Categories: ಲೇಖನ

ಛಾವಾ (Chhaava) ಸಿನಿಮಾ, ಔರಂಗಜೇಬ್ ಹಾಗೂ ಕೋಮುಗಲಭೆಗಳು…..

ಇತಿಹಾಸವನ್ನು ಇತಿಹಾಸವಾಗಿ ನೋಡದೆ, ವರ್ತಮಾನದಲ್ಲಿ ತಮ್ಮ ಅನುಕೂಲಕ್ಕೆ ತಕ್ಕಂತೆ ವಿಮರ್ಶಗೊಳಪಡಿಸುತ್ತಾ, ಭವಿಷ್ಯವನ್ನು ಅದರ ಆಧಾರದ ಮೇಲೆ ಕಲ್ಪಿಸಿಕೊಳ್ಳುತ್ತಾ, ವಿಧ್ವಂಸಕ ಸಮಾಜವನ್ನು ನಿರ್ಮಿಸುವ ಮನಸ್ಥಿತಿಯೇ ಅತ್ಯಂತ ಮೂರ್ಖತನದ್ದು, ಧಾರುಣವಾದದ್ದು ಮತ್ತು ವಿಭಜಕ ಮನಸ್ಥಿತಿಯದು….

ಇತಿಹಾಸವನ್ನು ಇತಿಹಾಸವಾಗಿ ನೋಡುತ್ತಾ, ಅದರ ಅನುಭವದ ಆಧಾರದ ಮೇಲೆ, ಒಳ್ಳೆಯ ಅಂಶಗಳನ್ನು ಹೆಕ್ಕಿ ತೆಗೆದು, ಅದನ್ನು ವರ್ತಮಾನದಲ್ಲಿ ಅಳವಡಿಸಿಕೊಳ್ಳುತ್ತಾ, ಅದರ ನೆನಪುಗಳ ಮೇಲೆ ದೂರದೃಷ್ಟಿಯ ಉತ್ತಮ ಭವಿಷ್ಯವನ್ನು ನಿರ್ಮಿಸುವುದು ನಿಜಕ್ಕೂ ಜಾಣತನ……

ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿರುವಂತೆ ” ಇತಿಹಾಸವನ್ನು ಅರಿಯದವರು ಭವಿಷ್ಯವನ್ನು ನಿರ್ಮಿಸಲಾರರು ” ಆದರೆ ನನ್ನ ಪ್ರಕಾರ” ಇತಿಹಾಸವನ್ನು ತಪ್ಪಾಗಿ ಅರ್ಥೈಸುವವರು ಭವಿಷ್ಯವನ್ನೇ ಹಾಳು ಮಾಡಬಲ್ಲರು “……

ಭಾರತದ ಬಹುತೇಕ ಜನರಿಗೆ ಇತಿಹಾಸದ ಸಾಮಾನ್ಯ ಜ್ಞಾನವೇ ಇಲ್ಲ, ವರ್ತಮಾನದ ತಿಳುವಳಿಕೆಯು ಇಲ್ಲ, ಭವಿಷ್ಯದ ಮುನ್ಸೂಚನೆಗಳು ಸರಿಯಾಗಿ ಅರ್ಥವಾಗುತ್ತಿಲ್ಲ. ಯಾರೋ ಒಬ್ಬ ಸೈದ್ಧಾಂತಿಕ ವಿಚಾರವಾದಿ ಇತಿಹಾಸವನ್ನು ತನಗೆ ಇಷ್ಟ ಬಂದಂತೆ ಸಿನಿಮೀಯ ರೀತಿಯಲ್ಲಿ ಭಾವನಾತ್ಮಕವಾಗಿ ಅರ್ಥೈಸಿ ಬರೆದಾಗ ಜನ ಉದ್ರೇಕಗೊಳ್ಳುತ್ತಾರೆ, ಯಾವುದೋ ವ್ಯಕ್ತಿ ಅಥವಾ ಘಟನೆಗಳನ್ನು ಧಾರಾವಾಹಿಯಾಗಿ ನಿರ್ಮಿಸಿದಾಗ ಅದಕ್ಕೆ ಸಂಬಂಧಪಟ್ಟವರು ಪ್ರೀತಿ ಅಥವಾ ದ್ವೇಷವನ್ನು ಬೆಳೆಸಿಕೊಳ್ಳುತ್ತಾರೆ, ಯಾರೋ ಒಬ್ಬ ಸಿನಿಮಾ ನಿರ್ದೇಶಕ ತನ್ನ ವ್ಯಾಪಾರಿ ದೃಷ್ಟಿಕೋನದಿಂದ, ಮನರಂಜನೆಗಾಗಿ, ಹಣ ಮಾಡುವ ಉದ್ದೇಶದಿಂದ ಸಿನಿಮಾ ನಿರ್ದೇಶಿಸಿದರೆ ಜನ ರೊಚ್ಚಿಗೇಳುತ್ತಾರೆ……

ಇದು ನಿಜಕ್ಕೂ ಅತ್ಯಂತ ಅಪ್ರಬುದ್ಧ ಮತ್ತು ಅನಾಗರಿಕ ನಡವಳಿಕೆ. ಇತಿಹಾಸದ ಘಟನೆಗಳು ಘಟಿಸುವಾಗ ಆ ಜಾಗದಲ್ಲಿ ಛಾಯಾಗ್ರಾಹಕರಿರಲಿಲ್ಲ, ಸಂಕಲನವಿರಲಿಲ್ಲ, ಸಂಗೀತವಿರಲಿಲ್ಲ, ಚಿತ್ರಕಥೆ ಇರಲಿಲ್ಲ, ಸಂಭಾಷಣೆಕಾರರಿರಲಿಲ್ಲ, ನಟ ನಟಿಯರು ಇರಲಿಲ್ಲ, ಪ್ರೇಕ್ಷಕ ಇರಲಿಲ್ಲ, ಪ್ರಜಾಪ್ರಭುತ್ವವಿರಲಿಲ್ಲ, ಚುನಾವಣೆ ಇರಲಿಲ್ಲ, ರಾಜಕೀಯ ಪಕ್ಷಗಳಿರಲಿಲ್ಲ, ಅಸಲಿಗೆ ಮನುಷ್ಯ ಧರ್ಮದ ನೀತಿ ನಿಯಮಗಳೇ ಇರಲಿಲ್ಲ…..

ಬಹುತೇಕ ಅಲ್ಲಿ ” ಬಲವೇ ನ್ಯಾಯ ” ಎಂಬ ಸಿದ್ದಾಂತ ಅಸ್ತಿತ್ವದಲ್ಲಿತ್ತು. ಅಂತಹ ಸಂದರ್ಭದಲ್ಲಿ ಯಾರೋ ಅಶೋಕ, ಯಾರೋ ಘಜ್ನಿ, ಯಾರೋ ಘೋರಿ ಮಹಮ್ಮದ್, ಯಾರೋ ಚಂದ್ರಗುಪ್ತ ಮೌರ್ಯ, ಯಾರೋ ಕೃಷ್ಣದೇವರಾಯ, ಯಾರೋ ಅಲ್ಲಾವುದ್ದೀನ್ ಖಿಲ್ಜಿ, ಇನ್ಯಾರೋ ಔರಂಗಾಜೇಬ್, ಮತ್ಯಾರೋ ಶಿವಾಜಿ, ಇನ್ಯಾರೋ ಟಿಪ್ಪು ಸುಲ್ತಾನ್ ತಮ್ಮ ಶಕ್ತಿ, ಸಾಮರ್ಥ್ಯ, ಬುದ್ಧಿವಂತಿಕೆಗೆ ನಿಲುಕುವಷ್ಟು ಒಳ್ಳೆಯದನ್ನೋ, ಕೆಟ್ಟದ್ದನ್ನೋ, ವಿಕೃತವನ್ನೋ, ಕ್ರೌರ್ಯವನ್ನೋ ಮೆರೆದಿದ್ದಾರೆ. ಅದೆಲ್ಲವೂ ಈಗ ಮುಗಿದ ಅಧ್ಯಾಯ……

1950 ಜನವರಿ 26 ರಿಂದ ಭಾರತ ಎಂಬ ಈ ನಿರ್ಧಿಷ್ಟ ಭೂ ಪ್ರದೇಶ ತನ್ನ ಗತ ಇತಿಹಾಸದೊಂದಿಗೆ, ಹೊಸ ಅಸ್ತಿತ್ವದೊಂದಿಗೆ, ಹೊಸ ಅಧ್ಯಾಯದೊಂದಿಗೆ, ಹೊಸ ಆಶಯದೊಂದಿಗೆ ಪ್ರಾರಂಭವಾಗಿದೆ. ಅದಕ್ಕೆ ಇಡೀ ಜಗತ್ತಿನಲ್ಲೇ ಸರ್ವಶ್ರೇಷ್ಠ ನೀತಿ ನಿಯಮಗಳ ಸಂವಿಧಾನವಿದೆ. ಇರುವುದರಲ್ಲಿ ಒಂದಷ್ಟು ಒಳ್ಳೆಯ ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ, ರಾಜಕೀಯ ಹಿನ್ನೆಲೆಯೊಂದಿಗೆ ಅಭಿವೃದ್ಧಿ ಹೊಂದುತ್ತಿದೆ…..

ಇದೀಗ ಅದರ ಮೇಲೆ ಭವ್ಯ, ಸುಭದ್ರ, ನೆಮ್ಮದಿಯ ಭವಿಷ್ಯವನ್ನು ಕಟ್ಟಿಕೊಂಡು ಮುನ್ನಡೆಯಬೇಕಾದ ಸಂದರ್ಭದಲ್ಲಿ ಯಾವುದೋ ಒಂದು ಸಿನಿಮಾದ, ಯಾರದೋ ಜನಪ್ರಿಯತೆಯ ತೆವಲಿಗೆ, ಯಾರದೋ ಹಣಕಾಸಿನ ವ್ಯವಹಾರಕ್ಕಾಗಿ ಇಲ್ಲಿನ ಜನ ಉದ್ರೇಕಗೊಂಡು ಹೊಡೆದಾಡುವುದು ಬಹುಶಃ ಅನಾಗರಿಕತೆಯ ಪರಮಾವಧಿ. ಅಜ್ಞಾನದಿಂದ ಕ್ರೌರ್ಯ ಹುಟ್ಟಿದರೆ ಅದು ಕ್ಷಮಾರ್ಹ. ಆದರೆ ಅಹಂಕಾರದಿಂದ, ದ್ವೇಷದಿಂದ, ಸಣ್ಣತನದಿಂದ, ಅಸೂಯೆಯಿಂದ ಹುಟ್ಟಿದರೆ ಅದು ಅಕ್ಷಮ್ಯ…..

ಈಗ ಈ ಸಿನಿಮಾ ನಿರ್ಮಾಣವಿರಲಿ, ಅದಕ್ಕೆ ಅನುಮತಿ ಕೊಟ್ಟ ಸರ್ಕಾರವಿರಲಿ, ಅದರಿಂದ ಪ್ರಚೋದನೆಗೊಂಡು ಗಲಭೆ ಮಾಡುವುದಿರಲಿ ಎಲ್ಲವೂ ಕೂಡ ಅತ್ಯಂತ ವಿಷಯುಕ್ತ ಮನಸ್ಥಿತಿಯ ಜನರಿಂದಲೇ ಎಂಬುದು ಅತ್ಯಂತ ಸ್ಪಷ್ಟವಾಗಿ ಅರ್ಥವಾಗುತ್ತದೆ. ಸಿನಿಮಾಗಳು ಇತಿಹಾಸವನ್ನು ಕಟ್ಟಿಕೊಡಲು ಸಾಧ್ಯವೇ ಇಲ್ಲ. ಕಾದಂಬರಿಗಳು ಇತಿಹಾಸವನ್ನು ಸ್ಪಷ್ಟವಾಗಿಸಲು ಅಸಾಧ್ಯ. ಕೇವಲ ತಮ್ಮ ದೃಷ್ಟಿಕೋನದ ವಿಮರ್ಶೆಗಳನ್ನು ಮಾಡಲು ಮಾತ್ರ ಸಾಧ್ಯ. ಇತಿಹಾಸ ಒಂದು ವಿಜ್ಞಾನ. ಅದು ಮನರಂಜನೆಯ ಸರಕಲ್ಲ. ರಾಜಕೀಯದ ದಾಳವಲ್ಲ,
ಧಾರ್ಮಿಕ ನಂಬಿಕೆಯಲ್ಲ…..

ಏಕೋ ಹಿಂದೂ ಮುಸ್ಲಿಂ ಸಂಘರ್ಷ ಭಾರತದಲ್ಲಿ ತುಂಬಾ ಅತಿರೇಕಕ್ಕೆ ಹೋಗುತ್ತಿದೆ. ಕಾರಣಗಳೇನೇ ಇರಲಿ ಒಂದು ಜ್ವಾಲಾಮುಖಿ ಈ ನೆಲದಲ್ಲಿ ಅಡಗಿದೆ. ಅದು ಅಗ್ನಿಪರ್ವತವಾಗಿ ಸಿಡಿಯುವ ಮುನ್ನ ನಾವು ನೀವು ಮತ್ತು ನಮ್ಮ ಕುಟುಂಬಗಳನ್ನು ಪ್ರೀತಿಸುವವರು, ದೇಶವನ್ನು ಪ್ರೀತಿಸುವವರು ಎಚ್ಚೆತ್ತುಕೊಳ್ಳಬೇಕಿದೆ…

ಒಂದನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು. ಯಾವುದೇ ಘರ್ಷಣೆ ಗಲಭೆಗಳಲ್ಲಿ ಸೋಲು ಗೆಲುವುಗಳು ಇರುವುದಿಲ್ಲ. ಕೇವಲ ಸಾವು ನೋವುಗಳು ಮಾತ್ರ ಉಳಿಯುತ್ತದೆ. ಅದರಲ್ಲೂ ಧರ್ಮ ಆಧಾರಿತ ಕೋಮು ದ್ವೇಷ ಅತ್ಯಂತ ಭೀಕರ.ಇತಿಹಾಸ ವರ್ತಮಾನಕ್ಕೆ ಪಾಠವಾಗಬೇಕೆ ಹೊರತು ಭವಿಷ್ಯಕ್ಕೆ ಮಾರಕವಾಗಬಾರದು…..

ಹೌದು, ಛಾವಾ ಸಿನಿಮಾ ನೋಡುತ್ತಿರುವ ದೇಶಭಕ್ತಿಯ ಉತ್ತುಂಗದಲ್ಲಿರುವ ಜನರು ದುಃಖ ಆಕ್ರೋಶದಿಂದ ಭುಗಿಲೇಳುವ ಮಾತುಗಳನ್ನಾಡುತ್ತಿದ್ದಾರೆ….

ಇತಿಹಾಸದ ಹತ್ಯಾಕಾಂಡಗಳನ್ನು ಜಾತಿ, ಧರ್ಮ, ಪ್ರದೇಶಗಳ ಸಂಕುಚಿತ ಮನೋಭಾವದಿಂದ ನೋಡದೆ ಸ್ವಾತಂತ್ರ್ಯ ಭಾರತದ ಈಗಿನ ಸಂದರ್ಭದಲ್ಲಿ ವಿಶಾಲ ಅರ್ಥದಲ್ಲಿ ನೋಡಿದಾಗ ಮಾತ್ರ ಒಂದು ಸಮಗ್ರ ಚಿಂತನೆ ಮೂಡಲು ಸಾಧ್ಯ……..

ಈ ಭೂ ಪ್ರದೇಶ ಶತ ಶತಮಾನಗಳಿಂದ ಸಾಕಷ್ಟು ಕಗ್ಗೊಲೆಗಳಿಗೆ ಸಾಕ್ಷಿಯಾಗಿದೆ.

ತುಂಬಾ ಹಿಂದಿನ ಘಟನೆಗಳು ಬೇಡ. ಸ್ವಾತಂತ್ರ್ಯ ನಂತರದಲ್ಲಿ ನಡೆದ ದೊಡ್ಡ ಹತ್ಯಾಕಾಂಡಗಳನ್ನು ಒಮ್ಮೆ ಅವಲೋಕಿಸಿದರೆ….

ಪ್ರಾರಂಭದಲ್ಲಿ ಭಾರತದ ವಿಭಜನೆಯ ಸಮಯದಲ್ಲಿ ಹಿಂದೂ ಮುಸ್ಲಿಂ ಹತ್ಯಾಕಾಂಡ, ಮಹಾತ್ಮ ಗಾಂಧಿಯವರ ಹತ್ಯೆ ಮತ್ತು ಆ ಸಂದರ್ಭದ ಚಿತ್ಪಾವನ ಬ್ರಾಹ್ಮಣರ ಹತ್ಯೆ, ಇಂದಿರಾಗಾಂಧಿ ಹತ್ಯೆ ಮತ್ತು ಆ ನಂತರದ ಸಿಖ್ ಹತ್ಯಾಕಾಂಡ, ಕಾಶ್ಮೀರದ ಪಂಡಿತರ ಮಾರಣಹೋಮ, ಗೋದ್ರಾ ಘಟನೆ ಮತ್ತು ಆ ಸಮಯದಲ್ಲಿ ಗುಜರಾತಿನ ಮುಸ್ಲಿಮರ ಹತ್ಯಾಕಾಂಡ, ಮುಂಬಯಿಯ ಬಾಂಬ್ ಬ್ಲಾಸ್ಟ್ ಹೀಗೆ ಇಲ್ಲಿ ನೆನಪಾಗದ ಇನ್ನೂ ಸಾಕಷ್ಟು ಘಟನೆಗಳಿವೆ….

ಇಷ್ಟು ಮಾತ್ರವಲ್ಲದೇ,
ಆಂಧ್ರಪ್ರದೇಶದ ಕರಮಚೇಡು, ಕರ್ನಾಟಕದ ಕಂಬಾಲಪಲ್ಲಿ, ಬದನವಾಳುವಿನ ದಲಿತ ಕುಟುಂಬಗಳ ಹತ್ಯಾಕಾಂಡ, ಮಹಾರಾಷ್ಟ್ರದ ಖೈರ್ಲಾಂಜೆ, ಉತ್ತರ ಪ್ರದೇಶದ ಉನ್ನಾವ್ ಮತ್ತು ಇತ್ತೀಚಿನ ರೈತರ ಮೇಲೆ ಜೀಪು ಹತ್ತಿಸಿದ ಲಿಖಿಂಪುರ್ ಖೇರಿ ಪ್ರಕರಣ ಹೀಗೆ ಅನೇಕ ರಾಜ್ಯಗಳಲ್ಲಿ ಇದಕ್ಕಿಂತ ದೊಡ್ಡ ಹತ್ಯಾಕಾಂಡಗಳು ಸೇರಿ ಎಲ್ಲವನ್ನೂ ಗಮನಿಸಿದಾಗ ಆಕ್ರೋಶ ಉಕ್ಕುತ್ತದೆ……

ಈ ಹತ್ಯಾಕಾಂಡಗಳಿಗೆ ಬಹುಮುಖ್ಯ ಕಾರಣ ಧಾರ್ಮಿಕ – ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆ. ಈ ಘಟನೆಗಳು ನಡೆಯುವಾಗ ಆಡಳಿತ ನಡೆಸುತ್ತಿದ್ದ ಮತ್ತು ನಡೆಸುತ್ತಿರುವ ಪಕ್ಷಗಳು ಮತ್ತು ಸರ್ಕಾರಗಳು ಇದನ್ನು ತಡೆಯುವಲ್ಲಿ ಮತ್ತು ನಿರ್ವಹಿಸುವಲ್ಲಿ ಸಂಪೂರ್ಣ ವಿಫಲವಾಗಿವೆ. ಅದರ ಪರಿಣಾಮ ಈ ಭೀಕರ ಹತ್ಯಾಕಾಂಡಗಳು. ಇವುಗಳಿಗೆ ಯಾವುದೇ ಸಮರ್ಥನೆ ಇಲ್ಲ. ದಯವಿಟ್ಟು ಇವುಗಳ ಬಗ್ಗೆ ಪ್ರತಿಕ್ರಿಯಿಸುವಾಗ ಭಾರತದ ಸಮಗ್ರ ಚಿತ್ರಣ ಮತ್ತು ಸಮಗ್ರ ಚಿಂತನೆ ನಿಮ್ಮದಾಗಿರಲಿ.

ನೆನಪಿಡಿ ಇತಿಹಾಸದ ಹತ್ಯಾಕಾಂಡಗಳು ವರ್ತಮಾನದ ಹತ್ಯಾಕಾಂಡಗಳಿಗೆ ನೆಪವಾಗಬಾರದು. ಬದಲಾಗಿ ಆ ರೀತಿಯ ಘಟನೆಗಳು ನಡೆಯದಂತೆ ಎಚ್ಚರಿಕೆಯ ಪಾಠವಾಗಬೇಕು……

ಸಿನಿಮಾ ಒಂದು ಮನರಂಜನಾ ಉದ್ಯಮ. ಬಣ್ಣದ ಲೋಕ. ಎಷ್ಟೇ ವಾಸ್ತವಕ್ಕೆ ಹತ್ತಿರವಿದ್ದರೂ ಅದೊಂದು ಕಾಲ್ಪನಿಕ, ಭಾವನಾತ್ಮಕ ಪ್ರಚೋದನಕಾರಿ ಆಗುವ ಎಲ್ಲಾ ಸಾಧ್ಯತೆಯೂ ಇರುತ್ತದೆ. ದೇಶದ ಹಿತಾಸಕ್ತಿಯ ದೃಷ್ಟಿಯಿಂದ ನಾವು ಹೆಚ್ಚು ನಿಯಂತ್ರಿತ ಮನೋಭಾವ ವ್ಯಕ್ತಪಡಿಸಬೇಕು. ಇಲ್ಲದಿದ್ದರೆ ತುಂಬಾ ಕೆಟ್ಟ ಪರಿಸ್ಥಿತಿ ನಮಗೂ ಬರಬಹುದು….

ಇತಿಹಾಸವನ್ನು ಬದಲಿಸಲಾಗದು. ಅದು ನಡೆದು ಹೋಗಿದೆ. ಆದರೆ ವರ್ತಮಾನ ನಮ್ಮ ಕೈಲಿದೆ. ಇದನ್ನು ಎಷ್ಟು ಉತ್ತಮವಾಗಿ ನಾವು ನಿರ್ವಹಿಸುತ್ತೇವೆಯೋ ಅಷ್ಟು ಒಳ್ಳೆಯದಾಗಿ ಭವಿಷ್ಯ ರೂಪಗೊಳ್ಳುತ್ತದೆ ಎಂಬ ಪ್ರಜ್ಞೆ ಇರಲಿ…….

ಹೌದು, ಇತಿಹಾಸದಲ್ಲಿ ಮರೆಯಲಾಗದ ನೋವುಗಳು ಎಲ್ಲರಿಗೂ ಇದೆ. ಈಗ ಅದಕ್ಕೆಲ್ಲಾ ಸೇಡು ತೀರಿಸಿಕೊಳ್ಳಲು ಸಾಧ್ಯವೇ ? ಅದು ಸರಿಯೇ ? ಎಂಬ ಪ್ರಶ್ನೆ ಕೇಳಿಕೊಳ್ಳಿ…….

” ಒಂದು ಕಣ್ಣಿಗೆ ಇನ್ನೊಂದು ಕಣ್ಣು ತೆಗೆಯುವುದಾದರೆ, ಇಡೀ ಜಗತ್ತೇ ಕುರುಡಾಗಿ ಕೊನೆಗೊಳ್ಳುವುದು ” ಎಂಬ ಮಹಾತ್ಮ ಗಾಂಧಿಯವರ ಮಾತುಗಳನ್ನು ನೆನಪಿಸಿಕೊಳ್ಳಿ………

ದಯವಿಟ್ಟು ರಾಜಕಾರಣಿಗಳ – ಎಲ್ಲಾ ಧರ್ಮಗಳ ಮತಾಂಧರ ದಾಳಗಳಾಗುವುದು ಬೇಡ. ಮೇಲೆ ಹೇಳಿದ ರೀತಿಯ ಅತ್ಯಂತ ಅಮಾನವೀಯ ಹತ್ಯಾಕಾಂಡಗಳು ಮುಂದೆ ನಡೆಯದಂತೆ ನೋಡಿಕೊಳ್ಳೋಣ……..

ಸಿನಿಮಾ ಒಂದು ಸಿನಿಮಾ ಮಾತ್ರ. ಅದು ಒಂದು ಕ್ರಿಯಾತ್ಮಕ ಚಲನಚಿತ್ರ ಮಾತ್ರ. ಅದು ನಿರ್ದೇಶಕನ ಕಲ್ಪನೆಯಲ್ಲಿ ಮೂಡಿದ ಭಾವನೆಗಳು ಮಾತ್ರ. ಅದು ನಿರ್ಮಾಪಕನ ಲಾಭದ ವ್ಯಾಪಾರ ಮಾತ್ರ. ಅದು ಛಾಯಾಗ್ರಾಹಕನ ಕ್ಯಾಮರಾ ಕೈಚಳಕ ಮಾತ್ರ. ಅದು ಸಂಗೀತಗಾರನ ವಾದ್ಯಗಳ ಧ್ನನಿ ತರಂಗಗಳು ಮಾತ್ರ. ಅದು ಸಂಕಲನಕಾರನ ಸಮಯ ಪ್ರಜ್ಞೆಯ ಜೋಡಣೆಯ ತಂತ್ರಜ್ಞಾನ ಮಾತ್ರ, ಸಿನಿಮಾ ಪ್ರೇಕ್ಷಕರ ಭ್ರಮೆ ಸೃಷ್ಟಿಸುವ ಒಂದು ಕಲಾ ಮಾಧ್ಯಮ ಮಾತ್ರ…..

ನಾವು ನೀವು ಅದರ ಬಲೆಯೊಳಗೆ ಬೀಳದಿರೋಣ.
ಈಗಾಗಲೇ ಹಾಳಾಗಿರುವ ಸಾಮಾಜಿಕ, ಆರ್ಥಿಕ ವ್ಯವಸ್ಥೆಯನ್ನು ಮತ್ತೆ ಒಂದು ಸುಂದರ ನಾಗರಿಕ ಸಮಾಜವನ್ನು ಕಟ್ಟೋಣ. ಅದು ಸಿನಿಮಾ ರೂಪದ ಭ್ರಮೆ ಆಗುವುದು ಬೇಡ. ನಮ್ಮ ನಿಮ್ಮೆಲ್ಲರ ವಾಸ್ತವದ ಅರಿವಿನ ಸಮಾಜವಾಗಿರಲಿ ಎಂದು ಆಶಿಸುತ್ತಾ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಬಿಸವನಹಳ್ಳಿಯಲ್ಲಿ ಅದ್ವಿತಾ ಜನ್ಮದಿನ ಅರ್ಥಪೂರ್ಣ ಆಚರಣೆ

ಗಣೇಶ್ ಕುಮಾರ್ ಮತ್ತು ಪೂರ್ಣಿಮಾ ಅವರ ಪೋಷಕತ್ವದಲ್ಲಿ, ಕೇಶವ ಮತ್ತು ಸುಷ್ಮಾ ದಂಪತಿಯ ಪುತ್ರಿ ಅದ್ವಿತಾ ಅವರ ಜನ್ಮದಿನವನ್ನು ಬಿಸವನಹಳ್ಳಿ…

7 hours ago

ಕಾರಿಗೆ ಅಡ್ಡ ಬಂದ ನಾಯಿ: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ

ದೊಡ್ಡಬಳ್ಳಾಪುರ: ಹಿಂದೂಪುರ–ಯಲಹಂಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿಗೆ ದಿಢೀರನೆ ನಾಯಿ ಅಡ್ಡ ಬಂದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ…

10 hours ago

ಅನುಭವ, ಹಿರಿತನಕ್ಕೆ ತಕ್ಕಂತೆ ಸಚಿವ ಸ್ಥಾನ ನೀಡಿ- ಮನು.ಆರ್.ವಿ ಒತ್ತಾಯ

ಕೆ.ಎಚ್ ಮುನಿಯಪ್ಪನವರು ಏಳು ಬಾರಿ ಲೋಕಸಭಾ ಸದಸ್ಯರಾಗಿ, ಎರಡು ಬಾರಿ ಕೇಂದ್ರ ಸಚಿವರಾಗಿ, ಅಪಾರ ಅನುಭವ ಹಾಗೂ ಅವರ ಹಿರಿತನಕ್ಕೆ…

22 hours ago

ಜೂ..7ರಂದು ‘ವಾಸ್ತುವಿನ ನಡಿಗೆ ಗ್ರಾಮದ ಕಡೆಗೆ’ ಕಾರ್ಯಕ್ರಮ: ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಭಾಗಿ- ಪೂತಮಾನಸ ಜ್ಯೋತಿಷ್ಯಾಲಯ ವ್ಯವಸ್ಥಾಪಕ ಡಾ.ಗಿರೀಶ್ ಕೆ

ಸಾಮಾನ್ಯ ಜನರಿಗೆ ವಾಸ್ತು ಸೂತ್ರಗಳ ಅನ್ವಯ ಜ್ಞಾನವನ್ನು ನೀಡುವ ಸಲುವಾಗಿ ಶ್ರೀ ಪೂತಮಾನಸ ಜ್ಯೋತಿಷ್ಯಾಲಯ ವತಿಯಿಂದ ಸುಕನ್ಯ ಮತ್ತು ಎಸ್.ಕೃಷ್ಣಮೂರ್ತಿ…

23 hours ago

ಜೂ. 20 ರಿಂದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಅರಂಭ- ಜಿಲ್ಲಾಧಿಕಾರಿ ಡಾ. ಕೆ.ಎನ್ ಅನುರಾಧ

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜೂನ್ 20 ರಿಂದ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಯನ್ನು…

1 day ago

ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ

  ದೊಡ್ಡಬಳ್ಳಾಪುರ: ಪರಿಸರವನ್ನು ಕಾಪಾಡುವುದು ಕೇವಲ ಸರ್ಕಾರದ ಜವಾಬ್ದಾರಿಯಲ್ಲ, ಅದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ನಾವು ಇಂದು ಮಾಡುವ ಸಣ್ಣ…

1 day ago