
ಕೋಲಾರ: ಮೈಸೂರು ಮಹಾರಾಜರ ಕಾಲದಿಂದಲೂ ಸಕ್ಷಮ ಪ್ರಾಧಿಕಾರದಿಂದ ಕಾನೂನುಬದ್ಧವಾಗಿ ರೈತರಿಗೆ ಹಂಚಿಕೆಯಾಗಿರುವ ಸರ್ಕಾರಿ ಗೋಮಾಳ ಹಾಗೂ ಕಂದಾಯ ಭೂಮಿಯಲ್ಲಿನ ರೈತರನ್ನು ಒಕ್ಕಲೆಬ್ಬಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಭೂಸಂತ್ರಸ್ತರ ಹೋರಾಟ ಸಮಿತಿ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ಪದಾಧಿಕಾರಿಗಳು ಗುರುವಾರ ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಮಿತಿ ಜಿಲ್ಲಾ ಸಂಚಾಲಕ ಸಿಪಿಎಂ ಗೋಪಾಲ್ ಮಾತನಾಡಿ, ಮುಳಬಾಗಿಲು ತಾಲೂಕಿನ ಕಗ್ಗಲನತ್ತ ಸರ್ವೆ ನಂಬರ್ 2ರಲ್ಲಿರುವ 459 ಎಕರೆ 21 ಗುಂಟೆ ಸರ್ಕಾರಿ ಗೋಮಾಳ ಭೂಮಿಯನ್ನು ಮೈಸೂರು ಮಹಾರಾಜರ ಕಾಲದಿಂದಲೂ ಸಕ್ಷಮ ಪ್ರಾಧಿಕಾರದ ಮೂಲಕ ರೈತರಿಗೆ ಹಂಚಿಕೆ ಮಾಡಲಾಗಿದೆ. ಮೈಸೂರು ಅಧಿಸೂಚನೆ ಸಂಖ್ಯೆ 6353-6-ಎಫ್‌ಟಿ-96-13-4, ದಿನಾಂಕ 25-1-1915ರ ಪ್ರಕಾರ ಈ ಭೂಮಿ ಅರಣ್ಯಕ್ಕೆ ಒಳಪಡುವುದಿಲ್ಲ ಎಂದು ದಾಖಲೆಗಳ ಸಹಿತ ವಿವರಿಸಿದರು.
ಆದರೆ, ಅರಣ್ಯ ಇಲಾಖೆ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸದೆ 2025ರಲ್ಲಿ ರೈತರ ಆಸ್ತಿ ಹಾಗೂ ಬೆಳೆಗಳನ್ನು ನಾಶಪಡಿಸಿ ಕೋಟ್ಯಂತರ ರೂಪಾಯಿ ನಷ್ಟ ಉಂಟುಮಾಡಿದ್ದಾರೆ. ಅಲ್ಲದೆ, ರೈತರ ವಿರುದ್ಧ ಎಫ್‌ಐಆರ್ ದಾಖಲಿಸಿ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದರು.
ಸಂಘಟನೆಯ ಜಿಲ್ಲಾ ಸಂಚಾಲಕ ಆರ್ ಶ್ರೀನಿವಾಸನ್ ಮಾತನಾಡಿ ನಾಗೇನಹಳ್ಳಿ ಸರ್ವೆ ನಂಬರ್ 14ರಲ್ಲಿರುವ 116 ಎಕರೆ ಕಂದಾಯ ಭೂಮಿಯಿಂದಲೂ ರೈತರನ್ನು ಒಕ್ಕಲೆಬ್ಬಿಸಲಾಗಿದೆ. ಫಾರೆಸ್ಟ್ ಸೆಟ್ಲ್‌ಮೆಂಟ್‌ನ ಸಿ ಸ್ಟೇಟ್‌ಮೆಂಟ್ ಸೇರಿದಂತೆ ದಾಖಲೆಗಳ ಪ್ರಕಾರ ಈ ಭೂಮಿ ಅರಣ್ಯ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ತಿಳಿಸಿದರು. ಬಾಲಸಂದ್ರ ಗ್ರಾಮದ ಸರ್ವೆ ನಂಬರ್ 33 ಯಾವುದೇ ಅರಣ್ಯ ಅಧಿಸೂಚನೆಯಲ್ಲಿ ಇಲ್ಲದಿದ್ದರೂ ಅಲ್ಲಿನ ರೈತರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ತೊಂದರೆ ನೀಡುತ್ತಿದ್ದಾರೆ ಎಂದು ದೂರಿದರು.
ರೈತರ ಮನವಿ ಆಲಿಸಿದ ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್, ಮೈಸೂರು ಮಹಾರಾಜರ ಕಾಲದಿಂದಲೂ ಸಕ್ಷಮ ಪ್ರಾಧಿಕಾರದಿಂದ ಸಂವಿಧಾನಾತ್ಮಕವಾಗಿ ಹಾಗೂ ಕಾನೂನುಬದ್ಧವಾಗಿ ರೈತರಿಗೆ ಹಂಚಿಕೆಯಾಗಿರುವ ಗೋಮಾಳ ಭೂಮಿಯಿಂದ ಅರಣ್ಯ ಇಲಾಖೆ ಅಧಿಕಾರಿಗಳು ರೈತರನ್ನು ಒಕ್ಕಲೆಬ್ಬಿಸಬಾರದು ಎಂದು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.
ರೈತರು ಸಲ್ಲಿಸಿರುವ ದಾಖಲೆಗಳನ್ನು ಪರಿಶೀಲಿಸಿ, ಜಿಲ್ಲೆಯಲ್ಲಿ ಕಾನೂನುಬಾಹಿರವಾಗಿ ರೈತರ ಮೇಲೆ ನಡೆದಿರುವ ದೌರ್ಜನ್ಯ, ಉಂಟಾಗಿರುವ ನಷ್ಟ ಹಾಗೂ ಕಂದಾಯ ಭೂಮಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಕಾನೂನುಬದ್ಧವಾಗಿ ಪರಿಶೀಲಿಸಿ ನ್ಯಾಯ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಭೂಸಂತ್ರಸ್ತರ ಹೋರಾಟ ಸಮಿತಿ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ಪದಾಧಿಕಾರಿಗಳಾದ ಸಿಪಿಎಂ ಗೋಪಾಲ್, ಹರಟಿ ಪ್ರಕಾಶ್, ಬಿ.ಜಿ.ಆನಂದ್, ಶ್ರೀರಾಮಪ್ಪ, ವೆಂಕಟರಾಜು, ಶಶಿಕುಮಾರ್, ನಾಗರಾಜ್, ನಾರಾಯಣಸ್ವಾಮಿ, ಸಂತೋಷ್, ಕೆ.ವಿ.ವೆಂಕಟರಮಣಪ್ಪ, ಅಮರನಾರಾಯಣ್, ಆಂಥೋನಿಸ್ವಾಮಿ, ರಮಣ, ರವಿ, ರಾಜಪ್ಪ, ಸಂಜೀವಪ್ಪ, ಜಯರಾಮಪ್ಪ ಸೇರಿದಂತೆ ರೈತರು ಉಪಸ್ಥಿತರಿದ್ದರು.