Categories: ಲೇಖನ

ಇತಿಹಾಸ ಒಂದು ಪಾಠವಾಗಬೇಕೆ ಹೊರತು ರಾಜಕೀಯ ಅಸ್ತ್ರವಾಗಬಾರದು

ಶಿವಾಜಿ – ಟಿಪ್ಪು……….

ಇತಿಹಾಸವನ್ನು ತಪ್ಪಾಗಿ ಅರ್ಥ ಮಾಡಿಕೊಂಡು ಹೀಗೆ ಕಚ್ಚಾಡುತ್ತಲೇ ಇರಿ……..

ನೀವು ಡಿಜೆ ಸೌಂಡ್ ಹಾಕಿಕೊಂಡು ಮಸೀದಿಗಳ ಮುಂದೆ ಮೆರವಣಿಗೆ ಮಾಡುತ್ತಲೇ ಸಾಗಿ, ಯಾರಿಗೂ ಹೆದರಬೇಡಿ ಇದು ನಿಮ್ಮ ನೆಲ……

ನೀವು ಮಸೀದಿ ಒಳಗಿಂದ ಚಪ್ಪಲಿ ಕಲ್ಲು ಎಸೆಯುತ್ತಲೇ ಇರಿ, ಯಾರಿಗೂ ಭಯಪಡಬೇಡಿ ಇದು ನಿಮ್ಮ ನೆಲ….

ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ಚರ್ಚೆಗಳು ನಡೆಯುತ್ತಲೇ ಇರಲಿ……

ಅತ್ತಕಡೆ ಚೀನಾ ದೇಶ ಉತ್ಪಾದನಾ ಕ್ಷೇತ್ರದಲ್ಲಿ, ತಂತ್ರಜ್ಞಾನದಲ್ಲಿ, ಕೃತಕ ಬುದ್ಧಿಮತ್ತೆಯಲ್ಲೂ ಇಡೀ ವಿಶ್ವಕ್ಕೆ ಮಾರುಕಟ್ಟೆಯ ಅವಕಾಶ ಬಳಸಿಕೊಂಡು ಮುನ್ನಡೆಯುತ್ತಲೇ ಇರಲಿ……

ಇದು ಹೀಗೆಯೇ ಮುಂದುವರಿದರೆ ಮುಂದೊಂದು ದಿನ ನಾವುಗಳು ಒಬ್ಬರಿಗೊಬ್ಬರು ಕಚ್ಚಾಡುತ್ತಾ ಪಶ್ಚಾತಾಪ ಪಡುವ ದಿನಗಳು ದೂರವೇನು ಇಲ್ಲ…..

ನಮ್ಮ ಮಕ್ಕಳು ಕೆಲಸಕ್ಕಾಗಿ ಅಲೆಯುತ್ತಾ, ಕೆಟ್ಟ ಗಾಳಿ, ನೀರು, ಆಹಾರ ಸೇವಿಸುತ್ತಾ, ಭ್ರಷ್ಟ ವ್ಯವಸ್ಥೆಯಲ್ಲಿ ನರಳುತ್ತಾ ಸಾಯಲಿ…….

ನೋಡೋಣ, ಯಾವ ಯಾವ ದೇವರು, ಯಾವ ಯಾವ ಧರ್ಮ ಈ ದೇಶವನ್ನು ಕಾಪಾಡುತ್ತದೆ ಎಂದು…….

ಒಂದು ಸಾಮಾನ್ಯ ಜ್ಞಾನ ಯಾರಿಗೂ ಇಲ್ಲ. ಎಲ್ಲರದೂ ಬಹುತೇಕ ಗಲಭೆ ಕೋರ ಮನಸ್ಥಿತಿ. ಅನಾವಶ್ಯಕವಾಗಿ ಹಠ ಮಾಡಿ ಅಜ್ಞಾನದಿಂದ ಪ್ರಚೋದಿಸುವುದು, ಅದಕ್ಕೆ ಅಷ್ಟೇ ಕೆಟ್ಟದ್ದಾಗಿ ಪ್ರತಿಕ್ರಿಯಿಸುವುದು, ಹೊಡೆದಾಡಿ ಸಾಯುವುದು, ಮಾಧ್ಯಮಗಳಲ್ಲಿ ನಾನು ಸರಿ ನಾನು ಸರಿ, ಅವನು ತಪ್ಪು ಅವನು ತಪ್ಪು, ಎಂದು ಕೂಗಾಡುವುದು, ಕೊನೆಗೆ ನಾಶವಾಗುವುದು ಯಾರು ಎಂಬ ಅರಿವೇ ಇಲ್ಲದ ಮೂರ್ಖರು…….

ಎಷ್ಟೊಂದು ಸಾಮಾಜಿಕ, ಧಾರ್ಮಿಕ, ವೈಯಕ್ತಿಕ ಜೀವನಾನುಭವ ನಮ್ಮ ಮುಂದೆ ಇರುವಾಗ ಅದನ್ನು ನಮ್ಮ ಸುಖ ಸಮೃದ್ಧಿಗೆ ಉಪಯೋಗಿಸಿಕೊಳ್ಳುವುದನ್ನು ಬಿಟ್ಟು, ಇನ್ನೇನೋ ಮಾಡಲು ಹೋಗುತ್ತಿರುವುದು ವಿನಾಶದ ಮುನ್ಸೂಚನೆಯಂತಿದೆ……

ಯಾರ ಮೆರವಣಿಗೆ, ಯಾರಿಗಾಗಿ ಮೆರವಣಿಗೆ, ಯಾವ ರೀತಿಯ ಮೆರವಣಿಗೆ ಈಗ ಯಾಕಾಗಿ ಮೆರವಣಿಗೆ ಸ್ವಲ್ಪ ವಿವೇಚನ ಬೇಡವೇ ? ಯಾರಿಗಾಗಿ ಪ್ರಾರ್ಥಿಸುವಿರಿ, ಎಲ್ಲಿ ಪ್ರಾರ್ಥಿಸುವಿರಿ, ಏಕೆ ಪ್ರಾರ್ಥಿಸುವಿರಿ, ಪ್ರಾರ್ಥನೆಯ ಫಲವೇನು, ಪ್ರತಿಕ್ರಿಯಿಸುವ ವಿಧಾನ ಯಾವುದು, ವಿವೇಚನೆ ಬೇಡವೇ ?

ಶಿವಾಜಿ ——- ಟಿಪ್ಪು
ಛತ್ರಪತಿ ———- ಮೈಸೂರು ಹುಲಿ
ಸಾಮ್ಯತೆ ———— ಭಿನ್ನತೆ
ಇತಿಹಾಸದ ಪುಟಗಳಿಂದ……..

ಆಡಿಟರ್ ಅಥವಾ ಲೆಕ್ಕಪರಿಶೋಧಕ ಎಂಬ ಒಂದು ವೃತ್ತಿ ಇದೆ. ಅದು ಇತ್ತೀಚೆಗೆ ಹೆಚ್ಚು ಪ್ರಾಮುಖ್ಯತೆ ಪಡೆದಿದೆ. ಚಾರ್ಟರ್ಡ್ ಅಕೌಂಟೆಂಟ್ ಎಂದು ಕರೆಯಲಾಗುತ್ತದೆ.

ಸಾಮಾನ್ಯವಾಗಿ ಮಧ್ಯಮ ವರ್ಗದ ಉದ್ದಿಮೆದಾರರು, ಸೇವಾವಲಯದವರು, ವೃತ್ತಿಪರರು ಮತ್ತು ವ್ಯಾಪಾರಸ್ಥರು ಮೊದಲು ವರ್ಷಕ್ಕೊಮ್ಮೆ ಆದಾಯ ತೆರಿಗೆ ಪಾವತಿಸಬೇಕಾಗಿತ್ತು. ಅದಕ್ಕಾಗಿ ಚಾರ್ಟರ್ಡ್ ಅಕೌಂಟೆಂಟ್ ಗಳ ಬಳಿ ಬ್ಯಾಂಕ್ ಸ್ಟೇಟ್ ಮೆಂಟ್ ನಿಂದ ಹಿಡಿದು ಎಲ್ಲಾ ಕಾಗದ ಪತ್ರಗಳನ್ನು ಅವರ ಬಳಿ ನೀಡುತ್ತಿದ್ದರು. ಅದನ್ನು ಸಿಎಗಳ ಸಹಾಯಕರು ತೆರಿಗೆ ಇಲಾಖೆ ಮೊದಲೇ ಸಿದ್ದಪಡಿಸಿದ ನಮೂನೆಯಲ್ಲಿ ಕಂಪ್ಯೂಟರ್ ಸಹಾಯದಿಂದ ಎಲ್ಲವನ್ನೂ ಭರ್ತಿ ಮಾಡುತ್ತಿದ್ದರು.

ಕೆಲವು ತೀರಾ ಶಿಸ್ತುಬದ್ಧ ಮತ್ತು ನೇರ ವ್ಯವಹಾರಸ್ಥರನ್ನು ಬಿಟ್ಟರೆ ಉಳಿದವರೆಲ್ಲ ಹಣದ ಕೊಡು, ಕೊಳ್ಳುವ ವ್ಯವಹಾರದಲ್ಲಿ ನಗದು ಅಥವಾ ಚೆಕ್ ಅಥವಾ ಕಪ್ಪುಹಣ ಇದ್ಯಾವುದನ್ನು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಹೇಗೋ ಆ ತಕ್ಷಣದ ಸಮಸ್ಯೆ ಬಗೆಹರಿದರೆ ಸಾಕು ಎನ್ನುವ ಮನೋಭಾವದವರೇ ಹೆಚ್ಚಾಗಿದ್ದರು.

ಆಗ ಇನ್ನೂ ನೋಟ್ ಬ್ಯಾನ್, ಜಿಎಸ್ಟಿ, ಡಿಜಿಟಲೀಕರಣ ಜಾರಿಯಾಗಿರಲಿಲ್ಲ. ಎಲ್ಲಾ ಲೆಕ್ಕಗಳ ಎನ್ಟ್ರಿ ಆದ ಮೇಲೆ ಕಂಪನಿಯ ಜವಾಬ್ದಾರಿಯುತ ವ್ಯಕ್ತಿ ಆಡಿಟರ್ ಬಳಿ ಚರ್ಚಿಸುತ್ತಾನೆ. ಆಗ ಅನೇಕ ಬಾರಿ ಲೆಕ್ಕದ ಪುಸ್ತಕದಲ್ಲಿ ತುಂಬಾ ಲಾಭಾಂಶ ಅಥವಾ ತುಂಬಾ ನಷ್ಟ ತೋರಿಸುತ್ತಿತ್ತು. ಕಾರಣ ವ್ಯವಹಾರದ ಬಹುಪಾಲು ಅವಶ್ಯಕತೆಗೆ ಅನುಗುಣವಾಗಿ ನಗದು ರೂಪದಲ್ಲಿ ಇರುತ್ತಿತ್ತು. ಅದು ದಾಖಲೆಯಲ್ಲಿ ಬರುತ್ತಿರಲಿಲ್ಲ.

ಆಗ ಆಡಿಟರ್ ಆ ವ್ಯಕ್ತಿಯ ಬಳಿ ಕೆಲವು ಆಪ್ಷನ್ ಗಳನ್ನು ಕೊಡುತ್ತಿದ್ದರು. ನಷ್ಟ ತೋರಿಸಿದರೆ ಆಗುವ ಅನುಕೂಲ, ಅನಾನುಕೂಲಗಳು ಮತ್ತು ಲಾಭಾಂಶ ತೋರಿಸಿದರೆ ಆಗುವ ಅನುಕೂಲ ಅನಾನುಕೂಲಗಳು ಹಾಗು ಎಷ್ಟು ಲಾಭಾಂಶ ತೋರಿಸಬೇಕು, ಅದಕ್ಕೆ ಎಷ್ಟು ಆದಾಯ ತೆರಿಗೆ ಕಟ್ಟಬೇಕು ಎಲ್ಲವನ್ನೂ ತಿಳಿಸುತ್ತಿದ್ದರು. ಆಗ ಮಾಲೀಕ ಒಪ್ಪುವ ಹಣಕ್ಕೆ ಸರಿಯಾಗಿ ದಾಖಲೆಗಳನ್ನು ನಿರ್ವಹಿಸಲಾಗುತ್ತದೆ. ಅಂದರೆ ಕೂಡುವುದು, ಕಳೆಯುವುದು, ಭಾಗಿಸುವುದು, ಸಾಲ ಪಡೆದಂತೆ ತೋರಿಸುವುದು, ಮುಂಗಡ ಪಡೆದಂತೆ ಮಾಡುವುದು, ಕೃಷಿ ಆದಾಯ ಅಥವಾ ಪತಿ ಪತ್ನಿ ಮಕ್ಕಳ ಹೆಸರಿನಲ್ಲಿ ಉಪ ಕಸುಬು ತೋರಿಸುವುದು ಹೀಗೆ ನಾನಾ ರೀತಿಯ ಅವಕಾಶವನ್ನು ಉಪಯೋಗಿಸಿಕೊಂಡು ಲೆಕ್ಕ ಸರಿ ಮಾಡುತ್ತಾರೆ.

ಕೆಲವು ಲಕ್ಷಗಳ ಆದಾಯವನ್ನು ಸಾಮಾನ್ಯವಾಗಿ ತೆರಿಗೆ ಅಧಿಕಾರಿಗಳು ಹೆಚ್ಚು ತಪಾಸಣೆ ಮಾಡುತ್ತಿರಲಿಲ್ಲ. ನಂತರವೂ ಕೆಲವು ತೊಂದರೆ ಇದ್ದರೆ ಆಡಿಟರ್ ಗಳು ಅಡ್ಜೆಸ್ಟ್ ಮಾಡುತ್ತಿದ್ದರು. ಕೂಲಂಕುಷ ಪರಿಶೀಲನೆಯಲ್ಲಿ ಮಾತ್ರ ತಪ್ಪು ಸಿಗುತ್ತಿತ್ತು.

ಡಿಟೋ ಈ ಟಿಪ್ಪು ಮತ್ತು ಶಿವಾಜಿ ಇತಿಹಾಸವನ್ನು ಬಹುತೇಕ ಪಕ್ಷಪಾತಿಗಳು ಆಡಿಟರ್ ಲೆಕ್ಕದಂತೆ ಕೂಡಿ, ಕಳೆದು, ಭಾಗಿಸಿ ತಮಗೆ ಅನುಕೂಲಕರ ಅಂಶಗಳನ್ನು ಎತ್ತಿಕೊಂಡು ಒಂದು ಅಭಿಪ್ರಾಯ ರೂಪಿಸುತ್ತಿದ್ದಾರೆ ಮತ್ತು ಬರಹಗಳಲ್ಲಿ ಹರಿಯ ಬಿಡುತ್ತಿದ್ದಾರೆ. ಅಲ್ಲದೆ ಅದಕ್ಕೆ ಇವರಿಬ್ಬರ ವ್ಯಕ್ತಿತ್ವಗಳು ಸಹ ಸಾಕಷ್ಟು ಅವಕಾಶ ಒದಗಿಸಿವೆ.

ಇಬ್ಬರೂ ಪ್ರಾಂತ್ಯಗಳ ಅಧಿಪತ್ಯಕ್ಕಾಗಿ ಸಂಘರ್ಷಮಯ ವಾತಾವರಣದಲ್ಲಿ ಹೋರಾಡಿದವರು, ಹಿಂದೂ, ಮುಸ್ಲಿಂ ಕ್ರಿಶ್ಚಿಯನ್ ಧರ್ಮಗಳ ನಡುವಿನ ಹೋರಾಟ ಸಹ ಅಂದಿನ ದಿನಗಳಲ್ಲಿ ತಾರಕಕ್ಕೇರಿತ್ತು.

ಆಗಿನ್ನೂ ಭಾರತ ಒಂದು ಒಕ್ಕೂಟ ವ್ಯವಸ್ಥೆಯಾಗಿರಲಿಲ್ಲ. ಹಿಂದೂ ಜೀವನಶೈಲಿಯೇ ಇಲ್ಲಿನ ಜೀವನವಿಧಾನವಾಗಿತ್ತು. ಆಗ ಪರ್ಷಿಯನ್, ಅರಬ್ ಮುಂತಾದ ಇಸ್ಲಾಂ ಧರ್ಮದ ರಾಜರ ದಾಳಿಯಿಂದಾಗಿ ಅವರು ಸಹ ಕೆಲವು ಪ್ರಾಂತ್ಯಗಳನ್ನು ಆಕ್ರಮಿಸಿ ಆಡಳಿತ ನಡೆಸುತ್ತಿದ್ದರು. ಆಗಲೂ ಒಂದಷ್ಟು ಘರ್ಷಣೆಗಳು ನಡೆಯುತ್ತಲೇ ಇದ್ದವು.

ಕ್ರಮೇಣ ಬ್ರಿಟೀಷರು ಸೇರಿ ಫ್ರೆಂಚರು, ಡಚ್ಚರು, ಪೋರ್ಚುಗೀಸರು ಇಲ್ಲಿಗೆ ವ್ಯಾಪಾರಕ್ಕಾಗಿ ಬಂದು ಆಕ್ರಮಣ ಮಾಡಿದರು.

ಆಗ ತ್ರಿಕೋನ ಸಂಘರ್ಷವೂ ಪ್ರಾರಂಭವಾಯಿತು……

ಶಿವಾಜಿ ಮುಸ್ಲಿಂ ದೊರೆಗಳ ವಿರುದ್ಧ, ಟಿಪ್ಪು ಬ್ರಿಟಿಷ್ ಮತ್ತು ಹಿಂದೂ ರಾಜರುಗಳ ವಿರುದ್ಧ ಹೆಚ್ಚಾಗಿ ಹೋರಾಡಿದವರು.

ನಾವು ಆಗಿನ ಇತಿಹಾಸವನ್ನು ಇವತ್ತಿನ ಪ್ರಜಾಪ್ರಭುತ್ವ ವ್ಯವಸ್ಥೆ, ಬಿಜೆಪಿ, ಕಾಂಗ್ರೆಸ್, ಚುನಾವಣಾ ರಾಜಕೀಯ, ಸಾಮಾಜಿಕ ಜಾಲತಾಣಗಳ ಚರ್ಚೆ, ಬಲಪಂಥ, ಎಡಪಂಥ ಮುಂತಾದ ದೃಷ್ಟಿಯಿಂದ ನೋಡಲು ಹೋಗಬಾರದು.

ಅಂದಿನ ಪರಿಸ್ಥಿತಿಯಲ್ಲಿ ಟಿಪ್ಪು, ‌ಶಿವಾಜಿ ಮುಂತಾದವರಿಗೆ ತಮ್ಮ ಪ್ರಾಂತ್ಯ ಉಳಿಸಿಕೊಳ್ಳುವುದೇ ಮುಖ್ಯವಾಗಿತ್ತು. ಯಾವುದೇ ಸಿದ್ದಾಂತ, ತತ್ವ ಅವರಿಗೆ ಬೇಕಿರಲಿಲ್ಲ. ತಮ್ಮ ರಾಜ್ಯದ ಉಳಿವಿಗಾಗಿ ಹಿಂದೂ ರಾಜರೋ, ಮುಸ್ಲಿಮರೋ, ಡಚ್ಚರೋ ಎಂಬುದಕ್ಕಿಂತ ಶತ್ರುವಿನ ಶತ್ರು ನಮ್ಮ ಮಿತ್ರ ಎಂಬುದಷ್ಟೇ ಅವರ ಆಧ್ಯತೆಯಾಗಿತ್ತು. ಟಿಪ್ಪು ಅಥವಾ ಶಿವಾಜಿಯನ್ನು ಯಾವುದೇ ಸಂವಿಧಾನಾತ್ಮಕ ಕಾನೂನು ಕಟ್ಟಿ ಹಾಕುವ ಸ್ಥಿತಿಯಲ್ಲಿ ಇರಲಿಲ್ಲ. ತಂತ್ರವೋ, ಕುತಂತ್ರವೋ, ಮೋಸವೋ,, ತಾಯಿನಾಡೋ ಒಟ್ಟಿನಲ್ಲಿ ತಮ್ಮ ರಾಜ್ಯದ ರಕ್ಷಣೆ ಮಾಡಿಕೊಳ್ಳಬೇಕಿತ್ತು. ಆಗ ತಮ್ಮ ವಿರೋಧಿಗಳನ್ನು ಮುಲಾಜಿಲ್ಲದೆ ಹತ್ಯೆ ಮಾಡಿದ್ದಾರೆ. ಹಾಗೆಯೇ ತಮ್ಮ ಬೆಂಬಲಿಗರಿಗೆ ಒಳಿತನ್ನೂ ಮಾಡಿದ್ದಾರೆ. ಈಗ ನಾವು ಅದನ್ನು ವಿಮರ್ಶೆಗೆ ಒಳಪಡಿಸಿದರೆ ವಿವಿಧ ಅರ್ಥಗಳು ಮೂಡುತ್ತವೆ.

ಎಷ್ಟೋ ಬಾರಿ ಹಿಂದೂ ಹಿಂದೂ, ಹಿಂದೂ ಮುಸ್ಲಿಂ,
ಮುಸ್ಲಿಂ ಮುಸ್ಲಿಂ, ಹಿಂದೂ ಮುಸ್ಲಿಂ, ಮುಸ್ಲಿಂ ಬ್ರಿಟಿಷ್ ಹೀಗೆ ಒಡನಾಟ ಮತ್ತು ಕಚ್ಚಾಟ ಇತಿಹಾಸದಲ್ಲಿ ದಾಖಲಾಗಿದೆ. ಇಲ್ಲಿ ತಮ್ಮ ರಾಜ್ಯಗಳ ಸ್ವ ಹಿತಾಸಕ್ತಿ ಮಾತ್ರ ಮುಖ್ಯವಾಗಿರುತ್ತದೆ.

ದಾವೂದ್ ಇಬ್ರಾಹಿಂ, ಛೋಟಾ ರಾಜನ್, ಹಾಜಿ ಮಸ್ತಾನ್, ಕರಿಂಲಾಲ್, ವರದರಾಜನ್ ಮೊದಲಿಯಾರ್ ಮುಂತಾದ ಭೂಗತ ಪಾತಕಿಗಳು ತಮ್ಮ ಹಿಡಿತಕ್ಕಾಗಿ ಕೊಲೆಗಳನ್ನು ಮಾಡಿ ತದನಂತರ ಜನಪ್ರಿಯತೆ ಗಳಿಸಲು‌ ತಾನು ಹಿಂದೂ ಡಾನ್, ತಾನು ಮುಸ್ಲಿಂ ಡಾನ್ ಮುಂತಾದ ಹೆಸರುಗಳಿಂದ ಕರೆದುಕೊಳ್ಳುವುದಿಲ್ಲವೇ, ಹಾಗೆಯೇ ಶಿವಾಜಿ, ಟಿಪ್ಪು ಸುಲ್ತಾನ್ ಗಳನ್ನು ಅವರವರ ಬೆಂಬಲಿಗರು ಮತ್ತು ವಿರೋಧಿಗಳು ವರ್ಣಿಸುತ್ತಾರೆ.

ಇದು ಪಕ್ಷ ರಾಜಕೀಯ ಮತ್ತು ಚುನಾವಣಾ ವ್ಯವಸ್ಥೆ ಬಂದ ನಂತರ ಇತಿಹಾಸವನ್ನು ಬಹುಸಂಖ್ಯಾತ ಅಥವಾ ಅಲ್ಪಸಂಖ್ಯಾತ ಮತಗಳ ದೃಷ್ಟಿಯಿಂದ ನೋಡುವ ಪರಿಪಾಠ ಪ್ರಾರಂಭವಾಗಿದೆ. ಟಿಪ್ಪು ಮತ್ತು ಶಿವಾಜಿ ಮಹಾನ್ ದೇಶಭಕ್ತರೂ ಅಲ್ಲ ಅಥವಾ ‌ದೇಶವಿರೋಧಿಗಳು ಅಲ್ಲ. ತಮ್ಮ ಕಾಲದಲ್ಲಿ ರಾಜ್ಯದ ಹಿತಾಸಕ್ತಿಕಾಗಿ ಧೈರ್ಯದಿಂದ, ಶೌರ್ಯದಿಂದ, ತಂತ್ರದಿಂದ ಹೋರಾಡಿದ, ಒಳಿತು ಕೆಡಕುಗಳು ಎರಡನ್ನೂ ನಿಭಾಯಿಸಿದ ಸ್ಪೂರ್ತಿದಾಯಕ ವೀರರು ಎಂದು ಕರೆಯಬಹುದು.

ಇತಿಹಾಸವನ್ನು ಆಳವಾಗಿ ಅಧ್ಯಯನ ಮಾಡದೆ ಕೆಲವು ನಿರ್ಧಿಷ್ಟ ಘಟನೆಗಳನ್ನು ತಮ್ಮ ತಮ್ಮ ಧರ್ಮದ, ಪಕ್ಷದ ಪರವಾಗಿ ತಿರುಚುವುದು ಒಂದು ಚಾಳಿಯಾಗಿದೆ. ಅದು ಅಪಾಯಕಾರಿ.

ಇತಿಹಾಸ ಒಂದು ಪಾಠವಾಗಬೇಕೆ ಹೊರತು ರಾಜಕೀಯ ಅಸ್ತ್ರವಾಗಬಾರದು. ದಯವಿಟ್ಟು ನಾವೆಲ್ಲರೂ ಶಾಂತಿ, ಸಂಯಮ, ಸೌಹಾರ್ದತೆ ಕಾಪಾಡೋಣ……..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಏ.25ರ ರಾತ್ರಿ ಕೋರ್ಟ್ ರಸ್ತೆಯಲ್ಲಿ ಭೀಕರ ಅಪಘಾತದಲ್ಲಿ ಇಬ್ಬರ ಸಾವು ಪ್ರಕರಣ: ಕತ್ತಲಲ್ಲಿ ಪ್ರಯಾಣಿಸುತ್ತಿದ್ದವರ ಬದುಕಲ್ಲಿ ಶಾಶ್ವತ ಕತ್ತಲು ಮೂಡಿಸಿದ ಜವರಾಯ: ಎಚ್ಚೆತ್ತ ನಗರಸಭೆ ಬೀದಿ ದೀಪ ಅಳವಡಿಕೆ

ಏ.25ರ ರಾತ್ರಿ ಕೋರ್ಟ್ ರಸ್ತೆಯಲ್ಲಿ ಭೀಕರ ಅಪಘಾತದಲ್ಲಿ ಇಬ್ಬರು ಯುವಕರು ದಾರುಣವಾಗಿ ಸಾವನ್ನಪ್ಪಿದ್ದರು. ರಸ್ತೆ ಇಕ್ಕೆಲಗಳಲ್ಲಿ ಬೀದಿ ದೀಪಗಳು ಬೆಳಗದ…

1 hour ago

ರಾಷ್ಟ್ರೀಯತೆ ಎಂಬ ಪರಿಕಲ್ಪನೆಯ ಸುತ್ತಾ…….

ದೇಶಭಕ್ತಿ ಮತ್ತು ದೇಶದ್ರೋಹ...... ಇದು ಬ್ರಿಟಿಷರ ಕಾಲದ್ದೇ ಅಥವಾ ಈ ಕಾಲಕ್ಕೂ ಅನ್ವಯಿಸುತ್ತದೆಯೇ..... ರಾಷ್ಟ್ರೀಯತೆ ಎಂಬ ಪರಿಕಲ್ಪನೆಯ ಸುತ್ತಾ....... ರಾಷ್ಟ್ರ…

6 hours ago

ಕೋರ್ಟ್ ರಸ್ತೆಯಲ್ಲಿ ಭೀಕರ ಅಪಘಾತ: ಇಬ್ಬರು ಸಾವು

ಟ್ರ್ಯಾಕ್ಟರ್ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಓರ್ವ ಬೈಕ್ ಸಾವನ್ನಪ್ಪಿದರೆ, ಮತ್ತೋರ್ವ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಘಟನೆ…

1 day ago

ಕೆಯುಡಬ್ಲ್ಯೂಜೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ಎಸ್ಎಸ್ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ.90ಕ್ಕೂ ಹೆಚ್ಚು ಅಂಕಗಳಿಸಿದ ಪತ್ರಕರ್ತರ ಮಕ್ಕಳ ಪ್ರತಿಭಾ ಪುರಸ್ಕಾರಕ್ಕಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ…

1 day ago

ಎಸ್ಸೆಸ್ಸೆಲ್ಸಿ ಪರೀಕ್ಷೆ-01 ಫಲಿತಾಂಶ ಪ್ರಕಟ: ಲಿಟ್ಲ್ ಮಾಸ್ಟರ್ ಪಬ್ಲಿಕ್ ಶಾಲೆ ವಿದ್ಯಾರ್ಥಿನಿಗೆ 625ಕ್ಕೆ 622 ಅಂಕ: ನಮ್ಮ ತಪಸ್ಸಿಗೆ ಸಿಕ್ಕ ಯಶಸ್ಸು- ಶಾಲಾ ಸಂಸ್ಥಾಪಕ ಶ್ರೀನಿವಾಸ್ ಮೂರ್ತಿ

2025-26ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆ-1 ರ ಫಲಿತಾಂಶ ಪ್ರಕಟಗೊಂಡಿದ್ದು, ದೊಡ್ಡಬಳ್ಳಾಪುರ ತಾಲೂಕಿನ ಕಂಟನಕುಂಟೆ ಗ್ರಾಮದ ಲಿಟ್ಲ್ ಮಾಸ್ಟರ್ ಪಬ್ಲಿಕ್ ಶಾಲೆಯು…

2 days ago

ಬಡಪಾಯಿ ಟೀ ಅಂಗಡಿ ಹುಡುಗನ ಮೇಲೆ ಪೊಲೀಸ್ ಇನ್ಸ್ ಪೆಕ್ಟರ್ ದರ್ಪ ಆರೋಪ

ಟೀ ಅಂಗಡಿ ಹುಡುಗನ ಮೇಲೆ ಪೊಲೀಸ್ ಇನ್ಸ್ ಪೆಕ್ಟರ್ ದರ್ಪ ಮೆರೆದಿರುವ ಘಟನೆ ದೇವನಹಳ್ಳಿಯ ಕನ್ನಮಂಗಲ ಗ್ರಾಮದಲ್ಲಿ ಹಾದುಹೋಗುವ ರಾಷ್ಟ್ರೀಯ…

2 days ago