೇಡಿಕೆಗಳನ್ನು ಇಟ್ಟಿದ್ದಾರೆ ಎಂಬುದನ್ನೂ ಸ್ಪಷ್ಟಪಡಿಸಲಿ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವಿರುವುದರಿಂದ ಕರ್ನಾಟಕದ ಬಿಜೆಪಿ ನಾಯಕರು ಗೊಬ್ಬರ ಪೂರೈಕೆ, ಕೃಷಿ ವೆಚ್ಚ ಮತ್ತು ಪೆಟ್ರೋಲ್ – ಡೀಸೆಲ್ ಬೆಲೆ ಏರಿಕೆ ವಿಚಾರದಲ್ಲೂ ಕೇಂದ್ರದ ಗಮನ ಸೆಳೆಯಬೇಕು. ರಾಜ್ಯ ಸರ್ಕಾರದ ನಿರ್ಧಾರಗಳ ಕುರಿತು ಪ್ರಶ್ನೆ ಎತ್ತುವಂತೆಯೇ ಕೇಂದ್ರದ ವ್ಯಾಪ್ತಿಯಲ್ಲಿರುವ ರೈತರ ಸಮಸ್ಯೆಗಳ ಪರಿಹಾರಕ್ಕೂ ಪ್ರಯತ್ನಿಸಬೇಕು ಎಂದಿದ್ದಾರೆ.
ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು ಹಾಲಿನ ದರ ಹೆಚ್ಚಳವನ್ನು ಜನರ ಮೇಲಿನ ಹೊರೆ ಎಂದು ಟೀಕಿಸಿದ್ದಾರೆ. ಈ ವಿಚಾರದಲ್ಲಿ ಸರ್ಕಾರದ ನಿರ್ಧಾರ ಹಾಗೂ ಅದರ ಪರಿಣಾಮಗಳ ಕುರಿತು ಚರ್ಚೆ ನಡೆಯುವುದರಲ್ಲಿ ತಪ್ಪಿಲ್ಲ. ಆದರೆ ರೈತರಿಗೆ ಸಿಗುವ ಖರೀದಿ ದರ, ಈಗಾಗಲೇ ನೀಡುತ್ತಿರುವ ಪ್ರೋತ್ಸಾಹಧನ ಹಾಗೂ ಹೈನುಗಾರರ ಉತ್ಪಾದನಾ ವೆಚ್ಚ ಇವೆಲ್ಲವನ್ನೂ ಗಮನಿಸಿ ಮಾತನಾಡಬೇಕು ಎಂದು ತಿಳಿಸಿದ್ದಾರೆ.
ಬರದ ಹೊಡೆತಕ್ಕೆ ಬೆಳೆ ಕಳೆದುಕೊಂಡು ನಾಡಿನ ರೈತರು ಸಂಕಷ್ಟದಲ್ಲಿದ್ದಾರೆ. ಕೃಷಿಯ ಜೊತೆಗೆ ಹೈನುಗಾರಿಕೆಯನ್ನು ನಂಬಿ ಬದುಕುತ್ತಿರುವ ಕುಟುಂಬಗಳೂ ತೊಂದರೆ ಅನುಭವಿಸುತ್ತಿವೆ. ಅಮ್ಮನ ಋಣ, ಅನ್ನದ ಋಣ ತೀರಿಸಲಾಗದು ಎನ್ನುತ್ತಾರೆ. ನಮಗೆ ಅನ್ನ ನೀಡುವ ರೈತರು, ಪ್ರತಿದಿನ ನಮ್ಮ ಮನೆಗಳಿಗೆ ಹಾಲು ತಲುಪಿಸುವ ಹೈನುಗಾರರು ಕಷ್ಟದಲ್ಲಿರುವಾಗ ಅವರ ಕೈಹಿಡಿದು, ಧೈರ್ಯ ತುಂಬಿ, ಬದುಕಿಗೆ ಆಸರೆಯಾಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ಹೈನುಗಾರಿಕೆಯನ್ನು ನಂಬಿಕೊಂಡಿರುವ ಕುಟುಂಬಗಳು ನೆಮ್ಮದಿಯಿಂದ ಬದುಕಬೇಕು. ಅವರು ಕಷ್ಟಪಟ್ಟು ಮಾಡುವ ಕೆಲಸಕ್ಕೆ ತಕ್ಕ ಆದಾಯ ದೊರೆಯಬೇಕು. ಹಾಲಿನ ದರ ಪರಿಷ್ಕರಣೆಯ ಹಿಂದೆ ಇರುವ ಉದ್ದೇಶವೂ ಇದೇ ಆಗಿದೆ ಎಂದರು.
ಇಂದು ಇಡೀ ದೇಶದಲ್ಲಿ ಹಾಲು ಉತ್ಪಾದಕರಿಗೆ ಅತಿ ಹೆಚ್ಚಿನ ದರ ನೀಡಿ ಖರೀದಿ ಮಾಡುತ್ತಿರುವ ರಾಜ್ಯ ನಮ್ಮದು. ಇಷ್ಟು ಮಾತ್ರವಲ್ಲ, ಗ್ರಾಹಕರಿಗೆ ಅತಿ ಕಡಿಮೆ ಬೆಲೆಗೆ ಹಾಲು ಮಾರಾಟ ಮಾಡುತ್ತಿರುವ ರಾಜ್ಯವೆಂಬ ಹೆಗ್ಗಳಿಕೆ ಕೂಡ ನಮ್ಮದೇ. ಕೆಎಂಎಫ್ ಅನ್ನು ನಾವು ಒಂದು ಲಾಭದಾಯಕ ಉದ್ಯಮವಾಗಿ ನೋಡದೆ ಹೈನುಗಾರರ ಪ್ರಗತಿ ಮತ್ತು ಗ್ರಾಹಕರಿಗೆ ಗುಣಮಟ್ಟದ ಹಾಲನ್ನು ಖಾತ್ರಿಪಡಿಸುವ ಒಂದು ಸೇತುವೆಯಾಗಿ ಕಟ್ಟಿಬೆಳೆಸಿದ್ದೇವೆ. ಇದು ನಮ್ಮ ಬದ್ಧತೆಯಾಗಿದೆ ಎಂದು ತಿಳಿಸಿದ್ದಾರೆ.