ಬರದ ನಡುವೆ ಜಾನುವಾರುಗಳಿಗೆ ಹಸಿರು ಆಸರೆ: 70 ಎಕರೆಯಲ್ಲಿ ಹಸಿಹುಲ್ಲು ಬೆಳವಣಿಗೆಗೆ ಜಿಪಂ ಕ್ರಮ: ಮತ್ತಷ್ಟು ಸರ್ಕಾರಿ ಜಮೀನು ಹುಲ್ಲುಗಾವಲಾಗಿ ಪರಿವರ್ತನೆ

ಬೆಂಗಳೂರು ಗ್ರಾಮಾಂತರ: ಮಳೆ ಕೈಕೊಟ್ಟ ಪರಿಣಾಮ ಕೃಷಿ ಬೆಳೆಗಳ ಜತೆಗೆ ಜಾನುವಾರುಗಳ ಮೇವಿನ ಮೇಲೂ ಬರದ ಕರಿನೆರಳು ಆವರಿಸುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಮುನ್ನೆಚ್ಚರಿಕೆ ಕ್ರಮಕ್ಕೆ ಮುಂದಾಗಿದೆ.

ಜಿಲ್ಲೆಯ ನಾಲ್ಕೂ ತಾಲೂಕುಗಳ ವ್ಯಾಪ್ತಿಯ ಸರ್ಕಾರಿ ಜಮೀನು, ಗೋಮಾಳ ಸೇರಿದಂತೆ ಲಭ್ಯವಿರುವ ಪ್ರದೇಶಗಳಲ್ಲಿ ಹಸಿಹುಲ್ಲು ಬೆಳೆಯುವ ಮೂಲಕ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಮೇವಿನ ಕೊರತೆ ನೀಗಿಸಲು ಯೋಜನೆ ರೂಪಿಸಲಾಗಿದೆ.

ವಿಬಿಜಿ ರಾಮ್‌ಜೀ ಯೋಜನೆಯಡಿ ಈಗಾಗಲೇ ಜಿಲ್ಲೆಯ ವಿವಿಧೆಡೆ ಸುಮಾರು 70 ಎಕರೆ ಪ್ರದೇಶದಲ್ಲಿ ಹಸಿಹುಲ್ಲು ನಾಟಿ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸರ್ಕಾರಿ ಜಮೀನುಗಳನ್ನು ಹುಲ್ಲುಗಾವಲು ಪ್ರದೇಶಗಳಾಗಿ ಪರಿವರ್ತಿಸಲು ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ. ಮಳೆ ಕೊರತೆಯ ನಡುವೆಯೂ ಜಾನುವಾರುಗಳಿಗೆ ಮೇವು ಒದಗಿಸುವ ಉದ್ದೇಶದಿಂದ ಜಿಲ್ಲಾ ಪಂಚಾಯಿತಿ ಈ ಕ್ರಮಕ್ಕೆ ಆದ್ಯತೆ ನೀಡಿದೆ.

ರಾಗಿ ಬೆಳೆಗೂ ಬರದ ಹೊಡೆತ

ಜಿಲ್ಲೆಯಲ್ಲಿ ಸುಮಾರು 69 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ ನಡೆದಿದ್ದರೂ, ನಿರಂತರ ಮಳೆ ಕೊರತೆಯಿಂದ ಬೆಳೆ ಒಣಗುವ ಆತಂಕ ಎದುರಾಗಿದೆ. ರಾಗಿ ಬೆಳೆ ಕೈಕೊಟ್ಟರೆ ಜಾನುವಾರುಗಳಿಗೆ ದೊರೆಯುವ ಒಣಮೇವಿನ ಪ್ರಮಾಣವೂ ಗಣನೀಯವಾಗಿ ಕುಸಿಯುವ ಸಾಧ್ಯತೆ ಇದೆ.

ಪ್ರಸ್ತುತ ಜಿಲ್ಲಾ ಪಶುಪಾಲನಾ ಇಲಾಖೆಯ ಅಂದಾಜಿನ ಪ್ರಕಾರ ಜಿಲ್ಲೆಯಲ್ಲಿ ಸುಮಾರು 32 ವಾರಗಳಿಗೆ ಸಾಕಾಗುವಷ್ಟು ಮೇವಿನ ದಾಸ್ತಾನು ಇದೆ. ಆದರೆ ಮಳೆ ಕೊರತೆ ಮುಂದುವರಿದರೆ ಈ ಸಂಗ್ರಹದ ಮೇಲಿನ ಒತ್ತಡ ಹೆಚ್ಚಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಹಸಿಹುಲ್ಲಿನ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಜಿಪಂ ಮುಂದಾಗಿದೆ.

ಹುಲ್ಲುಗಾವಲಿಗೆ ನೀರೇ ದೊಡ್ಡ ಸವಾಲು

ಒಂದೆಡೆ ಮೇವಿನ ಕೊರತೆ ತಪ್ಪಿಸಲು ಹಸಿಹುಲ್ಲು ಬೆಳೆಯುವ ಪ್ರಯತ್ನ ನಡೆಯುತ್ತಿದ್ದರೆ, ಮತ್ತೊಂದೆಡೆ ಅದಕ್ಕೆ ಅಗತ್ಯವಾದ ನೀರು ಪೂರೈಸುವುದು ಜಿಲ್ಲಾ ಪಂಚಾಯಿತಿಗೆ ಸವಾಲಾಗಿದೆ. ಬರದ ಪರಿಣಾಮ ಅಂತರ್ಜಲಮಟ್ಟ ಕುಸಿದಿದ್ದು, ಹಲವು ಕೊಳವೆಬಾವಿಗಳಲ್ಲಿ ನೀರಿನ ಲಭ್ಯತೆ ಕಡಿಮೆಯಾಗಿದೆ.

ಈ ಹಿನ್ನೆಲೆಯಲ್ಲಿ ಸರ್ಕಾರಿ ಕೊಳವೆಬಾವಿಗಳ ಜತೆಗೆ ಖಾಸಗಿ ಕೊಳವೆಬಾವಿಗಳಿಂದಲೂ ನೀರು ಪಡೆಯುವ ಸಾಧ್ಯತೆ ಪರಿಶೀಲಿಸಲಾಗುತ್ತಿದೆ. ಅಲ್ಪ ಪ್ರಮಾಣದಲ್ಲಾದರೂ ಮಳೆಯಾದರೆ ಅಂತರ್ಜಲಮಟ್ಟ ಚೇತರಿಸಿಕೊಂಡು ಹುಲ್ಲುಗಾವಲು ನಿರ್ವಹಣೆಗೆ ಅನುಕೂಲವಾಗಬಹುದು. ಆದರೆ ಮಳೆ ಸಂಪೂರ್ಣ ಕೈಕೊಟ್ಟರೆ ಹಸಿಹುಲ್ಲು ಬೆಳೆಸುವುದು ಮತ್ತಷ್ಟು ಸವಾಲಿನ ಕೆಲಸವಾಗಲಿದೆ.

16 ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ

ಮಳೆ ಕೊರತೆಯ ಪರಿಣಾಮ ಜಿಲ್ಲೆಯ 16 ಗ್ರಾಮಗಳಲ್ಲಿ ಈಗಾಗಲೇ ಕುಡಿವ ನೀರಿನ ಸಮಸ್ಯೆ ಉಲ್ಬಣಿಸಿದೆ. ಸಮಸ್ಯೆ ಎದುರಾಗಿರುವ ಗ್ರಾಮಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲು ಜಿಪಂ ಕ್ರಮ ಕೈಗೊಂಡಿದೆ. ಅಗತ್ಯವಿರುವ ಕಡೆ ಹೊಸ ಕೊಳವೆಬಾವಿ ಕೊರೆಸುವುದು ಹಾಗೂ ಖಾಸಗಿ ಕೊಳವೆಬಾವಿಗಳಿಂದ ನೀರು ಖರೀದಿಸುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ.

ಮುಂದಿನ ದಿನಗಳಲ್ಲಿ ಮಳೆ ಕೊರತೆ ಮುಂದುವರಿದರೆ ಇನ್ನಷ್ಟು ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ತಲೆದೋರುವ ಸಾಧ್ಯತೆಯಿದ್ದು, ಈ ಹಿನ್ನೆಲೆಯಲ್ಲಿ 470 ಖಾಸಗಿ ಕೊಳವೆಬಾವಿಗಳನ್ನು ಈಗಾಗಲೇ ಗುರುತಿಸಲಾಗಿದೆ. ಅಗತ್ಯಬಿದ್ದಲ್ಲಿ ರೈತರಿಗೆ ಹಣ ಪಾವತಿಸಿ ನೀರು ಪಡೆಯುವ ವ್ಯವಸ್ಥೆ ಮಾಡುವ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಕುಡಿವ ನೀರು–ಮೇವಿಗೆ ಮೊದಲ ಆದ್ಯತೆ

ಮಳೆ ಕೊರತೆಯ ಹಿನ್ನೆಲೆಯಲ್ಲಿ ಪ್ರಸ್ತುತ ಪರಿಸ್ಥಿತಿಯಲ್ಲಿ ಜನರಿಗೆ ಕುಡಿವ ನೀರು ಹಾಗೂ ಜಾನುವಾರುಗಳಿಗೆ ಮೇವು ಒದಗಿಸುವುದಕ್ಕೆ ಜಿಲ್ಲಾ ಪಂಚಾಯಿತಿ ಹೆಚ್ಚಿನ ಆದ್ಯತೆ ನೀಡಿದೆ. ಒಂದು ಕಡೆ ಕುಡಿವ ನೀರಿನ ಸಮಸ್ಯೆ ಬಗೆಹರಿಸುವ ಸವಾಲು, ಮತ್ತೊಂದೆಡೆ ಜಾನುವಾರುಗಳ ಮೇವಿನ ಕೊರತೆ ತಪ್ಪಿಸುವ ಹೊಣೆಗಾರಿಕೆ ಜಿಪಂ ಮುಂದಿದೆ.

ಮಳೆ ಕೊರತೆಯಿಂದ ರಾಗಿ ಬೆಳೆ ನಷ್ಟವಾಗುವ ಸಾಧ್ಯತೆ ಹೆಚ್ಚಿದ್ದು, ಮುಂದಿನ ದಿನಗಳಲ್ಲಿ ಜಾನುವಾರುಗಳಿಗೆ ಒಣ ಹಾಗೂ ಹಸಿ ಮೇವಿನ ಕೊರತೆ ಎದುರಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಕುಡಿವ ನೀರು ಹಾಗೂ ಜಾನುವಾರುಗಳ ಮೇವಿಗೆ ಆದ್ಯತೆ ನೀಡಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಸುಮಾರು 70 ಎಕರೆ ಪ್ರದೇಶದಲ್ಲಿ ವಿಬಿಜಿ ರಾಮ್‌ಜೀ ಯೋಜನೆಯಡಿ ಹಸಿಹುಲ್ಲು ಬೆಳೆಯಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿ.ಪಂ ಸಿಇಒ ಡಾ. ವಾಸಂತಿ ಅಮರ್ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!