ಹಂದಿ ಓಡಿಸಲು ಇಟ್ಟಿದ್ದ ಮದ್ದನ್ನು ಪಟಾಕಿ ಅಂತ ತಿಳಿದು ಬೆಂಕಿ ಹಚ್ಚಿದ ಬಾಲಕ – ತಲೆ ಛಿದ್ರಗೊಂಡು ಸಾವು.!!

ಕಲಬುರಗಿ: ದೀಪಾವಳಿ ಪಟಾಕಿ ಎಂದು ಭಾವಿಸಿ ಕಾಡುಹಂದಿಗಳನ್ನು ಓಡಿಸಲು ತಂದಿಟ್ಟಿದ್ದ ಸ್ಫೋಟಕ ಮದ್ದಿಗೆ ಬೆಂಕಿ ಹಚ್ಚಿದ ಪರಿಣಾಮ ಭೀಕರ ಸ್ಫೋಟ ಸಂಭವಿಸಿ 15 ವರ್ಷದ ಬಾಲಕನೊಬ್ಬ ಮೃತಪಟ್ಟಿರುವ ದಾರುಣ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಹಂದರಕಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಭೀಮರಾಯ (15) ಮೃತಪಟ್ಟ ಬಾಲಕ. ಕಾಡುಹಂದಿಗಳನ್ನು ಓಡಿಸುವ ಉದ್ದೇಶದಿಂದ ಬಾಲಕನ ತಂದೆ ಮನೆಯಲ್ಲಿ ಸ್ಫೋಟಕ ಮದ್ದನ್ನು ತಂದು ಇಟ್ಟಿದ್ದರು. ಇದನ್ನು ದೀಪಾವಳಿ ಪಟಾಕಿ ಎಂದು ಭಾವಿಸಿದ ಭೀಮರಾಯ ಬೆಂಕಿ ಹಚ್ಚಿದ್ದಾನೆ.

ಬೆಂಕಿ ತಗುಲಿದ ಕ್ಷಣಾರ್ಧದಲ್ಲೇ ಮದ್ದು ಭಾರೀ ಸದ್ದಿನೊಂದಿಗೆ ಸ್ಫೋಟಗೊಂಡಿದ್ದು, ಸ್ಫೋಟದ ತೀವ್ರತೆಗೆ ಬಾಲಕನ ತಲೆ ಹಾಗೂ ಮುಖ ಛಿದ್ರಗೊಂಡು ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ದೀಪಾವಳಿ ಸಂಭ್ರಮದ ನಡುವೆ ನಡೆದ ಈ ದುರಂತ ಗ್ರಾಮದಲ್ಲಿ ಶೋಕದ ವಾತಾವರಣ ಸೃಷ್ಟಿಸಿದೆ. ಘಟನೆ ಸೇಡಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣದ ಕುರಿತು ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!