Categories: ಲೇಖನ

ಏನಾಗಿದೆ ಈ ಹೋರಾಟಗಾರರಿಗೆ….

ಜನರಿಗೆ ಮಾದರಿಯಾಗಬೇಕಾದ ಈ ಜನರೇ ದಾರಿತಪ್ಪಿ ಹಾದಿಬೀದಿ ಜಗಳವಾಡಿ ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತುವ, ಒಬ್ಬರಿಗೊಬ್ಬರ ವಿರುದ್ಧ ಪ್ರತಿಭಟಿಸುವ ಮನೋಭಾವ ಬೆಳೆಸಿಕೊಂಡರೆ ಸಾರ್ವಜನಿಕವಾಗಿ ನಗೆ ಪಾಟಿಲಿಗೆ ಈಡಾಗುವುದಿಲ್ಲವೇ.

ಹೋರಾಟಗಾರರು ಇರುವುದೇ ಕೆಲವರು ಮಾತ್ರ. ಅವರೇ ಹೀಗೆ ಗುಂಪುಗಳನ್ನು ರಚಿಸಿಕೊಂಡು ಪ್ರಚೋದನಾತ್ಮಕವಾಗಿ ವರ್ತಿಸಿದರೆ ಹೇಗೆ….

ಹೌದು ಕೆಲವೊಮ್ಮೆ ಮಾತು ತಪ್ಪುತ್ತದೆ, ಹೌದು ಕೆಲವೊಮ್ಮೆ ಭಾವನೆಗಳು ಕೆರಳುತ್ತವೆ,
ಹೌದು ಕೆಲವೊಮ್ಮೆ ಚಿಂತನೆಗಳು ಮಿತಿಮೀರಿತ್ತವೆ,
ಹೌದು ಕೆಲವೊಮ್ಮೆ ತಪ್ಪುಗಳಾಗುತ್ತವೆ, ಹೌದು ಕೆಲವೊಮ್ಮೆ ಮನಸ್ಸು ನಿಯಂತ್ರಣದಲ್ಲಿ ಇರುವುದಿಲ್ಲ,
ಹೌದು ಕೆಲವೊಮ್ಮೆ ವಿಚಿತ್ರ ಪರಿಸ್ಥಿತಿ ನಿರ್ಮಾಣವಾಗುತ್ತದೆ,
ಹೌದು ಕೆಲವೊಮ್ಮೆ ಪ್ರಶಸ್ತಿ, ಪ್ರಚಾರದ ಗುಂಗು ಹಿಡಿಯುತ್ತದೆ,
ಹೌದು ಕೆಲವೊಮ್ಮೆ ಅಧಿಕಾರದ ಮೋಹ ಹೆಚ್ಚಾಗುತ್ತದೆ,…

ಇದೆಲ್ಲವೂ ಅತ್ಯಂತ ಸಹಜವಾದದ್ದು. ಆದರೆ ಮಾತಿಗೊಮ್ಮೆ ಬುದ್ದತ್ವದ ಬಗ್ಗೆ, ಗಾಂಧಿ ತತ್ವದ ಬಗ್ಗೆ, ಅಂಬೇಡ್ಕರ್ ಸಂವಿಧಾನದ ಬಗ್ಗೆ ಮಾತನಾಡುವ ನಾವು ಸಂದರ್ಭ, ಸನ್ನಿವೇಶಗಳನ್ನು ಅರ್ಥ ಮಾಡಿಕೊಂಡು ಪರಿಪೂರ್ಣ ಚಿಂತನೆಯೊಂದಿಗೆ ಸಣ್ಣ ಘಟನೆಗಳನ್ನು ನಿರ್ಲಕ್ಷಿಸುತ್ತಾ ಸಾಗಬಹುದಲ್ಲವೇ. ಕ್ಷಮೆ, ಕರುಣೆಗೆ ಜಾಗಗಳೇ ಇಲ್ಲದೆ ಹೋರಾಟಗಳನ್ನು ರೂಪಿಸಲು ಸಾಧ್ಯವೇ….

ಸೈದ್ಧಾಂತಿಕ ಬದ್ಧತೆಯೂ ಒಂದು ವ್ಯಸನವಾಗಬಾರದು,
ಒಂದು ಗೀಳಾಗಬಾರದು,
ಒಂದು ಹಠವಾಗಬಾರದು,
ಒಂದು ದೌರ್ಬಲ್ಯವಾಗಬಾರದು,
ಒಂದು ನೆಪವಾಗಬಾರದು.
ಅರಿವಿನ ಪ್ರಜ್ಞೆ ಪ್ರತಿ ಹೋರಾಟಗಾರರಿಗೂ ಇರಬೇಕಾಗುತ್ತದೆ.
ಸಮಸ್ಯೆ ಗಂಭೀರವಲ್ಲದೆ ಇರುವಾಗ, ವಿಷಯ ಪ್ರಸ್ತುತ ತುಂಬಾ ಅನಿವಾರ್ಯವಲ್ಲದೆ ಇರುವಾಗ ನಾವು ಅದನ್ನು ಪ್ರಸ್ತಾಪಿಸುವ ಅವಶ್ಯಕತೆಯೇ ಇರುವುದಿಲ್ಲ…..

ಈ ಜಗಳಗಳು ಯಾವ ಹಂತ ತಲುಪುತ್ತವೆ ಎಂದರೆ ಕೆಲವರು ಅಂಬೇಡ್ಕರ್ ಹೆಸರಿನ ನೆರಳಲ್ಲಿ ಆಶ್ರಯ ಪಡೆದು ಅಲ್ಲಿಂದ ಬಾಣ ಬಿಟ್ಟರೆ, ಮತ್ತೆ ಕೆಲವರು ರಾಜಕುಮಾರ್ ಮತ್ತು ಹೆಸರಿನ ನೆರಳಲ್ಲಿ ಆಶ್ರಯ ಪಡೆದು ಅಲ್ಲಿಂದ ಬಾಣ ಹೂಡುತ್ತಾರೆ. ಎರಡೂ ಬಾಣಗಳು ಪರಸ್ಪರ ಒಬ್ಬರಿಗೊಬ್ಬರಿಗೆ ತೊಂದರೆ ಕೊಡುವುದು ಬಿಟ್ಟರೆ ಮತ್ತೇನು ಲಾಭವಾಗುವುದಿಲ್ಲ….

ಸಣ್ಣ ವಿಷಯಗಳನ್ನೂ ಸಹ ನಾವು ಬಗೆಹರಿಸಿಕೊಳ್ಳದೆ ಗುದ್ದಾಟಕ್ಕೆ ಬಿದ್ದರೆ ನೈತಿಕವಾಗಿ ನಾವು ಕುಸಿಯುತ್ತೇವೆ. ಸಾರ್ವಜನಿಕ ಬೆಂಬಲ ಕಳೆದುಕೊಳ್ಳುತ್ತೇವೆ. ಅಮೆರಿಕ, ಇಸ್ರೇಲ್, ಇರಾನ್, ರಷ್ಯಾ, ಉಕ್ರೇನ್, ಪಾಕಿಸ್ತಾನ, ಆಫ್ಘನಿಸ್ತಾನ ಮುಂತಾದ ದೇಶಗಳ ನಡುವಿನ ಯುದ್ಧದ ಸಮಯದಲ್ಲಿ ಬುದ್ದಿ ಹೇಳುವ, ಶಾಂತಿಯ ಮಂತ್ರ ಪಠಿಸುವ ನೈತಿಕತೆಯೇ ನಮಗಿರುವುದಿಲ್ಲ. ಸಮಸ್ಯೆಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬಹುದು ಎಂಬ ಶಾಂತಿಯ ಪ್ರಸ್ತಾಪವನ್ನು ನಾವು ಹೇಳಲಾಗುವುದಿಲ್ಲ. ಏಕೆಂದರೆ ನಮ್ಮ ನಮ್ಮ ನಡುವಿನ ವಿವಾದವನ್ನೇ ನಾವು ಬಗೆಹರಿಸಿಕೊಳ್ಳದಿದ್ದರೆ ಬೇರೆಯವರಿಗೆ ಬುದ್ಧಿ ಹೇಳುವುದು ಹೇಗೆ…….

20 ವರ್ಷದ ಹಳೆಯ ರಾಜ್‌ಕುಮಾರ್ ಸಮಾಧಿಯ ಬಗ್ಗೆ ಪ್ರಸ್ತಾಪಿಸುವುದು, ಅದರ ವಿರುದ್ಧ ಹೋರಾಡುವುದು,
ಅದಕ್ಕಾಗಿ ಅವರ ವಿರುದ್ಧ ತೀವ್ರವಾಗಿ ಪ್ರತಿಭಟಿಸುವುದು, ಇವರ ವಿರುದ್ಧ ಪೊಲೀಸ್ ಕಂಪ್ಲೇಂಟ್ ಕೊಡುವುದು, ಅವರ ವಿರುದ್ಧ ಗಡಿಪಾರಿಗೆ ಆಗ್ರಹಿಸುವುದು ಇದೆಲ್ಲವೂ ಎರಡೂ ಕಡೆಯ ಹೋರಾಟಗಾರರಿಗೆ ಶೋಭೆ ತರುವುದಿಲ್ಲ. ಅವರವರ ಅಪ್ರಬುದ್ಧತೆ ಮಾತ್ರ ಸಾರ್ವಜನಿಕವಾಗಿ ಪ್ರದರ್ಶನವಾಗುತ್ತಿದೆ ಅಷ್ಟೇ…..

ಕುಸಿಯುತ್ತಿರುವ ತಾಳ್ಮೆಯ ಮಟ್ಟ.,
ಇಳಿಯುತ್ತಿರುವ ಮೌನದ ಮಹತ್ವ.,
ಕಡಿಮೆಯಾಗುತ್ತಿರುವ ವಿವೇಚನಾ ಸಾಮರ್ಥ್ಯ.,
ಅಧೋಗತಿಗಿಳಿಯುತ್ತಿರುವ ಸಭ್ಯತೆ…………….

ಹೌದು,
ಬದಲಾವಣೆ ಜಗದ ನಿಯಮ. ಆದರೆ ಬದಲಾವಣೆ ಎತ್ತ ಸಾಗಿದೆ.,

ಕೆಲವು ಕ್ಷೇತ್ರಗಳಲ್ಲಿ ಬದಲಾವಣೆ ಅತ್ಯುತ್ತಮ ಗುಣಮಟ್ಟದಿಂದ ಕೂಡಿದೆ. ಮುಖ್ಯವಾಗಿ ತಾಂತ್ರಿಕ ಅಭಿವೃದ್ಧಿಯಲ್ಲಿ.

ಆದರೆ ಮಾನವೀಯ ಗುಣಗಳ ಚಿಂತನೆಯಲ್ಲಿ ಬದಲಾವಣೆ ತೀರಾ ಆತಂಕಕಾರಿಯಾಗಿದೆ.

ಸಾಮಾನ್ಯ ಜನರನ್ನು ಬಿಡಿ. ಮುಖ್ಯವಾಹಿನಿಯ ಅತ್ಯುನ್ನತ ಸ್ಥಾನದಲ್ಲಿರುವ ರಾಜಕಾರಣಿಗಳು, ಶಾಸಕರು, ಮಂತ್ರಿಗಳು, ಧಾರ್ಮಿಕ ಮುಖಂಡರು, ಪತ್ರಕರ್ತರು ಮುಂತಾದವರು ಇದಕ್ಕೆ ಅತ್ಯುತ್ತಮ ಉದಾಹರಣೆಯಾಗಿ ಕಾಣುತ್ತಾರೆ.

ಗೌರವ, ಘನತೆ, ಅಧಿಕಾರ, ಅಂತಸ್ತು, ಪ್ರೀತಿ, ಅಭಿಮಾನ, ಭದ್ರತೆ ಎಲ್ಲವನ್ನೂ ಪಡೆದ ಇವರು ಅಧಿಕಾರಕ್ಕಾಗಿ, ಮತಗಳಿಗಾಗಿ, ಹಣಕ್ಕಾಗಿ, ವ್ಯಾಪಾರಕ್ಕಾಗಿ ತಮ್ಮ ಭಾಷಣಗಳಲ್ಲಿ ಅತ್ಯಂತ ಕೆಳಮಟ್ಟದ ಭಾಷೆ ಮತ್ತು ಭಾವ ಬಳಸುತ್ತಾರೆ. ಕೋಟ್ಯಾಂತರ ಜನ ಕೇಳುತ್ತಾರೆ ಎಂಬ ಅರಿವಿದ್ದರೂ ವಿವೇಚನಾರಹಿತವಾಗಿ ಹಸಿ ಹಸಿ ಸುಳ್ಳುಗಳನ್ನು ಹೇಳುತ್ತಾರೆ. ಮಾತುಗಳಲ್ಲಿ ದ್ವೇಷ, ಅಸೂಯೆ, ಕ್ರೌರ್ಯ, ಕಪಟತನ ನೇರವಾಗಿಯೇ ಪ್ರಕಟವಾಗುತ್ತದೆ ‌

ನಮ್ಮ ಸಮಾಜದಲ್ಲಿನ ಕಳ್ಳರು, ಸುಳ್ಳರು, ವಂಚಕರು, ಸೋಮಾರಿಗಳು, ಕ್ರಿಮಿನಲ್ ಗಳು ಮತ್ತು ದುರಾಭ್ಯಾಸಗಳಿಂದ ಎಲ್ಲರ ನಂಬಿಕೆ ಕಳೆದುಕೊಂಡ ಪೋಲಿಗಳು ಮಾತ್ರ ಈ ರೀತಿ ಮಾತನಾಡುತ್ತಿದ್ದರು. ಆದರೆ ಈಗ ಎತ್ತರದ ಸ್ಥಾನದಲ್ಲಿ ಇರುವವರು ಇದನ್ನು ಮಾತನಾಡುತ್ತಿದ್ದಾರೆ.
ಸಾಮಾನ್ಯ ಜನ ಈ ರೀತಿ ಮಾತನಾಡಲು ಸಂಕೋಚಪಡುತ್ತಾರೆ.

ವ್ಯಕ್ತಿ ಹೆಚ್ಚು ಹೆಚ್ಚು ಮಾತನಾಡಿದಷ್ಟೂ ಆಂತರ್ಯದಲ್ಲಿನ ಅಂತಃಸತ್ವ ಕಡಿಮೆಯಾಗುತ್ತಾ ಹೋಗುತ್ತದೆ.

ಎಷ್ಟೋ ಜನ ಮೌನದ ಮಹತ್ವ ಅರಿಯದೆ ವಾಚಾಳಿತದಿಂದ ಒಣ ವಿಚಾರಗಳನ್ನೇ ಮಹತ್ವದ ವಿಷಯಗಳಂತೆ ಬಿಂಬಿಸುತ್ತಾರೆ. ಅವರಿಗೆ ಆತ್ಮಾವಲೋಕನ ಮಾಡಿಕೊಳ್ಳಲು ಸಮಯವೇ ಇರುವುದಿಲ್ಲ. ಅಧಿಕಾರ ಇರುವಷ್ಟು ದಿನ ಅಧಿಕಾರಿಗಳು ಜನ ಮತ್ತು ಭಟ್ಟಂಗಿಗಳಿಂದಲೇ ಸುತ್ತುವರಿದಿರುತ್ತಾರೆ. ಪ್ರೀತಿ, ಕೋಪ, ದ್ವೇಷ, ಮಮತೆ ಮುಂತಾದ ಅನುಭವಗಳನ್ನು ತೃಪ್ತಿಯಿಂದ ಅನುಭವಿಸಲು ಸಾಧ್ಯವೇ ಇಲ್ಲದಂತ ಪರಿಸ್ಥಿತಿಯಲ್ಲಿ ಇರುತ್ತಾರೆ. ಒಣ ಅಹಂ ಅವರನ್ನು ಆವರಿಸಿರುತ್ತದೆ.

ಆ ಕಾರಣಕ್ಕಾಗಿಯೇ ಅದರ ಪ್ರತಿಬಿಂಬ ಎಂಬಂತೆ ಮಾಧ್ಯಮಗಳು ಮತ್ತು ಧಾರ್ಮಿಕ ನಾಯಕರು ಅದನ್ನು ಅನುಸರಿಸುತ್ತಿದ್ದಾರೆ. ಅದೇ ಭಾಷೆ ನಮ್ಮ ಯುವ ಜನಾಂಗದ ಸಹಜ ಮತ್ತು ಸ್ವಾಭಾವಿಕ ಭಾಷೆಯಾಗುವ ಅಪಾಯವಿದೆ.

ತಾಳ್ಮೆ, ಮೌನ, ವಿವೇಚನೆ, ಸಭ್ಯತೆ ನಮ್ಮಿಂದ ಮರೆಯಾಗುವ ಮುನ್ನ ನಾವು ಜಾಗೃತರಾಗಬೇಕಿದೆ.

ಅದರಲ್ಲೂ ನಮ್ಮ ಸಭ್ಯ ಸರಳ ಕನ್ನಡ ಭಾಷೆ ಉಳಿದಿರುವುದು ಸಾಮಾನ್ಯ ಜನರ ಮನದಲ್ಲಿಯೇ ಹೊರತು ಈ ನಾಯಕರುಗಳಿಂದ ಅಲ್ಲ ಎಂಬುದನ್ನು ಮರೆಯದಿರೋಣ.
ವಾಚಾಳಿಗಳ ಒಣ ವ್ಯಕ್ತಿತ್ವಕ್ಕಿಂತ ಆಳವಾದ ಜ್ಞಾನ ಮೌನದಲ್ಲಿ ಅಡಗಿರುತ್ತದೆ ಎಂಬುದನ್ನು ‌ಅರ್ಥ ಮಾಡಿಕೊಳ್ಳೋಣ.

ನಿಜವನ್ನು ಸುಳ್ಳು ನುಂಗಿ,
ಪ್ರೀತಿಯನ್ನು ದ್ವೇಷ ನುಂಗಿ,
ಸರಳತೆಯನ್ನು ಆಡಂಬರ ನುಂಗಿ,
ಆದರ್ಶಗಳನ್ನು ಕಪಟ ನುಂಗಿ,
ಧರ್ಮವನ್ನು ಅಧರ್ಮ ನುಂಗಿ,
ಮನುಷ್ಯತ್ವವನ್ನು ರಾಕ್ಷಸತ್ವ ನುಂಗಿರುವಾಗ,….

ಇದು ತಾತ್ಕಾಲಿಕ.
ಕೇವಲ ಮುಖವಾಡಗಳು ಅಷ್ಟೇ.
ಮುಸುಕಿದ ಮೋಡಗಳು ಸರಿಯಲೇ ಬೇಕು.
ರಾತ್ರಿಯ ನಂತರ ಹಗಲಾಗಲೇ ಬೇಕು.
ನಮ್ಮ ಶುದ್ಧ, ಸ್ಚಚ್ಚ, ಸುಂದರ ವ್ಯಕ್ತಿತ್ವದ ಮುಂದೆ,
ಎಲ್ಲಾ ಮುಖವಾಡಗಳು ಕಳಚಲೇ ಬೇಕು……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ.

Ramesh Babu

Journalist

Recent Posts

ಗಜಮುಖನ ಆರಾಧನೆಯಲ್ಲಿ ಮಿಂದೆದ್ದ ದೊಡ್ಡಬಳ್ಳಾಪುರ: ಬೆಸ್ತರಪೇಟೆಯಲ್ಲಿ 14 ಅಡಿ ಎತ್ತರದ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ: 7ನೇ ವರ್ಷದ ಗಣೇಶೋತ್ಸವಕ್ಕೆ ಅದ್ಧೂರಿ ಮೆರುಗು

ದೊಡ್ಡಬಳ್ಳಾಪುರ: ಗೌರಿ ಗಣೇಶ ಹಬ್ಬದ ಸಂಭ್ರಮ ನಾಡಿನಾದ್ಯಂತ ಮನೆಮಾಡಿದ್ದು, ದೊಡ್ಡಬಳ್ಳಾಪುರ ನಗರದಲ್ಲೂ ಗಣೇಶೋತ್ಸವದ ಕಳೆ ಹೆಚ್ಚಾಗಿದೆ. ನಗರದ ವಿವಿಧೆಡೆ ಗಣೇಶ…

27 minutes ago

ಗಣೇಶ ವಿಸರ್ಜನೆಗೆ ಗುಂಡಮಗೆರೆ ಕೆರೆ ಬಳಿ ವಿಶೇಷ ವ್ಯವಸ್ಥೆ

ದೊಡ್ಡಬಳ್ಳಾಪುರ: ಗಣೇಶೋತ್ಸವದ ಹಿನ್ನೆಲೆಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಅನುಕೂಲವಾಗುವಂತೆ ಹೊಸಹಳ್ಳಿ ಪೊಲೀಸ್ ಠಾಣೆ ವತಿಯಿಂದ ಗುಂಡಮಗೆರೆ ಕೆರೆಯಲ್ಲಿ ವಿಶೇಷ ವ್ಯವಸ್ಥೆ…

2 hours ago

ನಾಡಿನಾದ್ಯಂತ ಗೌರಿ ಗಣೇಶ ಹಬ್ಬದ ಸಂಭ್ರಮ: ತೂಬಗೆರೆಯಲ್ಲೂ ಕಳೆಗಟ್ಟಿದ ಗೌರಿ ಗಣೇಶ ಹಬ್ಬದ ಆಚರಣೆ: 20 ಅಡಿ ಗಣೇಶ ಮೂರ್ತಿ ಪ್ರತಿಷ್ಠಾಪನೆ

ದೊಡ್ಡಬಳ್ಳಾಪುರ: ನಾಡಿನಾದ್ಯಂತ ಗೌರಿ ಗಣೇಶ ಹಬ್ಬದ ಸಂಭ್ರಮ ಮನೆಮಾಡಿದ್ದು, ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಹೋಬಳಿಯಲ್ಲೂ ಹಬ್ಬದ ವಾತಾವರಣ ಕಳೆಗಟ್ಟಿದೆ. ವಿವಿಧೆಡೆ…

6 hours ago

ಅಕ್ಷರ ಜ್ಞಾನದ ಬೆಳಕಿನಲ್ಲಿ ಗ್ರಾಮಾಂತರ; ಸಂಪೂರ್ಣ ಸಾಕ್ಷರತೆಯತ್ತ ದಾಪುಗಾಲು!

ಬೆಂಗಳೂರು ಗ್ರಾಮಾಂತರ: ಶಿಕ್ಷಣದ ಮಹತ್ವದ ಅರಿವು, ಶಾಲಾ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ, ವಯಸ್ಕರ ಶಿಕ್ಷಣ ಹಾಗೂ ನಿರಂತರ ಸಾಕ್ಷರತಾ ಕಾರ್ಯಕ್ರಮಗಳ…

12 hours ago

185 ವರ್ಷಗಳ ಹಳೆಯ ಪೊಲೀಸ್ ಬಿಲ್ಲೆ ಪತ್ತೆ: ಇತಿಹಾಸ ಸಂರಕ್ಷಣೆಯಲ್ಲಿ ಇನ್ಸ್‌ಪೆಕ್ಟರ್ ರಾವ್ ಗಣೇಶ್ ಜನಾರ್ಧನ್ ವಿಶಿಷ್ಟ ಹೆಜ್ಜೆ

ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆಯ ಗತವೈಭವಕ್ಕೆ ಸಾಕ್ಷಿಯಾಗಬಲ್ಲ ಸುಮಾರು 185 ವರ್ಷಗಳಷ್ಟು ಹಳೆಯದಾದ ಅಪರೂಪದ ಪೊಲೀಸ್ ಬಿಲ್ಲೆಯೊಂದು ಬೆಳಕಿಗೆ ಬಂದಿದೆ.…

1 day ago

ಸಿದ್ದರಾಮಯ್ಯ ಸಹಕಾರದಿಂದ 2028ಕ್ಕೆ ಡಿಕೆಶಿ ಮತ್ತೆ ಸಿಎಂ ಆಗ್ತಾರೆ – ಗೌರಿ-ಗಣೇಶ ಹಬ್ಬದಂದು ಮಳೆ ಬರಲಿ ಎಂದು ಪ್ರಾರ್ಥನೆ ಮಾಡೋಣ – ಸಚಿವ ಚಲುವರಾಯಸ್ವಾಮಿ

ನಾಗಮಂಗಲ: ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕನ್ಯಾಘಟ್ಟ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಮಹಾಗಣಪತಿ ದೇವಸ್ಥಾನದ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಜಲಸಂಪನ್ಮೂಲ…

1 day ago