ಜೂನ್ ಒಂದರಂದು ಕರ್ನಾಟಕ ಪಬ್ಲಿಕ್ ಸ್ಕೂಲ್ ಯೋಜನೆಗೆ ಶಿವಮೊಗ್ಗದಲ್ಲಿ ಚಾಲನೆ- ಸಿಎಂ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವಿವಿಧ ವಿಷಯಗಳ ಕುರಿತು ಸಭೆ ನಡೆಸಿ, ಕೂಲಂಕಷವಾಗಿ ಚರ್ಚಿಸಿದರು.

ಈ ಸಭೆಯ ಮುಖ್ಯಾಂಶಗಳು:

•  ಜೂನ್ ಒಂದರಂದು ಕರ್ನಾಟಕ ಪಬ್ಲಿಕ್ ಸ್ಕೂಲ್ ಯೋಜನೆಗೆ ಶಿವಮೊಗ್ಗದಲ್ಲಿ ಚಾಲನೆ ನೀಡಲಾಗುವುದು.

•  ಒಂದು ಕೆಪಿಎಸ್ ಶಾಲೆಯಲ್ಲಿ 1200 ಮಕ್ಕಳಿಗೆ ಪ್ರವೇಶಾವಕಾಶ ಸಿಗಲಿದ್ದು, ಎಲ್‌ಕೆಜಿ ಇಂದ ಪಿಯುಸಿ ವರೆಗೆ ಒಂದೇ ಕಡೆ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ದೊರೆಯಲಿದೆ. ಮುಂದಿನ ಎರಡು ವರ್ಷಗಳಲ್ಲಿ ಎಲ್ಲಾ 800 ಶಾಲೆಗಳು ಸಂಪೂರ್ಣವಾಗಿ ಸಿದ್ಧವಾಗಬೇಕು.

•  ಈ ವರ್ಷ 800 ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್) ಆರಂಭಿಸಲು ಸಂಬಂಧಪಟ್ಟವರು ಟೆಂಡರ್ ಪ್ರಕ್ರಿಯೆಗೆ ಆದಷ್ಟು ಬೇಗನೆ ಚಾಲನೆ ನೀಡಬೇಕು.

•  ಕೆಪಿಎಸ್ ಶಾಲೆಗಳಿಗೆ ಶಾಲಾ ಬಸ್ ವ್ಯವಸ್ಥೆ ಸೌಲಭ್ಯವನ್ನು ಯಾವ ರೀತಿಯಲ್ಲಿ ಕಲ್ಪಿಸಬಹುದು ಎಂಬ ಬಗ್ಗೆ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು.

•  15 ಸಾವಿರ ಶಿಕ್ಷಕರನ್ನು ಭರ್ತಿ ಮಾಡುವ ಕುರಿತು ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಗೆ ತಕ್ಷಣ ಸಲ್ಲಿಸಬೇಕು.

ಪರೀಕ್ಷೆಗಳ ಫಲಿತಾಂಶ ಸುಧಾರಣೆಯ ಮಾಹಿತಿ:

•  ಈ ಬಾರಿ ಎಸ್ಎಸ್ಎಲ್‌ಸಿ ಯಲ್ಲಿ ಶೇ. 94.10ರಷ್ಟು ಫಲಿತಾಂಶ ದಾಖಲಾಗಿದ್ದು, ಕಳೆದ ವರ್ಷಕ್ಕಿಂತ ಶೇ.14.06 ಹೆಚ್ಚಾಗಿದೆ. ಪಿಯುಸಿಯಲ್ಲಿ ಈ ಬಾರಿ ಶೇ.86.48ರಷ್ಟು ಹೆಚ್ಚಳವಾಗಿದ್ದು, ಕಳೆದ ವರ್ಷಕ್ಕಿಂತ ಶೇ. 13 ಹೆಚ್ಚಳವಾಗಿದೆ.

•  ಎಸ್ಎಸ್ಎಲ್‌ಸಿ ಯಲ್ಲಿ ಈ ವರ್ಷ ಶೇ.100 ರಷ್ಟು ಫಲಿತಾಂಶ ಪಡೆದ ಶಾಲೆಗಳ ಸಂಖ್ಯೆ 2,393 ಇದ್ದು, ಕಳೆದ ವರ್ಷ 766 ಶಾಲೆಗಳು ಶೇ.100ರಷ್ಟು ಫಲಿತಾಂಶ ದಾಖಲಿಸಿದ್ದವು.

•  ಈ ಬಾರಿ ಎಸ್ಎಸ್ಎಲ್‌ಸಿ ಯಲ್ಲಿ ಎಸ್‌ಸಿ ಮತ್ತು ಎಸ್‌ಟಿ ಸಮುದಾಯದ ವಿದ್ಯಾರ್ಥಿಗಳ ಫಲಿತಾಂಶ ಶೇ.18 ರಷ್ಟು ಹೆಚ್ಚಳವಾಗಿದೆ. ಇದೇ ರೀತಿ ಎಲ್ಲಾ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಫಲಿತಾಂಶ ಗಣನೀಯವಾಗಿ ಸುಧಾರಣೆಯಾಗಿದೆ. ಕೆಟಗರಿ-1 ಶೇ.16.6, 2 ಎ- ಶೇ. 11.5, 2 ಬಿ – ಶೇ.18, 3ಎ – ಶೇ. 8.12, 3ಬಿ – ಶೇ.10 ಫಲಿತಾಂಶ ಸುಧಾರಣೆಯಾಗಿದೆ.

•  ಕಲ್ಯಾಣ ಕರ್ನಾಟಕದಲ್ಲಿ ಎಸ್ಎಸ್ಎಲ್‌ಸಿ ಫಲಿತಾಂಶ ಸುಧಾರಣೆಯಾಗಿದೆ. ಖಾಸಗಿ ಶಾಲೆಗಳಿಗೆ ಹೋಲಿಸಿದರೆ ಶೇ.2ರಷ್ಟು ಹೆಚ್ಚಾಗಿದೆ. ಈ ಬಾರಿ ಯಾವುದೇ ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕ ನೀಡಿಲ್ಲ. ಈ ಬಾರಿ ಎಸ್ಎಸ್ಎಲ್‌ಸಿ ಮೂರನೇ ಅಂತಿಮ ಪರೀಕ್ಷೆ ಇರುವುದಿಲ್ಲ.

•  2026ರಲ್ಲಿ ದ್ವಿತೀಯ ಪಿಯುಸಿ ಉತ್ತೀರ್ಣ ಪ್ರಮಾಣ ಶೇಕಡ 86.48 ಆಗಿದೆ. 2025ರಲ್ಲಿ ಶೇಕಡ 73.45 ಉತ್ತೀರ್ಣ ಪ್ರಮಾಣ ಇದ್ದು, ಶೇಕಡ 13.03 ಹೆಚ್ಚಳವಾಗಿದೆ

•  ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದು ಪ್ರಸಕ್ತ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಉತ್ತೀರ್ಣ ಪ್ರಮಾಣ ಗ್ರಾಮೀಣ ಪ್ರದೇಶದಲ್ಲಿ ಶೇಕಡ 94.80  ದಾಖಲಾಗಿದೆ. ನಗರ ಪ್ರದೇಶದಲ್ಲಿ ಶೇಕಡ 93.20 ದಾಖಲಾಗಿದೆ.

•  ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಸಾಧನೆ ಪ್ರಸಕ್ತ ಸಾಲಿನಲ್ಲಿ ಶೇಕಡ 87.62, ನಗರ ಪ್ರದೇಶದ ವಿದ್ಯಾರ್ಥಿಗಳ ಉತ್ತೀರ್ಣ ಪ್ರಮಾಣ ಶೇಕಡ 85.95 ದಾಖಲಾಗಿದೆ.

•  ಶಾಲಾ ಮಕ್ಕಳಿಗೆ ಉಚಿತ ಪಠ್ಯ ಪುಸ್ತಕಗಳೊಂದಿಗೆ ಉಚಿತ ನೋಟ್ ಬುಕ್ ವಿತರಿಸುವ ಬೇಡಿಕೆಯ ಬಗ್ಗೆ ಸಕಾಲದಲ್ಲಿ ಪರಿಶೀಲನೆ ನಡೆಸಲಾಗುವುದು.

Leave a Reply

Your email address will not be published. Required fields are marked *

error: Content is protected !!