
ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಆರತಿಬೈಲು ಗ್ರಾಮದ ಬಳಗಾರ ಕ್ರಾಸ್ ಸಮೀಪದ ರಾಷ್ಟ್ರೀಯ ಹೆದ್ದಾರಿ–52ರಲ್ಲಿ ಗುರುವಾರ (ಜುಲೈ 9) ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗೋಕರ್ಣ–ಧರ್ಮಸ್ಥಳ ಪ್ರವಾಸಕ್ಕೆ ತೆರಳುತ್ತಿದ್ದ ಧಾರವಾಡ ಮೂಲದ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಧಾರವಾಡದಿಂದ ತೂಫಾನ್ ಕ್ರೂಸರ್ ವಾಹನದಲ್ಲಿ ಒಟ್ಟು ಒಂಬತ್ತು ಮಂದಿ ಸ್ನೇಹಿತರು ಧರ್ಮಸ್ಥಳ ಹಾಗೂ ಗೋಕರ್ಣ ಪ್ರವಾಸಕ್ಕೆ ತೆರಳುತ್ತಿದ್ದರು. ಬೆಳಗಿನ ಜಾವ ಸುಮಾರು 1.30 ಗಂಟೆ ಸುಮಾರಿಗೆ ಆರತಿಬೈಲು ಬಳಗಾರ ಕ್ರಾಸ್ ಸಮೀಪ ತಲುಪಿದ ವೇಳೆ, ಅಂಕೋಲಾದಿಂದ ಯಲ್ಲಾಪುರ ಕಡೆಗೆ ಬರುತ್ತಿದ್ದ ಲಾರಿ ಗೆ ಕ್ರೂಸರ್ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕ್ರೂಸರ್ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ವಾಹನದಲ್ಲಿದ್ದ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ಕ್ರೂಸರ್ ಚಾಲಕ ಸಂಜೀವ್ ಮೈಲಾರ ಅಂಗಡಿ ವಾಹನವನ್ನು ರಸ್ತೆಯ ಬಲಭಾಗಕ್ಕೆ ಚಲಾಯಿಸಿದ್ದರಿಂದ ಅಪಘಾತ ಸಂಭವಿಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರೆಲ್ಲರೂ ಧಾರವಾಡ ಮೂಲದವರಾಗಿದ್ದು, ಅವರಲ್ಲಿ ಕೆಲವರು ಸ್ವಿಗ್ಗಿ ಸಂಸ್ಥೆಯಲ್ಲಿ ಪಾರ್ಟ್‌ಟೈಮ್ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಮೃತರು: ಸಂಜೀವ್ ಮೈಲಾರ ಅಂಗಡಿ (33), ಕುರುಬಗಟ್ಟಿ, ಧಾರವಾಡ; ಅಕ್ಷಯ್ ತೇಜಪ್ಪ ಮುರಳವರ (26), ಸಾಧನಕೇರಿ, ಧಾರವಾಡ; ಅಭಿಷೇಕ್ ಈಶ್ವರ (28), ಜಯನಗರ, ಧಾರವಾಡ; ಅಭಿಷೇಕ್ ಮಲ್ಲೇಶ ಮಡಬಾವಿ (27), ಜನತಾ ಪ್ಲಾಟ್, ಸಪ್ತಾಪುರ, ಧಾರವಾಡ; ಬಸಪ್ಪ ದೇವಪ್ಪ ಕನಕನವರ (38), ಜೆಎಸ್‌ಎಸ್ ಕ್ಯಾಂಪಸ್, ಧಾರವಾಡ ಹಾಗೂ ಮಂಜುನಾಥ ಅಶೋಕ ಚುಳಕಿ (33), ಮುರಘಾಮಠ, ಧಾರವಾಡ.

ಗಾಯಾಳುಗಳು: ಶಿವರಾಜ್ ಗುರಪ್ಪ ಮಡಿವಾಳ (22), ತುಪ್ಪದಕುರಹಟ್ಟಿ, ನರಗುಂದ; ಸಚಿನ್ (26), ಮೆಹಬೂಬ್ ನಗರ, ಧಾರವಾಡ ಹಾಗೂ ಚನ್ನಬಸು ಬಸಲಿಂಗಯ್ಯ ಸಂಪಗಾಂವಿಮಠ (28), ಕಲಘಟಗಿ, ಧಾರವಾಡ.
ಗಾಯಾಳುಗಳನ್ನು ತಕ್ಷಣ ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಕೆಎಂಸಿ ಆಸ್ಪತ್ರೆ, ಹುಬ್ಬಳ್ಳಿಗೆ ರವಾನಿಸಲಾಗಿದೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಯಲ್ಲಾಪುರ ಪೊಲೀಸರು, ಹೆದ್ದಾರಿ ಗಸ್ತು ಸಿಬ್ಬಂದಿ ಹಾಗೂ ಸ್ಥಳೀಯರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಮೃತದೇಹಗಳನ್ನು ಯಲ್ಲಾಪುರ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು.
ಈ ಭೀಕರ ಅಪಘಾತದಿಂದ ರಾಷ್ಟ್ರೀಯ ಹೆದ್ದಾರಿ–52ರಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಈ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.