Categories: ಲೇಖನ

ಅಭಿವೃದ್ಧಿ………..

ಒಂದು ದೇಶದ ಅಭಿವೃದ್ಧಿಯೆಂಬ ವಜ್ರಖಚಿತ ಕಿರೀಟದ ಮುತ್ತುಗಳು,…………..

ಆ ದೇಶ ಬಾಹ್ಯಾಕಾಶಕ್ಕೆ ಹಾರಿಸಿದ ಸ್ಯಾಟಲೈಟ್ ಗಳು ಮತ್ತು ಅದರ ಪರಿಣಾಮ,

ಆ ದೇಶದಲ್ಲಿ ಇರುವ ಶ್ರೀಮಂತರ ಸಂಖ್ಯೆ,

ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಹೊಂದಿರುವ ಸ್ಥಾನ,

ಆ ದೇಶದಲ್ಲಿ ಇರಬಹುದಾದ ವಿಶ್ವ ಶ್ರೇಷ್ಠ ಭವ್ಯ ಕಟ್ಟಡಗಳು,

ಆ ದೇಶ ವಿಶ್ವ ದರ್ಜೆಯ ಕ್ರೀಡಾಕೂಟದಲ್ಲಿ ಗಳಿಸುವ ಪದಕಗಳು,

ಅದು ಹೊಂದಿರಬಹುದಾದ ವಿಮಾನ ನಿಲ್ದಾಣಗಳ ಸಂಖ್ಯೆ,

ಆ ದೇಶದಲ್ಲಿ ಚಲಿಸುವ ಬುಲೆಟ್ ರೈಲುಗಳ ವೇಗ,

ಅಲ್ಲಿ ಇರಬಹುದಾದ 5 ಸ್ಟಾರ್, 7 ಸ್ಟಾರ್ ಹೋಟೆಲ್ ಗಳ ಸಂಖ್ಯೆ,

ಅಲ್ಲಿ ಓಡಾಡುವ ಕಾರುಗಳ ವೈಭವೋಪೇತ ಮೆರವಣಿಗೆ,

ಅಲ್ಲಿನ ರಾಜಕೀಯ ನೇತಾರರ ಶ್ರೀಮಂತ ಜೀವನ ಶ್ಯೆಲಿ,

ಸ್ಮಾರ್ಟ್ ಸಿಟಿ, ಸ್ಮಾರ್ಟ್ ವಿಲೇಜ್,
ಡಿಜಿಟಲ್ ಆಡಳಿತ
ಇತ್ಯಾದಿಗಳು,

ಇನ್ನೊಂದೆಡೆ,

ಒಂದು ದೇಶದ ಬಡತನವೆಂಬ ತಗಡು ಕಿರೀಟದ ಹರಳುಗಳು………..

ಊಟಕ್ಕೇ ಇಲ್ಲದೆ ಕೆಲವರು ಆಗಾಗ ಹಸಿವಿನಿಂದ ಸಾಯುವುದು,

ಪೌಷ್ಟಿಕಾಂಶದ ಕೊರತೆಯಿಂದ ಅನೇಕ ಮಕ್ಕಳು ನರಳುತ್ತಿರುವುದು,

ಇನ್ನೂ ನೀರು, ವಿದ್ಯುತ್‌, ರಸ್ತೆಗಳ ಸೌಕರ್ಯವಿಲ್ಲದ ಹಳ್ಳಿಗಳು,

ಆಗಾಗ ಪ್ರತಿಭಟನೆ, ಮುಷ್ಕರ, ಬಂದ್ ಗಳು,

ಇಲ್ಲಿನ ಕೋರ್ಟುಗಳಲ್ಲಿ ದಾಖಲಾಗಿರುವ ಕೇಸುಗಳು,

ತುಂಬಿ ತುಳುಕುವ ಆಸ್ಪತ್ರೆ, ಜೈಲುಗಳು,

ಬೀದಿ ಬದಿಯಲ್ಲಿಯೇ ಸಂಸಾರ ಸಾಗಿಸುವ ಕುಟುಂಬಗಳು,

ಇಲ್ಲಿರುವ ವೃದ್ದಾಶ್ರಮ, ಅನಾಥಾಶ್ರಮಗಳ ಸಂಖ್ಯೆ,

ಹೆಣ ಸುಡಲೂ ಕೊಡಬೇಕಾದ ಲಂಚ,

ಇಲ್ಲಿ ದಾಖಲಾಗುವ ಅತ್ಯಾಚಾರ, ಕೊಲೆ, ಕಳ್ಳತನ, ವಂಚನೆಗಳ ಸಂಖ್ಯೆ,

ಓಟಿಗಾಗಿ ಜನಗಳು ಸಲ್ಲಿಸುವ ಹಣದ ಬೇಡಿಕೆ,

ಇಲ್ಲಿನ ರಸ್ತಗಳಿಂದಾಗುವ ಅಪಘಾತಗಳ ಸಾವು, ನೋವು,
ಇತ್ಯಾದಿಗಳು.

ಈಗ ಆಯ್ಕೆ ನಿಮ್ಮದೇ ……

ನಮ್ಮ ದೇಶ ಭಾರತ,
ವಜ್ರಖಚಿತ ಕಿರೀಟದ ಅಸಲಿ ರಾಷ್ಟ್ರವೇ ?
ಅಥವಾ
ತಗಡಿನ ಕಿರೀಟದ ನಕಲಿ ಹರಳುಗಳೇ ಇರುವ ರಾಷ್ಟ್ರವೇ ?

ಆತ್ಮವಂಚನೆ ಮಾಡಿಕೊಳ್ಳದೇ ಉತ್ತರಿಸಿಕೊಳ್ಳಿ………

ಎರಡೂ ಇದೆ ಎಂಬುವವರಿಗೆ ನಾವು ಈಗ ಹೆಚ್ಚಾಗಿ ಗಮನಹರಿಸಬೇಕಾದದ್ದು ಯಾವ ಕಡೆ ಎಂಬ ಪ್ರಶ್ನೆಯೂ ಬರುತ್ತದೆ.

ದೇಶ ಅಭಿವೃದ್ಧಿಯತ್ತ ಸಾಗುತ್ತಿದೆ ಎಂಬ ಬಲಪಂಥೀಯ ಚಿಂತನೆಗಳು, ದೇಶ ತೀರಾ ಅಧೋಗತಿಗೆ ಇಳಿಯುತ್ತಿದೆ ಎಂಬ ಎಡಪಂಥೀಯ ಚಿಂತನೆಗಳು ವಾಸ್ತವಕ್ಕೆ ಹತ್ತಿರವಾಗಿರುವುದಿಲ್ಲ,

ಜನಸಂಖ್ಯೆಯ ಆಧಾರದಲ್ಲಿ ಅಪಘಾತಗಳು ಹೆಚ್ಚಾಗುತ್ತಿದ್ದರೆ ಆ ದೇಶ ಇನ್ನೂ ಅಭಿವೃದ್ಧಿಯ ಬಗ್ಗೆ ಸ್ಪಷ್ಟ ಕಲ್ಪನೆ ಹೊಂದಿಲ್ಲಾ ಎಂದೇ ಹೇಳಬೇಕು.

ಆಧುನಿಕತೆ ಬೆಳೆದಂತೆ ಅಪರಾಧಗಳು ಹೆಚ್ಚಾಗುತ್ತಿದ್ದರೆ ಆ ದೇಶದ ಅಭಿವೃದ್ಧಿಯ ದಾರಿ ತಪ್ಪಾಗಿದೆ ಎಂದೇ ಭಾವಿಸಬೇಕು.

ಅಕ್ಷರಸ್ಥರ ಸಂಖ್ಯೆ ಹೆಚ್ಚಾಗುತ್ತಿದ್ದರೂ ಮೋಸ, ವಂಚನೆ, ಭ್ರಷ್ಟಾಚಾರ ಹೆಚ್ಚಾಗುತ್ತಿದ್ದರೆ ಆ ದೇಶದ ಅಭಿವೃದ್ಧಿ ಅನುಮಾನಾಸ್ಪದವಾಗಿದೆ ಎಂದು ಊಹಿಸಬಹುದು.

ಆಸ್ಪತ್ರೆ, ಸಿಸಿ ಟಿವಿ, ಮೆಡಿಕಲ್ ಲ್ಯಾಬೋರೇಟರಿಗಳು, ಪೋಲೀಸ್ ಸ್ಟೇಷನ್ನುಗಳು ಹೆಚ್ಚಳವಾದಷ್ಟು ದೇಶದ ಅಭಿವೃದ್ಧಿ ಹಿಮ್ಮುಖವಾಗಿದೆ ಎಂದು ಅರ್ಥಮಾಡಿಕೊಳ್ಳಬೇಕು.

ಆಹಾರದ ಉತ್ಪಾದನೆ ಹೆಚ್ಚಾಗಿದ್ದರೂ ಅದರಲ್ಲಿ ಪೌಷ್ಟಿಕಾಂಶಕ್ಕೆ ಬದಲಾಗಿ ರಾಸಾಯನಿಕಗಳು, ಗಾಳಿಯಲ್ಲಿ ವಿಷಯುಕ್ತ ಅಂಶ, ನೀರಿನಲ್ಲಿ ಸಾಂಕ್ರಾಮಿಕ ರೋಗಗಳ ವೈರಸ್ ಗಳು ಹೆಚ್ಚಾಗಿದ್ದರೆ ಅದು ಅಪಾಯಕಾರಿ ಅಭಿವೃದ್ಧಿ ಎಂದೇ ಪರಿಗಣಿಸಬೇಕು.

ಅತ್ಯುತ್ತಮ ತಂತ್ರಜ್ಞಾನ, ಸಮೂಹ ಸಂಪರ್ಕ ಮಾಧ್ಯಮ, ರಸ್ತೆಗಳು, ಕಟ್ಟಡಗಳು, ವಾಹನಗಳು, ಶಿಕ್ಷಣ ಸಂಸ್ಥೆಗಳು ಇದ್ದರೂ ಮಾನವೀಯ ಮೌಲ್ಯಗಳು ಕುಸಿತ ಕಂಡು ಸಾಮಾಜಿಕ ಸ್ವಾಸ್ಥ್ಯ ಅಸಹನೆಯಿಂದ ಕೂಡಿದ್ದರೆ ಅದನ್ನು ತಪ್ಪಾಗಿ ಅರ್ಥೈಸಿದ ಕೆಟ್ಟ ಅಭಿವೃದ್ಧಿ ಎಂದೇ ತಿಳಿಯಬೇಕು.

ಅನ್ನ ಭಾಗ್ಯ, ಕ್ಷೀರ ಭಾಗ್ಯ, ಸಾಲ ಮನ್ನಾ, ಉಚಿತ ಗ್ಯಾಸ್ ಸಿಲಿಂಡರ್, ಚುನಾವಣೆಯಲ್ಲಿ ಹಣ, ಹೆಂಡ, ಸೀರೆ, ಪಂಚೆ, ಜಾತಿಗಳ ಅವಶ್ಯಕತೆ ಇನ್ನೂ ಇದೆ ಎಂದರೆ ನಾವು ತೀರಾ ಹಿಂದುಳಿದಿದ್ದೇವೇ ಎಂದೇ ಗ್ರಹಿಸಬೇಕು.

ಬುಲೆಟ್ ಟ್ರೈನ್, ಸ್ಮಾರ್ಟ್ ಸಿಟಿ, ಡಿಜಿಟಲ್‌ ವ್ಯವಹಾರ, ಅಂತರರಾಷ್ಟ್ರೀಯ ನಾಯಕತ್ವ ಮುಂತಾದ ವಿಷಯಗಳನ್ನು ನಾವು ಈ ಕ್ಷಣದಲ್ಲಿ ಸಂಭ್ರಮಿಸುತ್ತಿದ್ದೇವೆ ಎಂದರೆ ನಾವು ಆತ್ಮವಂಚನೆ ಮಾಡಿಕೊಂಡು ಅಭಿವೃದ್ಧಿಯ ಭ್ರಮೆಯಲ್ಲಿ ತೇಲುತ್ತಿದ್ದೇವೆ ಎಂದೇ ಮನವರಿಕೆ ಮಾಡಿಕೊಳ್ಳಬೇಕು.

ವ್ಯಾವಹಾರಿಕವಾಗಿ ಸೇವಾ ಕ್ಷೇತ್ರ ( Service Sector ) ಹೆಚ್ಚು ಅಭಿವೃದ್ಧಿ ಹೊಂದಿ, ಉತ್ಪಾದಕಾ ಕ್ಷೇತ್ರ ( Production Sector ) ಕುಸಿತ ಕಂಡರೆ ಭಾರತದಂತ ಬೃಹತ್ ದೇಶದ ಭವಿಷ್ಯ ಕಷ್ಟವಾಗುತ್ತದೆ ಎಂದು ಅರಿತುಕೊಳ್ಳಬೇಕು….

ಅಭಿವೃದ್ಧಿಯನ್ನು ಸಮಷ್ಟಿ ದೃಷ್ಟಿಕೋನದಿಂದ , ಎಲ್ಲಾ ವಿಭಾಗಗಳನ್ನು ಅಂದರೆ ವಸ್ತು ಮತ್ತು ವ್ಯಕ್ತಿತ್ವಗಳ ಬೆಳವಣಿಗೆಯನ್ನು ಒಟ್ಟಿಗೆ ಮತ್ತು ಸಮಾನಾಂತರವಾಗಿ ತೆಗೆದುಕೊಂಡು ಹೋದರೆ ಮಾತ್ರ ನಿಜದ ಅಭಿವೃದ್ಧಿ ಸಾಧ್ಯ. ಕೃಷಿ ಆಧಾರಿತ ಭಾರತದ ಅಭಿವೃದ್ಧಿ ಯಾವುದೋ ಒಂದು ಕ್ಷೇತ್ರದ ಬೆಳವಣಿಗೆಯಿಂದ ಸಾಧ್ಯವೇ ಇಲ್ಲ.

ಆದರೆ ನಮ್ಮ ದೇಶದ ಮೂಲಭೂತ ಸಮಸ್ಯೆಗಳಾದ ಅಪೌಷ್ಟಿಕತೆ, ಮೌಢ್ಯ, ಅಜ್ಞಾನ, ಹಿಂಸೆ, ತಾರತಮ್ಯ, ಭ್ರಷ್ಟಾಚಾರ, ಜಾತಿ ಪದ್ಧತಿ, ಹೆಣ್ಣಿನ ಮೇಲಿನ ದೌರ್ಜನ್ಯ ಇವುಗಳನ್ನು ಪರಿಗಣಗೆ ತೆಗೆದುಕೊಂಡರೆ ಖಂಡಿತವಾಗಲು ಭಾರತ ಸಾಕಷ್ಟು ಹಿಂದುಳಿದಿದೆ,

ತಾಂತ್ರಿಕವಾಗಿ ಮುಂದುವರೆಯುತ್ತಿದೆ ಎಂಬುದು ನಮ್ಮ ಗಮನಕ್ಕೆ ಬಂದಿದೆ, ಆದರೆ ಮಾನವೀಯ ಮೌಲ್ಯಗಳ ವಿಷಯದಲ್ಲಿ ತೀರಾ ಕೆಳಹಂತಕ್ಕೆ ಜಾರುತ್ತಿರುವುದರಿಂದ ದೇಶದ ಅಭಿವೃದ್ಧಿಯ ಪರಿಕಲ್ಪನೆಯನ್ನು ಮತ್ತೊಮ್ಮೆ ಪುನರ್ ವಿಮರ್ಶಗೊಳಪಡಿಸಬೇಕಿದೆ…

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ವಾಲ್ಮೀಕಿ ಜಯಂತಿ ರಜೆ ದಿನಾಂಕ ಬದಲು

ಬೆಂಗಳೂರು: ಮಹರ್ಷಿ ವಾಲ್ಮೀಕಿ ಜಯಂತಿಯ ಸಾರ್ವತ್ರಿಕ ರಜೆ ದಿನಾಂಕವನ್ನು ಬದಲಾಯಿಸಿ ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಈ ಹಿಂದೆ…

9 hours ago

ನೇಯ್ಗೆ ಉದ್ಯಮದ ಕಚ್ಚಾ ವಸ್ತುಗಳ ಬೆಲೆ ಏರಿಕೆಗೆ ಖಂಡನೆ: ನೇಕಾರ ಹೋರಾಟ ಸಮಿತಿಯಿಂದ ಪ್ರತಿಭಟನೆ

ದಿನದಿಂದ ದಿನಕ್ಕೆ ನೇಕಾರಿಕೆ ಮಾಡುವುದು ಕಷ್ಟವಾಗುತ್ತಿದೆ. ಸೀರೆ ಉತ್ಪಾದನೆಯಲ್ಲಿ ಬಳಸುವ ಕಚ್ಚ ಸಾಮಗ್ರಿಗಳ ಬೆಲೆ ಗಗನಕ್ಕೆರುತ್ತಿದೆ ಕೂಡಲೇ ಸರ್ಕಾರ ಮಧ್ಯೆ…

12 hours ago

ಜಗಳ ಬಿಡಿಸಲು ಹೋದ ಪೊಲೀಸರ ಮೇಲೆಯೇ ಹಲ್ಲೆ ಆರೋಪ: 112 ತುರ್ತು ಸೇವೆ ಸಿಬ್ಬಂದಿಗೆ ಗಾಯ: ಇಬ್ಬರು ಆರೋಪಿಗಳು ವಶಕ್ಕೆ

ದೊಡ್ಡಬಳ್ಳಾಪುರ: ಕುಡಿದ ಮತ್ತಿನಲ್ಲಿ ಪರಸ್ಪರ ಜಗಳವಾಡುತ್ತಿದ್ದವರನ್ನು ಬಿಡಿಸಲು ತೆರಳಿದ್ದ 112 ತುರ್ತು ಸೇವೆಯ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ಆರೋಪ…

14 hours ago

ಮ್ಯಾನ್‌ಹೋಲ್ ತುಂಬಿ ಹೆದ್ದಾರಿಗೆ ಹರಿದ ಕೊಳಚೆ ನೀರು

ದೊಡ್ಡಬಳ್ಳಾಪುರ: ನಗರದ ಡಾ. ಬಿ.ಆರ್. ಅಂಬೇಡ್ಕರ್ (ಟಿಬಿ) ವೃತ್ತದಲ್ಲಿ ಮ್ಯಾನ್‌ಹೋಲ್ ತುಂಬಿ ತುಳುಕುತ್ತಿದ್ದು, ಕೊಳಚೆ ನೀರು ಹೆದ್ದಾರಿಗೆ ಹರಿದು ವಾಹನ…

17 hours ago

ಎಸಿ ಕಚೇರಿ ಮೇಲೆ ಲೋಕಾಯುಕ್ತ ದಾಳಿ: ಕಚೇರಿಯ ಕೆಲ ಅಧಿಕಾರಿಗಳು, ಸಿಬ್ಬಂದಿ ನಾಪತ್ತೆ: ಅಧಿಕಾರಿಗಳಿಗಾಗಿ ಕಾಯುತ್ತಿರುವ ಸಾರ್ವಜನಿಕರು

ದೊಡ್ಡಬಳ್ಳಾಪುರ: ನಗರದ ಉಪವಿಭಾಗಾಧಿಕಾರಿ (ಎಸಿ) ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಕಚೇರಿಯಲ್ಲಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಲೋಕಾಯುಕ್ತ…

18 hours ago

ಸ್ಪರ್ಧಾತ್ಮಕ ಜಗತ್ತಿಗೆ ಮಕ್ಕಳನ್ನು ಅಣಿಗೊಳಿಸಿ- ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ನೀಲಕಂಠ ಗವಾಂಕರ್ ಸಲಹೆ

ಜಗತ್ತು ದಿನದಿಂದ ದಿನಕ್ಕೆ ವೇಗವಾಗಿ ಬದಲಾಗುತ್ತಿದ್ದು, ಹೆಚ್ಚುತ್ತಿರುವ ಸ್ಪರ್ಧೆಯನ್ನು ಎದುರಿಸುವ ಸಾಮರ್ಥ್ಯವನ್ನು ಮಕ್ಕಳಲ್ಲಿ ಬೆಳೆಸಲು ಪೋಷಕರು ಹಾಗೂ ಶಿಕ್ಷಕರು ಒಟ್ಟಾಗಿ…

2 days ago