
ದೊಡ್ಡಬಳ್ಳಾಪುರ: ಪ್ರತಿಭಾ ಪುರಸ್ಕಾರಗಳು ವಿದ್ಯಾರ್ಥಿಗಳ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸುವುದರ ಜೊತೆಗೆ ಇತರೆ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗುತ್ತವೆ ಎಂದು ಶಾಸಕ ಧೀರಜ್ ಮುನಿರಾಜು ಹೇಳಿದರು.
ತಾಲ್ಲೂಕಿನ ರಾಜಘಟ್ಟ ಗ್ರಾಮದಲ್ಲಿ ಜೆಡಿಎಸ್ ಮುಖಂಡ ಶಿವಕುಮಾರ್ ಅವರ ಜನ್ಮದಿನದ ಅಂಗವಾಗಿ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ.80ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.
ಕಳೆದ ಐದು ವರ್ಷಗಳಿಂದ ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿರುವುದು ಮಾದರಿ ಕಾರ್ಯವಾಗಿದೆ. ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತವಾಗದೆ ಜೀವನದ ಪಾಠಗಳನ್ನೂ ಕಲಿಯಬೇಕಿದೆ ಎಂದು ಸಲಹೆ ನೀಡಿದರು.
ಕರವೇ ಮುಖಂಡ ರಾಜಘಟ್ಟ ರವಿ ಮಾತನಾಡಿ, ಇಂದಿನ ಸಮಾಜದಲ್ಲಿ ಹಣದ ಸಂಪಾದನೆಯನ್ನೇ ಮಾನದಂಡವಾಗಿ ಕಾಣಲಾಗುತ್ತಿದ್ದು, ಮಾನವೀಯ ಮೌಲ್ಯಗಳಿಗೆ ಬೆಲೆ ಕಡಿಮೆಯಾಗುತ್ತಿದೆ. ಪ್ರತಿಯೊಂದು ಮಕ್ಕಳಲ್ಲೂ ಒಂದೊಂದು ಪ್ರತಿಭೆ ಅಡಗಿದ್ದು, ಅದನ್ನು ಪೋಷಕರು ಹಾಗೂ ಶಿಕ್ಷಕರು ಗುರುತಿಸಿ ಪ್ರೋತ್ಸಾಹಿಸಬೇಕು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಜೀವನದ ಮಹತ್ವದ ತಿರುವಿನ ಘಟ್ಟವಾಗಿದ್ದು, ಇಲ್ಲಿ ಸಾಧನೆ ಮಾಡಿದರೆ ಮುಂದಿನ ಗುರಿ ತಲುಪುವುದು ಸುಲಭವಾಗುತ್ತದೆ ಎಂದು ಹೇಳಿದರು.
ಜೆಡಿಎಸ್ ಮುಖಂಡ ಶಿವಕುಮಾರ್ ಮಾತನಾಡಿ, ಬಡ ರೋಗಿಗಳಿಗೆ ನೆರವಾಗುವ ಉದ್ದೇಶದಿಂದ ಹಣ್ಣುಹಂಪಲು ವಿತರಣೆ ಮಾಡಲಾಗಿದೆ. ರಾಜಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡುತ್ತಿರುವುದು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹಾಗೂ ಧೈರ್ಯ ತುಂಬುವ ಉದ್ದೇಶದಿಂದ ಎಂದು ತಿಳಿಸಿದರು.

ಕಾರ್ಯಕ್ರಮದ ಅಂಗವಾಗಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣುಹಂಪಲು ವಿತರಣೆ ಮಾಡಲಾಯಿತು. ಆರೋಗ್ಯ ತಪಾಸಣೆ ಶಿಬಿರದಲ್ಲಿ ನೂರಾರು ಮಂದಿ ಭಾಗವಹಿಸಿದ್ದರು. ಇದೇ ವೇಳೆ 150ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡ ಬಿ. ಮುನೇಗೌಡ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರ್, ರಾಜಘಟ್ಟ ವಿಎಸ್‌ಎಸ್‌ಎನ್ ಅಧ್ಯಕ್ಷ ಮುನಿಹನುಮಯ್ಯ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕೋಡಿ ನರಸಿಂಹಮೂರ್ತಿ, ವೆಂಕಟರಮಣಪ್ಪ, ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಕೆಂಪಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.