
ದೇವನಹಳ್ಳಿ: ಹೊರ ರಾಜ್ಯದ ಕಾರ್ಮಿಕರನ್ನು ಗುರಿಯಾಗಿಸಿಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಡಿ ಇಬ್ಬರನ್ನು ಚನ್ನರಾಯಪಟ್ಟಣ ಪೊಲೀಸರು ಬಂಧಿಸಿ, ಅವರಿಂದ 3 ಕೆಜಿ 610 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ದೇವನಹಳ್ಳಿ ತಾಲ್ಲೂಕಿನ ಪೋಲನಹಳ್ಳಿ ಕೆಐಎಡಿಬಿ ಪ್ರದೇಶದ ಫ್ಯಾಕ್ಟರಿಯೊಂದರ ಸಮೀಪ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಸಮೀರ್ (30) ಹಾಗೂ ಪ್ರಜ್ವಲ್ (19) ಎಂದು ಗುರುತಿಸಲಾಗಿದೆ. ಇವರು ಹೊರ ರಾಜ್ಯಗಳಿಂದ ಕೆಲಸಕ್ಕೆ ಬಂದ ಕಾರ್ಮಿಕರನ್ನು ಗುರಿಯಾಗಿಸಿಕೊಂಡು ಗಾಂಜಾ ಮಾರಾಟ ನಡೆಸುತ್ತಿದ್ದರು ಎನ್ನಲಾಗಿದೆ.

ಆರೋಪಿಗಳ ವಿರುದ್ಧ ಮಾದಕ ದ್ರವ್ಯ ಮತ್ತು ಮನೋವಿಕೃತ ಪದಾರ್ಥಗಳ ನಿಯಂತ್ರಣ ಕಾಯ್ದೆ (NDPS Act) ಅಡಿಯಲ್ಲಿ ಪ್ರಕರಣ ದಾಖಲಿಸಿ, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.
ದೊಡ್ಡಬಳ್ಳಾಪುರ ಡಿವೈಎಸ್ಪಿ ಪಾಂಡುರಂಗ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಚನ್ನರಾಯಪಟ್ಟಣ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕ ಪ್ರಕಾಶ್ ನೇತೃತ್ವದಲ್ಲಿ ಎಎಸ್ಐ ನಾರಾಯಣಸ್ವಾಮಿ ಹಾಗೂ ಸಿಬ್ಬಂದಿಗಳಾದ ಜೈ ಭೀಮ್, ಸಂಜು ವಾಲೇಕರ್ ಮತ್ತು ಶ್ರೀಧರ್ ಕುದುರಿ ಭಾಗವಹಿಸಿದ್ದರು.