ಬೇಸಿಗೆ ಆರಂಭದಲ್ಲಿಯೇ ನಗರ ವ್ಯಾಪ್ತಿಯಲ್ಲಿ ನೀರಿಗೆ ಪರದಾಟ: ನೀರಿನ ಸಮಸ್ಯೆ ನೀಗಿಸುವಂತೆ ನಗರಸಭೆ ಸದಸ್ಯರ ಒತ್ತಾಯ

ಬೇಸಿಗೆ ಆರಂಭದಲ್ಲಿಯೇ ನಗರ ವ್ಯಾಪ್ತಿಯಲ್ಲಿ ನೀರಿಗೆ ಪರದಾಟ ಆರಂಭವಾಗಿದ್ದು, ನಗರಸಭೆಯಿಂದ ವಾರಕ್ಕೊಮ್ಮೆ ಕೇವಲ ಅರ್ಧ ಗಂಟೆ ನೀರು ಬಿಡುತ್ತಿರುವುದು ಸರಿಯಲ್ಲ. ಕನಿಷ್ಟ ಎರಡು ಬಾರಿ ನೀರು ಬಿಟ್ಟು ಒಂದು ಗಂಟೆಗೂ ಅಧಿಕ ನೀರು ಪೂರೈಕೆ ಮಾಡಬೇಕು ಎಂದು ನಗರಸಭಾ ಸದಸ್ಯರು, ಅಧ್ಯಕ್ಷರು, ಪೌರಾಯುಕ್ತರಿಗೆ ಮನವಿ ಮಾಡಿದರು.

ನಗರಸಭಾ ಸಭಾಂಗಣದಲ್ಲಿ ಶುಕ್ರವಾರ ನಡೆದ ತ್ರೈಮಾಸಿಕ ಸಾಮಾನ್ಯ ಸಭೆಯಲ್ಲಿ ಸದಸ್ಯರು ಒಕ್ಕೊರಲ ಆಗ್ರಹ ಮಾಡಿದರು. ಇದಕ್ಕೆ ಸ್ಪಂದಿಸಿದ ಎಇಇ ರಾಮೇಗೌಡ ಸಮರ್ಪಕ ನೀರು ಪೂರೈಕೆ ಮಾಡಲಾಗುವುದು ಎಂದು‌ ತಿಳಿಸಿದರು.

ಸದಸ್ಯ ಶಿವಶಂಕರ್ ಮಾತನಾಡಿ, ವಿಷಯಗಳನ್ನು ಚರ್ಚೆ ಮಾಡದೆಯೇ ಆಯ್ದ ವಾರ್ಡ್ ಗಳಿಗೆ ಮಾತ್ರ ಅನುದಾನ ಮೀಸಲಿರಿಸುವುದು ಎಷ್ಟು ಸರಿ. ಇಂದಿನ ಸಭೆಯ ಅಜೆಂಡಾದಲ್ಲೂ ಕೆಲವೇ ವಾರ್ಡ್ ಗಳಿಗೆ ಕಾಮಗಾರಿಗಳು ಸಿಮೀತವಾಗಿವೆ. ಕೆಲಸಗಳನ್ನು ಕೊಡುವುದಾದರೆ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೊಡಬೇಕು. ಏಕಮುಖವಾಗಿ ತೀರ್ಮಾನ ತೆಗೆದುಕೊಂಡು ಅನುದಾನ, ಕಾಮಗಾರಿಗಳನ್ನ ಹಂಚುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತ ಕಾರ್ತಿಕೇಶ್ವರ್, ಕೆಲವು ಕಾಮಗಾರಿಗಳು ಶಾಸಕರ ಸೂಚನೆ ಮೇರೆಗೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.

ನಗರೋತ್ಥನ ಯೋಜನೆಯಡಿ ನಗರದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಗಳು ಕಳಪೆಯಾಗಿವೆ. ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡಿದ್ದಾರೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಸದಸ್ಯರು ಸೂಚಿಸಿದರು. ಇದಕ್ಕೆ ಉತ್ತರಿಸಿದ ಎಇಇ ರಾಮೇಗೌಡ, ಗುತ್ತಿಗೆದಾರರಿಗೆ ಬಿಲ್ ಕೊಟ್ಟಿಲ್ಲ. ಮತ್ತೊಮ್ಮೆ ರಸ್ತೆಗಳ ಸರಿಪಡಿಸಲಾಗುತ್ತದೆ ಎಂದರು.

ಸದಸ್ಯ ರವಿಕುಮಾರ್ ಮಾತನಾಡಿ, ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಮೂಲಕವೇ ಆಯ್ಕೆ ಆಗಬೇಕು. ಇದರ ಬಗ್ಗೆ ರೆಸ್ಯೂಲೆಷನ್ ಮಾಡಲಾಗಿದೆ. ಮುಂದೆ ಅವಿರೋಧ ಆಯ್ಕೆ ಆಗಬಾರದರು ಒತ್ತಾಯಿಸಿದರು.

ಉಳಿದಂತೆ ಪೌರಾಯುಕ್ತ ಕಾರ್ತಿಕೇಶ್ವರ್ ಮಾತನಾಡಿ, ಈ ಹಿಂದೆ ಹಳೇ ಮಾರುಕಟ್ಟೆ ಆವರಣದಲ್ಲಿ 10 ಕೋಟಿ ಅನುದಾನದಲ್ಲಿ ನಿರ್ಮಿಸಲು ಯೋಜಿಸಿದ್ದ ಯೋಜನೆಯನ್ನು ರದ್ದುಪಡಿಸಲಾಗಿದೆ. ಬದಲಾಗಿ ಎಪಿಎಂಸಿ ಮಾರುಕಟ್ಟೆ ಮಾದರಿಯಲ್ಲಿ ಹೊಸ ಮಾರುಕಟ್ಟೆ ನಿರ್ಮಾಣ ಮಾಡಲಾಗುವುದು. ನಗರದ 16 ಕಣ್ಣಿನ ಭಾವಿಯ ಸ್ವಚ್ಚತೆಗೆ ಸರ್ವಾನುಮತ ತೀರ್ಮಾನ ಮಾಡಲಾಗುವುದು. ನಗರಸಭೆಯ ಮಳಿಗೆಗಳ ಹರಾಜು ಪ್ರಕ್ರಿಯೆ ಮುಗಿದಿದೆ. ತಾಂತ್ರಿಕ ಕಾರಣಗಳಿಂದ ಹಂಚಿಕೆ ಮಾಡಲಾಗಿಲ್ಲ. ಶೀಘ್ರವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದರು.

ಈ ವೇಳೆ ಉಪಾಧ್ಯಕ್ಷ ಮಲ್ಲೇಶ್, ಪೌರಾಯುಕ್ತ ಕಾರ್ತಿಕೇಶ್ವರ್ , ಸದಸ್ಯರು, ಅಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *

error: Content is protected !!