
ದೊಡ್ಡಬಳ್ಳಾಪುರ: ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ಸುಮಾರು 70ರಿಂದ 80 ದಲಿತ ಕುಟುಂಬಗಳು ವಾಸವಿದ್ದು, ಈ ಕುಟುಂಬಗಳಿಗೆ ಪ್ರತ್ಯೇಕ ಸ್ಮಶಾನ ವ್ಯವಸ್ಥೆ ಇಲ್ಲದ ಕಾರಣ ಕೆರೆ ಅಂಗಳದಲ್ಲಿಯೇ ಮೃತರ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತಿದೆ. ಕೆರೆಯ ಹೂಳು ತೆಗೆಯುವ ಸಂದರ್ಭದಲ್ಲಿ ಮೂಳೆಗಳು ಪತ್ತೆಯಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಹೀಗಾಗಿ ದಲಿತ ಕುಟುಂಬಗಳಿಗೆ ಪ್ರತ್ಯೇಕ ಸ್ಮಶಾನ ವ್ಯವಸ್ಥೆ ಕಲ್ಪಿಸಬೇಕೆಂದು ಪ್ರಜಾ ವಿಮೋಚನಾ ಚಳವಳಿಯ ಗಮನಕ್ಕೆ ಗ್ರಾಮಸ್ಥರು ಮನವಿ ಮಾಡಿದ್ದರು.
ಈ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಪರಿಶೀಲನೆ ನಡೆಸುವಂತೆ ಜಿಲ್ಲಾಧಿಕಾರಿಗಳು ತಹಶೀಲ್ದಾರ್ ಅವರಿಗೆ ಸೂಚನೆ ನೀಡಿದ್ದರು. ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ತಹಶೀಲ್ದಾರ್, ಎಡಿಎಲ್ಆರ್ ಹಾಗೂ ಕಂದಾಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಗ್ರಾಮದ ಗೋಮಾಳ ಜಾಗದಲ್ಲಿ ಸುಮಾರು 25 ಗುಂಟೆ ಜಾಗವನ್ನು ಸ್ಮಶಾನಕ್ಕಾಗಿ ಗುರುತಿಸಿ ಮೀಸಲಿರಿಸಿದ್ದರು.
ಆದರೆ, ಇದೀಗ ದಲಿತ ಕುಟುಂಬಗಳ ಅಂತ್ಯಸಂಸ್ಕಾರಕ್ಕಾಗಿ ಮೀಸಲಿಟ್ಟಿರುವ ಜಾಗವನ್ನು ಭೂಗಳ್ಳರು ಕಬಳಿಸಲು ಮುಂದಾಗಿರುವುದು ಅಕ್ಷಮ್ಯ ಅಪರಾಧವಾಗಿದೆ. ಬಡ ದಲಿತ ಕುಟುಂಬಗಳ ಅಂತಿಮ ಸಂಸ್ಕಾರಕ್ಕೂ ಅಡ್ಡಿಪಡಿಸುವ ಇಂತಹ ಕೃತ್ಯವನ್ನು ಸಹಿಸಲು ಸಾಧ್ಯವಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಮಧ್ಯಪ್ರವೇಶಿಸಿ, ಸ್ಮಶಾನ ಜಾಗ ಕಬಳಿಸಲು ಯತ್ನಿಸುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ದಲಿತ ಕುಟುಂಬಗಳಿಗೆ ಮೀಸಲಿಟ್ಟಿರುವ 25 ಗುಂಟೆ ಜಾಗವನ್ನು ಯಾವುದೇ ಅತಿಕ್ರಮಣಕ್ಕೆ ಅವಕಾಶ ನೀಡದೆ ರಕ್ಷಿಸಿ, ಅವರಿಗೆ ಹಸ್ತಾಂತರಿಸಬೇಕು ಎಂದು ಪ್ರಜಾ ವಿಮೋಚನಾ ಚಳವಳಿ (ಪಿವಿಸಿ) ಸ್ವಾಭಿಮಾನ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಹನುಮಣ್ಣ ಗೂಳ್ಯ ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಪ್ರಜಾ ವಿಮೋಚನಾ ಚಳವಳಿ (ಪಿವಿಸಿ) ಸ್ವಾಭಿಮಾನ ರಾಜ್ಯ ಸಮಿತಿ ರಾಜ್ಯಾಧ್ಯಕ್ಷ ಮುನಿ ಆಂಜಿನಪ್ಪ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಗಳಿಗೆ ಮೀಸಲಿಟ್ಟಿರುವ ಸ್ಮಶಾನ ಜಾಗವನ್ನು ಭೂಗಳ್ಳರು ಕಬಳಿಸಲು ಯತ್ನಿಸುತ್ತಿರುವುದನ್ನು ತೀವ್ರವಾಗಿ ಖಂಡಿಸಿದರು. ದಲಿತ ವಿರೋಧಿ ಧೋರಣೆಯನ್ನು ಕೂಡಲೇ ನಿಲ್ಲಿಸಬೇಕು. ಕಂದಾಯ ಇಲಾಖೆ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿ ದಲಿತರಿಗೆ ಅನ್ಯಾಯ ಮಾಡುತ್ತಿದ್ದಾರೆ. ನೈಜ ದಾಖಲೆಗಳನ್ನು ತಿದ್ದಿ, ಬೇರೆಯವರ ಹೆಸರಿಗೆ ಜಮೀನು ವರ್ಗಾಯಿಸುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಸರ್ಕಾರದಿಂದ ದಲಿತರಿಗೆ ಮಂಜೂರು ಮಾಡಿರುವ ಸಾಗುವಳಿ ಜಮೀನು, ಇನಾಮ್ತಿ ಜಮೀನು, ಕಂದಾಯ ಜಮೀನು ಹಾಗೂ ಸ್ಮಶಾನ ಜಮೀನುಗಳನ್ನು ಅಧಿಕಾರಿಗಳೇ ಬಲಾಢ್ಯರಿಗೆ ಮಾರಾಟ ಮಾಡಲು ಅವಕಾಶ ಮಾಡಿಕೊಡುತ್ತಿದ್ದಾರೆ ಎಂಬ ಆರೋಪಗಳಿವೆ. ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಿ, ದಲಿತರಿಗೆ ನ್ಯಾಯ ಒದಗಿಸಬೇಕು. ಇಲ್ಲವಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಭೂಗಳ್ಳರ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ದೊಡ್ಡರಾಜು, ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷ ಮುನಿರಾಜು, ಯುವ ಘಟಕ ಅಧ್ಯಕ್ಷ ಅಭಿಲಾಶ್ ಕುಮಾರ್ ಎಂ, ಮುನಿಲಕ್ಷ್ಮಮ್ಮ, ಅರ್ಜುನ್, ಶ್ರೀನಿವಾಸ್, ರಫೀಕ್ ಸೇರಿದಂತೆ ಇತರರು ಇದ್ದರು.