Categories: ಲೇಖನ

ಹೃದಯಘಾತದಿಂದ ದಿಢೀರ್ ಸಾವುಗಳ ಸುತ್ತಾ…..

ಇತ್ತೀಚಿನ ಕೆಲವು ಮಾಧ್ಯಮ ವರದಿಗಳನ್ನು ನೋಡುತ್ತಿದ್ದರೆ ಅನೇಕ ಯುವಕ ಯುವತಿಯರು, ವಿದ್ಯಾರ್ಥಿಗಳು ಹೃದಯಘಾತದಿಂದ ದಿಢೀರನೆ ಯಾವುದೇ ಪೂರ್ವ ಮುನ್ಸೂಚನೆ ಇಲ್ಲದೆ ಸಾಯುತ್ತಿರುವುದು ಹೆಚ್ಚಾಗುತ್ತಿದೆ. ಅದಕ್ಕೆ ಹಲವಾರು ಕಾರಣಗಳು ಇರಬಹುದು. ಅದನ್ನು ವೈದ್ಯಕೀಯ ಸಂಶೋಧನಾ ಕ್ಷೇತ್ರ ಪರಿಹಾರ ಕಂಡುಕೊಳ್ಳಬೇಕಾಗುತ್ತದೆ ಮತ್ತು ಸರ್ಕಾರವು ಆ ನಿಟ್ಟಿನಲ್ಲಿ ಪ್ರಯತ್ನ ಪಡಲಿ……

ಆದರೆ ಈ ಕ್ಷಣದಲ್ಲಿ ಆ ವಿಷಯಗಳ ಬಗ್ಗೆ ನಾವು ಹೊಂದಬಹುದಾದ ಕೆಲವು ಮಾನಸಿಕ ಮತ್ತು ದೈಹಿಕ ಪೂರ್ವ ತಯಾರಿಗಳ ಬಗ್ಗೆ ನನ್ನ ವೈಯಕ್ತಿಕ ಅನಿಸಿಕೆ.

ಯಾರಿಗೂ ಮನುಷ್ಯನ ಆಯಸ್ಸಿನ ಬಗ್ಗೆ, ಮನುಷ್ಯನ ಬದುಕಿನ ಬಗ್ಗೆ ಸಂಪೂರ್ಣ ಖಚಿತತೆ ಇರುವುದಿಲ್ಲ. ನಾವು ವಾಸಿಸುವ ಪ್ರದೇಶದ ವಾತಾವರಣಕ್ಕೆ ಅನುಗುಣವಾಗಿ, ನಮ್ಮ ಅನುವಂಶೀಯ ದೇಹ ಪ್ರಕೃತಿಯ ಅನುಸಾರವಾಗಿ, ನಮ್ಮ ಬುದ್ಧಿ ಶಕ್ತಿಯ ಬೆಳವಣಿಗೆಯ ರೀತಿಗೆ ತಕ್ಕಂತೆ, ನಮ್ಮ ಆಡಳಿತ ವ್ಯವಸ್ಥೆ ಮತ್ತು ಒಟ್ಟು ವ್ಯವಸ್ಥೆಗೆ ನಾವು ಪ್ರತಿಕ್ರಿಯಿಸುವ ರೀತಿ ಸಾಮಾನ್ಯವಾಗಿ ನಮ್ಮ ಆಯಸ್ಸನ್ನು ನಿರ್ಧರಿಸುತ್ತದೆ.

ಅಂದರೆ ಸಹಜವಾಗಿ 70/80 ವಯಸ್ಸು ಒಂದು ಸರಾಸರಿ ಎಂದು ಭಾವಿಸಿದರೆ ಈ ಮಧ್ಯೆ ಪ್ರಾಕೃತಿಕ ವಿಕೋಪಗಳು, ಯುದ್ಧಗಳು, ಅಪಘಾತಗಳು, ಅನಾರೋಗ್ಯ, ಅಪರಾಧಗಳು, ಆಕಸ್ಮಿಕಗಳು ನಮ್ಮನ್ನು ಕೊಲ್ಲಬಹುದು. ಅದನ್ನು ಹೊರತುಪಡಿಸಿದರೆ ನಾವು ಸಾಮಾನ್ಯವಾಗಿ ಬದುಕುತ್ತೇವೆ. ಇದು ಸಹಜ ಜೀವನ ಕ್ರಮ. ಕೆಲವೊಮ್ಮೆ ನಮ್ಮ ಜೀವನ ಶೈಲಿಯೂ ಸಹ ನಮ್ಮ ಆಯಸ್ಸನ್ನು ನಿರ್ಧರಿಸುತ್ತದೆ. ಇದರ ಅರಿವಿನೊಂದಿಗೆ ನಾವು ಎಷ್ಟು ಸಾಧ್ಯವೋ ಅಷ್ಟು ದೇಹ ಮತ್ತು ಮನಸ್ಸನ್ನು ನಿಯಂತ್ರಣ ಇಟ್ಟುಕೊಂಡು ಬದುಕಬೇಕು….

ಅದನ್ನು ಮೀರಿ ಇನ್ನೇನಾದರೂ ಘಟನೆಗಳಿಂದ ಒಂದು ವೇಳೆ ಸಾವು ಸಂಭವಿಸಿದರೂ ಅದನ್ನು ಸಹಜವಾಗಿ ಸ್ವೀಕರಿಸಬೇಕು. ಅದಕ್ಕೆ ಬೇರೆ ದಾರಿಯೇ ಇಲ್ಲ. ಹೇಗಿದ್ದರೂ ಸಾವು ಬರುವವರೆಗೂ ನಾವು ಬದುಕಿರುತ್ತೇವೆ, ಬಂದ ನಂತರ ಅದು ನಮಗೆ ತಿಳಿಯುವುದೇ ಇಲ್ಲ ಎಂಬ ಧೈರ್ಯವನ್ನು ಅಳವಡಿಸಿಕೊಳ್ಳಬೇಕು. ಅಂದರೆ ಸಾವು ಒಂದು ಅನಿವಾರ್ಯ ಕ್ರಿಯೆಯಾಗಿರುವುದರಿಂದ ಅದು ನಮ್ಮ ಕೈಯಲ್ಲಿ ಇಲ್ಲ. ಇರುವ ಅವಕಾಶಗಳನ್ನು ಎಷ್ಟು ಸಾಧ್ಯವೋ ಅಷ್ಟು ಉತ್ತಮ ರೀತಿಯಲ್ಲಿ ಸದುಪಯೋಗಪಡಿಸಿಕೊಂಡು ನಮ್ಮನ್ನು ನಾವು ಕಾಪಾಡಿಕೊಳ್ಳಬೇಕು. ಪಶ್ಚಾತಾಪಕ್ಕೆ ಅವಕಾಶ ಕೊಡಬಾರದು……

ಅಂದರೆ ಅನಾವಶ್ಯಕವಾಗಿ ಅಕ್ರಮ ಚಟುವಟಿಕೆಗಳಲ್ಲಿ ಭಾಗವಹಿಸುವುದು, ದುಶ್ಚಟಗಳಿಗೆ ದಾಸರಾಗುವುದು, ನಮ್ಮನ್ನೇ ನಾವು ಆತ್ಮಹತ್ಯೆಗೆ ಪ್ರಯತ್ನಿಸುವುದು ಮುಂತಾದ ಚಟುವಟಿಕೆಗಳಲ್ಲಿ ಭಾಗವಹಿಸದೆ ಸಹಜವಾಗಿ ಜೀವಿಸುವುದು. ಅದರ ನಂತರ ಸಾವು ಬರುವುದಾದರೆ ನಾವು ಮಾಡುವುದಾದರೂ ಏನು ಎಂಬ ರೀತಿಯ ಸ್ಥಿತಪ್ರಜ್ಞತೆ ಬೆಳೆಸಿಕೊಳ್ಳಲು ಪ್ರಯತ್ನಿಸಬೇಕು…….

ಜಾತಸ್ಯ ಮರಣಂ ಧ್ರುವಂ…….

ಹುಟ್ಟಿದ ಕ್ಷಣದಿಂದ ಮನುಷ್ಯ ಸಾಗುವುದೇ ಮರಣದ ಕಡೆಗೆ,

ಕೆಲವು ಅನಿರೀಕ್ಷಿತ ಮತ್ತು ಅಕಾಲಿಕ ಸಾವುಗಳು ನಮ್ಮನ್ನು ಕದಡಿ ಬಿಡುತ್ತವೆ. ಅವರು ಹತ್ತಿರದವರೇ ಆಗಿರಲಿ ಅಥವಾ ದೂರದ ವ್ಯಕ್ತಿಗಳೇ ಆಗಿರಲಿ ಅಥವಾ ಜನಪ್ರಿಯತೆ ಹೊಂದಿದವರೇ ಆಗಿರಲಿ ಏನೋ ಒಂದು ಸಂಕಟ ಮನಸ್ಸಿನಲ್ಲಿ ಉಂಟಾಗುತ್ತದೆ.

ಸಾವು ಅನಿವಾರ್ಯ. ಅದು ಎಲ್ಲರಿಗೂ ತಿಳಿದಿದೆ. ಸಮಯ ಮಾತ್ರ ಸ್ವಲ್ಪ ಹೆಚ್ಚು ಕಡಿಮೆ ಆಗಬಹುದು. ಆದರೂ ಇನ್ನೆಂದೂ ಬಾರದ ಲೋಕಕ್ಕೆ ಜೀವ ಹೊರಟು ಹೋಗುತ್ತದೆ ಎಂಬ ಭಾವವೇ ನಮ್ಮನ್ನು ಕುಸಿಯುವಂತೆ ಮಾಡಿ ಅಪಾರ ತಲ್ಲಣಗಳನ್ನು ಸೃಷ್ಟಿಸುತ್ತದೆ. ನಮ್ಮ ಪ್ರೀತಿ ಪಾತ್ರರ ಈ ರೀತಿಯ ಸಾವುಗಳನ್ನಂತೂ ಊಹಿಸಿಕೊಳ್ಳುವುದು ಸಹ ತುಂಬಾ ಯಾತನಾಮಯ.

ಸಹಜವಾಗಿ ಸಾವೆಂದರೆ ದೇಹದ ಚಲನೆಯ ನಿಲ್ಲುವಿಕೆ ಅಥವಾ ತಟಸ್ಥವಾಗುವಿಕೆ. ಅದಕ್ಕಿಂತ ಹೆಚ್ಚಿನ ಅರ್ಥ ಹುಡುಕತೊಡಗಿದರೆ ನಮ್ಮ ಒತ್ತಡ ಹೆಚ್ಚುತ್ತದೆ. ಏನೇ ಅರ್ಥಗಳು ಇದ್ದರೂ ನಾವು ಇಲ್ಲಿರುವುದಿಲ್ಲ ಎಂಬುದಷ್ಟೇ ಸತ್ಯ. ಉಳಿದದ್ದೆಲ್ಲ ಅದರ ವ್ಯಾಖ್ಯಾನ ಮಾತ್ರ.

ಸಾವೇ ಅಂತಿಮ ಅಲ್ಲಿಂದ ಮುಂದೆ ಏನೂ ಉಳಿದಿರುವುದಿಲ್ಲ. ಆದರೆ ಸಮಸ್ಯೆ ಇರುವುದು ಅವರ ಅವಲಂಬಿತರು ಮತ್ತು ಪ್ರೀತಿ ಪಾತ್ರರದು. ಸಾವನ್ನು ಸಹಜವಾಗಿ ಸ್ವೀಕರಿಸುವ ಮನೋಭಾವ ಬಹುಶಃ ವಿಶ್ವದ ಯಾರಲ್ಲಿಯೂ ಕಾಣುವುದಿಲ್ಲ. ಕೇವಲ ಕೆಲವು ತೀರಾ ಅಪರೂಪದ ಆಧ್ಯಾತ್ಮಿಕ ಸಾಧಕರು ಆ ಸ್ಥಿತಿ ತಲುಪಿರಬಹುದು. ಅಷ್ಟೊಂದು ಭಾವನಾತ್ಮಕ ನಿಯಂತ್ರಣ ಸಾಮಾನ್ಯ ಜನರಲ್ಲಿ ಇರುವುದಿಲ್ಲ. ಅದು ತಡೆಯಲಾಗದ ಅಳುವಿನ ರೂಪದಲ್ಲಿ ವ್ಯಕ್ತವಾಗುತ್ತದೆ. ನೆನಪುಗಳು ಅಲೆಅಲೆಯಾಗಿ ಅಪ್ಪಳಿಸಿ ದುಃಖ ಉಮ್ಮಳಿಸಿ ಬರುತ್ತದೆ.

ಇನ್ನು‌ ಆ ಜೀವ ನಮ್ಮೊಂದಿಗೆ ಇರುವುದಿಲ್ಲ ಎಂಬುದರ ಜೊತೆಗೆ ಅದರಿಂದ ಮುಂದಿನ ನಮ್ಮ ಮೇಲಾಗುವ ಪರಿಣಾಮಗಳು ಸಹ ದುಃಖದ ಪ್ರಭಾವ ಹೆಚ್ಚಿಸುತ್ತದೆ.
ಮರಣವೇ ಮಹಾ ನವಮಿ ಎಂಬ ಶರಣರ ಮಾತುಗಳನ್ನು ವಾಸ್ತವಕ್ಕೆ ಅಳವಡಿಸಿಕೊಳ್ಳುವಷ್ಟು ನಮ್ಮ ಸಮಾಜದ ವೈಯಕ್ತಿಕ ಅಥವಾ ಸಾಮೂಹಿಕ ಮನೋಭಾವ ಬೆಳೆದು ಬಂದಿಲ್ಲ.

ಸಾವಿನ ನೋವನ್ನು ತಡೆಯಲು ಯಾವುದೇ ಸಿದ್ದ ಸೂತ್ರಗಳು ಇಲ್ಲ. ಆದರೆ ಸಲಹೆಗಳು ಸಿದ್ದವಾಗಿರುತ್ತವೆ. ಸಾವು ಅನಿವಾರ್ಯ ಅದನ್ನು ಒಪ್ಪಿಕೊಳ್ಳಲೇ ಬೇಕು. ಬದುಕಿರುವವರ ಜೀವನ ಮುಂದೆ ಸಾಗಲೇ ಬೇಕು. ಆ ಸಾಗುವ ಪಯಣದಲ್ಲಿ ದಿನನಿತ್ಯದ ಚಟುವಟಿಕೆಗಳು ಜವಾಬ್ದಾರಿಗಳು ಸಮಯ ಸರಿದಂತೆ ಸಾವಿನ ತೀವ್ರತೆ ಕಡಿಮೆ ಮಾಡುತ್ತದೆ. ಅಪಾರ ಜ್ಞಾನದಿಂದ ಮೂಡುವ ಮನಸ್ಸಿನ ನಿಯಂತ್ರಣ ಸಹ ಸಾವಿನ ದುಃಖವನ್ನು ಕಡಿಮೆ ಮಾಡುತ್ತದೆ. ಆದರೆ ಅದು ಎಲ್ಲರಿಗೂ ಸಾಧ್ಯವಾಗುವುದಿಲ್ಲ.

ಆಧ್ಯಾತ್ಮಿಕವಾಗಿ ಈ ಸಾವಿನ ನೋವುಗಳನ್ನು ನಿಯಂತ್ರಿಸಲು ಸಾಕಷ್ಟು ಅರ್ಥಗಳನ್ನು ಹುಡುಕಿಕೊಳ್ಳಲಾಗಿದೆ. ಆಚರಣೆಗಳನ್ನು ಪಾಲನೆ ಮಾಡಲಾಗುತ್ತದೆ. ಮನಸ್ಸಿಗೆ ಸಾವನ್ನು ಒಪ್ಪಿಕೊಳ್ಳುವ ರೀತಿಯಲ್ಲಿ ಇವು ಬೆಳೆದು ಬಂದಿದೆ.

ಒಂದು ರೀತಿಯಲ್ಲಿ ಆಧ್ಯಾತ್ಮಿಕದ ಅಸ್ತಿತ್ವವೇ ಬದುಕಿಗಿಂತ ಸಾವಿನ ಭಯದಿಂದಲೇ ಹೆಚ್ಚು ಪ್ರಚಲಿತವಾಗಿದೆ ಎಂದು ಹೇಳಬಹುದು. ಜೀವ ಮರಳಿಸುವ ಶಕ್ತಿ ಯಾರಿಗೂ ಇಲ್ಲದೇ ಇರುವುದರಿಂದ ಸಾವನ್ನು ಸ್ವೀಕರಿಸುವ ವಿಧಾನಗಳತ್ತಲೇ ಎಲ್ಲರ ಚಿತ್ತ. ಜನ್ಮಾಂತರ ಅಥವಾ ಪುನರ್ಜನ್ಮದ ಸೃಷ್ಟಿ ಸಹ ಇದರ ಭಾಗವೇ ಆಗಿದೆ.

ಏನೇ ಹೇಳಿದರು ಸಾವಿನ ನೋವುಗಳು ಸದಾ ನಮ್ಮ ಬದುಕಿನ ಭಾಗವಾಗಿ ನಮ್ಮನ್ನು ಕಾಡುತ್ತಲೇ ಇರುತ್ತದೆ. ನಮ್ಮ ಸಾವು ಬರುವವರೆಗೂ……

ಇದರ ಬಗ್ಗೆ ತುಂಬಾ ಆಳಕ್ಕೆ ಇಳಿದು ಯೋಚಿಸಬಹುದು. ಆದರೆ ಅದೊಂದು ಅಧ್ಯಯನ ಮಾತ್ರವಾಗಿರುತ್ತದೆ. ಸಾಮಾನ್ಯರಿಗೆ ಅದೊಂದು ವ್ಯರ್ಥ ಪ್ರಯತ್ನ ಎನಿಸುತ್ತದೆ. ಅರ್ಥಗಳ ಹುಡುಕಾಟಕ್ಕೆ ಮಾತ್ರ ಸೀಮಿತವಾಗಿರುತ್ತದೆ. ವಾಸ್ತವ ತುಂಬಾ ಭಿನ್ನವಾಗಿರುತ್ತವೆ.

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಮೊಬೈಲ್ ನೋಡುತ್ತಾ ಕುಳಿತಿದ್ದ 21 ವರ್ಷದ ಯುವಕನಿಗೆ ಚಾಕು ಇರಿತ: ಚಾಕು ಇರಿತ ವಿಡಿಯೋ ಸಿಸಿಟಿವಿಯಲ್ಲಿ ಸೆರೆ

ತನ್ನ ಪಾಡಿಗೆ ತಾನು ಮೊಬೈಲ್ ನೋಡುತ್ತಾ ಕುಳಿತಿದ್ದ ಯುವಕನಿಗೆ ಚಾಕು ಇರಿದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕಿನ…

2 hours ago

ರಾಹುಲ್ ಗಾಂಧಿ ಸೈದ್ಧಾಂತಿಕ ಬದ್ಧತೆಯಿರುವ ವ್ಯಕ್ತಿ….

ರಾಹುಲ್ ಗಾಂಧಿ...... ಬಿಹಾರ ಚುನಾವಣೆಯಲ್ಲಿ, ಸೀಟುಗಳ ಲೆಕ್ಕದಲ್ಲಿ ಕಾಂಗ್ರೆಸ್ ಪಕ್ಷದ ಸೋಲಿನ ನಂತರ ಶ್ರೀ ರಾಹುಲ್ ಗಾಂಧಿಯವರ ನಾಯಕತ್ವದ ಸಾಮರ್ಥ್ಯದ…

4 hours ago

ಇಬ್ಬರು ಏರೋಸ್ಪೇಸ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕಾಲೇಜಲ್ಲಿ ಶೋಕಿ ಮಾಡೋ ಖಯಾಲಿ: ಆದ್ರೆ ಜೇಬಲ್ಲಿ ಕಾಂಚಾಣ ಇಲ್ಲ: ಕಾಸಿಗಾಗಿ ಏನು ಮಾಡಿದ್ರು ಗೊತ್ತಾ……

ಕಾಲೇಜಿನಲ್ಲಿ ಶೋಕಿಗಾಗಿ ಮನೆಗಳ್ಳತನಕ್ಕೆ ಇಳಿದಿದ್ದ ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನ (Aerospace Engineering Student) ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ. ಚೇತನ್ ಹಾಗೂ…

17 hours ago

ಕನ್ನಡ ರಾಜ್ಯೋತ್ಸವ ಪ್ರಯುಕ್ತ ಹೀಲಿನ್ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಸಣಾ ಶಿಬಿರ

ಕನ್ನಡ ರಾಜ್ಯೋತ್ಸವ ಅಂಗವಾಗಿ ದೊಡ್ಡಬಳ್ಳಾಪುರದ ಹೀಲಿನ್ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಸಣಾ ಶಿಬಿರವನ್ನು ಆಸ್ಪತ್ರೆಯಲ್ಲೇ ಆಯೋಜನೆ ಮಾಡಲಾಗಿತ್ತು. ಸಾರ್ವಜನಿಕರಿಗೆ…

18 hours ago

ದೇಶದ ಅತ್ಯುತ್ತಮ ಪೊಲೀಸ್ ಠಾಣಾ ಪ್ರಶಸ್ತಿಗೆ ರಾಯಚೂರಿನ ಕವಿತಾಳ ಪೊಲೀಸ್ ಠಾಣೆ ಆಯ್ಕೆ

ಕೇಂದ್ರ ಸಚಿವಾಲಯ ನೀಡುವ ಅತ್ಯುತ್ತಮ ಪೊಲೀಸ್ ಠಾಣಾ ಪ್ರಶಸ್ತಿಗೆ ಕರ್ನಾಟಕದ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕವಿತಾಳ ಪೊಲೀಸ್ ಠಾಣೆ…

23 hours ago

ನಾಯಿ, ಹಾವು/ ಇತರೆ ಪ್ರಾಣಿಗಳ ದಾಳಿ ಪ್ರಕರಣಗಳಲ್ಲಿ ಚಿಕಿತ್ಸೆ ನೀಡುವ ಬಗ್ಗೆ ಸರ್ಕಾರಿ- ಖಾಸಗಿ ಆಸ್ಪತ್ರೆಗಳು ಅನುಸರಿಸಬೇಕಾದ ಕ್ರಮಗಳು

ನಮ್ಮ‌ ದೇಶದ ಸರ್ವೋಚ್ಚ ನ್ಯಾಯಾಲಯವು, ನಾಯಿ ಕಡಿತಕ್ಕೆ ಚಿಕಿತ್ಸೆ ನೀಡುವ ಬಗ್ಗೆ ಸರ್ಕಾರಿ- ಖಾಸಗಿ ಆಸ್ಪತ್ರೆಗಳು ಅನುಸರಿಸಬೇಕಾದ ಕ್ರಮಗಳಿಗೆ ಸಂಬಂಧಿಸಿದಂತೆ…

1 day ago