ಸುಮಾರು 500 ಕೋಟಿ ಮೌಲ್ಯದ ಜಮೀನು ಖಾತೆ ಬದಲಾವಣೆ ಆರೋಪ: ದೊಡ್ಡಬಳ್ಳಾಪುರ ಉಪವಿಭಾಗದ ಹಿಂದಿನ ಎಸಿ ದುರ್ಗಾಶ್ರೀ ಹಾಗೂ ಕಚೇರಿ ಸಿಬ್ಬಂದಿ ವಿರುದ್ದ ಲೋಕಾಯುಕ್ತ ಸ್ವಯಂಪ್ರೇರಿತ ಪ್ರಕರಣ ದಾಖಲು

ದೇವನಹಳ್ಳಿ ತಾಲೂಕಿನ ಸಣ್ಣ ಅಮಾನಿಕೆರೆ, ಬೈಚಾಪುರ ಹಾಗೂ ಪ್ರಸನ್ನಹಳ್ಳಿ ಗ್ರಾಮಗಳ 62.20 ಎಕರೆ ಖಾಸಗಿ ಜಮೀನಿನ ಖಾತೆ ಬದಲಾವಣೆಯಲ್ಲಿ ಅಕ್ರಮ ನಡೆದಿರುವ ಆರೋಪದ ಹಿನ್ನೆಲೆಯಲ್ಲಿ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಸ್ವಯಂಪೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ದೊಡ್ಡಬಳ್ಳಾಪುರ ಉಪವಿಭಾಗದ ಹಿಂದಿನ ಉಪವಿಭಾಗಾಧಿಕಾರಿ ದುರ್ಗಾಶ್ರೀ ಹಾಗೂ ಕಚೇರಿ ಸಿಬ್ಬಂದಿ ನಕಲಿ ಆದೇಶಗಳನ್ನು ಸೃಷ್ಟಿಸಿ, ಭೂಮಿ ತಂತ್ರಾAಶದಲ್ಲಿ ಅಪ್‌ಲೋಡ್ ಮಾಡಿ ಖಾತೆ ಬದಲಾವಣೆಗೆ ಅನುಮೋದನೆ ನೀಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ತಿಳಿದುಬಂದಿದೆ.

ಲೋಕಾಯುಕ್ತ ಪೊಲೀಸ್ ವರದಿ ಪ್ರಕಾರ, ಸಂಬಂಧಿತ ಜಮೀನಿನ ಉಪನೋಂದಣಾಧಿಕಾರಿ ಮೌಲ್ಯ 103.68 ಕೋಟಿಯಷ್ಟಿದ್ದು, ಪ್ರತಿ ಎಕರೆಗೆ 8 ಕೋಟಿ ಎಂದು ಅಂದಾಜಿಸಿದರೆ ಪ್ರಸ್ತುತ ಮಾರುಕಟ್ಟೆ ಮೌಲ್ಯ ಸುಮಾರು 500 ಕೋಟಿ ಎಂದು ಅಂದಾಜಿಸಲಾಗಿದೆ.

ಶೋಧನೆ ವೇಳೆ ಪ್ರಕರಣ ಪತ್ತೆ

2026ರ ಮೇ 7ರಂದು ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಕಚೇರಿ ಹಾಗೂ ದೇವನಹಳ್ಳಿ ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಲೋಕಾಯುಕ್ತ ಶೋಧನೆ ವೇಳೆ, ನಕಲಿ ಆದೇಶಗಳಲ್ಲಿ ಉಲ್ಲೇಖಿಸಿದ್ದ ಎಲ್‌ಆರ್‌ಎಫ್ ಹಾಗೂ ಹೈಕೋರ್ಟ್ ಪ್ರಕರಣ ಸಂಖ್ಯೆಗಳು ಸಂಬಂಧಿತ ಸರ್ವೇ ನಂಬರ್‌ಗಳಿಗೆ ಹೊಂದಿಕೆಯಾಗದಿರುವುದು ಪತ್ತೆಯಾಗಿದೆ. ಅಲ್ಲದೆ, ಇ-ಆಫೀಸ್‌ನಲ್ಲಿ ಸೃಷ್ಟಿಯಾಗದ ಆದೇಶಗಳನ್ನು ಇ-ಆಫೀಸ್ ಆದೇಶಗಳಂತೆ ಬಳಸಿರುವುದು ತನಿಖೆಯಲ್ಲಿ ಕಂಡುಬಂದಿದೆ ಎನ್ನಲಾಗಿದೆ.

ಒಟ್ಟು 84 ಸರ್ವೆ ನಂಬರ್‌ಗಳಿಗೆ ಸೇರಿದ 62.20 ಎಕರೆ ಜಮೀನಿನ ಪೈಕಿ 72 ಸರ್ವೆ ನಂಬರ್‌ಗಳಿಗೆ ಸೇರಿದ 57 ಎಕರೆ 4.08 ಗುಂಟೆ ಜಮೀನಿನ ಖಾತೆ ಬದಲಾವಣೆಯಾಗಿರುವುದು ಪತ್ತೆಯಾಗಿದೆ.

ಬೈಚಾಪುರ ಮತ್ತು ಸಣ್ಣ ಅಮಾನಿಕೆರೆ ಗ್ರಾಮದ 06 ಸರ್ವೆ ನಂಬರ್‌ಗಳ ಒಟ್ಟು 3 ಎಕರೆ 1.08 ಗುಂಟೆ ವಿಸ್ತೀರ್ಣದ ಜಮೀನಿಗೆ ತಕರಾರು ಪ್ರಕರಣ ದಾಖಲಾತಿ ಖಾತೆ ಬದಲಾವಣೆಯಾಗದೆ ಇರುವುದು ಹಾಗೂ ಬೈಚಾಪುರ ಗ್ರಾಮದ 06 ಸರ್ವೆ ನಂಬರ್‌ಗಳ ಒಟ್ಟು 2 ಎಕರೆ 16 ಗುಂಟೆ ಜಮೀನಿಗೆ ಸಂಬಂಧಿಸಿದಂತೆ ಉಪವಿಭಾಗಾಧಿಕಾರಿಗಳ ಆದೇಶದಲ್ಲಿ ನಮೂದಾಗದೆ ಖಾತೆಯಾಗಿರುವುದು ಕಂಡುಬಂದಿದೆ.

ಆಕ್ಷೇಪಣೆ ಸಲ್ಲಿಸಲು ಸೂಚನೆ

ನಕಲಿ ಆದೇಶಗಳನ್ನು ಭೂಮಿ ತಂತ್ರಾಂಶಕ್ಕೆ ಅಪ್‌ಲೋಡ್ ಮಾಡಿ, ಉಪವಿಭಾಗಾಧಿಕಾರಿಗಳ ಲಾಗಿನ್‌ಗೆ ಬಯೋಮೆಟ್ರಿಕ್ ಮೂಲಕ ಪ್ರವೇಶಿಸಿ ಡಿಜಿಟಲ್ ಸಹಿ ಬಳಸಿ ಖಾತೆ ಬದಲಾವಣೆಗೆ ಅನುಮೋದನೆ ನೀಡಲಾಗಿದೆ ಎಂಬ ಆರೋಪವೂ ತನಿಖೆಯಲ್ಲಿ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದಿನ ಉಪವಿಭಾಗಾಧಿಕಾರಿ ದುರ್ಗಾಶ್ರೀ ಹಾಗೂ ಉಪವಿಭಾಗಾಧಿಕಾರಿ ಕಚೇರಿಯ ವಿಷಯ ನಿರ್ವಾಹಕ ಮನೋಜ್ ಎಸ್. ಅವರಿಗೆ ಸೆ.22ರಂದು ಕಚೇರಿಗೆ ಹಾಜರಾಗಿ ತಮ್ಮ ಆಕ್ಷೇಪಣೆ ಸಲ್ಲಿಸುವಂತೆ ಉಪಲೋಕಾಯುಕ್ತರು ಸೂಚನೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!