ಹಾಲಿನ ಬೆಲೆ ಏರಿಕೆ ವಿರೋಧಿಸುವವರಿಗೆ ನೈತಿಕತೆ ಇಲ್ಲ-ರೈತಪರ ನಿರ್ಧಾರಕ್ಕೆ ರಾಜಕೀಯ ಬಣ್ಣ ಬೇಡ – ಬಿ.ಸಿ. ಆನಂದ್ ಕುಮಾರ್

ದೊಡ್ಡಬಳ್ಳಾಪುರ: ರೈತರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಪ್ರತಿ ಲೀಟರ್ ಹಾಲಿನ ದರವನ್ನು 8 ರೂಪಾಯಿ ಹೆಚ್ಚಿಸಿರುವ ನಿರ್ಧಾರವನ್ನು ವಿರೋಧಿಸುವುದು ಸರಿಯಲ್ಲ. ರೈತರಿಗೆ ಉತ್ತಮ ಬೆಲೆ ದೊರೆತರೆ ಮಾತ್ರ ರಾಜ್ಯ ಮತ್ತು ದೇಶದ ಪ್ರಗತಿ ಸಾಧ್ಯ. ಹೀಗಾಗಿ ರೈತಪರ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸುವ ಬದಲು ಎಲ್ಲರೂ ಸಹಕರಿಸಬೇಕು ಎಂದು ಬಮುಲ್ ನಿರ್ದೇಶಕ ಬಿ.ಸಿ. ಆನಂದ್ ಕುಮಾರ್ ವಿರೋಧ ಪಕ್ಷದ ಮುಖಂಡರಿಗೆ ಮನವಿ ಮಾಡಿದರು.

ನಗರದ ಬಮುಲ್ ಶಿಬಿರ ಕಚೇರಿಯಲ್ಲಿ ಮಾತನಾಡಿದ ಅವರು, ರೈತರ ಪರವಾಗಿ ರಾಜ್ಯ ಸರ್ಕಾರ ತೆಗೆದುಕೊಂಡಿರುವ ಈ ನಿರ್ಧಾರ ಐತಿಹಾಸಿಕವಾಗಿದೆ. ಈ ಹಿಂದೆ ಯಾವುದೇ ಸರ್ಕಾರ ಇಂತಹ ದೊಡ್ಡ ಪ್ರಮಾಣದ ಬೆಲೆ ಹೆಚ್ಚಳ ಮಾಡಿಲ್ಲ. ಬರಗಾಲದ ಸಂದರ್ಭದಲ್ಲಿ ಹಾಲಿನ ದರ ಏರಿಕೆಯಾಗಿರುವುದು ರೈತರಿಗೆ ಸಂಜೀವಿನಿ ಸಿಕ್ಕಂತಾಗಿದೆ. ಈ ಮಟ್ಟದ ಪ್ರತಿಫಲ ದೊರೆಯುವಲ್ಲಿ ತಾಲೂಕು ರೈತ ಸಂಘದ ಹೋರಾಟವೂ ಪ್ರಮುಖ ಪಾತ್ರ ವಹಿಸಿದೆ ಎಂದರು.

ರೈತರ ಪರವಾಗಿ ನಿರ್ಧಾರ ಕೈಗೊಂಡ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ರೈತರ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ. ರಾಜ್ಯದಾದ್ಯಂತ 25 ಲಕ್ಷಕ್ಕೂ ಹೆಚ್ಚು ರೈತ ಕುಟುಂಬಗಳು ಈ ನಿರ್ಧಾರದಿಂದ ಸಂತಸಗೊಂಡಿವೆ. ಗ್ರಾಹಕರಿಗೆ ಸ್ವಲ್ಪ ಅನಾನುಕೂಲವಾದರೂ ರೈತರ ಹಿತದೃಷ್ಟಿಯಿಂದ ಸಹಕಾರ ನೀಡಬೇಕು ಎಂದು ಹೇಳಿದರು.

ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆಯಾದಾಗ ಮೌನವಾಗಿರುವ ಜನರು, ರೈತರ ವಿಚಾರದಲ್ಲಿ ಮಾತ್ರ ಟೀಕೆ ಮಾಡುತ್ತಿರುವುದು ಸರಿಯಲ್ಲ. ಸಿಲಿಂಡರ್ ಬೆಲೆ ಹೆಚ್ಚಾದಾಗ ಹೋಟೆಲ್‌ಗಳಲ್ಲಿ ಕಾಫಿ, ಟೀ ದರವನ್ನು ಐದು ರೂಪಾಯಿಗಳಷ್ಟು ಹೆಚ್ಚಿಸಲಾಗುತ್ತದೆ. ಆದರೆ ಹಾಲಿನ ಬೆಲೆ ಏರಿಕೆಯಾದಾಗ ಮಾತ್ರ ವಿರೋಧ ವ್ಯಕ್ತಪಡಿಸಲಾಗುತ್ತಿದೆ. ರಾಜಕೀಯ ಲಾಭಕ್ಕಾಗಿ ರೈತರ ಹಿತಕ್ಕೆ ಧಕ್ಕೆ ತರುವ ರೀತಿಯಲ್ಲಿ ಹೋರಾಟ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಹಸುಗಳನ್ನು ಸಾಕಿ ಹೈನುಗಾರಿಕೆ ಮಾಡುವುದು ಸುಲಭದ ಕೆಲಸವಲ್ಲ. ಪಶು ಆಹಾರ, ಹಿಂಡಿ, ಫೀಡ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ನಿರಂತರವಾಗಿ ಹೆಚ್ಚುತ್ತಿದ್ದು, ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ರೈತರ ಕಷ್ಟವನ್ನು ಅರಿಯದೆ ಹಾಲಿನ ದರ ಏರಿಕೆಯನ್ನು ವಿರೋಧಿಸುವ ರಾಜಕೀಯ ನಾಯಕರಿಗೆ ರೈತರ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ ಎಂದು ಪ್ರಶ್ನಿಸಿದರು.

ದೊಡ್ಡ ದೊಡ್ಡ ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ದೇಶ ತೊರೆದವರ ಸಾಲಮನ್ನಾ ಮಾಡಿದಾಗ, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಅಕ್ಕಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾದಾಗ ಪ್ರತಿಭಟನೆ ನಡೆಸದವರು ಈಗ ಹಾಲಿನ ಬೆಲೆ ಏರಿಕೆ ವಿಚಾರದಲ್ಲಿ ಮಾತ್ರ ವಿರೋಧ ವ್ಯಕ್ತಪಡಿಸುತ್ತಿರುವುದು ರಾಜಕೀಯ ಪ್ರೇರಿತವಾಗಿದೆ. ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಯ ಬಗ್ಗೆಯೂ ವಿರೋಧ ಪಕ್ಷಗಳು ಧ್ವನಿ ಎತ್ತಲಿ. ರೈತರು ಅಭಿವೃದ್ಧಿಯಾದರೆ ಮಾತ್ರ ರಾಜ್ಯ ಮತ್ತು ದೇಶ ಸುಭಿಕ್ಷವಾಗಿರಲು ಸಾಧ್ಯ. ಆದ್ದರಿಂದ ರೈತರ ಪರವಾದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಬಾರದು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ರೈತ ಮುಖಂಡ ಸತೀಶ್, ಮುಖಂಡರಾದ ಮಂಜುನಾಥ, ಕುಮಾರ್, ರವಿಕುಮಾರ್, ಶಿವಪುರ ನಾಗರಾಜು, ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!