ಬೆಳಕಿನ ಹಬ್ಬದ ಸಂಭ್ರಮದಲ್ಲಿ ಬಾಲಕನ ಬದುಕಲ್ಲಿ ಕತ್ತಲು: ಪಟಾಕಿ ಸಿಡಿದು 12 ವರ್ಷದ ಹುಡುಗನ ದೃಷ್ಟಿಗೆ ಗಂಭೀರ ಹಾನಿ

ದೊಡ್ಡಬಳ್ಳಾಪುರ: ಬೆಳಕಿನ ಹಬ್ಬದ ಸಂಭ್ರಮದಲ್ಲಿ ಸಿಡಿಸಿದ ಪಟಾಕಿಯೊಂದು 12 ವರ್ಷದ ಬಾಲಕನ ಬದುಕಿನಲ್ಲಿ ಕತ್ತಲು ಮೂಡಿಸಿದೆ. ಬೇರೆಯವರು ಸಿಡಿಸಿದ ರಾಕೆಟ್ ಕಣ್ಣಿಗೆ ಬಡಿದ ಪರಿಣಾಮ ದೊಡ್ಡಬಳ್ಳಾಪುರದ ಸುಜನ್ ಎಂಬ ಬಾಲಕ ಬಲಗಣ್ಣಿನ ಶೇ.80ರಷ್ಟು ದೃಷ್ಟಿ ಕಳೆದುಕೊಂಡಿರುವ ದುರಂತ ಘಟನೆ ನಡೆದಿದೆ.

ನಿನ್ನೆ ಬಾಲಕ ತನ್ನ ಏರಿಯಾದಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಯಾರೋ ಸಿಡಿಸಿದ ರಾಕೆಟ್ ಆಕಸ್ಮಿಕವಾಗಿ ಬಂದು ಆತನ ಬಲಗಣ್ಣಿಗೆ ಬಡಿದಿದೆ. ಪಟಾಕಿಯ ತೀವ್ರ ಹೊಡೆತದಿಂದ ಕಣ್ಣಿಗೆ ಗಂಭೀರ ಗಾಯವಾಗಿದ್ದು, ಬಾಲಕನ ದೃಷ್ಟಿಗೆ ಭಾರೀ ಹಾನಿಯಾಗಿದೆ.

ಕೂಡಲೇ ಬಾಲಕನನ್ನು ಬೆಂಗಳೂರಿನ ಮಿಂಟೋ ಕಣ್ಣಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದರೂ ಬಾಲಕನ ಬಲಗಣ್ಣಿನ ದೃಷ್ಟಿ ಸಂಪೂರ್ಣವಾಗಿ ಮರಳುವ ಸಾಧ್ಯತೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಇತರರ ಸಂಭ್ರಮಕ್ಕಾಗಿ ಸಿಡಿಸುವ ಪಟಾಕಿಗಳು ಅಮಾಯಕರ ಬದುಕಿನಲ್ಲಿ ಎಂತಹ ಕತ್ತಲು ಮೂಡಿಸಬಹುದು ಎಂಬುದಕ್ಕೆ ಈ ಘಟನೆ ಕನ್ನಡಿ ಹಿಡಿದಿದೆ. ಪಟಾಕಿ ಸಿಡಿಸುವಾಗ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು ಹಾಗೂ ಜನವಸತಿ ಪ್ರದೇಶಗಳಲ್ಲಿ ನಿರ್ಲಕ್ಷ್ಯದಿಂದ ಪಟಾಕಿ ಸಿಡಿಸುವುದನ್ನು ನಿಲ್ಲಿಸಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *

error: Content is protected !!