Categories: ಲೇಖನ

ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮದ ಪ್ರಚಾರ ತನ್ನೆಲ್ಲಾ ಮಿತಿಯನ್ನು ಮೀರಿದ ಕಾರಣ

ಮಾನ್ಯ ಶ್ರೀಸಾಮಾನ್ಯರೇ,
ಹಾಯ್ ರಾಜಕಾರಣಿಗಳೇ,
ಹಲೋ ಮಾಧ್ಯಮದವರೇ,…..

ಡಮಾಲ್ ಡಿಮಿಲ್ ಡಕ್ಕಾ,
ಗಿಲ್ಲಿ ಗೆದ್ದಿರೋದು ಪಕ್ಕಾ …..

ಇದು ರಾಜ್ಯದ ಒಂದಷ್ಟು ಜನರ ಘೋಷವಾಕ್ಯವಾಗಿ ಕೆಲವು ದಿನಗಳಿಂದ ಕೇಳಿ ಬರುತ್ತಿದೆ. ಇದು ಈ ಸಮಾಜದ ಮೌಲ್ಯಗಳ ಅಧೋಗತಿಯ ಲಕ್ಷಣವಾಗಿ ಕಂಡುಬರುತ್ತಿದೆ. ಆದ್ದರಿಂದ ಇದಕ್ಕೆ ಒಂದು ವಿರೋಧದ ದ್ವನಿ ಕೂಡ ದಾಖಲಾಗಲಿ ಎಂಬ ಸದುದ್ದೇಶದಿಂದ……

ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮದ ಪ್ರಚಾರ ತನ್ನೆಲ್ಲಾ ಮಿತಿಯನ್ನು ಮೀರಿದ ಕಾರಣ ಈ ಬಗ್ಗೆ ಜಾಗೃತಿ ಮೂಡಿಸುವುದು ನಮ್ಮ ಜವಾಬ್ದಾರಿ ಎಂದು ಭಾವಿಸಿ….

ಕಳೆದ ಕೆಲವು ದಿನಗಳಿಂದ ವಿವಿಧ ಉಪನ್ಯಾಸ, ಸಂವಾದ ಕಾರ್ಯಕ್ರಮಗಳಿಗಾಗಿ ರಾಜ್ಯದ ಕೆಲವು ಭಾಗಗಳಲ್ಲಿ ಸಂಚರಿಸುವಾಗ ಬಿಗ್ ಬಾಸ್ ಕಾರ್ಯಕ್ರಮ ಮತ್ತು ತಮ್ಮ ಮೆಚ್ಚಿನ ಸ್ಪರ್ಧಿಯ ಬಗ್ಗೆ ಅನೇಕ ಕಡೆ ಬ್ಯಾನರ್, ಕಟೌಟ್ ಹಾಕಿರುವುದನ್ನು ಗಮನಿಸಿದೆ. ಅಲ್ಲದೆ ಕೆಲವು ಕಾರಣಗಳಿಗಾಗಿ ಆ ಕಾರ್ಯಕ್ರಮವನ್ನು ಮೀರಿ ಜಾತಿ ಮತ್ತು ಪ್ರದೇಶದ ಕಾರಣಕ್ಕಾಗಿ ಬೇರೆಬೇರೆ ಅಭ್ಯರ್ಥಿಗಳ ಪರವಾಗಿ ಕೆಲವು ಪ್ರಮುಖ ವ್ಯಕ್ತಿಗಳು ಪ್ರಚಾರ ಮಾಡಿದರುವುದನ್ನೂ ಗಮನಿಸಿದೆ.

ಎಂದಿನಂತೆ ತಮಗೆ ಲಾಭವಾಗುವ ಕಡೆ ಯಾವುದೇ ವಿವೇಚನೆ ಇಲ್ಲದೆ ಗೂಳಿಗಳಂತೆ ನುಗ್ಗುವ ಮಾಧ್ಯಮದವರು ಮತ್ತು ರಾಜಕಾರಣಿಗಳು, ಇದರ ಹಿಂದೆ ಬಿದ್ದು ಆ ಸ್ಪರ್ಧಿಗಳನ್ನು ಇಂದ್ರಚಂದ್ರರಂತೆ ಹೊಗಳಿ ಅವರೊಂದಿಗೆ ಫೋಟೋ ತೆಗೆಸಿಕೊಳ್ಳುವವರು, ಸ್ಪರ್ಧೆಯಲ್ಲಿ ಗೆದ್ದ ನಂತರ ಆ ನಟನಟಿಯರನ್ನು ಮುಖ್ಯಮಂತ್ರಿಗಳು, ಗೃಹ ಮಂತ್ರಿಗಳು, ಕೇಂದ್ರ ಸಚಿವರು, ಸ್ಥಳೀಯ ಶಾಸಕರು, ಪ್ರಮುಖ ಉದ್ಯಮಿಗಳು ಎಲ್ಲರೂ ಮಾಧ್ಯಮಗಳ ಮುಂದೆ ಕಾಣಿಸಿಕೊಂಡು ಎಲ್ಲಾ ಕಡೆ ಮೆರವಣಿಗೆ, ಜನಜಂಗುಳಿ, ಪೋಲೀಸ್ ಭದ್ರತೆ, ಮಾಧ್ಯಮಗಳು ಅವರನ್ನು ಸಂದರ್ಶನ ಮಾಡುವುದು ಇನ್ನೂ ನಿಂತಿಲ್ಲ. ಅವರನ್ನು ಮಹಾನ್ ಸಾಧಕರಂತೆ ಚಿತ್ರಿಸಿ ಅವರ ಅಭಿಪ್ರಾಯವನ್ನು ಪಡೆಯುತ್ತಿದ್ದಾರೆ. ಕಳೆದ 11 ವರ್ಷಗಳಿಂದ ಇದ್ದ ಈ ಉನ್ಮಾದ, ಹುಚ್ಚಾಟ ಈ ಬಾರಿ ಗಡಿ ದಾಟಿದೆ.

ಇಲ್ಲಿ ಒಂದು ವಿಷಯ ಪ್ರಸ್ತಾಪಿಸಲು ಬಯಸುತ್ತೇನೆ. ರಾಜ್ಯದ ನಿವೃತ್ತ ಅರೆ ಸೈನಿಕ ಉದ್ಯೋಗಿಗಳ ಸಂಘಟನೆಯ ಸದಸ್ಯರು ತಮ್ಮ ಕೆಲವು ನ್ಯಾಯಯುತ ಬೇಡಿಕೆಗಳಿಗಾಗಿ ಮುಖ್ಯಮಂತ್ರಿ, ಗೃಹ ಮಂತ್ರಿ ಮತ್ತು ಸಂಬಂಧಪಟ್ಟ ಸಚಿವರನ್ನು ವೈಯಕ್ತಿಕವಾಗಿ, ಖಾಸಗಿಯಾಗಿ ಕೆಲವು ನಿಮಿಷಗಳಷ್ಟು ಭೇಟಿಯಾಗಲು ಸತತ ಪ್ರಯತ್ನ ಮಾಡುತ್ತಿದ್ದಾರೆ. ಸಾರ್ವಜನಿಕವಾಗಿ ಸಿಗುವ ಇವರು ವಿಷಯವನ್ನು ಗಂಭೀರವಾಗಿ ಚರ್ಚಿಸಲು ಸ್ವಲ್ಪ ಹೆಚ್ಚು ಸಮಯ ನೀಡಲು ಇನ್ನೂ ಸತಾಯಿಸುತ್ತಲೇ ಇದ್ದಾರೆ. ಹಾಗೆಯೇ ದಿವ್ಯಾಂಗ ಚೇತನರ ಕೆಲವು ಬೇಡಿಕೆಗಳ ಬಗ್ಗೆ ಚರ್ಚಿಸಲೂ ಸಂಬಂಧಪಟ್ಟ ಮಂತ್ರಿಗಳನ್ನು ಭೇಟಿಯಾಗಲು ಇನ್ನೂ ಕಾಲಾವಕಾಶ ದೊರೆತಿಲ್ಲ. ಆದರೆ ಬಿಗ್ ಬಾಸ್ ಎಂಬ ಒಂದು ವಿಕೃತ ಮನರಂಜನಾ ಕಾರ್ಯಕ್ರಮದ ವಿಜೇತರಿಗೆ ಇವರೆಲ್ಲಾ ಮಾಧ್ಯಮಗಳ ಮುಂದೆ ಸುಲಭವಾಗಿ ಸಿಗುತ್ತಾರೆ. ಹಾಗಾದರೆ ನಾವು ಶ್ರಮಪಡಬೇಕಾಗಿರೋದು ಕಷ್ಟಪಟ್ಟು ಸಾಧನೆ ಮಾಡಿಯೋ ಅಥವಾ ಯಾವುದೋ ವಿಕೃತ ಮನರಂಜನಾ ಕಾರ್ಯಕ್ರಮದ ಭಾಗವಾಗಿಯೋ ಎಂದು ಯೋಚಿಸುವಂತಾಗಿದೆ.

ಇದು ಕೇವಲ ರಾಜಕಾರಣಿಗಳ ಪ್ರಶ್ನೆ ಮಾತ್ರವಲ್ಲ, ಜವಾಬ್ದಾರಿಯುತ ಮಾಧ್ಯಮಗಳು ಸಹ ವಿವೇಚನಾ ರಹಿತವಾಗಿ, ಬೇಜವಾಬ್ದಾರಿಯಿಂದ ಬಿಗ್ ಬಾಸ್ ಕಾರ್ಯಕ್ರಮದ ಸ್ಪರ್ಧಿಗಳನ್ನು ಮಹಾನ್ ಸಾಧಕರಂತೆ ಚಿತ್ರಿಸಿ, ವರ್ಣಿಸಿ, ಸಂದರ್ಶಿಸಿ ಪ್ರಸಾರ ಮಾಡುವುದು ಅವರ ಮಾನಸಿಕ ದಿವಾಳಿತನಕ್ಕೆ ಉದಾಹರಣೆಯಾಗಿದೆ.

ನಿಜಕ್ಕೂ ಈ ಸಮಾಜಕ್ಕೆ ಬೇಕಾದ ಅತ್ಯಮೂಲ್ಯ ಸೇವೆಗಳ ವಿಷಯದಲ್ಲಿ ನಿರಂತರ ಸಾಧನೆ ಮಾಡುತ್ತಿರುವ ಸಾವಿರಾರು ಜನರಿದ್ದಾರೆ. ಇಲ್ಲಿನ ಪರಿಸರ, ಸಾಮಾಜಿಕ ಮೌಲ್ಯಗಳು, ಭ್ರಷ್ಟಾಚಾರ, ಜಾತಿ ವ್ಯವಸ್ಥೆ ಮುಂತಾದ ವಿಷಯಗಳಿಗೆ ತಮ್ಮ ಇಡೀ ಜೀವನ ಮುಡಿಪಾಗಿಟ್ಟ ಜನರೂ ಇದ್ದಾರೆ. ಹಾಗೆಯೇ ಅನೇಕ ಹೋರಾಟಗಾರರೂ ಇದ್ದಾರೆ . ವೈಯಕ್ತಿಕವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಕಷ್ಟು ಜನರಿದ್ದಾರೆ. ಅವರಿಗಿಲ್ಲದ ಪ್ರಚಾರವನ್ನು ಕೇವಲ ಕೃತಕ ಮನರಂಜನೆಯ ಒಂದು ಕಾರ್ಯಕ್ರಮದ ಸ್ಪರ್ಧಿಗಳಿಗೆ ನೀಡುತ್ತಾರೆಂದರೆ ಮಾಧ್ಯಮಗಳ ವಿವೇಚನಾ ಶಕ್ತಿಯನ್ನೇ ಪ್ರಶ್ನಿಸಬೇಕಾಗುತ್ತದೆ. ಇದು ಸಮೂಹ ಸನ್ನಿಯಾಗಿ ಹರಡುವ ಮುನ್ನ ನಾವು ಎಚ್ಚೆತ್ತುಕೊಳ್ಳಬೇಕಿದೆ.

ನಮ್ಮ ವಿರೋಧ ಬಿಗ್ ಬಾಸ್ ಕಾರ್ಯಕ್ರಮದ ಬಗ್ಗೆಯೂ ಅಲ್ಲ, ಅದರಲ್ಲಿ ಸ್ಪರ್ಧಿಸಿ ಮತ್ತು ಗೆಲ್ಲುವ ಅಭ್ಯರ್ಥಿಗಳ ಬಗ್ಗೆಯೂ ಅಲ್ಲ. ಅದು ಅವರವರ ಅಭಿವ್ಯಕ್ತಿ ಸ್ವಾತಂತ್ರ್ಯ. ಜನರ ವಿವೇಚನಾ ಸ್ವಾತಂತ್ರ್ಯ. ಕಾನೂನಿನ ಸ್ವಾತಂತ್ರ್ಯ. ಅದನ್ನು ನಾವು ಪ್ರಶ್ನಿಸುವುದಿಲ್ಲ. ಆದರೆ ಮಾನಸಿಕ ಅಸ್ವಸ್ಥತೆಯ ಲಕ್ಷಣಗಳಿರುವ ಒಂದು ಕಾರ್ಯಕ್ರಮಕ್ಕೆ ಮಾಧ್ಯಮಗಳು, ರಾಜಕಾರಣಿಗಳು, ಜನಸಾಮಾನ್ಯರು ನೀಡುತ್ತಿರುವ ಪ್ರಾಮುಖ್ಯತೆ ತೀರಾ ಅತಿಯಾಯಿತು. ಅನಾವಶ್ಯಕ ಮತ್ತು ಅಪಾಯಕಾರಿ ಎಂಬ ಬಗ್ಗೆ ಮಾತ್ರ ನಮ್ಮ ವಿರೋಧ. ನಮ್ಮ ಭಿನ್ನ ಧ್ವನಿ ಆ ಕಾರ್ಯಕ್ರಮದ ರೀತಿ ನೀತಿ, ನೈತಿಕ ಮೌಲ್ಯಗಳು ತೀರ ಮಾನಸಿಕ ಅಸ್ವಸ್ಥತೆಯಿಂದ ಕೂಡಿದೆ. ಅದನ್ನು ಗೆದ್ದವರುನ್ನು ತೀರಾ ವಿಜೃಂಭಿಸುವ, ಮಹಾನ್ ಸಾಧಕರಂತೆ ಚಿತ್ರಿಸುವ ಅವಶ್ಯಕತೆ ಇಲ್ಲ. ಅದಕ್ಕೆ ಜನಸಾಮಾನ್ಯರು, ರಾಜಕಾರಣಿಗಳು, ಮಾಧ್ಯಮಗಳು ಅತಿರೇಕದ ಪ್ರಚಾರ, ಪ್ರತಿಕ್ರಿಯೆ ಕೊಡುವ ಅವಶ್ಯಕತೆ ಇಲ್ಲ. ಇದರಿಂದಾಗಿ ಸಮಾಜದ ಮೇಲೆ ಬೀರುತ್ತಿರುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಮಾತ್ರ ಈ ನಮ್ಮ ವಿರೋಧ…

ಬಿಗ್ ಬಾಸ್ ಸಮೂಹ ಸನ್ನಿಯ ವಿರುದ್ಧ ನಮ್ಮ ಧ್ವನಿ…..

ಈ ಬಾರಿ ತುಂಬಾ ಅತಿರೇಕಕ್ಕೆ ಹೋದ ಕಾರಣ, ಜೊತೆಗೆ ಮಾಧ್ಯಮಗಳು ಸುದ್ದಿಯನ್ನ ಮೀರಿ ಜನರ ಭಾವನೆಗಳಗೆ ಸ್ಪಂದಿಸುವ ನೆಪದಲ್ಲಿ ಬುದ್ದಿ ಭ್ರಮಣೆಯಾದಂತೆ ವರ್ತಿಸಿದ ಕಾರಣ ಜನಸಾಮಾನ್ಯರು, ರಾಜಕಾರಣಿಗಳು ಮತ್ತು ಮಾಧ್ಯಮಗಳ ಆತ್ಮಾವಲೋಕನಕ್ಕಾಗಿ ನಾವು ಒಂದಿಷ್ಟು ಜನ ಅದರ ವಿರುದ್ಧವಾಗಿ, ಜನ ಜಾಗೃತಿ ಮೂಡಿಸುವ ಪ್ರಯತ್ನದ ಭಾಗವಾಗಿ ಒಂದು ಕಾರ್ಯಕ್ರಮ ಏರ್ಪಡಿಸುತ್ತದ್ದೇವೆ.

ಮುಂದಿನ ದಿನಗಳಲ್ಲಾದರೂ ಈ ಅತಿರೇಕ ಕೇವಲ ಮನರಂಜನೆಯಾಗಿ ಮಾತ್ರ ಉಳಿದು, ಸಾಮಾನ್ಯ ಜನ ಜಾಗೃತರಾಗಿ ಪ್ರಬುದ್ಧ ಸಮಾಜ ನಿರ್ಮಾಣವಾಗಲಿ ಎಂಬ ಆಶಯದಿಂದ, ಅರಿವು ಮೂಡಿಸಲು ಒಂದು ಚರ್ಚಾಗೋಷ್ಠಿ ಏರ್ಪಡಿಸುತ್ತಿದ್ದೇವೆ. ಬೆಂಗಳೂರಿನ ಶಿವಾನಂದ ಸರ್ಕಲ್ ಬಳಿ ಇರುವ ಗಾಂಧಿ ಭವನದ ಕಿರು ಸಭಾಂಗಣದಲ್ಲಿ ಇದೇ ಭಾನುವಾರ ದಿನಾಂಕ 25/01/2026 ರಂದು ಬೆಳಗ್ಗೆ 10 ಗಂಟೆಗೆ ಪ್ರಬುದ್ಧ ಮನಸುಗಳು, ಒಂದಷ್ಟು ಚಿಂತಕರು ಸೇರಿ ಚರ್ಚೆ ಮಾಡಿ ನಮ್ಮ ಮಟ್ಟದಲ್ಲಿ ಸಾಧ್ಯವಾದಷ್ಟು ಜನರಿಗೆ ಈ ಒಂದು ಹುಚ್ಚುತನದ ಪರಮಾವಧಿಯಿಂದ ಹೊರಬನ್ನಿ, ಅದು ಒಂದು ಸಣ್ಣ ಮನರಂಜನಾ ಕಾರ್ಯಕ್ರಮ ಅಷ್ಟೇ, ಜೊತೆಗೆ ಈ ಕಾರ್ಯಕ್ರಮ ಸಮಾಜದ ನಾಗರಿಕ ಮೌಲ್ಯಗಳಿಗೆ ವಿರುದ್ಧವಾದ ಮಾನಸಿಕ ಅಸ್ವಸ್ಥರ ಪ್ರತಿಬಿಂಬದಂತೆ ಕಾಣುವ ಕಾರ್ಯಕ್ರಮ. ಕಾನೂನಾತ್ಮಕವಾಗಿ ಆ ಕಾರ್ಯಕ್ರಮ ತಯಾರಿಸಲು, ಪ್ರಚಾರ ಮಾಡಲು, ವೀಕ್ಷಿಸಲು ಯಾವುದೇ ಅಡೆತಡೆ ಇಲ್ಲ. ಆದರೆ ನೈತಿಕವಾಗಿ ಈ ಸಮಾಜದ ಆರೋಗ್ಯ ಮತ್ತು ಸ್ವಾಸ್ಥ್ಯ ಕಾಪಾಡಲು, ನಮ್ಮ ಮಕ್ಕಳಿಗೆ ಒಳ್ಳೆಯ ಭವಿಷ್ಯ ರೂಪಿಸಲು ಈ ರೀತಿಯ ಕಾರ್ಯಕ್ರಮಗಳ ವಿರುದ್ಧ ನಮ್ಮ ಧ್ವನಿಯೂ ಸೇರಲಿ ಎಂದು ಈ ಒಂದು ಚರ್ಚೆ.

ದಯವಿಟ್ಟು ಆಸಕ್ತರು ಮತ್ತು ಸಾಮಾಜಿಕ ಕಳಕಳಿ ಇರುವವರು ಯಾವುದೇ ಜಾತಿ, ಧರ್ಮ, ಭಾಷೆ, ಲಿಂಗ ಇವುಗಳ ಬಲೆಯೊಳಗೆ ಸಿಲುಕದೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ. ಒಂದು ಎಚ್ಚರಿಕೆಯ ಸಂದೇಶ ಸಮಾಜಕ್ಕೆ ಹೋಗಲಿ. ನಮ್ಮ ಕರ್ತವ್ಯ ನಾವು ನಿಭಾಯಿಸೋಣ.

ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭಾಗವಹಿಸುವ ವ್ಯಕ್ತಿಗಳಿಗೆ ಸಿಗುತ್ತಿರುವ ಅತಿಯಾದ ಪ್ರಚಾರ ಮತ್ತು ಜನಪ್ರಿಯತೆಗೆ ಅವರು ಅರ್ಹರಲ್ಲ. ಸಮಾಜ, ದೇಶದ ಹಿತದೃಷ್ಟಿಯಿಂದ ಅವರ ಸಾಧನೆ ಏನು ಇಲ್ಲ. ಇಂತಹ ವ್ಯಕ್ತಿಗಳು ಮುಖ್ಯವಾಹಿನಿಯ ಮಾದರಿ ವ್ಯಕ್ತಿಗಳಾದರೆ ಅಪಾಯ ಎಂಬುದು ನಮ್ಮ ಆಲೋಚನೆ. ಇದನ್ನು ಬೆಂಬಲಿಸುವವರು ದಯವಿಟ್ಟು ಭಾಗವಹಿಸಿ.

ಸಂಪರ್ಕಿಸಬೇಕಾದ ದೂರವಾಣಿ.
ಎಂ. ಯುವರಾಜ್
80508 02019

ಎಚ್. ಸಿ. ಉಮೇಶ್
9844057149

ರೂಪೇಶ್ ಪುತ್ತೂರು
8310510413

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಭಗತ್ ಸಿಂಗ್ ಕ್ರೀಡಾಂಗಣದಲ್ಲಿ 77ನೇ ಗಣರಾಜ್ಯೋತ್ಸವ ದಿನಾಚರಣೆ: ವೈದ್ಯ, ಪತ್ರಕರ್ತ, ಪೊಲೀಸ್, ಪೌರಕಾರ್ಮಿಕರಿಗೆ ಸನ್ಮಾನ

"77ನೇ ಗಣರಾಜ್ಯೋತ್ಸವ”ದ ಅಂಗವಾಗಿ ದೊಡ್ಡಬಳ್ಳಾಪುರ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾದ…

11 hours ago

ಭಗತ್ ಸಿಂಗ್ ಕ್ರೀಡಾಂಗಣದಲ್ಲಿ 77ನೇ ಗಣರಾಜ್ಯೋತ್ಸವ ದಿನಾಚರಣೆ: ಪತ್ರಕರ್ತ, ಪೊಲೀಸ್, ಪೌರಕಾರ್ಮಿಕರು ಸೇರಿದಂತೆ ಇತರೆ ಸಾಧಕರಿಗೆ ಸನ್ಮಾನ

"77ನೇ ಗಣರಾಜ್ಯೋತ್ಸವ”ದ ಅಂಗವಾಗಿ ದೊಡ್ಡಬಳ್ಳಾಪುರ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾದ…

13 hours ago

ಬೆಳಗಾವಿಯ ಚೋರ್ಲಾ ಘಾಟ್‌ನಲ್ಲಿ ₹400 ಕೋಟಿ ದರೋಡೆ ಪ್ರಕರಣ: ದಟ್ಟಾರಣ್ಯದ ಮೌನದಲ್ಲಿ ಅಡಗಿದ್ದ ಭೀಕರ ರಹಸ್ಯ..ಬೆಚ್ಚಿಬೀಳಿಸುವ ಪ್ರಮುಖ ಅಂಶಗಳು…ಇಲ್ಲಿವೆ ಓದಿ…

ಬೆಳಗಾವಿಯ ದಟ್ಟ ಅರಣ್ಯ ಪ್ರದೇಶದ ನಡುವೆ ಸಾಗುವ ಚೋರ್ಲಾ ಘಾಟ್‌ನ ರಸ್ತೆಗಳು ಸಾಮಾನ್ಯವಾಗಿ ಮೌನದಿಂದ ಕೂಡಿರುತ್ತವೆ. ಆದರೆ, ಆ ಮೌನದಲ್ಲೇ…

21 hours ago

2026ನೇ ಸಾಲಿನ ಪದ್ಮ ಪ್ರಶಸ್ತಿ ಪ್ರಕಟ: ಕರ್ನಾಟಕದ 8 ಮಂದಿಯು ಈ ನಾಗರಿಕ ಗೌರವಕ್ಕೆ ಭಾಜನ

2026ನೇ ಸಾಲಿನ ಪದ್ಮ ಪ್ರಶಸ್ತಿ ಪ್ರಕಟವಾಗಿದೆ. ಒಟ್ಟು 131 ಮಂದಿ ಪದ್ಮ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕರ್ನಾಟಕದ 8 ಮಂದಿಯು ಈ…

1 day ago

ಹುಲುಕುಡಿ ವೀರಭದ್ರಸ್ವಾಮಿ ಮತ್ತು ಪ್ರಸನ್ನ ಭದ್ರಕಾಳಮ್ಮ ರಥೋತ್ಸವ

ದೊಡ್ಡಬಳ್ಳಾಪುರ ತಾಲ್ಲೂಕಿನ ಹುಲುಕುಡಿ ವೀರಭದ್ರಸ್ವಾಮಿ ಕ್ಷೇತ್ರದಲ್ಲಿ ಕ್ಷೇತ್ರಾಭಿವೃದ್ಧಿ ಟ್ರಸ್ಟ್ ವತಿಯಿಂದ ರಥಸಪ್ತಮಿ ಅಂಗವಾಗಿ ಇಂದು (ಜ.25) ವೀರಭದ್ರಸ್ವಾಮಿ ಮತ್ತು ಪ್ರಸನ್ನ…

1 day ago

ರಘುನಾಥಪುರ ಬಳಿ ಪಿಕಪ್ ವಾಹನ, ಆಟೋ ಹಾಗೂ ಬೈಕ್ ನಡುವೆ ಅಪಘಾತ: ಓರ್ವ ಬೈಕ್ ಸವಾರ ಸ್ಥಳದಲ್ಲೇ ಸಾವು

ಪಿಕಪ್ ವಾಹನ, ಆಟೋ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಓರ್ವ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ…

2 days ago