
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಮನೆ ಕಳ್ಳತನ ಪ್ರಕರಣದಲ್ಲಿ ಪತ್ತೆಹಚ್ಚಲಾಗಿದ್ದ ಬೆಲೆಬಾಳುವ ಚಿನ್ನಾಭರಣ ಹಾಗೂ ನಗದು ಹಣವನ್ನು ಪೊಲೀಸರು ದೂರುದಾರರಿಗೆ ಹಸ್ತಾಂತರಿಸಿದರು.
ಜೂನ್ 15ರಂದು ಸರಳಾ ಚಂದ್ರಶೇಖರ್ ಅವರ ಮನೆಯಲ್ಲಿ ಚಿನ್ನದ ಮಾಂಗಲ್ಯ ಸರ, ನೆಕ್ಲೇಸ್, ನಗದು ಹಣ ಹಾಗೂ ದ್ವಿಚಕ್ರ ವಾಹನ ಕಳುವಾಗಿರುವ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಬಿಹಾರ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಿ, ₹11.42 ಲಕ್ಷ ಮೌಲ್ಯದ ಕಳವು ಮಾಲನ್ನು ವಶಪಡಿಸಿಕೊಂಡಿದ್ದರು.
ಪ್ರಕರಣದಲ್ಲಿ ವಶಪಡಿಸಿಕೊಂಡಿದ್ದ ₹9.75 ಲಕ್ಷ ಮೌಲ್ಯದ 85 ಗ್ರಾಂ ಚಿನ್ನಾಭರಣ ಹಾಗೂ ₹67 ಸಾವಿರ ನಗದು ಹಣವನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಡಾ. ನವೀನ್ ಕುಮಾರ್ ಅವರು ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ದೂರುದಾರರಾದ ಸರಳಾ ಚಂದ್ರಶೇಖರ್ ಅವರಿಗೆ ಹಿಂದಿರುಗಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ಅಧೀಕ್ಷಕ ಚಂದ್ರಕಾಂತ್ ಎಂ.ವಿ. ಅವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಡಾ. ವೆಂಕಟೇಶ್ ಪ್ರಸನ್ನ, ಲಕ್ಷ್ಮೀನಾರಾಯಣ ಎ.ವಿ. ಹಾಗೂ ದೊಡ್ಡಬಳ್ಳಾಪುರ ಉಪವಿಭಾಗದ ಡಿವೈಎಸ್ಪಿ ಪಾಂಡುರಂಗ ಅವರ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಸಲಾಗಿತ್ತು.
ಇನ್ಸ್ಪೆಕ್ಟರ್ ಡಾ. ನವೀನ್ ಕುಮಾರ್ ಎಂ.ಬಿ. ನೇತೃತ್ವದ ತಂಡವು ಕಾರ್ಯಾಚರಣೆ ನಡೆಸಿ, ಬಿಹಾರದ ಖಾಗರಿಯಾ ಜಿಲ್ಲೆಯ ಇಬ್ಬರು ಆರೋಪಿಗಳನ್ನು ಬಂಧಿಸಿ ಕಳವು ಮಾಲು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿತ್ತು. ಪ್ರಕರಣದ ಶೀಘ್ರ ತನಿಖೆ, ಆರೋಪಿಗಳ ಬಂಧನ ಹಾಗೂ ಕಳವಾದ ವಸ್ತುಗಳನ್ನು ದೂರುದಾರರಿಗೆ ಮರಳಿಸಿರುವ ಪೊಲೀಸ್ ತಂಡದ ಕಾರ್ಯವನ್ನು ಹಿರಿಯ ಅಧಿಕಾರಿಗಳು ಪ್ರಶಂಸಿಸಿದ್ದಾರೆ.