
ಚಿಕ್ಕನಾಯಕನಹಳ್ಳಿ: ಅರ್ಹ ರೈತರು ಸರ್ಕಾರದ ಮಹಾತ್ವಾಕಾಂಶಿ ಯೋಜನೆಯಾದ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಅಜೀವಿಕ ಮಿಷನ್ ಗ್ರಾಮೀಣ ಯೋಜನೆಯಡಿ (ವಿಬಿ-ಜಿ ರಾಮ್ ಜಿ ಯೋಜನೆ) ಗ್ರಾಮೀಣ ಜನರಿಗೆ ಸ್ಥಳೀಯವಾಗಿ ಉದ್ಯೋಗ ದೊರಕುವ ತಾಲ್ಲೂಕಿನಾದ್ಯಂತ ಜಾಬ್ ಕಾರ್ಡ್ ಮೇಳ ಮತ್ತು ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ರಾಜಶೇಖರ್ ಅವರು ತಿಳಿಸಿದರು.
ತಾಲ್ಲೂಕಿನ ಕಂದಿಕೆರೆ ಗ್ರಾಮ ಪಂಚಾಯಿತಿ ಸಮೀಪದ ಬಸ್ ನಿಲ್ದಾಣದಲ್ಲಿ ಕರಪತ್ರಗಳನ್ನು ನೀಡುವ ಮೂಲಕ ಬೀದಿನಾಟಕ ಮತ್ತು “ಜಾಬ್ ಕಾರ್ಡ್ ಮೇಳ” ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಆಗಸ್ಟ್ 15 ರಿಂದ ಸೆಪ್ಟಂಬರ್ 15 ರವರೆಗೆ ಉದ್ಯೋಗ ಚೀಟಿ ಇಲ್ಲದಾ ಎಲ್ಲಾ ರೈತರು ಮತ್ತು ಕೂಲಿಕಾರರು ಹಾಗೂ ಅರ್ಹ ಗ್ರಾಮೀಣ ಕುಟುಂಬಗಳಿಗೆ ಸ್ಥಳದಲ್ಲೇ ಪರಿಶೀಲಿಸಿ ಹೊಸ ರೋಜ್ಗಾರ್ ಗ್ಯಾರಂಟಿ ಕಾರ್ಡ್ ಗಳನ್ನು ನೀಡಲಾಗುವುದು. ಅರ್ಹ ಫಲಾನುಭವಿಗಳು ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಉದ್ಯೋಗ ಚೀಟಿ ಪಡೆಯಬಹುದು ತಪ್ಪದೇ ಅರ್ಹರು ಸೌಲಭ್ಯಗಳನ್ನು ಪಡೆದುಕೊಳ್ಳಿ ಎಂದು ಮನವಿ ಮಾಡಿದರು.
ಈಗಾಗಲೇ ಜಾಬ್ ಕಾರ್ಡ್ ಹೊಂದಿದ್ದು, ಇ-ಕೆವೈಸಿ ಪ್ರಕ್ರಿಯೆ ಬಾಕಿ ಇರುವವರು ಈ ಅಭಿಯಾನದ ಮೂಲಕ ತಕ್ಷಣವೇ ಇ-ಕೆವೈಸಿ ಪೂರ್ಣಗೊಳಿಸಬಹುದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು, ವಿಶೇಷ ಚೇತನರು, ಮಹಿಳಾ ಪ್ರಧಾನ ಕುಟುಂಬಗಳು ಮತ್ತು ಭೂ ರಹಿತ ಕೂಲಿ ಕಾರ್ಮಿಕರಿಗೆ ಆದ್ಯತೆ ಮೇರೆಗೆ ಕಾರ್ಡ್ ವಿತರಿಸಲಾಗುವುದು ಎಂದು ಹೇಳಿದರು.
ಯೋಜನೆಯಡಿ ವಾರ್ಷಿಕ ಉದ್ಯೋಗದ ಅವಧಿಯನ್ನು 100 ದಿನಗಳಿಂದ 125 ದಿನಗಳಿಗೆ ಹೆಚ್ಚಿಸಲಾಗಿದೆ. ದಿನದ ಕೂಲಿ ಮೊತ್ತವನ್ನೂ 370 ರೂ. ರಿಂದ 382 ರೂ.ಗೆ ಹೆಚ್ಚಿಸಲಾಗಿದೆ.
ಈ ವೇಳೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ರಾಜಶೇಖರ್ ಆಚಾರ್ ರವರು, ದ್ವಿತಿಯ ದರ್ಜೆ ಲೆಕ್ಕ ಸಹಾಯಕರಾದ ಓಂಕಾರಯ್ಯ ರವರು, ಕರವಸೂಲಿಕಾರರಾದ ಕೆ. ಆರ್ ಪರಮೇಶ್ವರಯ್ಯ , ತಾಂತ್ರಿಕ ಸಹಾಯಕರಾದ ಹೊನ್ನೇಶ್ ಬಿ.ಎಸ್ ಮತ್ತು ಕಾವ್ಯ, ನಾಗರಾಜ್ ರವರು, ಡಿಇಒ ಕೆ.ಸಿ ತೇಜಸ್ ಅರಸ್, ಅರುಣ್, ಬಿಎಫ್ ಟಿ ಸತೀಶ್, ಜಿಕೆಎಂ ವಿಜಯ ಕುಮಾರಿ, ಪಂಚಾಯಿತಿ ಸಿಬ್ಬಂದಿಗಳು, ಗ್ರಾಕೂಸು ಮಹಿಳಾ ಕೂಲಿಕಾರರು, ಸಂಜೀವಿನಿ ಸಂಘದ ಸದಸ್ಯರು, ಕಲಾವಿದರು ಹಾಗೂ ಸಾರ್ವಜನಿಕ ಉಪಸ್ಥಿತರಿದ್ದರು.