ರಸ್ತೆಯಲ್ಲಿ ಮ್ಯಾನ್ ಹೋಲ್ ಗೆ ಅಗೆದ ಮಣ್ಣಿನ ರಾಶಿ: ರಾಜಕಾಲುವೆಗೆ ಇಲ್ಲ ತಡೆಗೋಡೆ, ಕಿರಿದಾದ ಮೋರಿ: ವಾಹನ ಸವಾರರ ಪರದಾಟ: ಜೀವ ಭಯದಲ್ಲಿ ಜನ

ದೊಡ್ಡಬಳ್ಳಾಪುರ ನಗರದ ಕೋರ್ಟ್ ಎದುರಿನ ಕಾರ್ಮಲ್ ಜ್ಯೋತಿ ರಸ್ತೆಯಲ್ಲಿ ಕಳೆದ ಒಂದು ತಿಂಗಳ ಹಿಂದೆಯೇ ಒಳಚರಂಡಿಯ ಹೊಸ ಮ್ಯಾನ್ ಹೋಲ್ ಕಾರ್ಯ ಪ್ರಾರಂಭಿಸಲಾಗಿತ್ತು. ಒಳಚರಂಡಿಯ ಹೊಸ ಮ್ಯಾನ್ ಹೋಲ್ ಕಾರ್ಯಕ್ಕಾಗಿ ಮಣ್ಣು ಅಗೆಯಲಾಗಿತ್ತು.  ಆ ಮಣ್ಣಿನ ರಾಶಿಯನ್ನು ತೆರವು ಮಾಡದೇ ರಸ್ತೆ ಇಕ್ಕೆಲಗಳಲ್ಲಿ ಹಾಗೇ ಬಿಟ್ಟಿದ್ದು, ಜೊತೆಗೆ ರಾಜಕಾಲುವೆಗೆ ತಡೆಗೋಡೆಯನ್ನು ಸಹ ನಿರ್ಮಾಣ ಮಾಡಿಲ್ಲ. ರಾಜಕಾಲುವೆ ತಕ್ಕಹಾಗೇ ಮೋರಿ ನಿರ್ಮಾಣ ಮಾಡಬೇಕಿತ್ತು ಅದೂ ಮಾಡಿಲ್ಲ. ಇದರಿಂದ ಪಾದಚಾರಿಗಳು, ವಾಹನ ಸವಾರರು ಜೀವ ಅಂಗೈಲಿಟ್ಟು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಕುರಿತು ವಿನಾಯಕನಗರದ ನಿವಾಸಿ ಕೊತ್ತೂರಪ್ಪ ಮಾತಾಡಿ, ಮ್ಯಾನ್ ಹೋಲ್ ಕಾರ್ಯಕ್ಕಾಗಿ ಅಗೆದ ಮಣ್ಣನ್ನು ತೆರವು ಮಾಡಿಲ್ಲ. ರಾಜಕಾಲುವೆಗೆ ತಡೆಗೋಡೆ ನಿರ್ಮಾಣ ಮಾಡಿಲ್ಲ. ಮೋರಿ ಕಿರಿದಾಗಿದೆ. ಇಲ್ಲಿ ಏನಾದರೂ ಅನಾಹುತವಾದರೆ ನೇರ ಕಾರಣ ನಗರಸಭೆಯದ್ದಾಗಿರುತ್ತದೆ. ಇಲ್ಲಿ ಕೋರ್ಟ್ ಇರುವುದರಿಂದ ಸಾವಿರಾರು ಜನ ಈ ರಸ್ತೆಯಲ್ಲಿ ಓಡಾಡುತ್ತಾರೆ. ಈ ರಸ್ತೆ ಡಾ.ಬಿ.ಆರ್ ಅಂಬೇಡ್ಕರ್ ರಸ್ತೆಯನ್ನು ಕಲ್ಪಿಸುತ್ತದೆ. ನಿತ್ಯ ಶಾಲಾ ಮಕ್ಕಳು, ವೃದ್ಧರು, ಮಹಿಳೆಯರು ಸೇರಿ ವಿನಾಯಕನಗರದ ನಿವಾಸಿಗಳು ಈ ರಸ್ತೆಯನ್ನು ಬಳಸುತ್ತಾರೆ.. ಕಳೆದ ಎರಡ್ಮೂರು ದಿನಗಳಿಂದ ಮಳೆ ಬರುತ್ತಿದೆ. ತೇವಾಂಶಕ್ಕೆ ವಾಹನಗಳು ಸ್ಕಿಡ್ ಅಗಿ ನಿಯಂತ್ರಣ ಕಳೆದುಕೊಂಡು ರಾಜಕಾಲುವೆಗೆ ಬೀಳುವ ಭಯದಲ್ಲಿ ಇಲ್ಲಿ ಸಂಚಾರ ಮಾಡಬೇಕಿದೆ. ಹಲವರು ಈಗಾಲೇ ಇಲ್ಲಿ ಬಿದ್ದು ಗಾಯ ಮಾಡಿಕೊಂಡಿರುವ ನಿದರ್ಶನವಿದೆ. ಈ ಸಮಸ್ಯೆಯನ್ನು ಬಗೆಹರಿಸುವಂತೆ ಹಲವು ಬಾರಿ ನಗರಸಭೆ ಆಡಳಿತದ ಗಮನಕ್ಕೆ ತಂದರೂ ಏನೂ ಪ್ರಯೋಜನವಾಗಿಲ್ಲ. ನಗರಸಭೆಯ ಬೇಜವಾಬ್ದಾರಿತನಕ್ಕೆ ನಮ್ಮ ಧಿಕ್ಕಾರವಿರುತ್ತದೆ ಎಂದರು.

ಭಾರೀ ಅನಾಹುತ ಸಂಭವಿಸುವುದಕ್ಕಿಂತ ಮೊದಲೇ ಕೂಡಲೇ ನಗರಸಭೆ ಎಚ್ಚೆತ್ತುಕೊಂಡು ಇಲ್ಲಿರುವ ಮಣ್ಣಿನ ರಾಶಿಯನ್ನು ತೆರವು ಮಾಡಬೇಕು, ರಾಜಕಾಲುವೆಗೆ ತಡೆಗೋಡೆ, ಮೋರಿಯನ್ನು ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು…

Leave a Reply

Your email address will not be published. Required fields are marked *

error: Content is protected !!