
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026ರ (ಎಸ್ಐಆರ್) ಪ್ರಕ್ರಿಯೆ ಬಿರುಸಿನಿಂದ ಸಾಗುತ್ತಿದ್ದು, ಜಿಲ್ಲೆಯಾದ್ಯಂತ ಒಟ್ಟು 15,721 ಮೃತರ ಹೆಸರು ಮತದಾರರ ಪಟ್ಟಿಯಲ್ಲಿ ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ.ಎನ್. ಅನುರಾಧ ಅವರು ಮಾಹಿತಿ ನೀಡಿದರು.
ಜಿಲ್ಲಾಡಳಿತ ಭವನದ ನ್ಯಾಯಾಲಯ ಸಭಾಂಗಣದಲ್ಲಿ ಭಾರತ ಚುನಾವಣಾ ಆಯೋಗದ ವತಿಯಿಂದ ಶುಕ್ರವಾರ ಹಮ್ಮಿಕೊಳ್ಳಲಾದ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026ರ (ಎಸ್ಐಆರ್) ಪ್ರಕ್ರಿಯೆ ಪ್ರಗತಿ ಕುರಿತು ಮಾತನಾಡಿದರು.
ಬಿಎಲ್ಒಗಳು ಮನೆ ಮನೆ ಭೇಟಿ ನೀಡಿದ ಸಂದರ್ಭದಲ್ಲಿ ಜುಲೈ 24 ರ ವರೆಗೆ ಜಿಲ್ಲೆಯಾದ್ಯಂತ ಒಟ್ಟು 35,198 ಮತದಾರರನ್ನು ಸ್ಥಳಾಂತರ, ವಲಸೆ, ಮರಣ, ದ್ವಿಪತಿ (ಡೂಪ್ಲಿಕೇಟ್) ಸೇರಿದಂತೆ ಇತರೆ ಕಾರಣಗಳಿಗಾಗಿ ಗುರುತಿಸಲಾಗಿದೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ 1150 ಮತದಾರರು ಗೈರು ಹಾಜರಾಗಿದ್ದಾರೆ. ಉಳಿದಿದ್ದು, 12,165 ಶಾಶ್ವತ ವಲಸೆ, 15,721 ಮೃತ, 5,721 ದ್ವಿಪ್ರತಿ ನಮೂನೆಗಳು ಹಾಗೂ 441 ಇತರೆ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ.
*ಕ್ಷೇತ್ರವಾರು ವಿವರ:*
ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ ಒಟ್ಟು 7,143 ಪ್ರಕರಣಗಳನ್ನು ಗುರುತಿಸಲಾಗಿದ್ದು, ಇದರಲ್ಲಿ 400 ಸಂಗ್ರಹವಾಗದ, 1321 ಶಾಶ್ವತ ವಲಸೆ, 3390 ಮರಣ, 1830 ದ್ವಿಪ್ರತಿ ಹಾಗೂ 202 ಇತರೆ ಪ್ರಕರಣಗಳಿವೆ.
ನೆಲಮಂಗಲ ಕ್ಷೇತ್ರದಲ್ಲಿ ಒಟ್ಟು 10,640 ಪ್ರಕರಣಗಳು ಪತ್ತೆಯಾಗಿದ್ದು, 257 ಸಂಗ್ರಹವಾಗದ, 4609 ಶಾಶ್ವತ ವಲಸೆ, 4468 ಮರಣ, 1264 ದ್ವಿಪ್ರತಿ ಮತ್ತು 42 ಇತರೆ ಪ್ರಕರಣಗಳಿವೆ.
ಹೊಸಕೋಟೆ ಕ್ಷೇತ್ರದಲ್ಲಿ ಒಟ್ಟು 9204 ಪ್ರಕರಣಗಳಿದ್ದು, 211 ಸಂಗ್ರಹವಾಗದ, 2785 ಶಾಶ್ವತ ವಲಸೆ, 4663 ಮರಣ, 1369 ದ್ವಿಪ್ರತಿ ಹಾಗೂ 176 ಇತರೆ ಪ್ರಕರಣಗಳಿವೆ.
ದೇವನಹಳ್ಳಿ ಕ್ಷೇತ್ರದಲ್ಲಿ ಒಟ್ಟು 8,211 ಪ್ರಕರಣಗಳಿದ್ದು, 282 ಸಂಗ್ರಹವಾಗದ, 3450 ಶಾಶ್ವತ ವಲಸೆ, 3200 ಮರಣ, 1258 ದ್ವಿಪ್ರತಿ ಹಾಗೂ 21 ಇತರೆ ಪ್ರಕರಣಗಳು ಒಳಗೊಂಡಿವೆ.
*ವಿಧಾನಸಭಾವಾರು ಎನುಮೆರೇಷನ್ ನಮೂನೆ ವಿತರಣೆ ಮತ್ತು ಗಣಕೀಕರಣ ಪ್ರಗತಿ:*
ಜಿಲ್ಲೆಯ ಒಟ್ಟು 9,12,913 ಮತದಾರರ ಪೈಕಿ ಇಂದಿನವರೆಗೆ ಬಿಎಲ್ಒಗಳು ಒಟ್ಟು 9,12,913 ಎನುಮೆರೇಷನ್ ನಮೂನೆಗಳನ್ನು ವಿತರಿಸಿದ್ದು, ಈ ಪೈಕಿ 7,49,582 ನಮೂನೆಗಳನ್ನು ಗಣಕೀಕರಿಸಲಾಗಿದೆ.
ಜಿಲ್ಲೆಯ 04 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮತಗಟ್ಟೆಗಳ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್ಒ) ಜೂನ್ 30 ರಿಂದಲೇ ಎನುಮೆರೇಷನ್ ಫಾರಂ ಗಳೊಂದಿಗೆ (Enumeration Forms) ಮತದಾರರ ಮನೆ ಮನೆಗೆ ಭೇಟಿ ನೀಡಲು ಪ್ರಾರಂಭಿಸಿದ್ದಾರೆ. ಈ ಮಾಹಿತಿ ಸಂಗ್ರಹ ಹಾಗೂ ಸಂಗ್ರಹಿಸಿದ ನಮೂನೆಗಳ ಗಣಕೀಕರಣ ಪ್ರಕ್ರಿಯೆಯು ಜೂನ್ 30 ರಿಂದ ಆಗಸ್ಟ್ 08 ರವರೆಗೆ ನಡೆಯಲಿದೆ. ಜಿಲ್ಲೆಯಲ್ಲಿ ಜೂನ್ 16 ರವರೆಗೆ ಒಟ್ಟು 9,12,913 ಮತದಾರರಿದ್ದು, ಬಿಎಲ್ಒಗಳಿಗೆ ಅಗತ್ಯವಿರುವ ಎಲ್ಲಾ ಫಾರಂಗಳನ್ನು ಮುದ್ರಿಸಿ ವಿತರಿಸಲಾಗಿದೆ.
*ಕ್ಷೇತ್ರವಾರು ವಿವರ:*
180-ದೊಡ್ಡಬಳ್ಳಾಪುರ: ಒಟ್ಟು 2,23,400 ಮತದಾರರಿದ್ದು, ಬಿಎಲ್ಒಗಳಿಂದ ಎಲ್ಲಾ 2,23,400 ನಮೂನೆಗಳನ್ನು ವಿತರಿಸಲಾಗಿದ್ದು, 1,77,220 ನಮೂನೆಗಳನ್ನು ಗಣಕೀಕರಿಸಲಾಗಿದೆ.
181-ನೆಲಮಂಗಲ: ಒಟ್ಟು 2,24,104 ಮತದಾರರಿದ್ದು, ಎಲ್ಲಾ 2,24,104 ನಮೂನೆಗಳನ್ನು ವಿತರಿಸಲಾಗಿದ್ದು, 1,80,105 ನಮೂನೆಗಳನ್ನು ಗಣಕೀಕರಿಸಲಾಗಿದೆ.
178-ಹೊಸಕೋಟೆ: ಒಟ್ಟು 2,46,155 ಮತದಾರರಿದ್ದು, ಎಲ್ಲಾ 2,46,155 ನಮೂನೆಗಳನ್ನು ವಿತರಿಸಲಾಗಿದ್ದು, 2,06,208 ನಮೂನೆಗಳನ್ನು ಗಣಕೀಕರಿಸಲಾಗಿದೆ.
179-ದೇವನಹಳ್ಳಿ: ಒಟ್ಟು 2,19,254 ಮತದಾರರಿದ್ದು, ಎಲ್ಲಾ 2,19,254 ನಮೂನೆಗಳನ್ನು ವಿತರಿಸಲಾಗಿದ್ದು, 1,86,049 ನಮೂನೆಗಳನ್ನು ಗಣಕೀಕರಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ವಾಸಂತಿ ಅಮರ್, ಪೋಲಿಸ್ ವರಿಷ್ಠಾಧಿಕಾರಿ ಎಂ.ವಿ ಚಂದ್ರಕಾಂತ, ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ ಹಾಗೂ ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಮಂಜುನಾಥ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.