
ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿರುವುದಾಗಿ ವರದಿಯಾಗಿದೆ. ಭಾನುವಾರ ಸಂಜೆ ಮುಂಬೈನ ಜುಹು ಪ್ರದೇಶದಲ್ಲಿ ಫುಟ್‌ಬಾಲ್ ಮೈದಾನದಿಂದ ಹೊರಬರುತ್ತಿದ್ದ ವೇಳೆ ಘಟನೆ ನಡೆದಿದ್ದು, ನಟ ಅಪಾಯದಿಂದ ಪಾರಾಗಿದ್ದಾರೆ. ಕಾರಿನ ಚಾಲಕ ಗಾಯಗೊಂಡಿದ್ದಾರೆ.

ದಾಳಿಯ ಹೊಣೆಯನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ಗೆ ಸೇರಿದವನೆಂದು ಹೇಳಿಕೊಂಡಿರುವ ಅನಿಲ್ ಪಂಡಿತ್ ಸಾಮಾಜಿಕ ಜಾಲತಾಣದ ಮೂಲಕ ಹೊತ್ತುಕೊಂಡಿದ್ದಾನೆ ಎನ್ನಲಾಗಿದೆ. ಸಲ್ಮಾನ್ ಖಾನ್ ಅವರೊಂದಿಗೆ ನಂಟು ಹೊಂದಿರುವುದು ಹಾಗೂ ತಮ್ಮ ಸೂಚನೆಗಳನ್ನು ಪಾಲಿಸದಿರುವುದು ದಾಳಿಗೆ ಕಾರಣ ಎಂದು ಆತ ಹೇಳಿಕೊಂಡಿದ್ದಾನೆ. ಆದರೆ, ಈ ಹೇಳಿಕೆಯ ಸತ್ಯಾಸತ್ಯತೆ ಅಧಿಕೃತವಾಗಿ ದೃಢಪಟ್ಟಿಲ್ಲ.

ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಪ್ರಕರಣದ ತನಿಖೆಗಾಗಿ ಮುಂಬೈ ಪೊಲೀಸರು 15 ವಿಶೇಷ ತಂಡಗಳನ್ನು ರಚಿಸಿ ಆರೋಪಿಗಳ ಪತ್ತೆಗೆ ಶೋಧ ನಡೆಸುತ್ತಿದ್ದಾರೆ.