1 ವರ್ಷ 4 ತಿಂಗಳ ಮಗುವಿನ ಕಣ್ಣು ದಾನ: ಸಾವಿನಲ್ಲೂ ಮಾನವೀಯತೆ ಮೆರೆದ ಕುಟುಂಬ

ದೊಡ್ಡಬಳ್ಳಾಪುರ: ನಗರದ ದೇವರಾಜನಗರ ನಿವಾಸಿಗಳಾದ ಭರತ್ ಅವರ 1 ವರ್ಷ 4 ತಿಂಗಳ ಮಗ ಪೋಷಕ್ ಆರೋಗ್ಯದ ವ್ಯತ್ಯಯದಿಂದ ವಿಧಿವಶರಾದ ದುಃಖದ ನಡುವೆಯೂ, ಕುಟುಂಬಸ್ಥರು ಮಗುವಿನ ಕಣ್ಣುಗಳನ್ನು ದಾನ ಮಾಡುವ ಮೂಲಕ ಮಾನವೀಯತೆಯ ಉದಾತ್ತ ಸಂದೇಶ ನೀಡಿದ್ದಾರೆ.

ಮೃತ ಮಗುವಿನ ಕಣ್ಣುಗಳನ್ನು ದಾನ ಮಾಡಲು ತಂದೆ-ತಾಯಿ ಹಾಗೂ ಕುಟುಂಬದವರು ಮುಂದಾಗಿದ್ದು, ಈ ಮೂಲಕ ಪೋಷಕ್ ದೊಡ್ಡಬಳ್ಳಾಪುರದ ನೇತ್ರದಾನಿಗಳ ಪೈಕಿ ಅತ್ಯಂತ ಕಿರಿಯ ವಯಸ್ಸಿನ ನೇತ್ರದಾನಿಯಾಗಿ ಮಾದರಿಯಾಗಿದ್ದಾನೆ.

ಮಗುವಿನ ಕಣ್ಣುಗಳನ್ನು ಬೆಂಗಳೂರಿನ ಡಾ.ರಾಜ್ ಕುಮಾರ್ ನೇತ್ರ ಸಂಗ್ರಹಣಾ ಕೇಂದ್ರಕ್ಕೆ ದಾನ ಮಾಡಲಾಗಿದೆ. ದುಃಖದ ಸಂದರ್ಭದಲ್ಲಿಯೂ ಸಮಾಜಮುಖಿ ಚಿಂತನೆ ತೋರಿದ ಕುಟುಂಬದ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

ಈ ನೇತ್ರದಾನದೊಂದಿಗೆ ದೊಡ್ಡಬಳ್ಳಾಪುರದಲ್ಲಿ ನಡೆದ ಒಟ್ಟು ನೇತ್ರದಾನಗಳ ಸಂಖ್ಯೆ 2874ಕ್ಕೆ ಏರಿಕೆಯಾಗಿದೆ.

Leave a Reply

Your email address will not be published. Required fields are marked *

error: Content is protected !!