Categories: ಲೇಖನ

ಸಿದ್ದರಾಮಯ್ಯ 8 ವರ್ಷಗಳು, ನರೇಂದ್ರ ಮೋದಿ 12 ವರ್ಷಗಳು…..

ಸಿದ್ದರಾಮಯ್ಯ 8 ವರ್ಷಗಳು, ನರೇಂದ್ರ ಮೋದಿ 12 ವರ್ಷಗಳು,..

ಕರ್ನಾಟಕ ಮತ್ತು ಭಾರತದ ಈ 25 ವರ್ಷಗಳಲ್ಲಿ ಆಗಿದ್ದೇನು……
2000/2025……

” ಹೊಸ ಚಿಗುರು ಹಳೆ ಬೇರು ಕೂಡಿರಲು ಮರಸೊಬಗು ।ಹೊಸಯುಕ್ತಿ ಹಳೆತತ್ತ್ವದೊಡಗೂಡೆ ಧರ್ಮ ॥ ”

ಶ್ರೀ ಡಿ. ವಿ. ಗುಂಡಪ್ಪ……

ಚಳಿಗಾಲ ಬಂದಾಗ,
‘ಎಷ್ಟು ಚಳಿ’ ಎಂದರು,
ಬಂತಲ್ಲ ಬೇಸಿಗೆ,
‘ಕೆಟ್ಟ ಬಿಸಿಲೆಂ’ದರು,
ಮಳೆ ಬಿತ್ತೊ,
‘ಬಿಡದಲ್ಲ ಶನಿ !’ ಎಂಬ ಟೀಕೆ,
ಇವರು ಮೆಚ್ಚುವ ವಸ್ತು ಇಲ್ಲಿಲ್ಲ, ಜೋಕೆ!

ಚಿಗುರ ಚಿನ್ನದ ನಡುವೆ ಹೂವ ಬಯಸುವರು,
ಹೂಗಳ ಕಾಲದಲಿ ಹಣ್ಣ ಹೊಗಳುವರು,
‘ಹಣ್ಣಿನ ಗಾತ್ರ ಪೀಚು’ ಎಂದಿವರ ಟೀಕೆ,
ಇವರು ಮೆಚ್ಚುವ ವಸ್ತು ಇಲ್ಲಿಲ್ಲ, ಜೋಕೆ !

ನಿಂತರೆ ಕೇಳುವರು, ನೀನೇಕೆ ನಿಂತೆ?
ಮಲಗಿದರೆ ಗೊಣಗುವರು, ನಿನಗಿಲ್ಲ ಚಿಂತೆ!
ಓಡಿದರೆ ಬೆನ್ನ ಹಿಂದೆಯೇ ಇವರ ಟೀಕೆ,
ಇವರು ಮೆಚ್ಚುವ ವಸ್ತು ಇಲ್ಲಿಲ್ಲ, ಜೋಕೆ !

ಓದಿದರೆ ಹೇಳುವರು, ಮತ್ತೊಮ್ಮೆ ಬರೆಯೊ!
ಬರೆದಿಡಲು ಬೆದಕುವರು, ಬರವಣಿಗೆ ಸರಿಯೊ?
ಇವರ ಬಯಕೆಗಳೇನೋ ಇವರದೇ ಟೀಕೆ,
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ !!!

ಶ್ರೀ ಕೆ. ಎಸ್. ನರಸಿಂಹಸ್ವಾಮಿ…..

ಎಂಬ ಕವಿವಾಣಿಯನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುತ್ತಾ , ಸ್ವಾತಂತ್ರ್ಯ ನಂತರ ಕರ್ನಾಟಕ ರಾಜ್ಯವನ್ನು ದಾಖಲೆಯ ಅವಧಿಯವರೆಗೆ ಆಡಳಿತ ನಡೆಸಿದ ಮುಖ್ಯಮಂತ್ರಿ
ಶ್ರೀ ಸಿದ್ದರಾಮಯ್ಯನವರಿಗೆ ಅಭಿಮಾನ ಪೂರ್ವಕ ಬೀಳ್ಕೊಡುಗೆ ನೀಡೋಣವೇ ಅಥವಾ ಆರೋಪಗಳ ಸುರಿಮಳೆ ಸುರಿಸೋಣವೇ……..

ಹಳೆಯ ತಲೆಮಾರಿನ, ಸಮಾಜವಾದಿ ಹಿನ್ನೆಲೆಯ, ಅಧಿಕಾರ ರಾಜಕೀಯದ ವ್ಯಕ್ತಿತ್ವವೊಂದು ಕರ್ನಾಟಕ ರಾಜಕೀಯ ಇತಿಹಾಸದ ಪುಟ ಸೇರುತ್ತಿರುವ ಈ ಸಮಯದಲ್ಲಿ…….

ಸರಿಸುಮಾರು 45 ವರ್ಷಗಳ ರಾಜಕೀಯ ಜೀವನವನ್ನು ಮುಗಿಸಿ, ಕರ್ನಾಟಕದ ಮುಖ್ಯಮಂತ್ರಿ ಅವಧಿಯ ದೇವರಾಜ್ ಅರಸು ಅವರ ದಾಖಲೆ ಸಮಯವನ್ನು ಮುರಿದು ಹೊಸ ದಾಖಲೆ ನಿರ್ಮಿಸಿ ಇದೀಗ ಅಧಿಕಾರ ಬಿಟ್ಟು ಹೊರ ಹೋಗುತ್ತಿದ್ದಾರೆ…..

ಅನ್ನ ರಾಮಯ್ಯ ಎಂದೋ,
ಸಾಮಾಜಿಕ ನ್ಯಾಯದ ಹರಿಕಾರ ಎಂದೋ,
ಅಹಿಂದ ನಾಯಕ ಎಂದೋ,
ತೂಕಡಿಕೆಯ ನಿದ್ರಾ ರಾಮಯ್ಯ ಎಂದೋ,
ಸಿದ್ದರಾಮುಲ್ಲಾ ಖಾನ್ ಎಂದೋ
ಮಜಾವಾದಿಯೆಂದೋ,
ಟಗರು ಎಂದೋ ಕೆಲವು ವಿಶೇಷಣಗಳಿಂದ ಅಭಿಮಾನಿಗಳು ಮತ್ತು ವಿರೋಧಿಗಳಿಂದ ಹೊಗಳಿಕೆ, ತೆಗಳಿಕೆ, ಬಿರುದು ಬಾವಲಿಗಳು, ಟೀಕೆಗಳಿಗೆ ಒಳಗಾಗಿರುವ ವ್ಯಕ್ತಿತ್ವ ಸಿದ್ದರಾಮಯ್ಯನವರದು….

ಯಾವುದೇ ವ್ಯಕ್ತಿಯಾದರೂ ಅಷ್ಟೇ, ಬೇರೆ ಬೇರೆ ದೃಷ್ಟಿಕೋನದಿಂದ ನೋಡಿದರೆ ಬೇರೆ ಬೇರೆ ರೀತಿಯಲ್ಲಿ ಕಾಣುತ್ತಾರೆ. ಒಳ್ಳೆಯದು ಇರುತ್ತದೆ, ಕೆಟ್ಟದ್ದೂ ಇರುತ್ತದೆ. ಒಟ್ಟಾರೆಯಾಗಿ, ಸಮಚಿತ್ತದಿಂದ, ಸಾಮಾನ್ಯ ಜನರ ಜೀವನಮಟ್ಟ ಸುಧಾರಿಸಲು, ರಾಜ್ಯದ ಅಭಿವೃದ್ಧಿಯ ಗುಣಮಟ್ಟ ಹೆಚ್ಚಿಸಲು, ತಾವು ಅಧಿಕಾರದಲ್ಲಿದ್ದಾಗ ಎಷ್ಟರಮಟ್ಟಿಗೆ ಶ್ರಮಿಸಿದ್ದಾರೆ, ಅದರ ಪರಿಣಾಮವೇನು ಎಂಬುದನ್ನು ಸ್ವಲ್ಪ ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ. ಹಾಗೆಯೇ ವ್ಯಕ್ತಿಗತ ನಡವಳಿಕೆಯನ್ನು, ಸಾರ್ವಜನಿಕ ಜೀವನದ ವರ್ತನೆಯನ್ನು ಗಮನದಲ್ಲಿರಿಸಿಕೊಂಡು ವಿಮರ್ಶಿಸಬೇಕಾಗುತ್ತದೆ. ವಿಮರ್ಶೆಯ ಮಾನದಂಡ ಇದೇ ಆಗಿದ್ದರೆ ಸ್ವಲ್ಪಮಟ್ಟಿಗೆ ವಾಸ್ತವದ ಹತ್ತಿರ ಹೋಗಬಹುದು….

ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ವೈಚಾರಿಕ ಸ್ಪಷ್ಟತೆಗೆ, ಆಡಳಿತಾತ್ಮಕ ದಕ್ಷತೆಗೆ, ಸಾಮಾಜಿಕ ನ್ಯಾಯಕ್ಕೆ ರಾಜ್ಯದ ಮತ್ತು ರಾಷ್ಟ್ರದ ರಾಜಕೀಯ ನಾಯಕರ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಹಾಗೆಯೇ ಅವರ ಮೇಲೆ ಅಧಿಕಾರಮೋಹಿ, ಜಾತಿವಾದಿ ಮತ್ತು ದುರಹಂಕಾರಿ ಎಂಬ ಆರೋಪವು ಇದೆ. ಅದೆಲ್ಲವನ್ನು ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಸಾಮಾನ್ಯವೆಂದು ಭಾವಿಸಿ ಅದನ್ನು ಹೊರತುಪಡಿಸಿ ಅವರನ್ನು ವಿಮರ್ಷಿಸಬಹುದಾದರೆ…..

ಕಳೆದ 25 ವರ್ಷಗಳಲ್ಲಿ ಕರ್ನಾಟಕದ ಶಿಕ್ಷಣದ ಗುಣಮಟ್ಟ ಕುಸಿದಿದೆ. ಶೈಕ್ಷಣಿಕ ತಾರತಮ್ಯ, ಅಸಮಾನತೆ ಹೆಚ್ಚುತ್ತಿದೆ. ಶಿಕ್ಷಣ ಸಂಸ್ಥೆಗಳು ವ್ಯಾಪಾರಿಕರಣಗೊಂಡಿವೆ. ಫಲಿತಾಂಶದ ದೃಷ್ಟಿಯಿಂದ ಉತ್ತಮ ಎಂದು ಕರೆಯಬಹುದಾದರೂ, ಶೈಕ್ಷಣಿಕ ಪಠ್ಯಕ್ರಮದ ಅನುಸಾರ ಶಿಕ್ಷಣ ವಿಸ್ತಾರಗೊಂಡಿದೆ ಎಂಬ ಸಮಾಧಾನವಿದ್ದರೂ, ಒಟ್ಟು ವಿದ್ಯಾರ್ಥಿಗಳ ವ್ಯಕ್ತಿತ್ವದ ದೃಷ್ಟಿಯಿಂದ ಶಿಕ್ಷಣದ ಒಟ್ಟಾರೆ ಫಲಿತಾಂಶ ತೃಪ್ತಿದಾಯಕವಾಗಿಲ್ಲ. ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಲೂಟಿಯಲ್ಲಿ ತೊಡಗಿದ್ದರೆ, ಸರ್ಕಾರಿ ಶಾಲಾ-ಕಾಲೇಜುಗಳು ಹೆಚ್ಚು ಕಡಿಮೆ ಪಾಳು ಬಿದ್ದಿವೆ……

ಹಾಗೆಯೇ ವೈದ್ಯಕೀಯ ಕ್ಷೇತ್ರದಲ್ಲಿ ಆತಂಕಕಾರಿ ಬೆಳವಣಿಗೆಗಳು ನಡೆಯುತ್ತಿದೆ. ಆರೋಗ್ಯ ಬಹುತೇಕ ಜನರ ಜೀವನವನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ದುಡಿದದ್ದೆಲ್ಲಾ ಆಸ್ಪತ್ರೆಗೆ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಖಾಸಗಿ ಆಸ್ಪತ್ರೆಗಳು ವೈಭವೋಪೇತ ಕಟ್ಟಡಗಳೊಂದಿಗೆ ಫೈವ್ ಸ್ಟಾರ್ ಹೋಟೆಲ್ ಗಳಂತೆ ನಿರ್ಮಾಣವಾಗುತ್ತಿದ್ದರೆ, ಸರ್ಕಾರಿ ಆಸ್ಪತ್ರೆಗಳು ಪಾಳು ಬಿದ್ದ ಕಟ್ಟಡಗಳಂತಾಗಿದೆ. ವೈದ್ಯಕೀಯ ಸೇವೆ ಈಗ ವ್ಯಾಪಾರವಾಗಿದೆ.

ಇನ್ನು ಕಾಡು, ನೀರು, ಪರಿಸರ, ಗಾಳಿ, ಆಹಾರ ಎಲ್ಲವೂ ಮಲಿನ ಗೊಂಡಿರುವ ಬಗ್ಗೆ ಹೆಚ್ಚಿಗೆ ಹೇಳಲು ಏನು ಉಳಿದಿಲ್ಲ.

ಮಾನವೀಯ ಮೌಲ್ಯಗಳು ನಿರಂತರವಾಗಿ ಕುಸಿಯುತ್ತ, ವಿರುದ್ಧ ಮೌಲ್ಯಗಳು ಮಾನ್ಯತೆ ಪಡೆಯುತ್ತಿವೆ. ಎಲ್ಲಾ ಕ್ಷೇತ್ರಗಳು ಭ್ರಷ್ಟ ಗೊಂಡಿವೆ. ಜನರ ಜೀವನಮಟ್ಟ, ನೆಮ್ಮದಿಯ ಗುಣಮಟ್ಟ ಕೆಳಕ್ಕೆ ಇಳಿಯುತ್ತಲೇ ಇದೆ.

ಮಧ್ಯಪಾನ, ಧೂಮಪಾನ, ಮಾದಕ ವ್ಯಸನ, ಜೂಜಾಟಗಳು, ಅಪರಾಧಗಳು, ಅಪಘಾತಗಳು, ಆತ್ಮಹತ್ಯೆಗಳು ಹೆಚ್ಚಾಗುತ್ತಲೇ ಇದೆ.
ನಿರುದ್ಯೋಗ ತಾಂಡವಡುತ್ತಿದೆ.

ಜಾತಿ ವ್ಯವಸ್ಥೆ ಇನ್ನಷ್ಟು ಆಳಕ್ಕೆ ಇಳಿಯುತ್ತಿದೆ. ಚುನಾವಣಾ ಅಕ್ರಮಗಳು ಹೆಚ್ಚಾಗುತ್ತಲೇ ಇದೆ. ಮರ್ಯಾದೆ ಹತ್ಯಗಳು ಇನ್ನು ನಿಂತಿಲ್ಲ.

ಇವುಗಳನ್ನು ಮಾನದಂಡವನ್ನಾಗಿ ತೆಗೆದುಕೊಂಡು ಈ 25 ವರ್ಷಗಳ ಆಡಳಿತದಲ್ಲಿ ಶೇಕಡ 35% ರಷ್ಟು ಸಮಯವನ್ನು ಆಡಳಿತ ನಡೆಸಿರುವ ಶ್ರೀ ಸಿದ್ದರಾಮಯ್ಯನವರನ್ನು ವಿಮರ್ಶಿಸಿದರೆ ಅವರು ಯಾವ ಸ್ಥಾನದಲ್ಲಿ ನಿಲ್ಲಬಹುದು ಎಂಬುದನ್ನು ನಿಮ್ಮ ವಿವೇಚನೆಗೆ ಬಿಡುತ್ತೇನೆ.

ಇದು ಕೇವಲ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮಾತ್ರ ಸೀಮಿತವಲ್ಲ. ಕಳೆದ 25 ವರ್ಷಗಳಲ್ಲಿ ಸರಿಸುಮಾರು ಶೇಕಡ 50% ರಷ್ಟು ಅಂದರೆ 12 ವರ್ಷಗಳಷ್ಟು ಭಾರತವನ್ನು ಆಡಳಿತ ಮಾಡುತ್ತಿರುವ ನರೇಂದ್ರ ಮೋದಿಯವರಿಗೂ ಇದು ಅನ್ವಯಿಸುತ್ತದೆ. ಕರ್ನಾಟಕವು ಭಾರತದ ಒಂದು ಭಾಗ ಮಾತ್ರ.

ದೇಶವನ್ನು ಅಂತರಾಷ್ಟ್ರೀಯವಾಗಿ ದೊಡ್ಡ ಎತ್ತರಕ್ಕೆ ತೆಗೆದುಕೊಂಡು ಹೋಗುತ್ತಿದ್ದೇನೆ ಎಂದು ಭ್ರಮೆ ಹುಟ್ಟಿಸಿರುವ ಶ್ರೀ ನರೇಂದ್ರ ಮೋದಿಯವರು, ಮೇಲೆ ಹೇಳಿದ ಯಾವ ಅಂಶಗಳನ್ನು ಸಹ ಸರಿಯಾಗಿ ನಿರ್ವಹಿಸಿಲ್ಲ. ಕೇವಲ ಜನರನ್ನು ಭಾವನಾತ್ಮಕವಾಗಿ ಹುಸಿ ರಾಷ್ಟ್ರೀಯತೆ, ಧಾರ್ಮಿಕ ಅಂಧತ್ವ, ಕೆಟ್ಟ ಅಭಿವೃದ್ಧಿ ಇವುಗಳಲ್ಲಿ ಬಂಧಿಸಿ ಸುಮ್ಮನೆ ಕಾಲ ತಳ್ಳುತ್ತಿದ್ದಾರೆ.

ಇಡೀ ದೇಶದಲ್ಲಿ ಭ್ರಷ್ಟಾಚಾರವೇನು ಕಡಿಮೆಯಾಗಿಲ್ಲ. ಪ್ರಕೃತಿಯ ನಾಶ ನಿರಂತರವಾಗಿ ನಡೆಯುತ್ತಿದೆ. ಬೆಲೆಗಳು ಏರಿಕೆಯಾಗುತ್ತಲೇ ಇದೆ. ಜನರ ಜೀವನಮಟ್ಟ ಸುಧಾರಣೆಯಾಗಿಲ್ಲ. ಕೇವಲ ರಸ್ತೆಗಳು, ಫ್ಲೈ ಓವರ್ ಗಳು, ಬುಲೆಟ್ ಟ್ರೈನ್ ಗಳು, ವಿಮಾನ ನಿಲ್ದಾಣಗಳು, ಬಂಡವಾಳಶಾಹಿ ವ್ಯವಸ್ಥೆಗೆ ಪೂರಕವಾದ ಕೆಲವು ಅಂಶಗಳನ್ನು ಹೊರತುಪಡಿಸಿದರೆ ನಿಜಕ್ಕೂ ರೈತರು, ಕಾರ್ಮಿಕರು, ಕಡುಬಡವರ ಜೀವನಮಟ್ಟ ಸುಧಾರಿಸಲು ಯಾವುದೇ ಮುಖ್ಯ ಕ್ರಮ ಕೈಗೊಳ್ಳುತ್ತಿಲ್ಲ. ಶಿಕ್ಷಣ, ಆರೋಗ್ಯ ಮತ್ತು ಪರಿಸರದ ಮಾಲಿನ್ಯದ ಬಗ್ಗೆ ತಲೆಕೆಡಿಸಿಕೊಳ್ಳುತ್ತಲೇ ಇಲ್ಲ. ಸಾಮಾಜಿಕ ಸಾಮರಸ್ಯ ಹಾಳಾಗಿದೆ. ಮೂಢನಂಬಿಕೆ ಹೆಚ್ಚಾಗುತ್ತಿದೆ.

ಇದೆಲ್ಲವನ್ನು ನೋಡುತ್ತಿದ್ದರೆ ಅದು ಹೇಗೆ ಸಾಮಾನ್ಯ ಜನ ನರೇಂದ್ರ ಮೋದಿಯವರನ್ನಾಗಲಿ, ಸಿದ್ದರಾಮಯ್ಯನವರನ್ನಾಗಲಿ ಮಹಾನ್ ಸಾಧಕ ವ್ಯಕ್ತಿಗಳೆಂದು ಹೇಳುತ್ತಾರೆ. ಬಹುತೇಕ ಗುಲಾಮ ಮನಸ್ಥಿತಿಯ, ಅಂಧಭಕ್ತಿಯ ಸಾಮಾನ್ಯ ಜನರ ಅಭಿಪ್ರಾಯ , ವಿವೇಚನೆ ಇಲ್ಲದ ಮಾಧ್ಯಮಗಳು, ಮಾನವೀಯತೆ ಮತ್ತು ದೂರ ದೃಷ್ಟಿಯಿಲ್ಲದ ವಿಷಯ ತಜ್ಞರುಗಳ ಅಭಿಪ್ರಾಯದ ಮೇಲೆ ನಾವು ಇವರನ್ನು ಅಳೆಯುತ್ತಿದ್ದೇವೆ.
ಗುಲಾಮರು ಮತ್ತು ಅಂಧ ಭಕ್ತರ ಸಂಖ್ಯೆ ಹೆಚ್ಚಾಗಿರುವುದೇ ಇವರ ದೊಡ್ಡ ಸಾಧನೆ.

ಮೋದಿಯೇ ಇರಲಿ, ಸಿದ್ದರಾಮಯ್ಯನವರೇ ಇರಲಿ, ಮುಖ್ಯಮಂತ್ರಿ ಮತ್ತು ಪ್ರಧಾನ ಮಂತ್ರಿ ಕುರ್ಚಿಗಳು ಅವರ ಖಾಸಗಿ ಆಸ್ತಿಯೇನಲ್ಲ. ಅದೊಂದು ಹುದ್ದೆ ಮಾತ್ರ. ಇವರು ಸಾಂಕೇತಿಕ. ಆ ಸ್ಥಾನದಲ್ಲಿ ಯಾರೇ ಕುಳಿತಿದ್ದರು ತಮ್ಮ ಕರ್ತವ್ಯವನ್ನು ನಿರ್ವಹಿಸಲೇಬೇಕು. ಅದಕ್ಕಾಗಿ ಒಂದು ದೊಡ್ಡ ವ್ಯವಸ್ಥೆ ಇದೆ. 150 ಕೋಟಿ ಜನ ಅವರನ್ನು ಆಯ್ಕೆ ಮಾಡುತ್ತಾರೆ.

ಆ ಜನರನ್ನು ಸರಿಯಾಗಿ ನೋಡಿಕೊಳ್ಳಬೇಕಿರುವುದು ಇವರ ಕರ್ತವ್ಯ. ಏಕೆಂದರೆ ಪ್ರಧಾನಿ ಮತ್ತು ಮುಖ್ಯಮಂತ್ರಿಯನ್ನು ಅತ್ಯಂತ ಗೌರವದಿಂದ, ಸುರಕ್ಷಿತವಾಗಿ, ಶ್ರೀಮಂತವಾಗಿ ನೋಡಿಕೊಳ್ಳುತ್ತಿರುವುದು ಸಾಮಾನ್ಯ ಜನ. ಅವರಿಗೆ ಕೃತಜ್ಞರಾಗಿ, ಪ್ರಾಮಾಣಿಕವಾಗಿ ನೋಡಿಕೊಳ್ಳಬೇಕಾದದ್ದು ಇವರ ಕರ್ತವ್ಯ.

ಆದರೆ ಖಂಡಿತವಾಗಲೂ ಆತ್ಮಸಾಕ್ಷಿಯಿಂದ ಹೇಳಬೇಕೆಂದರೆ ಸಿದ್ದರಾಮಯ್ಯ ಮತ್ತು ನರೇಂದ್ರ ಮೋದಿ ಇಬ್ಬರೂ ಜನರಿಗೆ ಮೋಸ ಮಾಡಿದ್ದಾರೆ. ತಮ್ಮ ವೈಯಕ್ತಿಕ ಸಾಮರ್ಥ್ಯ, ಬುದ್ಧಿವಂತಿಕೆ ಮತ್ತು ಶ್ರಮವನ್ನು ತಮ್ಮ ಹೆಸರು ಉಳಿಸಿಕೊಳ್ಳಲು, ತಾವು ಸುಖ ಅನುಭವಿಸಲು ಉಪಯೋಗಿಸಿಕೊಂಡರೇ ಹೊರತು ದೇಶದ ಸಾಮಾನ್ಯ ಜನರಿಗೆ ಹೆಚ್ಚಿನದೇನನ್ನೂ ಮಾಡಲಿಲ್ಲ. ಎಂದಿನಂತೆ ಆಡಳಿತ ವ್ಯವಸ್ಥೆಯಿಂದಾಗಿ ಸಿಗಬಹುದಾದ ಲಾಭಗಳು ಸಹಜವಾಗಿ ಸಿಕ್ಕಿದೆಯೇ ಹೊರತು ಇವರ ಆಡಳಿತದಿಂದ ನಮ್ಮ ಜೀವನ ಮಟ್ಟ ಸುಧಾರಿಸಲು ಅವರಿಂದ ಸಾಧ್ಯವಾಗಿಲ್ಲ.

ಗುಲಾಮರು ಮತ್ತು ಮುಭ್ಭಕ್ತರು ಇವರಿಬ್ಬರನ್ನು ಹಾಡಿ ಹೊಗಳುತ್ತಿರುವ ಸಂದರ್ಭದಲ್ಲಿ, ಇವರಿಬ್ಬರಲ್ಲಿ ಒಂದಷ್ಟು ಒಳ್ಳೆಯ ಅಂಶಗಳೂ ಇವೆ. ಆದರೆ ಈ ಸಂದರ್ಭದಲ್ಲಿ ಅವರ ಬಗ್ಗೆ ಒಂದಷ್ಟು ವಿಮರ್ಶಾತ್ಮಕ ಟೀಕೆಗಳು, ಅವರ ಆಡಳಿತದ ಇನ್ನೊಂದು ಮುಖವನ್ನು, ಕಡುಬಡವರ ದೃಷ್ಟಿಯಲ್ಲಿ, ಪರಿಸರದ ದೃಷ್ಟಿಯಲ್ಲಿ ನೋಡುವ ಪ್ರಯತ್ನ ಮಾತ್ರ ಈ ಅಭಿಪ್ರಾಯ. ನರೇಂದ್ರ ಮೋದಿ ಮತ್ತು ಸಿದ್ದರಾಮಯ್ಯನವರ ಬಗ್ಗೆ ನಿಮಗೆ ಒಳ್ಳೆಯ ಅಭಿಪ್ರಾಯವಿದ್ದರೆ ಅದನ್ನು ಸ್ವಾಗತಿಸುತ್ತಾ…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಕ್ರೀಡಾ ಪ್ರತಿಭೆಗಳ ಅನಾವರಣಕ್ಕೆ ನ್ಯಾಷನಲ್ ಪ್ರೈಡ್ ಶಾಲೆಯಲ್ಲಿ ಹೊಸ ವೇದಿಕೆ ಒಂದೇ ಆವರಣದಲ್ಲಿ ಬಾಕ್ಸಿಂಗ್, ಕುಸ್ತಿ, ಜೂಡೋ, ಕಬ್ಬಡಿ, ಬ್ಯಾಡ್ಮಿಂಟನ್, ಸ್ಕೇಟಿಂಗ್ ಸೌಲಭ್ಯ

ದೊಡ್ಡಬಳ್ಳಾಪುರ: ವಿದ್ಯಾರ್ಥಿಗಳಲ್ಲಿ ಕ್ರೀಡಾ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಉತ್ತಮ ತರಬೇತಿ ಹಾಗೂ ಅವಕಾಶ ಕಲ್ಪಿಸುವ ಉದ್ದೇಶದಿಂದ ನಗರದ ನ್ಯಾಷನಲ್ ಪ್ರೈಡ್…

13 hours ago

ಶಾಲೆ ಬಿಟ್ಟ ಮಕ್ಕಳ ಪತ್ತೆಗೆ ಅಭಿಯಾನ: ವಲಸೆ ಕಾರ್ಮಿಕರ ಮಕ್ಕಳನ್ನು ಶಾಲೆಗೆ ಕರೆತರಲು ಕ್ರಮ

  ಪ್ರತಿಯೊಂದು ಮಗುವಿಗೂ ಶಿಕ್ಷಣ ದೊರೆಯಬೇಕು ಎಂಬ ಸರ್ಕಾರದ ಆಶಯದ ನಡುವೆಯೂ ನಾನಾ ಕಾರಣಗಳಿಂದ ಶಾಲೆಯಿಂದ ಹೊರಗುಳಿದಿರುವ ಹಾಗೂ ಶಾಲೆಗೆ…

17 hours ago

ಪಾಕಿಸ್ತಾನಿ ಗ್ಯಾಂಗ್‌ ಜೊತೆ ಸಂಪರ್ಕ ಆರೋಪ: ದೊಡ್ಡಬಳ್ಳಾಪುರದಲ್ಲಿ ವ್ಯಕ್ತಿ ಬಂಧನ

ದೊಡ್ಡಬಳ್ಳಾಪುರ: ಪಾಕಿಸ್ತಾನಿ ಗ್ಯಾಂಗ್‌ಸ್ಟರ್‌ಗಳೊಂದಿಗೆ ಇನ್‌ಸ್ಟಾಗ್ರಾಂ ಮೂಲಕ ಸಂಪರ್ಕದಲ್ಲಿದ್ದ ಆರೋಪದ ಮೇರೆಗೆ ದೊಡ್ಡಬಳ್ಳಾಪುರ ನಗರ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ದೊಡ್ಡಬಳ್ಳಾಪುರ ನಗರದ…

2 days ago

ದೊಡ್ಡಬಳ್ಳಾಪುರದಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ

ದೊಡ್ಡಬಳ್ಳಾಪುರ: ಶ್ರಾವಣ ಮಾಸದ ಶುಭ ಸಂದರ್ಭದಲ್ಲಿ ಆಚರಿಸಲಾಗುವ ವರಮಹಾಲಕ್ಷ್ಮಿ ಹಬ್ಬವನ್ನು ದೊಡ್ಡಬಳ್ಳಾಪುರ ತಾಲ್ಲೂಕಿನಾದ್ಯಂತ ಶುಕ್ರವಾರ ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.…

2 days ago

ಘಾಟಿ ಕ್ಷೇತ್ರದಲ್ಲಿ ವರಮಹಾಲಕ್ಷ್ಮಿ ಸಂಭ್ರಮ; ಮಹಿಳೆಯರಿಗೆ ಬಳೆ, ಅರಶಿನ–ಕುಂಕುಮ ವಿತರಣೆ

ದೊಡ್ಡಬಳ್ಳಾಪುರ: ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯದ ಆಡಳಿತ ಮಂಡಳಿ ವತಿಯಿಂದ…

2 days ago

ವರಮಹಾಲಕ್ಷ್ಮಿ ಹಬ್ಬ…..

ವರಮಹಾಲಕ್ಷ್ಮಿ ಹಬ್ಬ..... ಅವರವರ ನಂಬಿಕೆ, ಆಚರಣೆಗಳು ಅವರವರ ವೈಯಕ್ತಿಕ ಹಕ್ಕು ಮತ್ತು ಸ್ವಾತಂತ್ರ್ಯ. ಅದನ್ನು ಗೌರವಿಸುತ್ತಾ, ಅವರವರ ವಿವೇಚನೆಗೆ ಬಿಡುತ್ತಾ,....…

3 days ago