ಖಾತೆ ಹಂಚಿಕೆ ಕುರಿತು ಸಚಿವ ಕೆ.ಎಚ್. ಮುನಿಯಪ್ಪ ಅಸಮಾಧಾನ: “ಸಿನಿಯಾರಿಟಿಗೆ ಗೌರವ ಸಿಕ್ಕಿಲ್ಲ”- ಕೆ.ಎಚ್ ಮುನಿಯಪ್ಪ

ದೇವನಹಳ್ಳಿ: ರಾಜ್ಯ ಸಚಿವ ಸಂಪುಟದಲ್ಲಿ ಖಾತೆ ಹಂಚಿಕೆ ವಿಚಾರವಾಗಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್ ಮುನಿಯಪ್ಪ ಅವರು ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮತ್ತೆ ಆಹಾರ ಇಲಾಖೆ ನೀಡಿರುವುದಕ್ಕೆ ಬೇಸರ ವ್ಯಕ್ತಪಡಿಸಿರುವ ಅವರು, ಖಾತೆ ಹಂಚಿಕೆಯಲ್ಲಿ ಹಿರಿಯತೆ ಮತ್ತು ಸಮತೋಲನವನ್ನು ಪರಿಗಣಿಸಿಲ್ಲ ಎಂದು ಆರೋಪಿಸಿದ್ದಾರೆ.

ದೇವನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುನಿಯಪ್ಪ, “ನಾನು ಎಂಟು ಬಾರಿ ಚುನಾಯಿತನಾಗಿದ್ದೇನೆ. ಆದರೆ ಖಾತೆ ಹಂಚಿಕೆಯಲ್ಲಿ ನನ್ನ ಸಿನಿಯಾರಿಟಿಗೆ ತಕ್ಕ ಗೌರವ ಸಿಕ್ಕಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಾಯಿ ಸ್ಥಾನದಲ್ಲಿದ್ದು ಎಲ್ಲಾರನ್ನು ಸಮಾನವಾಗಿ ನೊಡಬೇಕು. ಆದರೆ, ಖಾತೆ ಹಂಚಿಕೆ ಆ ರೀತಿಯಲ್ಲಿ ನಡೆದಿಲ್ಲ” ಎಂದು ಹೇಳಿದರು.

“ಖಾತೆ ಹಂಚಿಕೆ ಸಮತೋಲನದಿಂದ ಆಗಬೇಕಿತ್ತು. ಹಿರಿಯತೆ ಪರಿಗಣಿಸಬೇಕಿತ್ತು. ಅದನ್ನು ಗಮನಿಸಿಲ್ಲ. ಇದೇ ರೀತಿ ಮುಂದುವರಿದರೆ 2028ರ ಚುನಾವಣೆಯಲ್ಲಿ ಪಕ್ಷಕ್ಕೆ ತೊಂದರೆಯಾಗಬಹುದು” ಎಂದು ಅವರು ಎಚ್ಚರಿಕೆ ನೀಡಿದರು.

ತಾವು ಈಗಾಗಲೇ ಮೂರು ವರ್ಷಗಳಿಂದ ಆಹಾರ ಇಲಾಖೆಯನ್ನು ನಿರ್ವಹಿಸುತ್ತಿದ್ದು, ಸಮಾಜ ಕಲ್ಯಾಣ ಅಥವಾ ಕೃಷಿ ಇಲಾಖೆಯಂತಹ ಜನಸೇವೆಗೆ ಹೆಚ್ಚು ಅವಕಾಶವಿರುವ ಖಾತೆಯನ್ನು ನೀಡುವಂತೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.

ಈ ಕುರಿತು ತಾವು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಎಲ್ಲ ಸಚಿವರನ್ನು ಸಮಾನವಾಗಿ ಪರಿಗಣಿಸುವಂತೆ ಮನವಿ ಮಾಡಿರುವುದಾಗಿ ಮುನಿಯಪ್ಪ ಹೇಳಿದರು.

ಪ್ರೊಟೊಕಾಲ್ ಪ್ರಕಾರ ಹಿರಿತನದ ಆಧಾರದ ಮೇಲೆ ಸಮಾಜಕ್ಕೆ ಉಪಯೋಗವಾಗುವ ಖಾತೆಗಳ ಹಂಚಿಕೆ ಆಗಬೇಕಿತ್ತು‌. ಈ ಬಗ್ಗೆ ಗೊಂದಲ ಉಂಟಾಗದಂತೆ ಪಕ್ಷದ ನಾಯಕತ್ವ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂಬ ನಂಬಿಕೆ ಇದೆ” ಎಂದು ಅವರು ಆಶಾಭಾವ ವ್ಯಕ್ತಪಡಿಸಿದರು.

ಸಚಿವ ಮುನಿಯಪ್ಪ ಅವರ ಈ ಹೇಳಿಕೆ ಕಾಂಗ್ರೆಸ್ ಸರ್ಕಾರದ ಖಾತೆ ಹಂಚಿಕೆ ವಿಚಾರದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಈ ಬೆಳವಣಿಗೆ ರಾಜಕೀಯವಾಗಿ ಮಹತ್ವ ಪಡೆಯುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *

error: Content is protected !!