
ದೊಡ್ಡಬಳ್ಳಾಪುರ: ನಗರದ ವಿವಾದಿತ ಕೆಮ್ಮಣ್ಣುಗುಂಡಿ ಸಾರ್ವಜನಿಕ ಸ್ಮಶಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಪ್ರಭಾವಿಯೊಬ್ಬರು ಅತಿಕ್ರಮಣ ಮಾಡಿಕೊಂಡಿದ್ದು, ಒತ್ತುವರಿ ತೆರವುಗೊಳಿಸುವಂತೆ ಹಲವು ವರ್ಷಗಳಿಂದ ಮನವಿ ಸಲ್ಲಿಸಿದರೂ ಕ್ರಮ ಕೈಗೊಳ್ಳದ ತಾಲೂಕು ಆಡಳಿತದ ನಿರ್ಲಕ್ಷ್ಯ ಖಂಡಿಸಿ ಕೆಮ್ಮಣ್ಣುಗುಂಡಿ ಸಾರ್ವಜನಿಕ ಸ್ಮಶಾನ ಹೋರಾಟ ಸಮಿತಿ ವತಿಯಿಂದ ಬುಧವಾರ ತಾಲೂಕು ಕಚೇರಿ ಬಳಿ ಅಣಕು ಶವವಿಟ್ಟು ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಸಮಿತಿ ಮುಖಂಡ ಡಿ.ಪಿ ಆಂಜನೇಯ, ಸಾರ್ವಜನಿಕ ಸ್ಮಶಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಒತ್ತುವರಿ ತೆರವುಗೊಳಿಸುವಂತೆ ಹಲವು ವರ್ಷಗಳಿಂದ ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆಗೆ ದೂರು ಸಲ್ಲಿಸುತ್ತಾ ಬರಲಾಗಿದೆ. ಈ ಸಂಬಂಧ ಹಲವು ಬಾರಿ ಪ್ರತಿಭಟನೆ ನಡೆಸಿದ್ದರೂ ಸ್ಥಳೀಯ ಆಡಳಿತ ಒತ್ತುವರಿದಾರರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಂದಾಯ ಇಲಾಖೆ ಅಧಿಕಾರಿಗಳು ಹೋರಾಟ ಸಮಿತಿ ಸಲ್ಲಿಸಿರುವ ದೂರು ಅರ್ಜಿಗಳಿಗೆ ಸೂಕ್ತವಾಗಿ ಸ್ಪಂದಿಸದೆ, ಒಂದಲ್ಲೊಂದು ಸಬೂಬು ಹೇಳುತ್ತಾ ಕಾಲಹರಣ ಮಾಡುತ್ತಿದ್ದಾರೆ. ಅಧಿಕಾರಿಗಳ ವರ್ತನೆಯಿಂದ ಒತ್ತುವರಿದಾರರೊಂದಿಗೆ ಶಾಮೀಲಾಗಿರುವ ಅನುಮಾನ ಮೂಡುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಹಾಗೂ ಶಾಸಕರು ಸೇರಿದಂತೆ ಸಂಬಂಧಪಟ್ಟ ಎಲ್ಲ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಗಮನಕ್ಕೆ ಸಮಸ್ಯೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸಾರ್ವಜನಿಕರು ಮೃತಪಟ್ಟ ತಮ್ಮ ಕುಟುಂಬದವರ ಅಂತ್ಯಕ್ರಿಯೆ ನಡೆಸಲು ತೆರಳುವ ಸ್ಮಶಾನದ ರಸ್ತೆಯೇ ಒತ್ತುವರಿಯಾಗಿರುವುದು ಗಂಭೀರ ಸಮಸ್ಯೆಯಾಗಿದೆ. ಇಂತಹ ಸೂಕ್ಷ್ಮ ವಿಚಾರದಲ್ಲಿಯೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿರುವುದು ಖಂಡನೀಯ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಇನ್ನೆಷ್ಟು ದಿನ ತೊಂದರೆ ಅನುಭವಿಸಬೇಕು ಎಂದು ಪ್ರಶ್ನಿಸಿದರು.
ತಹಶೀಲ್ದಾರ್ ಭರವಸೆಗೆ ಪ್ರತಿಭಟನೆ ಅಂತ್ಯ:
ಪ್ರತಿಭಟನಾ ನಿರತರನ್ನು ತಹಶೀಲ್ದಾರ್ ಮಲ್ಲಪ್ಪ ಕೆ ಯರಗೋಳ ಭೇಟಿಯಾಗಿ ಮಾತುಕತೆ ನಡೆಸಿದರು. ಈ ವೇಳೆ ಸ್ಮಶಾನಕ್ಕಿರುವ ಹಾಲಿ ರಸ್ತೆಯ ಜಾಗಕ್ಕೆ ಖಾತೆ ಆಗಿದೆ. ಈ ರಸ್ತೆಯ ಬದಲಾಗಿ ಪರ್ಯಾಯ ವ್ಯವಸ್ಥೆ ಮಾಡಿಕೊಡಲಾಗುವುದು. ಇದಕ್ಕೆ ಸಮಯವಕಾಶ ನೀಡಿ ಎಂದು ಪ್ರತಿಭಟನಾಕಾರರಲ್ಲಿ ತಿಳಿಸಿದರು. ಇದಕ್ಕೆ ಒಪ್ಪದ ಹೋರಾಟಗಾರರು ಹಾಲಿ ರಸ್ತೆಯ ಒತ್ತುವರಿ ತೆರವುಗೊಳಿಸಿ ನಮಗೆ ನ್ಯಾಯ ಕೊಡಿಸಿ, ಪ್ರಬಲರಿಗೊಂದು, ಬಡಪಾಯಿಗೊಂದು ನ್ಯಾಯ ಬೇಡ ಎಂದರು. ಸ್ಥಳಕ್ಕೆ ಜಿಲ್ಲಾಧಿಕಾರಿಗಳನ್ನು ಕರೆಸುವಂತೆ ಪಟ್ಟು ಹಿಡಿದು ಪ್ರತಿಭಟನೆ ಮುಂದುವರೆಸಿದರು. ಸಂಜೆ ವೇಳೆಗೆ ಮತ್ತೊಂದು ಸುತ್ತಿನ ಸಭೆ ನಡೆಸಿದ ತಹಶೀಲ್ದಾರ್ ಐದು ದಿನಗಳ ಕಾಲವಕಾಶ ನೀಡಿ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು. ಇದಕ್ಕೆ ಒಪ್ಪಿದ ಪ್ರತಿಭಟನಾಕಾರರು ಪ್ರತಿಭಟನೆ ಅಂತ್ಯಗೊಳಿಸಿದರು.
ಈ ವೇಳೆ ಹೋರಾಟ ಸಮಿತಿ ಮುಖಂಡರಾದ ಸಂಜೀವನಾಯಕ್, ಸು. ನರಸಿಂಹಮೂರ್ತಿ, ಡಿ.ಪಿ. ಆಂಜನೇಯ, ರವಿಕುಮಾರ್, ಪರಮೇಶ್, ವೆಂಕಟೇಶ್, ನಾರಾಯಣ್, ಅರುಣ್ ಕುಮಾರ್, ಮಂಜುನಾಥ, ನವೀನ್ ಕುಮಾರ್, ಮುದ್ದುಕೃಷ್ಣ, ಶ್ರೀನಿವಾಸ್ ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರು ಉಪಸ್ಥಿತರಿದ್ದರು.