
ಗೌರಿಬಿದನೂರು: ಮನೆಯಲ್ಲಿ ಒಂಟಿಯಾಗಿದ್ದ ವೃದ್ಧೆಯ ಮೇಲೆ ಹಲ್ಲೆ ನಡೆಸಿ ಕೊಲೆಗೈದು, ಚಿನ್ನದ ಓಲೆಗಳನ್ನು ಕಳವು ಮಾಡಿದ್ದ ಪ್ರಕರಣವನ್ನು ಮಂಚೇನಹಳ್ಳಿ ಪೊಲೀಸರು ಕೇವಲ ಒಂದು ದಿನದಲ್ಲೇ ಭೇದಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜೂನ್ 18ರಂದು ಗೌರಿಬಿದನೂರು ತಾಲೂಕಿನ ಬಸವನಹಳ್ಳಿ ಗ್ರಾಮದಲ್ಲಿ 80 ವರ್ಷದ ಸುಬ್ಬಮ್ಮ ಎಂಬ ವೃದ್ಧೆ ಮನೆಯಲ್ಲಿ ಒಂಟಿಯಾಗಿದ್ದ ವೇಳೆ ದುಷ್ಕರ್ಮಿಯೊಬ್ಬ ಹಲ್ಲೆ ನಡೆಸಿ, ಕಿವಿಯಲ್ಲಿದ್ದ ಚಿನ್ನದ ಓಲೆಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಸುಬ್ಬಮ್ಮ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.
ಮೃತರ ಮೊಮ್ಮಗ ನೀಡಿದ ದೂರಿನ ಮೇರೆಗೆ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡ ಗೌರಿಬಿದನೂರು ವೃತ್ತದ ವೃತ್ತ ನಿರೀಕ್ಷಕ ಅಂಜನ್ ಕುಮಾರ್ ನೇತೃತ್ವದ ತಂಡವು ಕಾರ್ಯಾಚರಣೆ ನಡೆಸಿ, ಘಟನೆ ನಡೆದ ಒಂದೇ ದಿನದಲ್ಲಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದೆ.

ಬಂಧಿತ ಆರೋಪಿಯನ್ನು ಕುಮಾರ್ ಬಿ.ಜಿ (29) ಎಂದು ಗುರುತಿಸಲಾಗಿದೆ. ಆತ ಬಸವನಹಳ್ಳಿ ಗ್ರಾಮದ ನಿವಾಸಿಯಾಗಿದ್ದು, ಆಟೋ ಚಾಲಕರಾಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ಅಧೀಕ್ಷಕ ಕುಶಾಲ್ ಚೌಕ್ಸೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಗನ್ನಾಥ ರೈ ಹಾಗೂ ಪೊಲೀಸ್ ಉಪಾಧೀಕ್ಷಕ ಪ್ರಕಾಶ್ ಆರ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಪ್ರಕರಣವನ್ನು ಶೀಘ್ರವಾಗಿ ಭೇದಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಹಿರಿಯ ಅಧಿಕಾರಿಗಳು ಅಭಿನಂದಿಸಿದ್ದಾರೆ.
ಈ ಸಂದರ್ಭದಲ್ಲಿ ಸಾರ್ವಜನಿಕರು ಮನೆಯಲ್ಲಿ ವಯೋವೃದ್ಧರನ್ನು ಒಂಟಿಯಾಗಿ ಬಿಟ್ಟು ಹೋಗದಂತೆ ಹಾಗೂ ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಜಿಲ್ಲಾ ಪೊಲೀಸ್ ಇಲಾಖೆ ಮನವಿ ಮಾಡಿದೆ.