ಹೆದ್ದಾರಿಯಿಂದ ನಗರ ಬೀದಿವರೆಗೆ ಶುಭಾಶಯ, ಸ್ವಾಗತ ಬ್ಯಾನರ್‌ಗಳದ್ದೇ ಆರ್ಭಟ: ನ್ಯಾಯಾಲಯದ ನಿರ್ದೇಶನಕ್ಕೂ ಸೊಪ್ಪು ಹಾಕದ ಅನಧಿಕೃತ ಫ್ಲೆಕ್ಸ್‌ಗಳು: ಸ್ವಚ್ಛತೆ, ಸುರಕ್ಷತೆ ಹಾಗೂ ಪರಿಸರಕ್ಕೆ ದೊಡ್ಡ ಸವಾಲು

ಬೆಂಗಳೂರು ಗ್ರಾಮಾಂತರ: ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್, ಕಟೌಟ್ ಹಾಗೂ ಬಿಲ್‌ಬೋರ್ಡ್‌ಗಳನ್ನು ಅಳವಡಿಸದಂತೆ ರಾಜ್ಯ ಸರ್ಕಾರ ಮತ್ತು ನ್ಯಾಯಾಲಯಗಳು ಪದೇಪದೇ ನಿರ್ದೇಶನ ನೀಡುತ್ತಿದ್ದರೂ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಫ್ಲೆಕ್ಸ್ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಹೆದ್ದಾರಿಗಳು, ಪಟ್ಟಣಗಳ ಪ್ರಮುಖ ರಸ್ತೆಗಳು, ವೃತ್ತಗಳು, ವಿದ್ಯುತ್ ಕಂಬಗಳು, ಸರ್ಕಾರಿ ಕಚೇರಿಗಳ ಸುತ್ತಮುತ್ತ, ಬಸ್ ನಿಲ್ದಾಣಗಳು ಹಾಗೂ ಸಾರ್ವಜನಿಕ ಗೋಡೆಗಳು ವಿವಿಧ ಸಂಘಟನೆಗಳು, ರಾಜಕೀಯ ಪಕ್ಷಗಳು ಮತ್ತು ಖಾಸಗಿ ಕಾರ್ಯಕ್ರಮಗಳ ಬ್ಯಾನರ್‌ಗಳಿಂದ ಆವೃತವಾಗಿವೆ.

ರಾಜಕೀಯ ಮುಖಂಡರ ಜನ್ಮದಿನ, ಸಚಿವರು ಹಾಗೂ ಗಣ್ಯರ ಸ್ವಾಗತ, ಧಾರ್ಮಿಕ ಉತ್ಸವಗಳು, ಸಂಘ-ಸಂಸ್ಥೆಗಳ ವಾರ್ಷಿಕೋತ್ಸವ, ಅಭಿನಂದನೆ, ಶುಭಾಶಯ ಹಾಗೂ ಸನ್ಮಾನ ಕಾರ್ಯಕ್ರಮಗಳ ಹೆಸರಿನಲ್ಲಿ ನೂರಾರು ಬ್ಯಾನರ್, ಫ್ಲೆಕ್ಸ್‌ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಲಾಗುತ್ತಿದೆ.

ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ ಹಾಗೂ ನೆಲಮಂಗಲ ಪಟ್ಟಣಗಳಲ್ಲಿ ಈ ಪ್ರವೃತ್ತಿ ಹೆಚ್ಚು ಕಂಡುಬರುತ್ತಿದ್ದು, ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ಸಾಕಷ್ಟು ತೊಂದರೆ ಉಂಟುಮಾಡುತ್ತಿದೆ.

ಅಪಘಾತಗಳಿಗೆ ಆಹ್ವಾನ ನೀಡುವ ಫ್ಲೆಕ್ಸ್ ಬ್ಯಾನರ್‌ಗಳು

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳ ಬದಿಯಲ್ಲಿ ಅಳವಡಿಸಲಾಗುತ್ತಿರುವ ಬೃಹತ್ ಗಾತ್ರದ ಫ್ಲೆಕ್ಸ್, ಬ್ಯಾನರ್‌ಗಳು ವಾಹನ ಸವಾರರ ಗಮನವನ್ನು ರಸ್ತೆಯಿಂದ ಬೇರೆಡೆ ಸೆಳೆಯುತ್ತಿವೆ. ರಾತ್ರಿ ವೇಳೆ ಪ್ರತಿಫಲಿಸುವ ಫ್ಲೆಕ್ಸ್‌ಗಳು ಹಾಗೂ ರಸ್ತೆಯ ತಿರುವುಗಳಲ್ಲಿ ಅಳವಡಿಸಿರುವ ಬ್ಯಾನರ್‌ಗಳಿಂದ ಚಾಲಕರಿಗೆ ರಸ್ತೆ ಸ್ಪಷ್ಟವಾಗಿ ಕಾಣದ ಪರಿಸ್ಥಿತಿಯೂ ನಿರ್ಮಾಣವಾಗುತ್ತಿದೆ.

ಕೆಲವೆಡೆ ಬ್ಯಾನರ್‌ಗಳು ಗಾಳಿಗೆ ಅಲುಗಾಡುತ್ತಿದ್ದು, ಮಳೆ ಹಾಗೂ ಬಿರುಗಾಳಿಯ ಸಂದರ್ಭಗಳಲ್ಲಿ ಕಿತ್ತುಬಿದ್ದು ವಾಹನಗಳ ಮೇಲೆ ಬೀಳುವ ಅಪಾಯವೂ ಎದುರಾಗುತ್ತಿದೆ. ಪಾದಚಾರಿ ಮಾರ್ಗಗಳನ್ನು ಆಕ್ರಮಿಸಿಕೊಂಡಿರುವ ಫ್ಲೆಕ್ಸ್‌ಗಳಿಂದ ವೃದ್ಧರು, ಮಕ್ಕಳು ಹಾಗೂ ದಿವ್ಯಾಂಗರ ಸಂಚಾರಕ್ಕೂ ತೊಂದರೆ ಉಂಟಾಗುತ್ತಿದೆ.

ಸರ್ಕಾರಿ ನಿಯಮಗಳಿಗೆ ಬಹಿರಂಗ ಸವಾಲು

ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಯಾವುದೇ ಜಾಹೀರಾತು ಅಥವಾ ಫ್ಲೆಕ್ಸ್ ಅಳವಡಿಸಲು ಅನುಮತಿ ಪಡೆಯುವುದು ಕಡ್ಡಾಯ. ಆದರೆ ಅನೇಕ ಕಡೆಗಳಲ್ಲಿ ಯಾವುದೇ ಅನುಮತಿಯಿಲ್ಲದೆ ರಾತ್ರೋರಾತ್ರಿ ಬ್ಯಾನರ್‌ಗಳನ್ನು ಅಳವಡಿಸಿ ಬೆಳಗ್ಗೆಯೇ ಸಾರ್ವಜನಿಕರಿಗೆ ಪ್ರದರ್ಶಿಸುವ ಪ್ರವೃತ್ತಿ ಸಾಮಾನ್ಯವಾಗಿದೆ.

ಅಧಿಕಾರಿಗಳು ಕೆಲವೊಮ್ಮೆ ತೆರವು ಕಾರ್ಯಾಚರಣೆ ನಡೆಸಿದರೂ, ಕೆಲವೇ ದಿನಗಳಲ್ಲಿ ಅದೇ ಸ್ಥಳಗಳಲ್ಲಿ ಮತ್ತೆ ಹೊಸ ಫ್ಲೆಕ್ಸ್‌ಗಳು ಕಾಣಿಸಿಕೊಳ್ಳುತ್ತವೆ. ಇದರಿಂದ ನಿಯಮ ಉಲ್ಲಂಘಿಸುವವರ ವಿರುದ್ಧ ನಿರಂತರ ಮತ್ತು ಕಠಿಣ ಕ್ರಮದ ಕೊರತೆ ಎದ್ದು ಕಾಣುತ್ತಿದೆ.

ನಗರದ ಸೌಂದರ್ಯಕ್ಕೆ ಧಕ್ಕೆ

ಸ್ವಚ್ಛ ನಗರ ನಿರ್ಮಾಣಕ್ಕಾಗಿ ಸರ್ಕಾರ ಕೋಟ್ಯಂತರ ರೂಪಾಯಿ ವೆಚ್ಚ ಮಾಡುತ್ತಿದ್ದರೂ, ಅನಧಿಕೃತ ಫ್ಲೆಕ್ಸ್‌ಗಳು ನಗರದ ಅಂದವನ್ನು ಹಾಳು ಮಾಡುತ್ತಿವೆ. ಐತಿಹಾಸಿಕ ಸ್ಥಳಗಳು, ಸರ್ಕಾರಿ ಕಚೇರಿಗಳು, ಉದ್ಯಾನಗಳು ಹಾಗೂ ಸಾರ್ವಜನಿಕ ಕಟ್ಟಡಗಳ ಮುಂಭಾಗದಲ್ಲಿ ಅಳವಡಿಸಿರುವ ಬ್ಯಾನರ್‌ಗಳು ನಗರಗಳ ಸೌಂದರ್ಯವನ್ನೇ ಮಸುಕಾಗಿಸುತ್ತಿವೆ.

ರಾಷ್ಟ್ರೀಯ ಹೆದ್ದಾರಿ ಮೂಲಕ ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಹಾಗೂ ಹೂಡಿಕೆದಾರರ ಮೇಲೆ ಇದು ಉತ್ತಮ ಪ್ರಭಾವ ಬೀರುವುದಿಲ್ಲ ಎಂಬ ಅಭಿಪ್ರಾಯವನ್ನು ನಾಗರಿಕರು ವ್ಯಕ್ತಪಡಿಸುತ್ತಿದ್ದಾರೆ.

ಪರಿಸರಕ್ಕೆ ಗಂಭೀರ ಹೊರೆ

ಬಹುತೇಕ ಫ್ಲೆಕ್ಸ್‌ಗಳು ಪ್ಲಾಸ್ಟಿಕ್ ಆಧಾರಿತ ಪಿವಿಸಿ ವಸ್ತುಗಳಿಂದ ತಯಾರಾಗುತ್ತವೆ. ಇವು ವರ್ಷಗಳ ಕಾಲ ಕೊಳೆಯದೆ ಪರಿಸರದಲ್ಲಿ ಉಳಿಯುತ್ತವೆ. ಕಾರ್ಯಕ್ರಮ ಮುಗಿದ ನಂತರ ರಸ್ತೆ ಬದಿ, ಖಾಲಿ ಜಾಗ, ಕೆರೆ, ಕಾಲುವೆ ಹಾಗೂ ತ್ಯಾಜ್ಯದ ರಾಶಿಗಳಲ್ಲಿ ಬಿದ್ದಿರುವ ಫ್ಲೆಕ್ಸ್‌ಗಳು ಪರಿಸರ ಮಾಲಿನ್ಯವನ್ನು ಹೆಚ್ಚಿಸುತ್ತಿವೆ.

ಮಳೆಗಾಲದಲ್ಲಿ ಚರಂಡಿಗಳು ಮುಚ್ಚಿ ಮಳೆ ನೀರು ಸರಾಗವಾಗಿ ಹರಿಯದಂತೆ ಮಾಡುವುದು, ಜಾನುವಾರುಗಳು ಫ್ಲೆಕ್ಸ್ ತುಂಡುಗಳನ್ನು ಆಹಾರವೆಂದು ಸೇವಿಸಿ ಅನಾರೋಗ್ಯಕ್ಕೆ ಒಳಗಾಗುವುದು, ಸುಟ್ಟಾಗ ವಿಷಕಾರಿ ಹೊಗೆ ಹೊರಸೂಸಿ ವಾಯುಮಾಲಿನ್ಯ ಉಂಟುಮಾಡುವುದು ಸೇರಿದಂತೆ ಅನೇಕ ಪರಿಸರ ಸಮಸ್ಯೆಗಳಿಗೆ ಈ ಫ್ಲೆಕ್ಸ್‌ಗಳು ಕಾರಣವಾಗುತ್ತಿವೆ ಎಂದು ಪರಿಸರ ತಜ್ಞರು ಎಚ್ಚರಿಸುತ್ತಾರೆ.

ಆರ್ಥಿಕ ನಷ್ಟವೂ ಕಡಿಮೆ ಇಲ್ಲ

ಅನಧಿಕೃತ ಫ್ಲೆಕ್ಸ್ ತೆರವು ಕಾರ್ಯಾಚರಣೆಗೆ ಸ್ಥಳೀಯ ಸಂಸ್ಥೆಗಳು ಪ್ರತಿ ವರ್ಷ ಸಾಕಷ್ಟು ಹಣ ಹಾಗೂ ಮಾನವ ಸಂಪನ್ಮೂಲ ಬಳಸಬೇಕಾಗುತ್ತದೆ. ತೆರವುಗೊಳಿಸಿದ ಫ್ಲೆಕ್ಸ್‌ಗಳ ವಿಲೇವಾರಿಯೂ ಮತ್ತೊಂದು ಸವಾಲಾಗಿದ್ದು, ಸಾರ್ವಜನಿಕರ ತೆರಿಗೆ ಹಣವೇ ಇದಕ್ಕಾಗಿ ವ್ಯಯವಾಗುತ್ತಿದೆ.

ಡಿಜಿಟಲ್ ಯುಗದಲ್ಲೂ ಫ್ಲೆಕ್ಸ್ ಮೋಹ

ಸಾಮಾಜಿಕ ಜಾಲತಾಣಗಳು ಮತ್ತು ಡಿಜಿಟಲ್ ಪ್ರಚಾರ ವ್ಯಾಪಕವಾಗಿರುವ ಇಂದಿನ ಕಾಲದಲ್ಲೂ ಫ್ಲೆಕ್ಸ್ ಸಂಸ್ಕೃತಿ ಮಾತ್ರ ಕಡಿಮೆಯಾಗಿಲ್ಲ. ರಾಜಕೀಯ ನಾಯಕರು, ಸಂಘಟನೆಗಳು ಹಾಗೂ ವಿವಿಧ ಕಾರ್ಯಕ್ರಮಗಳ ಆಯೋಜಕರು ತಮ್ಮ ಪ್ರಭಾವ ಪ್ರದರ್ಶಿಸುವ ಸಾಧನವಾಗಿ ಫ್ಲೆಕ್ಸ್‌ಗಳನ್ನು ಬಳಸುತ್ತಿದ್ದಾರೆ. “ಯಾರ ಫ್ಲೆಕ್ಸ್ ಹೆಚ್ಚು?” ಎಂಬ ಸ್ಪರ್ಧೆಯೂ ಹಲವೆಡೆ ಕಂಡುಬರುತ್ತಿದೆ.

ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಆಗ್ರಹ

ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತ ಫ್ಲೆಕ್ಸ್ ಅಳವಡಿಸುವವರ ವಿರುದ್ಧ ದಂಡ, ವೆಚ್ಚ ವಸೂಲಿ ಹಾಗೂ ಪ್ರಕರಣ ದಾಖಲಿಸುವಂತಹ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ. ಜೊತೆಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಪರಿಸರ ಸ್ನೇಹಿ ಹಾಗೂ ಡಿಜಿಟಲ್ ಶುಭಾಶಯಗಳತ್ತ ಜನರನ್ನು ಪ್ರೋತ್ಸಾಹಿಸಬೇಕೆಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ಒಟ್ಟಾರೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯು ವೇಗವಾಗಿ ನಗರೀಕರಣದತ್ತ ಸಾಗುತ್ತಿರುವ ಜಿಲ್ಲೆ. ವಿಮಾನ ನಿಲ್ದಾಣ, ಕೈಗಾರಿಕಾ ವಲಯಗಳು, ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಹೊಸ ನಗರಾಭಿವೃದ್ಧಿ ಯೋಜನೆಗಳಿಂದ ಜಿಲ್ಲೆಯ ಮಹತ್ವ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಅನಧಿಕೃತ ಫ್ಲೆಕ್ಸ್ ಸಂಸ್ಕೃತಿ ಜಿಲ್ಲೆಯ ಸ್ವಚ್ಛತೆ, ಸೌಂದರ್ಯ ಹಾಗೂ ಸುಸ್ಥಿರ ಅಭಿವೃದ್ಧಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಕಾನೂನುಗಳಿದ್ದರೂ ಅವುಗಳ ಕಟ್ಟುನಿಟ್ಟಿನ ಅನುಷ್ಠಾನ, ರಾಜಕೀಯ ಇಚ್ಛಾಶಕ್ತಿ ಹಾಗೂ ಸಾರ್ವಜನಿಕ ಜಾಗೃತಿ ಮೂಡಿದಾಗ ಮಾತ್ರ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಾಧ್ಯ ಎಂಬುದು ನಾಗರಿಕರ ಅಭಿಪ್ರಾಯವಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಗರ ಪ್ರದೇಶಗಳಲ್ಲಿ ಅನಧಿಕೃತವಾಗಿ ಅಳವಡಿಸಲಾಗಿರುವ ಫ್ಲೆಕ್ಸ್ ಹಾಗೂ ಬ್ಯಾನರ್‌ಗಳ ತೆರವಿಗೆ ಸ್ಥಳೀಯ ಆಡಳಿತಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಎಲ್ಲೆಲ್ಲಿ ನಿಯಮ ಉಲ್ಲಂಘನೆಯಾಗಿದೆ ಎಂಬುದನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಲಾಗುತ್ತದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ್ ತಿಳಿಸಿದ್ದಾರೆ.

ನಗರದ ಪ್ರಮುಖ ವೃತ್ತಗಳು ಹಾಗೂ ರಸ್ತೆ ಬದಿಗಳಲ್ಲಿ ಅನಧಿಕೃತವಾಗಿ ಫ್ಲೆಕ್ಸ್, ಬ್ಯಾನರ್, ಕಟೌಟ್ ಮತ್ತು ಬಿಲ್‌ಬೋರ್ಡ್‌ಗಳನ್ನು ಅಳವಡಿಸುವ ಪ್ರವೃತ್ತಿ ಹೆಚ್ಚುತ್ತಿದೆ. ಫ್ಲೆಕ್ಸ್ ಕಟ್ಟುವ ಮತ್ತು ಕಟ್ಟಿಸಿಕೊಳ್ಳುವ ಸಂಸ್ಕೃತಿ ಮೊದಲು ನಿಲ್ಲಬೇಕು. ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಯಾವುದೇ ಫ್ಲೆಕ್ಸ್ ಅಥವಾ ಬ್ಯಾನರ್ ಅಳವಡಿಸಬಾರದು. ಪ್ರಚಾರಕ್ಕಾಗಿ ಫ್ಲೆಕ್ಸ್‌ಗಳ ಬದಲು ಅಭಿವೃದ್ಧಿ ಕಾರ್ಯಗಳು ಮತ್ತು ಸಮಾಜಸೇವೆಯ ಮೂಲಕ ಜನರ ವಿಶ್ವಾಸ ಗಳಿಸಬೇಕು ಎಂದು ವಕೀಲ ನರಸಿಂಹಗೌಡ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!