
ಜನರು ನೀಡಿದ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂಬ ಉದ್ದೇಶದಿಂದ ನನಗಿರುವ ಅಧಿಕಾರವನ್ನು ಬಳಸಿಕೊಂಡು ನಿಮ್ಮ ಸೇವೆ ಮಾಡುತ್ತಿದ್ದೆನೆ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಹಾಗೂ ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.
ತಾಲೂಕು ಆಡಳಿತ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಬೆಳ್ಳೂರು ಸಮೀಪದ ಉಮರ್ ನಗರದಲ್ಲಿ ಶುಕ್ರವಾರ ನಡೆದ ಮೌಲಾನಾ ಆಜಾದ್ ಮಾದರಿ ಶಾಲೆಯ ಕಟ್ಟಡ ಮತ್ತು ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ ಕಟ್ಟಡ ನಿರ್ಮಾಣ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಸಚಿವರು ಮಾತನಾಡಿದರು.
ಜನರು ನನ್ನ ಮೇಲೆ ನಂಬಿಕೆ ಇಟ್ಟು ಅಧಿಕಾರ ನೀಡಿದ್ದಾರೆ. ಅಂತಹ ಅಧಿಕಾರವನ್ನು ನಿಮ್ಮ ಸೇವೆಗೆ ಮುಡಿಪಾಗಿಟ್ಟಿದ್ದೇನೆ. ನಾನು ಬೇರೆಯವರ ರೀತಿ ಇಲ್ಲಸಲ್ಲದ ಮಾತುಗಳನ್ನು ಹೇಳಿಕೊಂಡು ಓಡಾಡುವುದಿಲ್ಲ. ನನಗೆ ಜನರ ಕೆಲಸ ಆಗಬೇಕು ಎಂದರು.
ಬೆಳ್ಳೂರು ಜನರು ನನ್ನ ಕೈ ಹಿಡಿದು ವಿಧಾನಸೌಧದ ಮೆಟ್ಟಿಲು ಹತ್ತಿಸಿದ್ದೀರಿ. ನಿಮ್ಮ ಋಣ ನನ್ನ ಮೇಲಿದೆ. ಹೀಗಾಗಿ ಕಾಂಗ್ರೆಸ್ ಸರ್ಕಾರವು ಗ್ಯಾರಂಟಿಗಳೊಂದಿಗೆ ನಿಮಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ನೀಡಲಿದೆ. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ಭರವಸೆ ನೀಡಿದರು.
ಈ ಗ್ರಾಮದಲ್ಲಿ 10 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇನೆ. ನನ್ನ ಕೈಲಾದಷ್ಟು ಇನ್ನಷ್ಟು ಯೋಜನೆಗಳನ್ನು ತರಲಾಗುವುದು. ಈ ಭಾಗದ ಬಹುದಿನಗಳ ಬೇಡಿಕೆಯಾದ ಪಡಿತರ ಕೇಂದ್ರವನ್ನು (ನ್ಯಾಯಬೆಲೆ ಅಂಗಡಿ) ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದರು.
*ಕೆಲಸ ಮಾಡಲು ಮನಸ್ಸಿದ್ದರೆ ಮಾಡಿ, ಇಲ್ಲ ಜಾಗ ಖಾಲಿ ಮಾಡಿ*
ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕಳೆದ ಒಂದು ವರ್ಷದಿಂದ ಕಾಮಗಾರಿ ಪ್ರಾರಂಭಿಸದ ಲ್ಯಾಂಡ್ ಆರ್ಮಿ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವರು, ಒಂದು ವರ್ಷದಿಂದ ಕಾಮಗಾರಿ ಏಕೆ ಪ್ರಾರಂಭಿಸಿಲ್ಲ? ಪ್ಲಾನ್ ಡಿಸೈನ್ ಬದಲಿಸಲು ಇಷ್ಟು ಸಮಯ ಬೇಕಾ? ನಿಮಗೆ ಕೆಲಸ ಮಾಡುವ ಮನಸ್ಸಿದ್ದರೆ ಮಾಡಿ, ಇಲ್ಲ ಜಾಗ ಖಾಲಿ ಮಾಡಿ. ಕೂಡಲೇ ಕಾಮಗಾರಿ ಪ್ರಾರಂಭಿಸಿ ಎಂದು ಖಡಕ್ ಸೂಚನೆ ನೀಡಿದರು.
ಬಳಿಕ ದೇವಿಹಳ್ಳಿ ಗೇಟ್ ಸಮೀಪ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ಶಾಲೆಯ ಕಟ್ಟಡ ನಿರ್ಮಾಣ ಮತ್ತು ಯರಗನಹಳ್ಳಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.
ಈ ವೇಳೆ ಡಿಸಿಸಿ ಬ್ಯಾಂಕ್ ನಿರ್ದೇಶಕ ದಿನೇಶ್, ಗ್ಯಾರಂಟಿ ಯೋಜನೆಯ ತಾಲೂಕು ಅಧ್ಯಕ್ಷ ಮೂಡಲಪ್ಪ, ದಲಿತ ಮುಖಂಡ ಶಿವಣ್ಣ, ಜಾಮಿಯಾ ಮಸೀದಿ ಅಧ್ಯಕ್ಷ ಸುಲೇಮಾನ್, ಮುಖಂಡರಾದ ಯಾಸೀನ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಮಧುಶ್ರೀ ಮುಂತಾದವರು ಇದ್ದರು.