ಹವಾಮಾನ ವೈಪರಿತ್ಯಕ್ಕೆ ತತ್ತರಿಸಿದ ಕೃಷಿ: ಮಾವು, ದ್ರಾಕ್ಷಿ, ತರಕಾರಿ ಬೆಳೆಗಳಿಗೆ ಭಾರೀ ಹೊಡೆತ

ರಾಜ್ಯದ ಹಲವು ಭಾಗಗಳಲ್ಲಿ ಈ ಬಾರಿ ತೀವ್ರ ಬೇಸಿಗೆ ಮತ್ತು ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳು ಸಂಕಷ್ಟಕ್ಕೆ ಸಿಲುಕಿವೆ. 2026-27ನೇ ಸಾಲಿನ ಪೂರ್ವ ಮುಂಗಾರು ಅವಧಿಯಲ್ಲಿ ಹವಾಮಾನದಲ್ಲಿ ಉಂಟಾದ ತೀವ್ರ ವ್ಯತ್ಯಾಸ ರೈತ ಸಮುದಾಯದಲ್ಲಿ ಆತಂಕ ಮೂಡಿಸಿದೆ.

ಸೂಪರ್ ಎಲಿನಿನೋ ಪರಿಣಾಮದಿಂದ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಶೇ.30ರಷ್ಟು ಮಳೆ ಕೊರತೆ ಕಂಡುಬಂದಿದ್ದು, ಇದರ ನೇರ ಪರಿಣಾಮ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಮೇಲೆ ಬೀಳುತ್ತಿದೆ ಎಂದು ಬೆಂ.ಗ್ರಾ. ಜಿಲ್ಲೆ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಬಿ.ಜಿ. ಹನುಮಂತರಾಯ ತಿಳಿಸಿದ್ದಾರೆ.

ಈ ಹಿಂದೆ ಬೇಸಿಗೆಯ ತಾಪಮಾನ ಕೇವಲ ವಾರ ಅಥವಾ ಹತ್ತು ದಿನಗಳ ಮಟ್ಟಿಗೆ ಮಾತ್ರ ಹೆಚ್ಚಾಗುತ್ತಿತ್ತು. ಆದರೆ ಈ ವರ್ಷ ಫೆಬ್ರವರಿಯಿಂದಲೇ ಉರಿ ಬೇಸಿಗೆ ಆರಂಭವಾಗಿದ್ದು, ಹಗಲಿನ ತಾಪಮಾನ 35 ಡಿಗ್ರಿ ಸೆಲ್ಷಿಯಸ್ ಗಡಿ ದಾಟುತ್ತಿದೆ. ರಾತ್ರಿ ಸಮಯದಲ್ಲೂ 27 ಡಿಗ್ರಿಗೂ ಹೆಚ್ಚು ತಾಪಮಾನ ದಾಖಲಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಕಡಿಮೆ ಆದ್ರತೆ ಮತ್ತು ಅಧಿಕ ತಾಪಮಾನದಿಂದ ಹವಾಮಾನ ವೈಪರಿತ್ಯ ಉಂಟಾಗಿ ಮಳೆ ಸಕಾಲಕ್ಕೆ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ.

ಮಾವು ಬೆಳೆಗೆ ದೊಡ್ಡ ಹೊಡೆತ

ಈ ಬಾರಿಯ ಬಿಸಿಗಾಳಿ ಮತ್ತು ಉಷ್ಣಾಂಶ ಏರಿಕೆಯಿಂದ ಮಾವು ಬೆಳೆ ಅತ್ಯಂತ ಹಾನಿಗೊಳಗಾಗಿದೆ. ಫೆಬ್ರವರಿಯಲ್ಲಿ ಮಾವಿನ ಮರಗಳಲ್ಲಿ ಅಪಾರ ಪ್ರಮಾಣದಲ್ಲಿ ಹೂ ಬಿಟ್ಟಿದ್ದರೂ, ಹೆಚ್ಚಿನ ತಾಪಮಾನದಿಂದ ಹೂಗಳು ಕಾಯಿಯಾಗುವ ಪ್ರಕ್ರಿಯೆ ವಿಫಲವಾಗಿದೆ. ಪರಾಗಸ್ಪರ್ಶವಾದ ಬಳಿಕ ಕಾಯಿಯಾಗಬೇಕಿದ್ದ ಹೂಗಳು ಒಣಗಿ ಮಣ್ಣಿನಲ್ಲಿ ಬೆರೆತಿವೆ. ಉಳಿದಿರುವ ಕೆಲ ಕಾಯಿಗಳೂ ಸಹ ಸೂರ್ಯನ ತೀವ್ರ ಕಿರಣಗಳಿಗೆ ತುತ್ತಾಗಿ ಹಾನಿಗೊಳಗಾಗುತ್ತಿವೆ.

ಸಾಮಾನ್ಯವಾಗಿ 450 ಗ್ರಾಂ ತೂಕ ಬರಬೇಕಾದ ಬಾದಾಮಿ ಮಾವಿನಕಾಯಿ 300 ಗ್ರಾಂಗೂ ಕಡಿಮೆ ತೂಕ ಹೊಂದಿದ್ದು, 500 ಗ್ರಾಂ ಇರಬೇಕಾದ ಮಲ್ಲಿಕಾ ಮಾವು 400 ಗ್ರಾಂ ಸುತ್ತಮುತ್ತ ಮಾತ್ರ ತೂಕ ತಾಳುತ್ತಿದೆ. ಹಣ್ಣಿನ ಗಾತ್ರ ಕಡಿಮೆಯಾಗುವುದರ ಜೊತೆಗೆ ಬಣ್ಣ ಮತ್ತು ರುಚಿಯಲ್ಲಿಯೂ ವ್ಯತ್ಯಾಸ ಕಂಡುಬರುತ್ತಿದೆ. ಇದರಿಂದ ಮಾರುಕಟ್ಟೆಯಲ್ಲಿ ಬೆಲೆ ಕುಸಿಯುವ ಸಾಧ್ಯತೆ ಹೆಚ್ಚಿದ್ದು, ಮಾವು ಬೆಳೆಗಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಭೀತಿ ಎದುರಾಗಿದೆ.

ದ್ರಾಕ್ಷಿ ಮತ್ತು ತರಕಾರಿ ಬೆಳೆಗಳಿಗೂ ಬಿಸಿ ಬಿಸಿ ಪೆಟ್ಟು

ತೋಟಗಾರಿಕೆ ಬೆಳೆಗಳಾದ ದ್ರಾಕ್ಷಿಯ ಮೇಲೂ ತಾಪಮಾನ ಪರಿಣಾಮ ಬೀರಿದೆ. ಈಗಾಗಲೇ ಬೆಳವಣಿಗೆಯ ಹಂತದಲ್ಲಿರುವ ದ್ರಾಕ್ಷಿ ಕಾಯಿಗಳು ಉರಿ ಬಿಸಿಲಿನಿಂದ ಕುಂಠಿತವಾಗುತ್ತಿವೆ. ಇಂತಹ ಸಂದರ್ಭದಲ್ಲಿ ದಿಢೀರ್ ಮಳೆ ಬಂದರೆ ಕಾಯಿಗಳಲ್ಲಿ ಒಡಕು ಉಂಟಾಗಿ ನೆಲಕ್ಕೆ ಬೀಳುವ ಸಾಧ್ಯತೆ ಹೆಚ್ಚಿದೆ. ದೀರ್ಘಾವಧಿಯ ತಾಪಮಾನದ ಒತ್ತಡದಿಂದ ಕೊಯ್ಲಿಗೆ ಬರುವ ಮುನ್ನವೇ ಕಾಯಿ ಹಾಳಾಗುತ್ತಿದೆ.

ಕೃಷಿ ಬೋರ್‌ವೆಲ್‌ಗಳಲ್ಲಿ ನೀರಿನ ಅಭಾವ

ಮಳೆ ಕೊರತೆಯಿಂದ ಅಂತರ್ಜಲ ಮಟ್ಟ ಕುಸಿದಿದ್ದು, ಕೃಷಿ ಬೋರ್‌ವೆಲ್‌ಗಳಲ್ಲಿ ನೀರಿನ ಅಭಾವ ತೀವ್ರವಾಗಿದೆ. ನೀರಿನ ಕೊರತೆಯಿಂದ ಅನೇಕ ಪಂಪ್‌ಸೆಟ್‌ಗಳು ಸ್ಥಗಿತಗೊಂಡಿವೆ. ಹಿಂದೆ ಎರಡು ಎಕರೆಯಲ್ಲಿ ತರಕಾರಿ ಬೆಳೆ ಬೆಳೆಯುತ್ತಿದ್ದ ರೈತರು ಈಗ ಅರ್ಧ ಎಕರೆಯಲ್ಲೂ ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಬೀನ್ಸ್, ಟೊಮೆಟೊ, ಆಗಲಕಾಯಿ, ಹೀರೇಕಾಯಿ ಸೇರಿದಂತೆ ಹಲವು ತರಕಾರಿ ಬೆಳೆಗಳಲ್ಲಿ ಶೇ.40ರಷ್ಟು ಇಳುವರಿ ಕುಸಿತ ಕಂಡುಬಂದಿದೆ.

ಹೂಬೆಳೆ, ಅಡಿಕೆಗೂ ಸಂಕಷ್ಟ

ಅಧಿಕ ತಾಪಮಾನದಿಂದ ಗುಲಾಬಿ, ಸೇವಂತಿಗೆ ಸೇರಿದಂತೆ ಹೂಬೆಳೆಗಳ ಉತ್ಪಾದನೆಯೂ ಕುಸಿದಿದೆ. ಹೂಗಳ ತಾಜಾತನ ಮತ್ತು ಗುಣಮಟ್ಟ ಕಡಿಮೆಯಾಗುತ್ತಿದ್ದು, ರೈತರಿಗೆ ನಷ್ಟದ ಭೀತಿ ಎದುರಾಗಿದೆ. ಇದೇ ರೀತಿ ಬಹುವಾರ್ಷಿಕ ಬೆಳೆಗಳಾದ ಅಡಿಕೆ ಗಿಡಗಳು ಬಿಸಿಲಿನ ತಾಪಕ್ಕೆ ನಲುಗುತ್ತಿವೆ. ಅಡಿಕೆ ಗರಿಗಳು ಒಣಗಿ ಹಳದಿ ಬಣ್ಣಕ್ಕೆ ತಿರುಗುತ್ತಿದ್ದು, ಕೆಲವೆಡೆ ಸುಟ್ಟು ಹೋಗುತ್ತಿರುವ ದೃಶ್ಯ ಕಂಡುಬರುತ್ತಿದೆ.

ಕೀಟಬಾಧೆ ಹೆಚ್ಚಳ

ಒಣಹವೆಯಿಂದ ಬೆಳೆಗಳಲ್ಲಿ ಕೀಟಬಾಧೆ ಹೆಚ್ಚಾಗಿರುವುದೂ ರೈತರಿಗೆ ಮತ್ತೊಂದು ತಲೆನೋವಾಗಿದೆ. ಅಡಿಕೆ ಬೆಳೆಗಳಲ್ಲಿ ಕೆಂಪು ನುಸಿ ಕೀಟ, ಸುಳಿ ತಿಗಣೆ ಕಾಟ ಹೆಚ್ಚಾಗಿದೆ. ತರಕಾರಿ ಬೆಳೆಗಳಲ್ಲಿ ತ್ರಿಪ್ಸ್, ಎಫಿಡ್ಸ್, ಮೀನಿ ಬಗ್ಸ್ ಹಾಗೂ ಬಿಳಿ ಶಲ್ಕಗಳ ಹಾವಳಿ ಹೆಚ್ಚಿದ್ದು, ಬೆಳೆ ನಾಶವಾಗುತ್ತಿದೆ. ಮಾವಿನ ತೋಟಗಳಲ್ಲಿ ಹೂಜಿ ಕೀಟದ ದಾಳಿ ಹೆಚ್ಚಾಗಿದೆ.

ಹೈನುಗಾರಿಕೆಯ ಮೇಲೂ ಪರಿಣಾಮ

ಹವಾಮಾನ ವೈಪರಿತ್ಯ ಹೈನುಗಾರಿಕೆಯ ಮೇಲೂ ದುಷ್ಪರಿಣಾಮ ಬೀರಿದೆ. ಹಸಿ ಹುಲ್ಲಿನ ಕೊರತೆಯಿಂದ ಹಸುಗಳಿಗೆ ಸಮರ್ಪಕ ಮೇವು ಸಿಗುತ್ತಿಲ್ಲ. ಒಣ ಹುಲ್ಲಿನ ಅವಲಂಬನೆ ಹೆಚ್ಚಿರುವುದರಿಂದ ಹಾಲಿನ ಉತ್ಪಾದನೆ ಕುಸಿದಿದೆ. ಇದರಿಂದ ರೈತರು ಕೃಷಿಯ ಜೊತೆಗೆ ಹೈನುಗಾರಿಕೆಯಲ್ಲಿ ಸಹ ಸಂಕಷ್ಟ ಅನುಭವಿಸುವಂತಾಗಿದೆ.

ದ್ರಾಕ್ಷಿ ಬೆಳೆಗಾರ ರಾಕೇಶ್ ಮಾತನಾಡಿ, ಸಾಲ ಮಾಡಿ ಎರಡು ಎಕರೆಯಲ್ಲಿ ದ್ರಾಕ್ಷಿ ಬೆಳೆದಿದ್ದೇವೆ. ಬೇಸಿಗೆ ತಾಪಮಾನ‌ ಹೆಚ್ಚಾಗಿ ಕಾಯಿ ನೆಲಕ್ಕೆ ಬಿದ್ದಿವೆ. ಫಸಲು ಕೈಗೆ ಸಿಗುತ್ತಿಲ್ಲ. ಇರೋ ಹಣ್ಣಿಗೆ ಇಳುವರಿ ಬರುತ್ತಿಲ್ಲ. ಸಾಲಗಾರರು ಮನೆ ಬಳಿ ಬರುತ್ತಿದ್ದಾರೆ. ನಮಗೆ ದಿಕ್ಕೇ ತೋಚದಂತೆ ಆಗಿದೆ ಎಂದು ತಮ್ಮ ಆಳಲು ತೋಡಿಕೊಂಡರು.

ಅಡಿಕೆ ಬೆಳಗಾರ ರವಿಕುಮಾರ್ ಮಾತನಾಡಿ, ಸೂರ್ಯನ ಶಾಖದ ಕಿರಣಗಳಿಗೆ ಅಡಿಕೆ ಗರಿಗಳು ಹಳದಿ ಬಣ್ಣಕ್ಕೆ ತಿರುಗಿ, ಬಾಡುತ್ತಿವೆ. ದಿನದಿನಕ್ಕೆ ಬೋರ್ ವೆಲ್ ಗಳಲ್ಲಿ ನೀರು ಬತ್ತಿಹೋಗುತ್ತಿದೆ. ಬೆಳೆಗೆ ಸಾಕಾಗುವಷ್ಟು ನೀರಿಲ್ಲ. ಈ ಬಾರಿ ನಾವು ನಿರೀಕ್ಷಿಸಿದಷ್ಟು ಫಸಲು ಬರೋದಿಲ್ಲ. ನಷ್ಟದ ಭೀತಿಯಲ್ಲಿ ಇದ್ದೇವೆ ಎಂದರು.

ಒಟ್ಟಿನಲ್ಲಿ, ಮಳೆ ಕೊರತೆ, ಉರಿ ಬಿಸಿಲು ಮತ್ತು ಹವಾಮಾನ ವೈಪರಿತ್ಯದಿಂದ ಕೃಷಿ ವಲಯ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಮುಂದಿನ ದಿನಗಳಲ್ಲಿ ಸರ್ಕಾರ ಹಾಗೂ ಕೃಷಿ ಇಲಾಖೆಯಿಂದ ಸೂಕ್ತ ನೆರವು ಮತ್ತು ಮಾರ್ಗದರ್ಶನ ದೊರಕಬೇಕೆಂಬ ಆಗ್ರಹ ರೈತರಿಂದ ಕೇಳಿಬರುತ್ತಿದೆ.

Ramesh Babu

Journalist

Recent Posts

ವಿಡಿಯೋ ಕಾಲ್ ಮಾಡಿ ನೇಣಿಗೆ ಶರಣಾದ ವ್ಯಕ್ತಿ

ದೊಡ್ಡಬಳ್ಳಾಪುರ: ಮನೆಯವರಿಗೆ ವಿಡಿಯೋ ಕಾಲ್ ಮಾಡಿದ ಬಳಿಕ ಉತ್ತರ ಪ್ರದೇಶ ಮೂಲದ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ…

8 hours ago

ಮಣ್ಣಿನಡಿ ಹುದುಗಿಹೋಗುತ್ತಿದ್ದ ವಿಜಯನಗರ ಕಾಲದ 6 ವೀರಗಲ್ಲುಗಳಿಗೆ ಮರುಜೀವ: ರಸ್ತೆ ವಿಸ್ತರಣೆ ವೇಳೆ ಪತ್ತೆ; ಪುರಾತತ್ವ ಇಲಾಖೆ ತ್ವರಿತ ಕಾರ್ಯಾಚರಣೆ

ದೊಡ್ಡಬಳ್ಳಾಪುರ: ರಸ್ತೆ ವಿಸ್ತರಣೆ ಕಾಮಗಾರಿ ವೇಳೆ ಮಣ್ಣಿನಡಿ ಹುದುಗಿಹೋಗುವ ಅಪಾಯದಲ್ಲಿದ್ದ ವಿಜಯನಗರ ಅರಸರ ಕಾಲದ ಆರು ಐತಿಹಾಸಿಕ ವೀರಗಲ್ಲುಗಳನ್ನು ಪುರಾತತ್ವ…

8 hours ago

ಅರಳುಮಲ್ಲಿಗೆ ಕ್ಷೇತ್ರದಿಂದ ಸ್ಪರ್ಧೆಗೆ ಕೃಷ್ಣಪ್ಪ ಒಲವು

ಮುಂಬರುವ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳ ಹಿನ್ನೆಲೆಯಲ್ಲಿ ಕಾರ್ಯಕರ್ತರನ್ನು ಒಗ್ಗೂಡಿಸಿ ಪಕ್ಷ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು…

9 hours ago

ಮಳೆ ಕೊರತೆ, ಟೊಮೆಟೊ ದರ ಕುಸಿತ: ಸಾಲದ ಸುಳಿಯಲ್ಲಿ ರೈತ!

ದೊಡ್ಡಬಳ್ಳಾಪುರ: ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳು ಸಂಕಷ್ಟಕ್ಕೆ ಸಿಲುಕಿರುವ ಬೆನ್ನಲ್ಲೇ, ಮಾರುಕಟ್ಟೆಯಲ್ಲಿ ಟೊಮೆಟೊ ದರ ಕುಸಿತವೂ ರೈತರನ್ನು ಕಂಗಾಲಾಗಿಸಿದೆ. ಬೆಳೆ…

12 hours ago

ಸಿನಿಮಾ ನೋಡಲು ಹೋದ ಕುಟುಂಬದ ಮನೆಗೆ ಕನ್ನ; 130 ಗ್ರಾಂ ಚಿನ್ನದೊಂದಿಗೆ ಸಿಕ್ಕಿಬಿದ್ದ ಕಳ್ಳ!

ಮನೆಯವರೆಲ್ಲರೂ ಸಿನಿಮಾ ನೋಡಲು ತೆರಳಿದ್ದ ವೇಳೆ ಮನೆಗೆ ನುಗ್ಗಿ 130 ಗ್ರಾಂ ಚಿನ್ನ ಕಳವು ಮಾಡಿದ್ದ ಆರೋಪಿಯೊಬ್ಬ, ಮನೆ ಮಾಲೀಕನ…

14 hours ago

ಡ್ರಗ್ಸ್ ಮುಕ್ತ ಭಾರತ, ವ್ಯಸನ ಮುಕ್ತ ಕರ್ನಾಟಕ……..

ಡ್ರಗ್ಸ್ ಮುಕ್ತ ಭಾರತ, ವ್ಯಸನ ಮುಕ್ತ ಕರ್ನಾಟಕ........ ಹೀಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಘೋಷಿಸಿವೆ. ಇನ್ನು ಕೆಲವೇ ವರ್ಷಗಳಲ್ಲಿ…

20 hours ago