ದೊಡ್ಡಬಳ್ಳಾಪುರದಲ್ಲಿ ಕಾರ್ಮಿಕ–ರೈತರ ಆಕ್ರೋಶ; ಎಸಿ ಕಚೇರಿಗೆ ಮುತ್ತಿಗೆ: ನಾಲ್ಕು ಕಾರ್ಮಿಕ ಸಂಹಿತೆ ರದ್ದು, ವಿದ್ಯುತ್ ಖಾಸಗೀಕರಣ ಕೈಬಿಡಲು ಆಗ್ರಹ

ದೊಡ್ಡಬಳ್ಳಾಪುರ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಬೇಕು ಹಾಗೂ ವಿದ್ಯುತ್ ಖಾಸಗೀಕರಣ ಕೈಬಿಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಎಸ್‌ಕೆಎಂ ಮತ್ತು ಜೆಸಿಟಿಯು ಸಂಯುಕ್ತ ಆಶ್ರಯದಲ್ಲಿ ಸೋಮವಾರ ಜೈಲ್‌ಭರೋ ಚಳವಳಿ ನಡೆಸಲಾಯಿತು. ಬಳಿಕ ಪ್ರತಿಭಟನಾಕಾರರು ಉಪವಿಭಾಗಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕು ಕಚೇರಿ ಸಮೀಪದ ಜಗಜ್ಯೋತಿ ಬಸವೇಶ್ವರ ವೃತ್ತದಿಂದ ವಿವಿಧ ರೈತ ಹಾಗೂ ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು ಮೆರವಣಿಗೆಯಲ್ಲಿ ಆಗಮಿಸಿ ಪ್ರತಿಭಟನೆ ನಡೆಸಿದರು. ಈ ವೇಳೆ ತಾಲ್ಲೂಕು ಕಚೇರಿಯೊಳಗೆ ಪ್ರವೇಶಿಸಲು ಪ್ರತಿಭಟನಾಕಾರರು ಯತ್ನಿಸಿದಾಗ ಪೊಲೀಸರು ಗೇಟ್‌ಗಳನ್ನು ಬಂದ್ ಮಾಡಿ ತಡೆಯೊಡ್ಡಿದರು. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಪ್ರತಿಭಟನಾಕಾರರು ಪೊಲೀಸರ ತಡೆಯನ್ನು ಲೆಕ್ಕಿಸದೆ ಕಚೇರಿ ಆವರಣದೊಳಗೆ ನುಗ್ಗಿ ಧರಣಿ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರತಿಭಟನಾಕಾರರನ್ನು ಕಚೇರಿಯಿಂದ ಹೊರಗೆ ಕಳುಹಿಸಿದರು. ಈ ವೇಳೆ ಕಾರ್ಮಿಕ ಸಂಘಟನೆಗಳ ಮುಖಂಡರಾದ ಪಿ.ಎ. ವೆಂಕಟೇಶ್ ಹಾಗೂ ರೇಣುಕಾರಾಧ್ಯ ಅವರನ್ನು ಪೊಲೀಸರು ವಶಕ್ಕೆ ಪಡೆದು ಜೀಪ್‌ನಲ್ಲಿ ಕರೆದೊಯ್ಯಲು ಮುಂದಾದರು. ಇದನ್ನು ವಿರೋಧಿಸಿದ ಪ್ರತಿಭಟನಾಕಾರರು ಪೊಲೀಸ್ ಜೀಪ್‌ಗೆ ಅಡ್ಡಗಟ್ಟಿ ಮುಖಂಡರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.

ಇದೇ ಸಂದರ್ಭದಲ್ಲಿ ಭಾರಿ ಮಳೆ ಸುರಿದ ಹಿನ್ನೆಲೆಯಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ಪಕ್ಕಕ್ಕೆ ಸರಿಸಿ, ವಶಕ್ಕೆ ಪಡೆದ ಮುಖಂಡರನ್ನು ಠಾಣೆಗೆ ಕರೆದೊಯ್ದರು. ಬಳಿಕ ಎಸಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ತೀವ್ರಗೊಂಡಿದ್ದು, ಬಂಧಿತ ಮುಖಂಡರನ್ನು ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹಿಸಲಾಯಿತು. ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಪೊಲೀಸರು ಇಬ್ಬರು ಕಾರ್ಮಿಕ ಮುಖಂಡರನ್ನು ಬಿಡುಗಡೆ ಮಾಡಿದರು.

ಸರ್ಕಾರಗಳ ವಿರುದ್ಧ ಚಂದ್ರತೇಜಸ್ವಿ ಆಕ್ರೋಶ

ಪ್ರತಿಭಟನೆಯಲ್ಲಿ ಮಾತನಾಡಿದ ಸಿಪಿಐಎಂ ಮುಖಂಡ ಆರ್. ಚಂದ್ರತೇಜಸ್ವಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ, ಕಾರ್ಮಿಕ, ದಲಿತ, ಮಹಿಳೆ, ವಿದ್ಯಾರ್ಥಿ ಹಾಗೂ ಯುವಜನ ವಿರೋಧಿ ಕಾನೂನು ಮತ್ತು ನೀತಿಗಳನ್ನು ಜಾರಿಗೆ ತರುವ ಮೂಲಕ ಪ್ರಜಾಪ್ರಭುತ್ವದ ಹಕ್ಕುಗಳನ್ನು ದಮನಿಸುತ್ತಿವೆ ಎಂದು ಆರೋಪಿಸಿದರು.

ಐತಿಹಾಸಿಕ ಕ್ವಿಟ್ ಇಂಡಿಯಾ ಚಳವಳಿಯ ನೆನಪು ಮತ್ತು ಸ್ಫೂರ್ತಿಯಲ್ಲಿ ದೇಶದಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ‘ಕಾರ್ಪೊರೇಟ್ ಕಂಪನಿಗಳೇ ದೇಶ ಬಿಟ್ಟು ತೊಲಗಿ’ ಎಂಬ ಘೋಷಣೆಯೊಂದಿಗೆ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.

ಹಿಂದೆ ರಾಜರು ರೈತರ ಭೂಮಿಯನ್ನು ಕಸಿದು ಬ್ರಾಹ್ಮಣರು ಹಾಗೂ ರಾಜ ಪರಿವಾರಗಳಿಗೆ ನೀಡುತ್ತಿದ್ದ ರೀತಿಯಲ್ಲೇ ಇಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಭೂಮಿಯನ್ನು ಅಂಬಾನಿ, ಅದಾನಿ ಸೇರಿದಂತೆ ದೇಶಿ ಹಾಗೂ ವಿದೇಶಿ ಕಾರ್ಪೊರೇಟ್ ಕಂಪನಿಗಳ ಪಾಲಾಗಿಸುತ್ತಿವೆ ಎಂದು ದೂರಿದರು.

ಪ್ರಮುಖ ಬೇಡಿಕೆಗಳು

ಪ್ರತಿಭಟನಾಕಾರರು ಸುಪ್ರೀಂಕೋರ್ಟ್ ಆದೇಶದಂತೆ ಪರಿಷ್ಕೃತ ಕನಿಷ್ಠ ವೇತನ ಜಾರಿಗೆ ತರಬೇಕು, ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಬೇಕು, ಬಲವಂತದ ಹಾಗೂ ಅನ್ಯಾಯದ ಭೂಸ್ವಾಧೀನ ಮತ್ತು ಕಾರ್ಪೊರೇಟ್ ಭೂ ಕಬಳಿಕೆ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ವಿಬಿ-ರಾಮ್‌ಜಿ ಕಾಯ್ದೆ ರದ್ದುಪಡಿಸಬೇಕು, ವಿದ್ಯುತ್ ತಿದ್ದುಪಡಿ ಕಾಯ್ದೆ–2025 ರದ್ದುಪಡಿಸಬೇಕು, ಬೀಜ ಕಾಯ್ದೆ ಹಾಗೂ ಕೃಷಿ ಮಾರುಕಟ್ಟೆ ಕುರಿತ ರಾಷ್ಟ್ರೀಯ ಧೋರಣಾ ಚೌಕಟ್ಟು ನೀತಿ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

ಇದರ ಜೊತೆಗೆ ಬ್ಯಾಂಕ್, ವಿಮೆ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳ ಖಾಸಗೀಕರಣವನ್ನು ಕೂಡಲೇ ನಿಲ್ಲಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಿಪಿಐಎಂ ರಾಜ್ಯ ಕಾರ್ಯದರ್ಶಿ ಪ್ರಭ ಬೆಳವಂಗಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ರುದ್ರಾರಾಧ್ಯ, ದೊಡ್ಡಬೆಳವಂಗಲ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಶಶಿಧರ್, ದೇವನಹಳ್ಳಿ ರೈತ ಮುಖಂಡರಾದ ಕಾರಹಳ್ಳಿ ಶ್ರೀನಿವಾಸ್, ಮಾರೇಗೌಡ, ಹೊಸಕೋಟೆ ವೆಂಕಟರಾಜು, ದಲಿತ ಮುಖಂಡ ಗೂಳ್ಯ ಹನುಮಣ್ಣ ಸೇರಿದಂತೆ ನೂರಾರು ರೈತರು, ಕಾರ್ಮಿಕರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

Ramesh Babu

Journalist

Recent Posts

ಲಂಚ ಪ್ರಕರಣ: ಮ್ಯೂನಿಷನ್ಸ್ ಇಂಡಿಯಾ ಕಾರ್ಯನಿರ್ವಾಹಕ ನಿರ್ದೇಶಕ ಸಿಬಿಐ ಬಲೆಗೆ

ಲಂಚ ಪ್ರಕರಣ: ಮ್ಯೂನಿಷನ್ಸ್ ಇಂಡಿಯಾ ಕಾರ್ಯನಿರ್ವಾಹಕ ನಿರ್ದೇಶಕ ಸಿಬಿಐ ಬಲೆಗೆಲಂಚ ಸ್ವೀಕಾರ ಆರೋಪಕ್ಕೆ ಸಂಬಂಧಿಸಿದಂತೆ ಮ್ಯೂನಿಷನ್ಸ್ ಇಂಡಿಯಾ ಲಿಮಿಟೆಡ್‌ (MIL)…

2 hours ago

ಸ್ಟಿಂಗ್ ಆಪರೇಷನ್ ವಿವಾದ: ಸಿದ್ದರಾಮಯ್ಯನವರದ್ದು ಕುಮಾರಸ್ವಾಮಿ ತರಹದ ಚರಿತ್ರೆಯಲ್ಲ: ಎಚ್.ಡಿ.ಕೆ ವಿರುದ್ಧ ಸಚಿವ ಚಲುವರಾಯಸ್ವಾಮಿ ತೀವ್ರ ವಾಗ್ದಾಳಿ

ಸ್ಟಿಂಗ್ ಆಪರೇಷನ್ ಮಾಡಿಸುವುದಕ್ಕೆ ಮುಖ್ಯಮಂತ್ರಿಗಳಿಗೆ ತಲೆ ಕೆಟ್ಟಿದೆಯೇ? ಪದೇಪದೇ ಈ ವಿಚಾರದಲ್ಲಿ ಮುಖ್ಯಮಂತ್ರಿಗಳನ್ನು ಎಳೆದು ತರುವ ಎಚ್.ಡಿ. ಕುಮಾರಸ್ವಾಮಿ ಅವರಿಗೆ…

14 hours ago

ರಾಜಾನುಕುಂಟೆ ಬಳಿ ರೈಲು ಬೋಗಿಗಳಿಗೆ ಬೆಂಕಿ: ಎರಡು ಬೋಗಿಗಳು ಸುಟ್ಟು ಭಸ್ಮ

ದೊಡ್ಡಬಳ್ಳಾಪುರ: ಯಲಹಂಕ ಸಮೀಪದ ರಾಜಾನುಕುಂಟೆ ರೈಲ್ವೆ ನಿಲ್ದಾಣದ ಬಳಿ ರೈಲ್ವೆ ಹಳಿಗಳ ಮೇಲೆ ನಿಲ್ಲಿಸಿದ್ದ ಎರಡು ರೈಲು ಬೋಗಿಗಳಿಗೆ ಬೆಂಕಿ…

19 hours ago

ಮಧುರೆ ಕೆರೆಯಲ್ಲಿ ಮಣ್ಣು ದಂಧೆ ಆರೋಪ: ಸುಮಾರು 35 ಟ್ರ್ಯಾಕ್ಟರ್, 5 ಜೆಸಿಬಿಗಳ ಅಬ್ಬರ; ಮಣ್ಣು ತೆಗೆಯುವುದಕ್ಕೆ ಗ್ರಾಮಸ್ಥರ ಬ್ರೇಕ್!

ದೊಡ್ಡಬಳ್ಳಾಪುರ ತಾಲ್ಲೂಕಿನ ಮಧುರೆ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ತೆಗೆಯುವ ದಂಧೆ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಸುಮಾರು 35 ಟ್ರ್ಯಾಕ್ಟರ್‌ಗಳು…

20 hours ago

ನಮ್ಮ ತೆರಿಗೆ ನಮ್ಮ ಹಕ್ಕು…

ನಮ್ಮ ತೆರಿಗೆ ನಮ್ಮ ಹಕ್ಕು, ಈ ವಿಷಯದಲ್ಲಿ ರಾಜಕೀಯ ಮೀರಿ ವೈಜ್ಞಾನಿಕ ಸಮತೋಲನ ಸಾಧಿಸಬೇಕಾದುದು ಇಂದಿನ ತುರ್ತು ಅಗತ್ಯವಾಗಿದೆ..... ಕೇಂದ್ರದ…

1 day ago

ದೇವನಹಳ್ಳಿ ಬಳಿ ಭೀಕರ ಅಪಘಾತ: ಓರ್ವ ಸಾವು: ಹಲವರಿಗೆ ಗಾಯ

ದೇವನಹಳ್ಳಿ: ನಿಧಾನವಾಗಿ ಸಾಗುತ್ತಿದ್ದ ಲಾರಿಗೆ ಹಿಂಬದಿಯಿಂದ ವೇಗವಾಗಿ ಬಂದ ರೇಂಜ್ ರೋವರ್ ಕಾರು ಡಿಕ್ಕಿ ಹೊಡೆದ ಪರಿಣಾಮ ಮೊಳಕಾಲ್ಮೂರು ಕ್ಷೇತ್ರದ…

1 day ago