
ದೊಡ್ಡಬಳ್ಳಾಪುರ: ಸ್ನೇಹಿತನ ಬರ್ತಡೇ ಪಾರ್ಟಿಗೆಂದು ಖಾಸಗಿ ರೆಸಾರ್ಟ್ಗೆ ಬಂದಿದ್ದ ಯುವಕನೊಬ್ಬ ನಿದ್ದೆಗಣ್ಣಿನಲ್ಲಿ ಈಜುಕೊಳಕ್ಕೆ ಬಿದ್ದು ಮೃತಪಟ್ಟ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಚರಮಂಗನಹಳ್ಳಿ ಗ್ರಾಮದ ಅಭಿಲಾಷ್ (20) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ.
ಮೇ 17ರಂದು ಸ್ನೇಹಿತರ ಗುಂಪೊಂದು ಬರ್ತಡೇ ಆಚರಣೆಗೆಂದು ಕೋಲಾರದಿಂದ ದೊಡ್ಡಬಳ್ಳಾಪುರ ತಾಲೂಕಿನ ಖಾಸಗಿ ರೆಸಾರ್ಟ್ಗೆ ಬಂದಿತ್ತು. ಮೇ 18ರ ಮಧ್ಯರಾತ್ರಿ ಸ್ನೇಹಿತನ ಹುಟ್ಟುಹಬ್ಬ ಆಚರಿಸಿ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ. ಬಳಿಕ ಎಲ್ಲರೂ ಕೊಠಡಿಗಳಲ್ಲಿ ಮಲಗಿದ್ದರು.
ಈ ವೇಳೆ ಅಭಿಲಾಷ್ ಹೊರಗೆ ಹೋಗಿ ಬರುತ್ತೇನೆ ಎಂದು ಹೇಳಿ ಕೊಠಡಿಯಿಂದ ಹೊರಹೋಗಿದ್ದಾನೆ. ಆದರೆ ಬಹಳ ಸಮಯವಾದರೂ ಮರಳಿ ಬಾರದ ಹಿನ್ನೆಲೆಯಲ್ಲಿ ಸ್ನೇಹಿತರು ರೆಸಾರ್ಟ್ ಸುತ್ತಮುತ್ತ ಹುಡುಕಾಟ ನಡೆಸಿದ್ದಾರೆ. ಕತ್ತಲಿರುವುದರಿಂದ ಯುವಕ ಪತ್ತೆಯಾಗಿರಲಿಲ್ಲ. ನಂತರ ರೆಸಾರ್ಟ್ ಮಾಲೀಕರಿಗೂ ಮಾಹಿತಿ ನೀಡಿದ್ದಾರೆ.
ಬೆಳಿಗ್ಗೆ ರೆಸಾರ್ಟ್ ಸಿಬ್ಬಂದಿ ಈಜುಕೊಳದಲ್ಲಿ ಯುವಕನ ಶವ ತೇಲುತ್ತಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಹೊಸಹಳ್ಳಿ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ನಿದ್ದೆಗಣ್ಣಿನಲ್ಲಿ ತೆರಳಿದ್ದ ಅಭಿಲಾಷ್ ಆಕಸ್ಮಿಕವಾಗಿ ಈಜುಕೊಳಕ್ಕೆ ಬಿದ್ದು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.