ಖಾಯಂ ನೇಮಕಾತಿ, ಸಮಾನ ಕೆಲಸಕ್ಕೆ ಸಮಾನ ವೇತನಕ್ಕಾಗಿ ಪರವಾನಗಿ ಭೂಮಾಪಕರ ಪ್ರತಿಭಟನೆ

ಖಾಯಂ ನೇಮಕಾತಿ, ಕನಿಷ್ಠ ವೇತನ, ಸಮಾನ ಕೆಲಸಕ್ಕೆ ಸಮಾನ ವೇತನ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸರ್ಕಾರಿ ಪರವಾನಗಿ ಪಡೆದ ಭೂ ಮಾಪಕರು ಮಂಗಳವಾರ ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಭೂ ಮಾಪಕ ರಾಜಶೇಖರ್, ಕಳೆದ ಫೆಬ್ರವರಿ 20ರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ಕೈಗೊಂಡಿದ್ದೇವೆ. ಈವರೆಗೂ ಸರ್ಕಾರದ ಸಚಿವರಾಗಲಿ, ಅಧಿಕಾರಿಗಳಾಗಲಿ ಕನಿಷ್ಠ ಸೌಜನ್ಯಕ್ಕೂ ನಮ್ಮನ್ನ ಕರೆದು ಮಾತನಾಡಿಲ್ಲ. ಹಾಲಿ ಸಿಎಂ ಸಿದ್ದರಾಮಯ್ಯ ವಿರೋಧ ಪಕ್ಷದಲ್ಲಿದ್ದ ಸಮಯದಲ್ಲಿ ನಮ್ಮ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು. ಇದೀಗ ತಾವೇ ಸಿಎಂ ಆಗಿದ್ದರೂ ನಮ್ಮ ಸಮಸ್ಯೆಗಳನ್ನು ಕೇಳುತ್ತಿಲ್ಲ. ಕಂದಾಯ ಸಚಿವ ಕೃಷ್ಣಬೈರೇಗೌಡರು ನೀಡಿದ್ದ ಭರಸವೆ ಹುಸಿಯಾಗಿದೆ. ತಾಲ್ಲೂಕಿನಲ್ಲಿ 38 ಮಂದಿ ಸರ್ಕಾರಿ ಪರವಾನಗಿ ಪಡೆದ ಭೂ ಮಾಪಕರಿದ್ದೇವೆ. ನಮಗೆ ಯಾವುದೇ ಕೆಲಸದ ಭದ್ರತೆ ಇಲ್ಲ. ಜೀವನ ನಿರ್ವಹಣೆ ಸಂಕಷ್ಟಕರವಾಗಿದೆ. ಇಲಾಖೆ ಸೂಚಿಸಿದ ಎಲ್ಲಾ ಕೆಲಸಗಳನ್ನು ಮಾಡುತ್ತೇವೆ. ಆದರೆ ನಮಗೆ ಯಾವುದೇ ಪ್ರಯೋಜನವಿಲ್ಲದಂತಾಗಿದೆ ಆಕ್ರೋಶ ಹೊರಹಾಕಿದರು.

ಮತ್ತೋರ್ವ ಭೂಮಾಪಕ ಕಾಂತರಾಜು ಮಾತನಾಡಿ, ನಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಹೈಕೋರ್ಟ್ ಕೂಡ ಸರ್ಕಾರಕ್ಕೆ ಸೂಚನೆ ನೀಡಿದೆ. ಸರ್ಕಾರದ ಪರವಾನಗಿ ಪಡೆದು 2002 ರಿಂದಲೂ ಸೇವೆ ಸಲ್ಲಿಸುತ್ತಿರುವ 6 ಸಾವಿರಕ್ಕೂ ಹೆಚ್ಚು ಭೂ ಮಾಪಕರಿಗೆ ಸೇವಾ ಭದ್ರತೆ ಇಲ್ಲ. ಸರ್ಕಾರಿ ಭೂ ಮಾಪಕರಂತೆ ಸಮಾನ ಕೆಲಸ ಮಾಡುತ್ತಿರುವ ನಮಗೆ ಸಮಾನ ವೇತನ ನೀಡಬೇಕು. ಜೊತೆಗೆ ಸೇವೆ ಖಾಯಂ ಮಾಡಬೇಕು ಎಂದು ಒತ್ತಾಯಿಸಿದರು.

ರೈತ ಕೆಸ್ತೂರು ರಮೇಶ್ ಮಾತನಾಡಿ, ಜಮೀನು ಸರ್ವೇಗೆ ಬೇಸಿಗೆ ಸೂಕ್ತ ಕಾಲ. ಉಳಿದ ಸಮಯದಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಬೇಸಿಗೆಯಲ್ಲಿ ಒಂದಷ್ಟು ಬಿಡುವಿನಲ್ಲಿ ಇರುತ್ತಾರೆ. ಭೂಮಿ ಅಳತೆ, ಪರಿವರ್ತನೆಗೆ ಇದು ಒಳ್ಳೆಯ ಸಮಯ. ಇಂತಹ ವೇಳೆಯಲ್ಲಿಯೇ ಭೂಮಾಪಕರು ಸಿಗುತ್ತಿಲ್ಲ. ಇದು ಕೃಷಿ ಜತೆಗೆ ಇತರೆ ವಲಯಗಳಿಗೂ ಪೆಟ್ಟು ಕೊಟ್ಟಿದೆ. ಇವತ್ತು, ನಾಳೆ ಎನ್ನುತ್ತಾ ಸಮಯ ಮುಂದೂಡುವುದು ಸರಿಯಲ್ಲ. ಖಾಸಗಿಯವರನ್ನು ಕರೆದು ಸಮೀಕ್ಷೆ ಮಾಡಿಸಲು ಆಗುವುದಿಲ್ಲ. ಪ್ರತಿಯೊಂದು ಕೆಲಸಕ್ಕೂ ಭೂಮಾಪಕರ ಅಗತ್ಯ ಇದೆ. ಅವರು ಜಾಗ ಗುರುತಿಸಿದರೆ ಮುಂದಿನ ಕಾರ್ಯ ನಡೆಯುತ್ತದೆ. ಇಲ್ಲದಿದ್ದರೆ ಎಲ್ಲವೂ ಸ್ಥಗಿತಗೊಳ್ಳುತ್ತದೆ. ಸರ್ಕಾರ ಇದನ್ನು ಅರಿತು ಒಂದು ನಿರ್ಧಾರ ಕೈಗೊಳ್ಳಬೇಕು. ನಮ್ಮ ತಾಲ್ಲೂಕಿನಲ್ಲಿ ಜಮೀನಿನ ಹದ್ದುಬಸ್ತು, ಪೋಡಿ, 11 ಇ ಸ್ಕೆಚ್, ಭೂ ಪರಿವರ್ತನೆ ಒಳಗೊಂಡಂತೆ ಒಟ್ಟು 9 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಾಕಿ ಇವೆ. ಭೂ ಮಾಪಕರು ಸಂಪೂರ್ಣವಾಗಿ ಕೆಲಸ ನಿಲ್ಲಿಸಿದ್ದು, ಭೂಮಿ ಖರೀದಿ ಮತ್ತು ಮಾರಾಟಕ್ಕೆ ಸಹ ತೊಡಕಾಗಿದೆ. ಪ್ರತಿಯೊಂದು ಕೆಲಸಕ್ಕೆ 11 ಇ ಅನಿವಾರ್ಯವಾಗಿದೆ. ಹೀಗಾಗಿ ರೈತರ ಯಾವುದೇ ಕೆಲಸ ಸಕಾಲಕ್ಕೆ ಆಗುತ್ತಿಲ್ಲ ಎಂದರು.

ಈ ವೇಳೆ ಭೂ ಮಾಪಕರಾದ ರಾಜಶೇಖರ್, ಕಾಂತರಾಜು, ಮಂಜುನಾಥ, ಜಯಶಂಕರ್, ಪ್ರಸಾದ್ , ಗುರುರಾಜು, ನರಸಿಂಹಮೂರ್ತಿ, ವಾಸು ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!