ಬಂಗಾರದ ಕಿವಿ ಓಲೆಗಳಿಗಾಗಿ 80 ವರ್ಷದ ವೃದ್ಧೆಯ ಭೀಕರ ಕೊಲೆ

ಚಿಕ್ಕಬಳ್ಳಾಪುರ: ಬಂಗಾರದ ಕಿವಿ ಓಲೆಗಳಿಗಾಗಿ 80 ವರ್ಷದ ವೃದ್ಧೆಯನ್ನು ಹತ್ಯೆ ಮಾಡಿ, ಕಿವಿಗಳನ್ನು ಕತ್ತರಿಸಿ ಆಭರಣ ಕಳವು ಮಾಡಿರುವ ಅಮಾನುಷ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಬಸವನಪುರ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ದೊಡ್ಡಬಳ್ಳಾಪುರ ತಾಲೂಕಿನ‌ ಕೆಳಗಿನಜೂಗಾನಹಳ್ಳಿ ಗ್ರಾಮದ ಸುಬ್ಬಮ್ಮ (80) ಎಂದು ಗುರುತಿಸಲಾಗಿದೆ.

ಇತ್ತೀಚೆಗೆ ಕೆಳಗಿನಜೂಗಾನಹಳ್ಳಿ ಗ್ರಾಮದಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಬಸವನಪುರ ಗ್ರಾಮದಲ್ಲಿರುವ ಮಗಳ ಮನೆಗೆ ಹೋಗಿದ್ದರು. ಮಗಳ ಮನೆಯಲ್ಲಿ ಒಂಟಿಯಾಗಿದ್ದ ವೇಳೆ ದುಷ್ಕರ್ಮಿಗಳು ಮನೆಗೆ ನುಗ್ಗಿ, ಅವರ ತಲೆಗೆ ಬಲವಾಗಿ ಹೊಡೆದು ಹತ್ಯೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಬಳಿಕ ಎರಡೂ ಕಿವಿಗಳನ್ನು ಕತ್ತರಿಸಿ, ಕಿವಿಯಲ್ಲಿದ್ದ ಬಂಗಾರದ ಓಲೆಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಕೆಲಸಕ್ಕೆ ಹೋಗಿದ್ದ ಸುಬ್ಬಮ್ಮ ಅವರ ಮಗಳು ಮನೆಗೆ ಬಂದಾಗ ವೃದ್ಧೆ ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತಕ್ಷಣ ಅವರನ್ನು ಗೌರಿಬಿದನೂರು ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸುಬ್ಬಮ್ಮ ಮೃತಪಟ್ಟಿದ್ದಾರೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಈ ಘಟನೆ ಮಂಚೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಎಸ್ಪಿ ಹಾಗೂ ಎಎಸ್ಪಿ,‌ ಮಂಚೇನಹಳ್ಳಿ ಪೊಲೀಸ್ ಠಾಣೆಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಕೊಲೆ ನಡೆಸಿ ಪರಾರಿಯಾಗಿರುವ ಆರೋಪಿಗಳ ಪತ್ತೆಗಾಗಿ ವಿಶೇಷ ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ.

ಈ ಘಟನೆ ಗೌರಿಬಿದನೂರು ತಾಲೂಕಿನಲ್ಲಿ ಆತಂಕದ ವಾತಾವರಣ ಸೃಷ್ಟಿಸಿದ್ದು, ಗ್ರಾಮಸ್ಥರು ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!