ಎಲ್ರಿ ಅಧಿಕಾರಿಗಳು, ಜನರ ಸಮಸ್ಯೆ ಕೇಳೋದ್ಯಾರು..?- ತಹಶೀಲ್ದಾರ್ ಮಲ್ಲಪ್ಪ ಕೆ ಯರಗೋಳಗೆ ಸಚಿವ ಕೆ.ಎಚ್ ಮುನಿಯಪ್ಪ ತೀವ್ರ ತರಾಟೆ

ಎಲ್ರಿ ಅಧಿಕಾರಿಗಳು, ಜನ್ರ ಸಮಸ್ಯೆ ಕೇಳೋದ್ಯಾರು..?ಜನ ನನಗೆ ವೋಟ್ ಹಾಕಿದ್ಯಾಕೆ..? ಅಧಿಕಾರಿಗಳು ಇಲ್ಲಿದ್ರೆ ಜನರ ಸಮಸ್ಯೆ ಕೂಡಲೇ ಬಗೆಹರಿಸಬಹುದಲ್ವಾ.. ವೋಟ್ ಹಾಕಿರುವ ಜನರಿಗೆ ಕೆಲಸ ಮಾಡುವವರ್ಯಾರು..? ಎಲ್ಲಾ ಅಧಿಕಾರಿಗಳು ಇಲ್ಲಿದ್ರೆ ಜನರ ಸಮಸ್ಯೆಗಳನ್ನು ನಾನು ನಿಮಗೆ ಹೇಳಬಹುದಲ್ವಾ.. ಇನ್ಮುಂದೆ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು. ಯಾವ್ಯಾವ ಅಧಿಕಾರಿಗಳ ಬರೋದಿಲ್ಲಾ ನನಗೆ ಹೇಳಿ ಅವರನ್ನು ಸಸ್ಪೆಂಡ್ ಗೆ ಬರೀತಿನಿ.. ಹೀಗೆ ತಹಶೀಲ್ದಾರ್ ಮಲ್ಲಪ್ಪ ಕೆ ಯರಗೋಳಗೆ ಸಚಿವ ಕೆ.ಎಚ್ ಮುನಿಯಪ್ಪ ತೀವ್ರ ತರಾಟೆಗೆ ತೆಗೆದುಕೊಂಡಿರುವ ಘಟನೆ ದೊಡ್ಡಬಳ್ಳಾಪುರದ ಶಿರವಾರದಲ್ಲಿ ನಡೆದಿದೆ.

ಜಿಲ್ಲಾ ಹಾಗೂ ತಾಲೂಕು ಮಟ್ಟದ ಪ್ರವಾಸಗಳ ವೇಳೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಅಧಿಕಾರಿಗಳು ಕಡ್ಡಾಯವಾಗಿ ಉಪಸ್ಥಿತರಿರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು..

ಜನಸಾಮಾನ್ಯರು ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳ ಮುಂದಿಟ್ಟು ಪರಿಹಾರ ಪಡೆಯುವ ಉದ್ದೇಶದಿಂದಲೇ ಸರ್ಕಾರ ಗ್ರಾಮ ಹಾಗೂ ತಾಲೂಕು ಮಟ್ಟದಲ್ಲಿ ಸಭೆಗಳು ಮತ್ತು ಪ್ರವಾಸಗಳನ್ನು ಆಯೋಜಿಸುತ್ತದೆ. ಇಂತಹ ಸಂದರ್ಭಗಳಲ್ಲಿ ಅಧಿಕಾರಿಗಳು ಗೈರುಹಾಜರಾಗುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ ಕಂದಾಯ, ಗ್ರಾಮೀಣಾಭಿವೃದ್ಧಿ, ಆರೋಗ್ಯ, ಶಿಕ್ಷಣ, ಕೃಷಿ ಸೇರಿದಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಭೆಗಳಿಗೆ ಸಮಯಕ್ಕೆ ಸರಿಯಾಗಿ ಹಾಜರಾಗಬೇಕು. ಅಧಿಕಾರಿಗಳು ಸ್ಥಳದಲ್ಲೇ ಇದ್ದರೆ ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಸಭೆಗಳಿಗೆ ನಿರ್ಲಕ್ಷ್ಯ ತೋರಿಸುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ ಸಚಿವರು, ಸರ್ಕಾರದ ಯೋಜನೆಗಳು ಜನರಿಗೆ ಸಮರ್ಪಕವಾಗಿ ತಲುಪಬೇಕಾದರೆ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!