
12ನೇ ಶತಮಾನದ ಸಮಾಜ ಸುಧಾರಕ, ಸಮಾನತೆ ಮತ್ತು ಮಾನವೀಯ ಮೌಲ್ಯಗಳ ಪ್ರತಿಪಾದಕರಾದ ವಿಶ್ವಗುರು ಬಸವಣ್ಣನವರ ಕುರಿತು ‘ಬಸವ ಮಂಟಪ’ ಕೃತಿಯಲ್ಲಿ ಆಕ್ಷೇಪಾರ್ಹ ಅಂಶಗಳಿವೆ ಎಂಬ ಆರೋಪ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಬಸವಣ್ಣನವರ ವಿಚಾರಧಾರೆ, ವಚನ ಸಾಹಿತ್ಯ ಮತ್ತು ಸಾಮಾಜಿಕ ಕೊಡುಗೆಗಳನ್ನು ಗೌರವಿಸುವ ಜನರು ಕೃತಿ ವಿವಾದದ ಕುರಿತು ತಮ್ಮದೇ ಆದ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ವಿವಾದದ ಹಿನ್ನೆಲೆಯಲ್ಲಿ ಜನಸಾಮಾನ್ಯರು ಏನು ಹೇಳುತ್ತಾರೆ? ಕೃತಿಯಲ್ಲಿನ ಆಕ್ಷೇಪಾರ್ಹ ಅಂಶಗಳ ಕುರಿತು ಅವರ ಅಭಿಪ್ರಾಯವೇನು? ಸರ್ಕಾರ ಯಾವ ಕ್ರಮ ಕೈಗೊಳ್ಳಬೇಕು? ಎಂಬ ಪ್ರಶ್ನೆಗಳಿಗೆ ಜನರ ಧ್ವನಿಯಾಗಿ ‘ಜನಗಳ ಮನ’ ಅಂಕಣದಲ್ಲಿ ಸಾರ್ವಜನಿಕರ ಅನಿಸಿಕೆಗಳನ್ನು ಇಲ್ಲಿ ಪ್ರಕಟಿಸಲಾಗಿದೆ.

ಬಸವಣ್ಣನವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಉದ್ದೇಶದಿಂದಲೇ ರವಿ ಹಂಜ್ ಅವರು ‘ಬಸವ ಮಂಟಪ’ ಪುಸ್ತಕ ಬರೆದಿದ್ದು, ವಿಶ್ವೇಶ್ವರ ಭಟ್ ಅವರು ಅದನ್ನು ಪ್ರಕಟಿಸಿದ್ದಾರೆ. ಲಿಂಗಾಯತ ಸಮುದಾಯದ ಪ್ರಮುಖರಿಂದಲೇ ಪುಸ್ತಕ ಬಿಡುಗಡೆ ಮಾಡಿಸಿರುವುದು ಖಂಡನೀಯ. ಬಸವಣ್ಣನವರ ತತ್ವ, ಆದರ್ಶ ಹಾಗೂ ವ್ಯಕ್ತಿತ್ವವನ್ನು ಅವಹೇಳನ ಮಾಡುವ ಮೂಲಕ ಯುವಜನರನ್ನು ದಿಕ್ಕು ತಪ್ಪಿಸುವ ಪ್ರಯತ್ನ ನಡೆಯುತ್ತಿದೆ. ಈ ಕೃತಿಯ ಮೂಲಕ ಸಮಾಜದಲ್ಲಿ ಗೊಂದಲ ಸೃಷ್ಟಿಸಲು ಮುಂದಾಗಿರುವ ರವಿ ಹಂಜ್ ಮತ್ತು ವಿಶ್ವೇಶ್ವರ ಭಟ್ ಅವರನ್ನು ಕೂಡಲೇ ಬಂಧಿಸಿ, ಸರ್ಕಾರ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು.
— ರಾಜು ಸಣ್ಣಕ್ಕಿ, ದಲಿತ ಮುಖಂಡ, ದೊಡ್ಡಬಳ್ಳಾಪುರ

ಆಧುನಿಕ ಕಾಲದ ಬರಹಗಾರರು ಪ್ರಚಾರಕ್ಕಾಗಿ ಸತ್ಯವನ್ನು ಮರೆಮಾಚದೆ, ನೈಜ ಸತ್ಯವನ್ನು ಸಮಾಜದ ಮುಂದೆ ಎತ್ತಿಹಿಡಿಯಬೇಕು. ಸುಳ್ಳು ಮತ್ತು ತಪ್ಪು ಮಾಹಿತಿಗಳ ಮೂಲಕ ಯುವ ಪೀಳಿಗೆಯನ್ನು ದಿಕ್ಕುತಪ್ಪಿಸುವ ಪ್ರಯತ್ನ ಮಾಡಬಾರದು. ‘ಬಸವ ಮಂಟಪ’ ಕೃತಿಯ ಬರಹಗಾರ ರವಿ ಹಂಜ್ ಅವರು ಬಸವಣ್ಣನವರ ಕುರಿತು ಅವಹೇಳನಕಾರಿ ವಿಚಾರಗಳನ್ನು ಪ್ರಸ್ತಾಪಿಸಿರುವುದು ಖಂಡನೀಯ. ಇಂತಹ ಕೃತಿಯ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಂಡು, ಕಾನೂನುಬದ್ಧವಾಗಿ ಅವರನ್ನು ಬಂಧಿಸಬೇಕು. ವಿಶ್ವಗುರು ಬಸವಣ್ಣನವರಿಗೆ ಅವಮಾನ ಮಾಡಿರುವುದು ಇಡೀ ನಾಡಿಗೆ ಮಾಡಿದ ಅವಮಾನವಾಗಿದೆ.
– ರಾಜಗೋಪಾಲ್, ದಲಿತ ಮುಖಂಡ, ದೊಡ್ಡಬಳ್ಳಾಪುರ

ಬಸವ ಮಂಟಪ ಕೃತಿಯನ್ನು ಬಿಡುಗಡೆ ಮಾಡುವ ಮೊದಲು ಶಂಕರ್ ಬಿದರಿ ಅವರು ಪುಸ್ತಕವನ್ನು ಸಂಪೂರ್ಣವಾಗಿ ಓದಬೇಕಿತ್ತು. ಕೃತಿಯಲ್ಲಿರುವ ಅಂಶಗಳನ್ನು ತಿಳಿದುಕೊಳ್ಳದೆ ಪುಸ್ತಕ ಬಿಡುಗಡೆ ಮಾಡಿರುವುದು ಎಷ್ಟರಮಟ್ಟಿಗೆ ಸರಿ? ಈ ವಿಚಾರವನ್ನು ಅವರೇ ಮೊದಲು ಖಂಡಿಸಬೇಕಿತ್ತು. ಕೃತಿಯ ವಿಚಾರವಾಗಿ ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸಬೇಕು. ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಪುಸ್ತಕ ಪ್ರಕಟಿಸಿದವರ ಮೇಲೂ ಸೂಕ್ತ ಕ್ರಮ ಜರುಗಿಸಬೇಕು. ಯಾವುದೇ ಕಾರಣಕ್ಕೂ ಜನರನ್ನು ದಿಕ್ಕುತಪ್ಪಿಸುವ ಕೆಲಸವಾಗಬಾರದು.
— ಚಂದ್ರು, ರಾಜ್ಯ ಸಂಸ್ಥಾಪಕರು, ಕರವೇ ಕನ್ನಡಿಗರ ಬಣ

ಬಸವಣ್ಣನವರು ಈ ನಾಡಿನ ಸಾಂಸ್ಕೃತಿಕ ನಾಯಕರು. ಅಂತಹ ಮಹನೀಯರನ್ನು ಅವಹೇಳನ ಮಾಡಿರುವುದು ಅಕ್ಷಮ್ಯ ಅಪರಾಧ. ಅವಹೇಳನ ಮಾಡಿದವರಿಗೆ ಸರ್ಕಾರ ಕಠಿಣ ಶಿಕ್ಷೆ ವಿಧಿಸಬೇಕು. ಈ ಶಿಕ್ಷೆ ಮುಂದೆ ಇಂತಹ ಕೃತ್ಯಗಳಿಗೆ ಕೈಹಾಕುವವರಿಗೆ ತಕ್ಕ ಪಾಠವಾಗಬೇಕು. ವೇದಿಕೆಯಲ್ಲಿ ಸಾಮಾಜಿಕ ಸಮಾನತೆಗಾಗಿ ಶ್ರಮಿಸಿದ ಬಸವಣ್ಣನವರನ್ನು ಅವಹೇಳನ ಮಾಡುತ್ತಿದ್ದರೂ ಅದನ್ನು ಖಂಡಿಸದೆ ಮೌನವಾಗಿ ಕುಳಿತವರ ಮೇಲೂ ಕ್ರಮ ಕೈಗೊಳ್ಳಬೇಕು. ಸಮಾಜದ ಉದ್ದಾರಕ್ಕಾಗಿ ಶ್ರಮಿಸಿದ ಮಹನೀಯರಿಗೆ ಅವಮಾನವಾಗಬಾರದು. ನಮ್ಮ ನಾಡಿನ ಸಾಂಸ್ಕೃತಿಕ ನಾಯಕ ಬಸವಣ್ಣನವರಿಗೆ ಅವಹೇಳನ ಮಾಡಿರುವುದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ.
— ರಾಜಘಟ್ಟ ರವಿ, ಕನ್ನಡಪರ ಹೋರಾಟಗಾರ

12ನೇ ಶತಮಾನದ ಯುಗಪುರುಷ ಬಸವಣ್ಣನವರು ಇಂದು ಜನಮಾನಸದಲ್ಲಿ ದೈವಸ್ವರೂಪಿಯಾಗಿ ನೆಲೆಸಿದ್ದಾರೆ. ಸ್ತ್ರೀ ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ಮೌಢ್ಯಗಳ ವಿರುದ್ಧ ಹೋರಾಡಿದ ಮಹಾನ್ ಸಮಾಜ ಸುಧಾರಕರು. ಅಂತಹ ಮಹನೀಯರ ಕುರಿತು ಅವಹೇಳನಕಾರಿ ಬರಹ ಬರೆದಿರುವ ರವಿ ಹಂಜ್ ಅವರ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇವೆ. ಬಸವಣ್ಣನವರ ಕುರಿತು ಸೂಕ್ತ ಅಧ್ಯಯನ ನಡೆಸದೆ ಕೃತಿ ರಚಿಸಿರುವುದು ಖಂಡನೀಯ. ಸಾಮಾಜಿಕ ಸ್ವಾಸ್ಥ್ಯಕ್ಕೆ ಧಕ್ಕೆ ತರುವ ಇಂತಹ ಕೃತಿಗಳ ವಿರುದ್ಧ ಸರ್ಕಾರ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು.
— ಕೆ. ಮಹಾಲಿಂಗಯ್ಯ, ನಿವೃತ್ತ ಶಿಕ್ಷಕ

ವಿಶ್ವಗುರು ಬಸವಣ್ಣನವರ ಕುರಿತು ಆಕ್ಷೇಪಾರ್ಹ ಅಂಶಗಳನ್ನು ಒಳಗೊಂಡಿದೆ ಎನ್ನಲಾದ ‘ಬಸವ ಮಂಟಪ’ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ರಾಜ್ಯ ಸಚಿವ ಸಂಪುಟ ಕೈಗೊಂಡಿರುವ ನಿರ್ಧಾರ ಸ್ವಾಗತಾರ್ಹ. ಬಸವಣ್ಣನವರು ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ. ಸಮಾನತೆ, ಸಾಮಾಜಿಕ ನ್ಯಾಯ, ಕಾಯಕ, ದಾಸೋಹ ಹಾಗೂ ಮಾನವೀಯ ಮೌಲ್ಯಗಳನ್ನು ಸಾರಿದ ಜಾಗತಿಕ ಮಹಾನ್ ದಾರ್ಶನಿಕರು. ಅವರ ವ್ಯಕ್ತಿತ್ವ ಮತ್ತು ವಿಚಾರಧಾರೆಗೆ ಧಕ್ಕೆ ತರುವಂತಹ ತಪ್ಪು ಮಾಹಿತಿ ಅಥವಾ ಆಕ್ಷೇಪಾರ್ಹ ಅಂಶಗಳು ಕೃತಿಯಲ್ಲಿದ್ದರೆ ಅವುಗಳ ಸತ್ಯಾಸತ್ಯತೆಯನ್ನು ಸಮಗ್ರವಾಗಿ ಪರಿಶೀಲಿಸಬೇಕು. ಕೃತಿಯಲ್ಲಿನ ಅಂಶಗಳ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ, ಕಾನೂನುಬಾಹಿರ ಅಂಶಗಳು ಕಂಡುಬಂದಲ್ಲಿ ಲೇಖಕರು ಹಾಗೂ ಸಂಬಂಧಪಟ್ಟವರ ವಿರುದ್ಧ ಕಾನೂನಿನ ಅನ್ವಯ ಸೂಕ್ತ ಕ್ರಮ ಕೈಗೊಳ್ಳಬೇಕು. ಬಸವಣ್ಣನವರ ವಚನ ಸಾಹಿತ್ಯ ಮತ್ತು ತತ್ವಾದರ್ಶಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿದ್ದು, ಅವುಗಳನ್ನು ಮುಂದಿನ ಪೀಳಿಗೆಗೆ ಸಮರ್ಪಕವಾಗಿ ತಲುಪಿಸುವುದು ಎಲ್ಲರ ಜವಾಬ್ದಾರಿಯಾಗಿದೆ.
ಉದಯ ಆರಾಧ್ಯ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಯುವ ಘಟಕದ ಕಾರ್ಯದರ್ಶಿ

12ನೇ ಶತಮಾನದ ಮಹಾನ್ ಸಮಾಜ ಸುಧಾರಕ ಬಸವಣ್ಣನವರ ಬಗ್ಗೆ ಅವಹೇಳನಕಾರಿ ಕೃತಿ ಬರೆದು ಪ್ರಕಟಿಸಿರುವುದು ಖಂಡನೀಯ. ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕದಡಿ, ವಿವಿಧ ಸಮುದಾಯಗಳ ನಡುವೆ ಒಡಕು ಮೂಡಿಸುವ ಅಪಾಯವಿದೆ. ಪುಸ್ತಕಗಳು ಯುವ ಪೀಳಿಗೆಗೆ ಮಾದರಿಯಾಗುವಂತಿರಬೇಕು. ಮಹನೀಯರ ಬಗ್ಗೆ ಮಾತನಾಡುವಾಗ ಪ್ರತಿಯೊಬ್ಬರೂ ಜವಾಬ್ದಾರಿಯಿಂದ ವರ್ತಿಸಬೇಕು. ಇಂತಹ ಕೃತ್ಯಗಳನ್ನು ಯಾರೂ ಸಮರ್ಥಿಸಬಾರದು.
ಡಿ ರವಿಕುಮಾರ್, ದೊಡ್ಡಬೆಳವಂಗಲ

ಬಸವಣ್ಣನವರಂತಹ ಮಹಾನ್ ಸಾಂಸ್ಕೃತಿಕ ಚಿಂತಕರ ತೇಜೋವಧೆ ಮಾಡುವುದು ಎಂದಿಗೂ ಸಲ್ಲದು. ಸಾಧನೆ ಮತ್ತು ಸಮಾಜಕ್ಕೆ ನೀಡಿದ ಕೊಡುಗೆಯನ್ನು ಅವಮಾನಿಸುವುದು ಸಂಸ್ಕೃತಿಯ ಲಕ್ಷಣವಲ್ಲ. ಪ್ರಜಾಪ್ರಭುತ್ವದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅವಕಾಶವಿದೆ. ಆದರೆ, ವ್ಯಕ್ತಿತ್ವ ಹರಣಕ್ಕೆ ಅದು ಉಪಯೋಗವಾಗಬಾರದು. ಬಸವಣ್ಣನವರು ಕನ್ನಡ ಸಾಹಿತ್ಯಕ್ಕೆ ವಚನಗಳ ಶ್ರೀಮಂತಿಕೆಯನ್ನು ನೀಡಿದವರು. ಕನ್ನಡ ಸಂಸ್ಕೃತಿಗೆ ಮಾನವೀಯತೆಯ ಮೌಲ್ಯಗಳನ್ನು ಪರಿಚಯಿಸಿದವರು. ಸಾಂಸ್ಕೃತಿಕ ಚಳುವಳಿಗೆ ಸಮಾನತೆ, ಸ್ವಾತಂತ್ರ್ಯ ಮತ್ತು ಸಹಬಾಳ್ವೆಯ ಆಶಯಗಳನ್ನು ನೀಡಿದವರು. ಅವರ ಚಿಂತನೆ ಒಂದು ಕಾಲಘಟ್ಟಕ್ಕೆ ಸೀಮಿತವಾಗದೆ ಸಾರ್ವಕಾಲಿಕ ಸಾಮಾಜಿಕ ಪ್ರಜ್ಞೆಯಾಗಿ ಬೆಳೆದಿದೆ. ಸಾರ್ವಕಾಲಿಕ ಗೌರವಕ್ಕೆ ಪಾತ್ರವಾಗುವ ಸಾಂಸ್ಕೃತಿಕ ನಾಯಕ ಬಸವಣ್ಣ ಅವರಿಗೆ ಅವಮಾನ ಎಂದಿಗೂ ಬೇಡ.
ಪಿ.ಗೋವಿಂದರಾಜು, ಅಧ್ಯಕ್ಷರು,
ಕನ್ನಡ ಸಾಹಿತ್ಯ ಪರಿಷತ್ತು
ದೊಡ್ಡಬಳ್ಳಾಪುರ ತಾಲ್ಲೂಕು