
ದೇವನಹಳ್ಳಿ: ತಡರಾತ್ರಿ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಹಿಟ್ ಅಂಡ್ ರನ್ ಅಪಘಾತದಲ್ಲಿ ದೇವನಹಳ್ಳಿ ಪಟ್ಟಣದ ಇಬ್ಬರು ಪ್ರಾಣ ಸ್ನೇಹಿತರು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ದೇವನಹಳ್ಳಿ ತಾಲ್ಲೂಕಿನ ಅತ್ತಿಬೆಲೆ ಗ್ರಾಮದ ಬಳಿ ನಡೆದಿದೆ.
ದೇವನಹಳ್ಳಿ ಪಟ್ಟಣದ ಮಿಥುನ್ ಮತ್ತು ಕನಕ ಮೃತ ದುರ್ದೈವಿಗಳು. ಮೃತರು ಹೆದ್ದಾರಿಯಲ್ಲಿರುವ ಡಾಬಾಗಳಿಗೆ ಮೊಟ್ಟೆ ಮತ್ತು ಚಿಕನ್ ಪೂರೈಕೆ ಮಾಡುವ ಕೆಲಸ ಮಾಡುತ್ತಿದ್ದರು. ಎಂದಿನಂತೆ ರಾತ್ರಿ ಕಲೆಕ್ಷನ್ಗಾಗಿ ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಹಿಂದಿನಿಂದ ವೇಗವಾಗಿ ಬಂದ ಕಾರು ಬೈಕ್ಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ನಲ್ಲಿದ್ದ ಇಬ್ಬರೂ ರಸ್ತೆಗೆ ಎಸೆಯಲ್ಪಟ್ಟು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಅಪಘಾತ ಸಂಭವಿಸಿದ ಕೂಡಲೇ ಕಾರು ನಿಲ್ಲಿಸದೆ ಚಾಲಕ ವಾಹನ ಸಮೇತ ಪರಾರಿಯಾಗಿದ್ದಾನೆ. ಆದರೆ, ಡಿಕ್ಕಿಯ ರಭಸಕ್ಕೆ ಕಾರಿನ ನಂಬರ್ ಪ್ಲೇಟ್ ಸ್ಥಳದಲ್ಲೇ ಬಿದ್ದಿದ್ದು, ಅದನ್ನೇ ಆಧಾರವಾಗಿಟ್ಟುಕೊಂಡು ವಿಜಯಪುರ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದಾರೆ.
ನಂಬರ್ ಪ್ಲೇಟ್ ಆಧರಿಸಿ ಬೆನ್ನಟ್ಟಿದ ಪೊಲೀಸರು ಚಿಕ್ಕಬಳ್ಳಾಪುರದ ಸಮೀಪ ತೆಲಂಗಾಣ ನೋಂದಣಿಯ ಫಾರ್ಚುನರ್ ಕಾರನ್ನು ಜಪ್ತಿ ಮಾಡಿದ್ದಾರೆ. ಅಪಘಾತಕ್ಕೆ ಕಾರಣವಾದ ಕಾರನ್ನು ವಶಕ್ಕೆ ಪಡೆದಿರುವ ಪೊಲೀಸರು ಪರಾರಿಯಾದ ಚಾಲಕನ ಪತ್ತೆಗೆ ಮುಂದಾಗಿದ್ದಾರೆ.
ಈ ಘಟನೆ ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಇಬ್ಬರು ಸ್ನೇಹಿತರ ದಿಢೀರ್ ಸಾವಿನಿಂದ ದೇವನಹಳ್ಳಿ ಪಟ್ಟಣದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.