ಗೆಲ್ಲುತ್ತಲೇ ಇರುವ ರಾಜಕಾರಣಿಗಳು, ಸೋಲುತ್ತಲೇ ಇರುವ ಮತದಾರರು…

ದೃಷ್ಟಿಕೋನ……..

ಗೆಲ್ಲುತ್ತಲೇ ಇರುವ ರಾಜಕಾರಣಿಗಳು, ಸೋಲುತ್ತಲೇ ಇರುವ ಮತದಾರರು, ಕನಸು ಕಾಣುತ್ತಲೇ ಇರುವ ಬಡ, ಮಧ್ಯಮ ವರ್ಗದವರು,
ಅಧಿಕ ಪ್ರಸಂಗಿಗಳಂತೆ ಚುನಾವಣಾ ಫಲಿತಾಂಶ ವಿಮರ್ಶಿಸುತ್ತಲೇ ಇರುವ ಮಾಧ್ಯಮದವರು,
ತಮಗೆ ತೋಚಿದಂತೆ ಅಭಿಪ್ರಾಯ ವ್ಯಕ್ತಪಡಿಸುತ್ತಲೇ ಇರುವ ಸಾಮಾಜಿಕ ಜಾಲತಾಣಗಳು…….

ಹೊಟ್ಟೆ ತುಂಬಿದವರಿಗೆ
” ಮೇರಾ ಭಾರತ್ ಮಹಾನ್ ”
ಹಸಿದ ಹೊಟ್ಟೆಯವರಿಗೆ ?

ಸಾಮಾಜಿಕವಾಗಿ ಮೇಲಿನ ಸ್ಥಾನದಲ್ಲಿರುವವರಿಗೆ
” ನಮ್ಮ ಸಂಸ್ಕೃತಿ ಮಹಾನ್ ”
ಮುಟ್ಟಿಸಿಕೊಳ್ಳದವರಿಗೆ ?

ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುವವರಿಗೆ
” A county of luxury ”
ಬಡತನದಲ್ಲಿರುವವರಿಗೆ ?

ಧರ್ಮಾಧಿಕಾರಿಗಳಿಗೆ
” ಇದು ಪವಿತ್ರ ಭೂಮಿ ”
ಜಾಗೃತ ಮನಸ್ಥಿತಿಯವರಿಗೆ ?

ಬಹುರಾಷ್ಟ್ರೀಯ ಕಂಪನಿಗಳಿಗೆ
” ಬಹು ದೊಡ್ಡ ಮಾರುಕಟ್ಟೆ “,
ಅಕ್ಕಿ ಬೆಳೆವ ರೈತರಿಗೆ ?

ರಾಜಕಾರಣಿಗಳಿಗೆ
” ಪ್ರಜಾಪ್ರಭುತ್ವದ ದೇಗುಲ”,
ಮತದಾರರಿಗೆ ?

ಬಲಿಷ್ಠರಿಗೆ
” ನ್ಯಾಯಾಂಗವೇ ಸುಪ್ರೀಂ ”
ದುರ್ಬಲರಿಗೆ ?

ಪ್ರಬಲ ಮಹಿಳೆಯರಿಗೆ
” ಅನಿರ್ಬಂಧಿತ ಸ್ವಾತಂತ್ರ್ಯ ”
ಅಸಹಾಯಕ ಮಹಿಳೆಗೆ ?

ನಮಗೆ ಯಾರ ಮೇಲೂ ದ್ವೇಷವಿಲ್ಲ. ಪ್ರಬಲರು ಪ್ರಬಲರಾಗೇ ಇರಿ.
ಆದರೆ ಈ ಭೂಮಿ ನಿಮಗೆ ಮಾತ್ರ ಸೇರಿದ್ದಲ್ಲ, ನೆನಪಿಡಿ.
ಇದರಲ್ಲಿ ಎಲ್ಲರಿಗೂ ಸಮಪಾಲಿದೆ.

ನೀವೇನೂ ಕೆಳಗಿಳಿಯುವುದು ಬೇಡ.
ನಮ್ಮನ್ನೂ ನಿಮ್ಮೆತ್ತರಕ್ಕೇರಿಸಿ .
ಸಮಾನತೆಗಾಗಿ ಹಂಬಲಿಸುವ ನಮಗೂ ಸಹಕಾರ ನೀಡಿ.

ಮತದಾರರನ್ನು ಉಪಯೋಗಿಸಿಕೊಂಡು ಶಾಸಕ, ಮಂತ್ರಿಗಳಾದಿರಿ,
ದಯವಿಟ್ಟು
ಜನರ ಕಷ್ಟಕ್ಕೆ ಹೃದಯಪೂರ್ವಕವಾಗಿ ಸಹಾಯ ಮಾಡಿ. ಸ್ಟಂಟ್ ಮಾಡಬೇಡಿ.

ಭಕ್ತಾದಿಗಳನ್ನು ಉಪಯೋಗಿಸಿಕೊಂಡು ಮಠಾಧೀಶರಾದಿರಿ,
ದಯವಿಟ್ಟು,
ಹಣ, ಜಾತಿ, ವ್ಯೆಭೋಗದ ಹಿಂದೆ ಹೋಗದೆ ತ್ಯಾಗಮನೋಭಾವದಿಂದ,
ಜನರ ಸೇವೆ ಮಾಡಿ, ರಾಜಕೀಯ ಮಾಡಬೇಡಿ.

ಓದುಗನನ್ನು ಉಪಯೋಗಿಸಿಕೊಂಡು ದೊಡ್ಡ ಸಾಹಿತಿ, ಲೇಖಕರಾದಿರಿ, ದಯವಿಟ್ಟು,
ಬಡತನ, ಶೊಷಣೆ, ಅಜ್ಞಾನವನ್ನು ವರ್ಣಿಸುತ್ತಾ ಸಮಯ ಕೊಲ್ಲಬೇಡಿ, ಈಗ ಅವರಿಗಾಗಿ,
ನಿಜದ ಧ್ವನಿ ಎತ್ತಿ, ಸ್ವಾರ್ಥಿಗಳಾಗಬೇಡಿ.

ಅಭಿಮಾನಿಗಳನ್ನು ಉಪಯೋಗಿಸಿಕೊಂಡು ಪ್ರಖ್ಯಾತ, ಶ್ರೀಮಂತ ನಟರಾದಿರಿ,
ದಯವಿಟ್ಟು,
ಅವರ ಕಷ್ಟ ಕಾರ್ಪಣ್ಯಗಳಿಗೆ ನೆರವಾಗಿ, ಕಪಟ ನಾಟಕ ಮಾಡಬೇಡಿ.

ಕೃಷಿಭೂಮಿಯನ್ನು ಉಪಯೋಗಿಸಿಕೊಂಡು ಕೋಟ್ಯಾಧಿಪತಿ ಡೆವಲಪರ್ ಗಳಾದಿರಿ.
ದಯವಿಟ್ಟು,
ಈಗ ಅನ್ನಕ್ಕಾಗಿ ಪರಿತಪ್ಪಿಸುತ್ತಿರುವ ಮಕ್ಕಳಿಗೆ ಆಶ್ರಯದಾತರಾಗಿ, ದುರಹಂಕಾರಿಗಳಾಗಬೇಡಿ.

ಕಾರ್ಮಿಕರ ಶ್ರಮ ಉಪಯೋಗಿಸಿಕೊಂಡು ಬೃಹತ್ ಉದ್ಯಮಿಗಳಾದಿರಿ. ದಯವಿಟ್ಟು,
ಮದುವೆ, ಪಾರ್ಟಿಯಲ್ಲಿ ಶ್ರೀಮಂತಿಕೆ ಪ್ರದರ್ಶಿಸಿದೆ ಇಲ್ಲದವರಿಗೆ ದಾನಮಾಡಿ. ಕ್ರೂರಿಗಳಾಗಬೇಡಿ.

ಸಾರ್ವಜನಿಕರ ತೆರಿಗೆ ಹಣದಿಂದಲೇ ಸಂಬಳ ಪಡೆಯುವ ಅಧಿಕಾರಿಗಳಾದಿರಿ.
ದಯವಿಟ್ಟು,
ಅವರಿಗಾಗಿ ಬದುಕನ್ನು ಮುಡುಪಿಡಿ. ಜನರನ್ನು ಗೋಳಾಡಿಸುವ ಭ್ರಷ್ಟರಾಗಬೇಡಿ.

ರೈತರು, ಕಾರ್ಮಿಕರು, ದಲಿತರನ್ನು, ಉಪಯೋಗಿಸಿಕೊಂಡು, ನಾಯಕರಾದಿರಿ.
ದಯವಿಟ್ಟು,
ಈಗ ಅವರ ಕಣ್ಣೀರೊರೆಸುವ ಕೈಗಳಾಗಿ, ಅಮಾನವೀಯರಾಗಬೇಡಿ.

ಕೋಟ್ಯಾಂತರ ಜನ ಒಟ್ಟಿಗೇ ಬದಲಾಗುವುದು ಕಷ್ಟಸಾಧ್ಯ. ಆದರೆ,
ನಾಯಕರುಗಳು ಬದಲಾದರೆ, ಈ ಸಮಾಜದ ಬದಲಾವಣೆ ಸುಲಭವಾಗುತ್ತದೆ.

ಜನರ ಆಕ್ರೋಶ, ಅಸಮಾಧಾನ ಭುಗಿಲೇಳುವ ಮೊದಲು ಎಚ್ಚೆತ್ತುಕೊಳ್ಳಿ,

ಪಾಕಿಸ್ತಾನವೂ ನರಕವೇ, ಭಾರತವೂ ನರಕವೇ,
ಸತ್ತ ಅಮ್ಮನ ಹೆಣವನ್ನು ಆಸ್ಪತ್ರೆಯಿಂದ ಬಿಡಿಸಿಕೊಳ್ಳಲು ಹಣವಿಲ್ಲದೆ ದೈನೇಸಿಯಾಗಿ ಪರದಾಡುತ್ತಿರುವ ಸಾಮಾನ್ಯನಿಗೆ,

ಬಾಂಗ್ಲಾದೇಶವೂ ಸ್ವರ್ಗವೇ, ಭಾರತವೂ ಸ್ವರ್ಗವೇ,
ತಿಂದು ಕೊಬ್ಬಿದ ಗೂಳಿಯಂತ ಸಮಾಜ ಘಾತಕರಿಗೆ,

ಇಸ್ರೇಲೂ ನರಕವೇ, ಪ್ಯಾಲಿಸ್ಟೇನೂ ನರಕವೇ, ಚೀನಾನೂ ನರಕವೇ ದಿನವೂ ಜೀವ ಕೈಲಿಡಿದು ಓಡಾಡುವ ಸಾಮಾನ್ಯರಿಗೆ,

ಇರಾಕೂ ಸ್ವರ್ಗವೇ, ಸಿರಿಯಾನೂ ಸ್ವರ್ಗವೇ, ಆಫ್ಘನಿಸ್ಥಾನವೂ ಸ್ವರ್ಗವೇ ಕ್ರೂರ, ಕಟುಕ, ಮೂಲಭೂತವಾದಿ ನರರಾಕ್ಷಸರಿಗೆ,

ಹಾಗೇ, ಶ್ರೀಮಂತರಿಗೆ, ಯಶಸ್ವಿ ಸಿನಿಮಾ ನಟರಿಗೆ, ರಾಜಕಾರಣಿಗಳಿಗೆ ಎಲ್ಲ ದೇಶಗಳು ಸ್ವರ್ಗವೇ,

ಮಕ್ಕಳ ಊಟಕ್ಕಾಗಿ ರಾತ್ರಿ 5 ಜನ ಕುಡುಕ ವಿಟಪುರುಷರಿಗೆ ದೇಹ ಮಾರಿದ ಯಾವ ದೇಶದ ಹೆಣ್ಣು ಅದು ಹೇಗೆ ತಮ್ಮ ದೇಶಕ್ಕೆ ಜೈ ಅನ್ನುತ್ತಾಳೆ,

ಭಯೋತ್ಪಾದಕರ ಗುಂಡಿಗೆ ತನ್ನ ಇಬ್ಬರು ಮಕ್ಕಳು ಕಣ್ಣಮುಂದೆ ಬಲಿಯಾದದ್ದನ್ನು ಕಂಡು ಯಾವ ದೇಶದ ಪ್ರಜೆ ” ಜಿಂದಾಬಾದ್ ” ಎನ್ನುತ್ತಾನೆ.

ಶಾಲೆಯಲ್ಲಿ ತಲೆತಿರುಕನ ಗುಂಡಿಗೆ ಒಬ್ಬಳೇ ಮಗಳನ್ನು ಕಳೆದುಕೊಂಡ ಅಮೆರಿಕ ದೇಶದ ಯಾವ ತಾಯಿ ತಾನೇ ಆ ದೇಶವನ್ನು ಶಪಿಸದಿರುತ್ತಾಳೆ.

ಕೋಟಿ ಕೋಟಿ ಹಣ ಲೂಟಿ ಹೊಡೆದು ಐಷಾರಾಮಿ ಜೀವನ ನಡೆಸುವ ಕಿರಾತಕರಿಗೆ ಆಯಾ ದೇಶಗಳು ಸ್ವರ್ಗಗಳೇ.

ತುತ್ತು ಅನ್ನಕ್ಕೂ ಗತಿಯಿಲ್ಲದ, ಸತ್ತರೆ ಹೂಳಲು ಲಂಚ ಕೇಳುವ ದೇಶದಲ್ಲಿ ಜನ ಅದು ಹೇಗೆ ತಮ್ಮ ನೆಲವನ್ನು ಪ್ರೀತಿಸುತ್ತಾರೆ.

ಎಸಿ ರೂಮಿನಲ್ಲಿ ಕುಳಿತು ಮಾತನಾಡುವ ಟಿವಿ ನಿರೂಪಕರಿಗೆ, ಆಧ್ಯಾತ್ಮಿಕ ಚಿಂತಕರಿಗೆ ಅವರವರ ದೇಶ ಸ್ವರ್ಗವೇ,

ಬಿಸಿಲಿನಲ್ಲಿ ಬೆಂದು, ಚಳಿಯಲ್ಲಿ ನಡುಗುವ ಅಸಹಾಯಕರಿಗೆ ಎಲ್ಲಾ ದೇಶಗಳು ನರಕವೇ.

ಅಸಮಾನತೆ, ಅಮಾನವೀಯತೆ ಇರುವ ಸಮಾಜದಲ್ಲಿ ದೇಶದ್ರೋಹ ಮತ್ತು ದೇಶಪ್ರೇಮ ದುರುಳರಿಗೆ ವ್ಯಾಪಾರ,

ರಾಜಕಾರಣಿಗಳಿಗೆ ತಮ್ಮ ಸ್ವಾರ್ಥ ಸಾಧನೆಯ ಪ್ರಬಲ ಅಸ್ತ್ರ, ಕೆಲವರಿಗೆ ಹೊಟ್ಟೆ ಪಾಡಿನ ಸರಕು.

ಆದರೆ ಸಾಮಾನ್ಯರಿಗೆ ಅವರ ದೇಹದ ಪ್ರತಿ ಕಣಕಣವೂ, ಅವರ ಕ್ಷಣಕ್ಷಣದ ಉಸಿರೂ ದೇಶಭಕ್ತಿಯೇ‌‌ ಅದು ಸಹಜ ಮತ್ತು ಸ್ವಾಭಾವಿಕ ತನಗರಿವಿಲ್ಲದೇ.

ಅವರಿಗೆ ದೇಶದ್ರೋಹವೆಂದರೆ ಗೊತ್ತೇ ಇಲ್ಲ. ಇನ್ನು ಅದರ ಬಗ್ಗೆ ಯೋಚಿಸುವುದೆಲ್ಲಿ. ಅಷ್ಟು ಶಕ್ತಿಯೂ ಅವರಿಗಿಲ್ಲ.

ಹಸು ತಿನ್ನುವ ಆಸೆಗೆ ಚರ್ಮ ಸುಲಿಸಿಕೊಳ್ಳುವ ಭಾರತೀಯನಿಗೆ ಇದು ನರಕವೇ,

ಪ್ರೀತಿಸಿದ್ದಕ್ಕಾಗಿ ಕಲ್ಲಿನಿಂದ ಹೊಡೆಸಿಕೊಳ್ಳುವ ಪಾಕಿಸ್ತಾನಿಗೆ ಅದು ನರಕವೇ.

ಅಲ್ಲಿಯವರು ಹೇಳುತ್ತಾರೆ ಭಾರತಕ್ಕೆ ದಿಕ್ಕಾರ,
ಇಲ್ಲಿಯವರು ಹೇಳುತ್ತಾರೆ ಪಾಕಿಸ್ತಾನಕ್ಕೆ ದಿಕ್ಕಾರ,

ಆದರೆ ಸತ್ಯ ಮಾತ್ರ ಎಲ್ಲ ಕಡೆಯ ಜನಸಾಮಾನ್ಯರ ಅಂತರಾಳದಲ್ಲಿ ಬಚ್ಚಿಟ್ಟುಕೊಂಡು ಮೌನವಾಗಿ ರೋದಿಸುತ್ತಿದೆ.

ವಿಶಾಲ ಮನೋಭಾವದ ಮನುಷ್ಯರಿಗೆ ಮಾತ್ರ ಇದು ಅರ್ಥವಾಗುತ್ತದೆ.

ದ್ವೇಷ ಅಸೂಯೆ ಕಪಟ ಮುಖವಾಡದವರಿಗೆ, ಇದು ಅರಿವಾಗುವುದೇ ಇಲ್ಲ.

ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.

ಯಾವುದೇ ದೇಶದ ಅಭಿವೃದ್ಧಿ ಕೇವಲ ಶ್ರೀಮಂತರ ಶ್ರೀಮಂತಿಕೆಯ ಅಳತೆಗೋಲಲ್ಲ. ಅದು ಬಡವರ ಶೋಷಿತರ ಜೀವನಮಟ್ಟದ ಆಧಾರದ ಮೇಲೆ ನಿರ್ಧಾರವಾಗಬೇಕು…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Leave a Reply

Your email address will not be published. Required fields are marked *

error: Content is protected !!