ಬರ ಘೋಷಣೆ ಬಳಿಕ ಸಿಎಂಗೆ ಮನವಿ: ಮಾಜಿ ಶಾಸಕ ಟಿ.ವೆಂಕಟರಮಣಯ್ಯ ನಡೆಗೆ ನಗರಸಭೆ ಉಪಾಧ್ಯಕ್ಷ ಬಂತಿ ವೆಂಕಟೇಶ್ ತರಾಟೆ

ದೊಡ್ಡಬಳ್ಳಾಪುರ: 2026ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕನ್ನು ಬರಪೀಡಿತ ತಾಲ್ಲೂಕುಗಳ ಪಟ್ಟಿಯಿಂದ ಕೈಬಿಟ್ಟ ಹಿನ್ನೆಲೆಯಲ್ಲಿ, ಮರು ಜಂಟಿ ಬೆಳೆ ಹಾನಿ ಸಮೀಕ್ಷೆ ನಡೆಸಿ ತಾಲ್ಲೂಕನ್ನು ಬರಪೀಡಿತ ಪಟ್ಟಿಗೆ ಸೇರ್ಪಡೆಗೊಳಿಸುವಂತೆ ಶಾಸಕ ಧೀರಜ್ ಮುನಿರಾಜ್ ಅವರು ಆಗಸ್ಟ್ 27ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕಂದಾಯ ಸಚಿವ ಡಾ. ಪರಮೇಶ್ವರ್ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್. ಮುನಿಯಪ್ಪ ಅವರಿಗೆ ಮನವಿ ಸಲ್ಲಿಸಿದ್ದರು ಎಂದು ನಗರಸಭೆ ಉಪಾಧ್ಯಕ್ಷ ಬಂತಿ ವೆಂಕಟೇಶ್ ತಿಳಿಸಿದ್ದಾರೆ.

ಶಾಸಕರ ಮನವಿಯ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 22ರಂದು ಪ್ರಕಟಿಸಲಾದ ಬರಪೀಡಿತ ತಾಲ್ಲೂಕುಗಳ ಪಟ್ಟಿಯಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕು ಸೇರ್ಪಡೆಯಾಗಿದೆ. ಹೀಗಿರುವಾಗ ಇದೇ ವಿಚಾರವಾಗಿ ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಅವರು ಮತ್ತೊಮ್ಮೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿರುವುದು ಅನಗತ್ಯ ಕ್ರಮವಾಗಿದೆ ಎಂದು ಅವರು ಟೀಕಿಸಿದ್ದಾರೆ.

ಈಗಾಗಲೇ ಸರ್ಕಾರದ ಮಟ್ಟದಲ್ಲಿ ಪರಿಹಾರ ಕಂಡಿರುವ ವಿಚಾರವನ್ನು ಪುನಃ ಮನವಿ ಸಲ್ಲಿಸುವ ಮೂಲಕ ರಾಜಕೀಯ ಪ್ರಚಾರಕ್ಕೆ ಬಳಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ಬಂತಿ ವೆಂಕಟೇಶ್ ಆರೋಪಿಸಿದರು.

ಸಮಸ್ಯೆ ಪರಿಹಾರಕ್ಕೆ ನೈಜ ಪ್ರಯತ್ನಗಳ ಬದಲು ಪುನರಾವರ್ತಿತ ಮನವಿಗಳ ಮೂಲಕ ಜನರಲ್ಲಿ ಗೊಂದಲ ಸೃಷ್ಟಿಸುವುದನ್ನು ನಿಲ್ಲಿಸಬೇಕು. ಜನರ ಹಿತದೃಷ್ಟಿಯಿಂದ ಪ್ರಾಮಾಣಿಕ ಹಾಗೂ ಪರಿಣಾಮಕಾರಿ ಕ್ರಮಗಳಿಗೆ ಆದ್ಯತೆ ನೀಡಬೇಕು. ಪ್ರಚಾರ ಪಡೆಯುವ ಉದ್ದೇಶದಿಂದ ಇಂತಹ ಪ್ರಯತ್ನಗಳನ್ನು ಇನ್ನಾದರೂ ನಿಲ್ಲಿಸುವುದು ಒಳಿತು ಎಂದು ಅವರು ಹೇಳಿದರು.

ಬರಪೀಡಿತ ತಾಲ್ಲೂಕುಗಳ ಪಟ್ಟಿಗೆ ದೊಡ್ಡಬಳ್ಳಾಪುರ ಸೇರ್ಪಡೆಯಾದ ಬಳಿಕವೂ ಮತ್ತೆ ಮನವಿ ಸಲ್ಲಿಸುವುದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಮಾಜಿ ಶಾಸಕರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಜನರನ್ನು ದಿಕ್ಕುತಪ್ಪಿಸುವಂತಹ ಹೇಳಿಕೆ ಹಾಗೂ ಕ್ರಮಗಳಿಗೆ ಮುಂದಾಗಬಾರದು. ತಾಲ್ಲೂಕಿನ ಪರವಾಗಿ ಶಾಸಕ ಧೀರಜ್ ಮುನಿರಾಜ್ ಅವರು ಸರ್ಕಾರದ ಗಮನ ಸೆಳೆದು ಕೆಲಸ ಮಾಡಿದ್ದಾರೆ. ಆದರೆ, ವಿಷಯ ಬಗೆಹರಿದ ಬಳಿಕ ಅದರ ಶ್ರೇಯಸ್ಸು ಪಡೆಯಲು ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಅವರು ಮುಂದಾಗುತ್ತಿರುವುದು ಸರಿಯಲ್ಲ ಎಂದು ಬಂತಿ ವೆಂಕಟೇಶ್ ಹೇಳಿದರು.

Leave a Reply

Your email address will not be published. Required fields are marked *

error: Content is protected !!