
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಮನೆ ಕಳ್ಳತನ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿ, ಬಿಹಾರ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ ₹11.42 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಹಣ ಹಾಗೂ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಜೂನ್ 15ರಂದು ಸರಳಾ ಚಂದ್ರಶೇಖರ್ ಅವರು ತಮ್ಮ ಮನೆಯಲ್ಲಿ ಚಿನ್ನದ ಮಾಂಗಲ್ಯ ಸರ, ನೆಕ್‌ಲೇಸ್, ನಗದು ಹಣ ಹಾಗೂ ಬೈಕ್ ಕಳುವಾಗಿರುವ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ಅಧೀಕ್ಷಕ ಚಂದ್ರಕಾಂತ್ ಎಂ.ವಿ. ಅವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಡಾ. ವೆಂಕಟೇಶ್ ಪ್ರಸನ್ನ, ಲಕ್ಷ್ಮೀನಾರಾಯಣ ಎ.ವಿ. ಹಾಗೂ ದೊಡ್ಡಬಳ್ಳಾಪುರ ಉಪವಿಭಾಗದ ಡಿವೈಎಸ್‌ಪಿ ಪಾಂಡುರಂಗ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.

ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಡಾ. ನವೀನ್ ಕುಮಾರ್ ಎಂ.ಬಿ. ನೇತೃತ್ವದ ತಂಡವು ಕಾರ್ಯಾಚರಣೆ ನಡೆಸಿ, ಬಿಹಾರದ ಖಾಗರಿಯಾ ಜಿಲ್ಲೆಯ ಗೋಗರಿ ತಾಲ್ಲೂಕಿನ ಕಾಜಿಚಾಕ್ ಗ್ರಾಮದ ನಿವಾಸಿಗಳಾದ ಗೌರವ್ ಕುಮಾರ್ (19) ಹಾಗೂ ವಿಶಾಲ್ ಕುಮಾರ್ (22) ಅವರನ್ನು ಬಂಧಿಸಿದೆ.

ಬಂಧಿತರಿಂದ ₹9.75 ಲಕ್ಷ ಮೌಲ್ಯದ 85 ಗ್ರಾಂ ಚಿನ್ನಾಭರಣ, ₹67 ಸಾವಿರ ನಗದು ಹಣ ಹಾಗೂ ಸುಮಾರು ₹1 ಲಕ್ಷ ಮೌಲ್ಯದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟಾರೆ ₹11.42 ಲಕ್ಷ ಮೌಲ್ಯದ ಕಳವು ಮಾಲು ಪತ್ತೆಹಚ್ಚಿ ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಾರ್ಯಾಚರಣೆಯಲ್ಲಿ ಪಿಎಸ್‌ಐ ನಾರಾಯಣಸ್ವಾಮಿ, ಪ್ರೊಬೆಷನರಿ ಪಿಎಸ್‌ಐ ಸುಮಂತ್, ಹೆಡ್ ಕಾನ್ಸ್‌ಟೇಬಲ್‌ಗಳಾದ ರಂಗನಾಥ್, ಸುನಿಲ್ ಭಾಸಗಿ, ಹರೀಶ್, ಮಂಜುನಾಥ್, ಚಂದ್ರಶೇಖರ್, ಸಹಾಯಕ ಹೆಡ್ ಕಾನ್ಸ್‌ಟೇಬಲ್ ನಟರಾಜು, ಪೊಲೀಸ್ ಕಾನ್ಸ್‌ಟೇಬಲ್ ಸಚಿನ್ ಉಪ್ಪಾರ ಹಾಗೂ ತಾಂತ್ರಿಕ ಸಿಬ್ಬಂದಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಪ್ರಕರಣದ ಯಶಸ್ವಿ ತನಿಖೆ ಮತ್ತು ಕಳವು ಮಾಲು ಪತ್ತೆಹಚ್ಚಿದ ಪೊಲೀಸ್ ತಂಡದ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.