ಕೆರೆ ಸಂರಕ್ಷಣೆ, ಕೆರೆ ಒತ್ತುವರಿ, ಪರಿಸರ ಮಾಲಿನ್ಯ ಬಗ್ಗೆ ಜನರಿಗೆ ಕಾನೂನು ಅರಿವು ಮೂಡಿಸಿ- ನ್ಯಾಯಮೂರ್ತಿ ಬಿ.ಎ. ಪಾಟೀಲ್

ಕೆರೆ ಒತ್ತುವರಿ, ಭೂ ಕಬಳಿಕೆ, ಪರಿಸರ ಮಾಲಿನ್ಯ ಮಾಡುವುದರಿಂದ ಉಂಟಾಗುವ ಕಾನೂನು ತೊಡಕುಗಳ ಬಗ್ಗೆ ಜನರಿಗೆ ಅರಿವು ಮೂಡಿಸಿ, ಕಾನೂನು ಕ್ರಮಗಳ ಮೂಲಕ ಭೂಮಿ, ಕೆರೆ, ಪರಿಸರವನ್ನು ಸಂರಕ್ಷಿಸಬೇಕು ಎಂದು ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಅಧ್ಯಕ್ಷರಾದ ನ್ಯಾಯಮೂರ್ತಿ ಬಿ.ಎ. ಪಾಟೀಲ್ ಅವರು ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ , ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯಗಳು, ಜಿಲ್ಲಾ ಕೆರೆ ಸಂರಕ್ಷಣಾ ಸಮಿತಿ, ಜಿಲ್ಲಾಡಳಿತ, ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಮತ್ತು ವಕೀಲರ ಸಂಘ ದೇವನಹಳ್ಳಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ “ಕೆರೆ ಸಂರಕ್ಷಣೆ ಮಾಡುವಲ್ಲಿ ಸರ್ಕಾರಿ ಅಧಿಕಾರಿಗಳ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪಾತ್ರ ಕುರಿತು ಕಾರ್ಯಾಗಾರ” ವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಕೆರೆ ಒತ್ತುವರಿ, ರಾಜಕಾಲುವೆಗಳ ಒತ್ತುವರಿ, ದಿನನಿತ್ಯದ ಸಮಸ್ಯೆಗಳಾಗಿವೆ. ಕೆರೆಗಳ ಕುರಿತು ನಿರ್ಲಕ್ಷ್ಯ ಮನೋಭಾವದಿಂದ ಕುಡಿಯುವ ನೀರಿನ ಅಭಾವ ತಲೆದೋರಿದೆ. ಕಲುಷಿತ ನೀರಿನಿಂದ ಪ್ರಕೃತಿ ಮಾಲಿನ್ಯವಾಗುತ್ತಿದೆ. ಈ ನಿಟ್ಟಿನಲ್ಲಿ ಕೆರೆ, ಪರಿಸರ ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿರುತ್ತದೆ. ಸರ್ಕಾರದ ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ಕೆರೆ ಸಂರಕ್ಷಣೆ ಮಾಡುವುದು ಬಹಳ ಮುಖ್ಯ, ಕೆರೆ ಒತ್ತುವರಿ ತೆರವು ಪ್ರಕ್ರಿಯೆ ಅಧಿಕಾರಿಗಳ ಹಂತದಲ್ಲಿ ಆಗದಿದ್ದಾಗ  ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ, ನ್ಯಾಯಾಲಯದ ಮುಖೇನ ಕಾನೂನು ರೀತಿಯ ಕ್ರಮ ಕೈಗೊಂಡು ಒತ್ತುವರಿಯನ್ನು ತೆರವುಗೊಳಿಸಲಾಗುವುದು ಎಂದು ಅವರು ಹೇಳಿದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ  ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷರಾದ ಎಮ್.ಎಲ್. ರಘುನಾಥ್ ಅವರು ಕಾರ್ಯಾಗಾರದ  ಅಧ್ಯಕ್ಷತೆ ವಹಿಸಿ ಮಾತನಾಡಿ ಸರ್ಕಾರಿ ಜಮೀನು ಒತ್ತುವರಿ, ಧಾರ್ಮಿಕ ಜಮೀನು ಒತ್ತುವರಿ, ಕೆರೆಗೆ ಅತಿಕ್ರಮ ಪ್ರವೇಶ ಮಾಡಿ ಒತ್ತುವರಿ ಮಾಡುವುದು, ಸರ್ಕಾರಿ ಜಮೀನನ್ನು ಬೇರೆಯವರಿಗೆ ಪರಭಾರೆ ಕೊಡುವುದು, ಒತ್ತುವರಿ ವ್ಯಾಪ್ತಿಗೆ ಬರುತ್ತದೆ. ಒತ್ತುವರಿ ಕಂಡುಬಂದಲ್ಲಿ ಶಿಕ್ಷೆ, ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಅಭಿವೃದ್ಧಿ ಕಾರ್ಯಕ್ರಮಗಳು  ಪರಿಸರಕ್ಕೆ ಹಾನಿಯಾಗದಂತೆ ಸುಸ್ಥಿರ ಅಭಿವೃದ್ಧಿ ಮಾದರಿಯಲ್ಲಿ ಆಗಬೇಕೇ ಹೊರತು ಪರಿಸರವನ್ನು ಧಿಕ್ಕರಿಸಿ ಅಲ್ಲ, ಹಾಗಾದಾಗ ಪ್ರಕೃತಿಯೇ ಮಾನವನಿಗೆ ಪಾಠ ಕಲಿಸುತ್ತದೆ ಎಂದು ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ  ಜಿಲ್ಲಾ ಕೆರೆ ಸಂರಕ್ಷಣಾ ಸಮಿತಿ ಅಧ್ಯಕ್ಷರಾದ ಡಾ.ಶಿವಶಂಕರ್ ಎನ್ ಅವರು ಕಾರ್ಯಾಗಾರದ ಪ್ರಾಸ್ತಾವಿಕ ಮಾತುಗಳನ್ನಾಡಿ ಜಿಲ್ಲೆಯಲ್ಲಿ 709 ಕೆರೆಗಳಿದ್ದು, 2018 ರಲ್ಲಿ ಎಲ್ಲಾ ಕೆರೆಗಳ ಅಳತೆ ಕಾರ್ಯ ಮುಗಿದಿದೆ. ಕೆರೆ ಒತ್ತುವರಿ ಆಗಿರುವ ಕಡೆ ಈಗಾಗಲೇ ತೆರವು ಕಾರ್ಯ ಕೈಗೊಂಡಿದ್ದೇವೆ. 13 ಕೆರೆಗಳ 85 ಎಕರೆ ಒತ್ತುವರಿ ಯನ್ನು ತೆರವುಗೊಳಿಸಿದ್ದೇವೆ. ಒತ್ತುವರಿ ತೆರವುಗೊಳಿಸಿ ಕೆರೆ ಸುತ್ತಲೂ ಕಾಲುವೆ ರೂಪದಲ್ಲಿ ಕಂದಕ(ಟ್ರೆಂಚ್) ತೆಗೆದು ಬಾರ್ಡರ್ ಕಲ್ಲುಗಳನ್ನು  ಹಾಕಿ ಹದ್ದುಬಸ್ತು ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಮೊದಲನೇ ಅಧಿವೇಶನದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಆದ ಸಂದೀಪ್ ಸಾಲಿಯಾನ್ ಅವರು ಮಾತನಾಡಿ, ಸರ್ಕಾರಿ ಸ್ವತ್ತುಗಳ  ಸಂರಕ್ಷಣೆ ಮಾಡುವುದು ಪ್ರತಿಯೊಬ್ಬ ಸರ್ಕಾರಿ ಅಧಿಕಾರಿಯ ಕರ್ತವ್ಯ. ಅಧಿಕಾರಿಗಳು ಎಚ್ಚೆತ್ತುಕೊಂಡು ಕಾರ್ಯ ಪ್ರವೃತ್ತರಾಗದೇ ಹೋದರೆ ಕೆರೆ, ಕುಂಟೆ, ಕಾಲುವೆಗಳು ಕಲುಷಿತಗೊಂಡು ನಾಶವಾಗಿ ಹೋಗುತ್ತವೆ ಎಂದರು.

ಉಚ್ಛ ನ್ಯಾಯಾಲಯದ ಆದೇಶದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕೆರೆ ಸಂರಕ್ಷಣಾ ಸಮಿತಿಗಳು ಕಾರ್ಯನಿರ್ವಹಿಸುತ್ತಿವೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಭಿವೃದ್ಧಿ ಅಧಿಕಾರಿಗಳು ಅತ್ಯಂತ ಜವಾಬ್ದಾರಿಯುತವಾಗಿ ಕೆರೆಗಳ ನಿರೀಕ್ಷಣೆ ಮಾಡಿ ಮೇಲಧಿಕಾರಿಗಳ ಗಮನಕ್ಕೆ ತರಬೇಕು. ಇಲ್ಲದಿದ್ದಲ್ಲಿ ಕೆರೆ ಸಂರಕ್ಷಣಾ ಕಾಯ್ದೆಗಳ ಪ್ರಕಾರ ಕಾನೂನು ಕ್ರಮಕ್ಕೆ ಗುರಿಯಾಗುತ್ತಾರೆ ಎಂದು ಎಚ್ಚರಿಸಿದರು.

ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕೆರೆ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಹನ್ನೆರಡು ಸಾವಿರಕ್ಕೂ ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿರುವುದಾಗಿ ತಿಳಿಸಿದರು.

ಎರಡನೇ ಅಧಿವೇಶನದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯಗಳ ರಿಜಿಸ್ಟ್ರಾರ್ ಆಗಿರುವ ಎಚ್.ಕೆ ನವೀನ್ ಅವರು ಮಾತನಾಡಿ, ಕೆರೆ ಒತ್ತುವರಿ ತೆರವುಗೊಳಿಸಲು ತೆಗೆದುಕೊಳ್ಳಬೇಕಾದ ಕಾನೂನು  ಪ್ರಕ್ರಿಯೆಗಳ ಕುರಿತು ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಅನುರಾಧ ಕೆ.ಎನ್,  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಐದನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶರಾದ ಬಿರಾದರ್ ದೇವೇಂದ್ರಪ್ಪ, ಹಿರಿಯ ಸಿವಿಲ್‌ ನ್ಯಾಯಾಧೀಶರು ಹಾಗೂ ದೇವನಹಳ್ಳಿ ತಾಲ್ಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ಮಧುಸೂಧನ ಡಿ.ಕೆ, ದೇವನಹಳ್ಳಿ ವಕೀಲರ ಸಂಘದ ಅಧ್ಯಕ್ಷರಾದ ಮುನಿರಾಜ, ಬೆಂಗಳೂರು ಗ್ರಾಮಾಂತರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸರೀನಾ ಸಿಕ್ಕಲಿಗಾರ್, ಅಪರ ಜಿಲ್ಲಾಧಿಕಾರಿ ಅಮರೇಶ್ ಹೆಚ್, ಉಪಕಾರ್ಯದರ್ಶಿ ರಮೇಶ್ ಟಿ.ಕೆ, ಉಪವಿಭಾಗಾಧಿಕಾರಿ ಶ್ರೀನಿವಾಸ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು ಕಾರ್ಯಾಗಾರದಲ್ಲಿ  ಉಪಸ್ಥಿತರಿದ್ದರು.

Ramesh Babu

Journalist

Recent Posts

ಸಾಸಲು ಹೋಬಳಿಯಲ್ಲಿ ಮಿತಿಮೀರಿದ ಕೃಷಿ ಬೋರ್ ವೆಲ್ ಕೇಬಲ್ ಕಳ್ಳರ ಹಾವಳಿ: ಒಂದೇ ದಿನ ಹಲವು ಕಡೆ ಕೇಬಲ್ ಕಟ್

ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿಯಲ್ಲಿ ಬೋರ್ ವೆಲ್ ಗಳ ವಿದ್ಯುತ್ ಕೇಬಲ್ ಕಳ್ಳರ ಹಾವಳಿ ಮಿತಿಮೀರಿದೆ. ಕಳೆದ ರಾತ್ರಿ ಹತ್ತಾರು…

11 minutes ago

ಕಸ್ಟಮ್ಸ್ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ: ಬರೋಬ್ಬರಿ 14.22 ಕೋಟಿ ರೂ ಮೌಲ್ಯದ ಗಾಂಜಾ ಜಪ್ತಿ

ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬರೋಬ್ಬರಿ 14.22 ಕೋಟಿ ರೂ ಮೌಲ್ಯದ ಗಾಂಜಾ ಜಪ್ತಿ ಮಾಡಿದ್ದಾರೆ. ವಿದೇಶಗಳಿಂದ…

3 hours ago

ದಲಿತರು, ದಲಿತ ಕಾಲೋನಿಗಳೆಂದರೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ನಿರ್ಲಕ್ಷ್ಯ, ಬೇಜವಾಬ್ದಾರಿ, ಅಸಡ್ಡೆ: ದಲಿತ ಕಾಲೋನಿಗೆ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಹಾಡೋನಹಳ್ಳಿ ಗ್ರಾಪಂ ವಿಫಲ: ಸಿಡಿದ್ದೆದ್ದ ದಲಿತರು

ದಲಿತರು, ದಲಿತ ಕಾಲೋನಿಗಳೆಂದರೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಏಕಿಷ್ಟು ನಿರ್ಲಕ್ಷ್ಯ, ಬೇಜವಾಬ್ದಾರಿ, ಅಸಡ್ಡೆ. ದಲಿತ ಕಾಲೋನಿಗೆ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಹಾಡೋನಹಳ್ಳಿ…

6 hours ago

ಪ್ರಧಾನಿ ನರೇಂದ್ರ ಮೋದಿಯನ್ನ ಭೇಟಿಯಾದ ಸಿಎಂ ಸಿದ್ದರಾಮಯ್ಯ:ಬಹುದಿನಗಳಿಂದ ಬಾಕಿಯಿರುವ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ: ಬೇಡಿಕೆ ಯಾವುದು….?

ದೆಹಲಿಯಲ್ಲಿ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ರಾಜ್ಯಕ್ಕೆ ಸಂಬಂಧಿಸಿದಂತೆ ಬಹುದಿನಗಳಿಂದ ಬಾಕಿಯಿರುವ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಪತ್ರವನ್ನು…

17 hours ago

ಕಡೇ ಕಾರ್ತೀಕ ಸೋಮವಾರ: ಮೀನಾಕ್ಷಿ ಸಮೇತ ಸ್ವಯಂ ಭುವನೇಶ್ವರ ದೇವಾಲಯದಲ್ಲಿ ಲಕ್ಷ ದೀಪೋತ್ಸವ

ದೂಡ್ಡಬಳ್ಳಾಪುರದ ಮೀನಾಕ್ಷಿ ಸಮೇತ ಸ್ವಯಂ ಭುವನೇಶ್ವರ ಸ್ವಾಮಿಯವರ ದೇವಾಲಯದಲ್ಲಿ ಕಡೇ ಕಾರ್ತೀಕ ಸೋಮವಾರ ಪ್ರಯುಕ್ತ ಈ ದಿನ ಬೆಳಿಗ್ಗೆ ಗಣಪತಿ…

20 hours ago

ನಾಳೆ (ನ.18) ತಾಲೂಕಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ವಿದ್ಯುತ್ ಅಡಚಣೆಯಾಗುವ ಪ್ರದೇಶಗಳ ಪಟ್ಟಿ ಇಲ್ಲಿದೆ ನೋಡಿ….

ದೊಡ್ಡಬಳ್ಳಾಪುರ: ನಾಳೆ (ನ.18) ನಗರದ ಹೊರವಲಯದಲ್ಲಿರುವ 66/11ಕಿವಿ ಡಿ.ಕ್ರಾಸ್ ಉಪಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾರ್ಯವನ್ನು ಹಮ್ಮಿಕೊಳ್ಳಲಾಗಿರುವುದರಿಂದ ತಾಲೂಕಿನ ಹಲವೆಡೆ ವಿದ್ಯುತ್‌…

20 hours ago