Categories: ಲೇಖನ

ಸಿದ್ದರಾಮಯ್ಯ ಅವರ ಮುಖ್ಯಮಂತ್ರಿ ಸ್ಥಾನದ ದಾಖಲೆ ಕುರಿತು………

ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಅಂದರೆ ಸುಮಾರು 75/76 ವರ್ಷಗಳ ಅಧಿಕಾರ ರಾಜಕೀಯದಲ್ಲಿ ಮುಖ್ಯಮಂತ್ರಿ ಸ್ಥಾನದ ಮೇಲೆ ಅತಿ ಹೆಚ್ಚು ದಿನ ಅಧಿಕಾರ ಚಲಾಯಿಸಿದವರ ಪಟ್ಟಿಯಲ್ಲಿ ಈಗಲೂ ಇನ್ನೂ ಮುಂದುವರಿಯುತ್ತಿರುವ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರು ದಾಖಲೆಗೆ ಪಾತ್ರರಾಗಿದ್ದಾರೆ. ಅವರಿಗೆ ಅಭಿನಂದನೆಗಳನ್ನು ಹೇಳುತ್ತಾ……..

ಈ ರೀತಿಯ ಚುನಾವಣಾ ರಾಜಕೀಯದಲ್ಲಿ ಮುಖ್ಯಮಂತ್ರಿಗಳ, ಅದರಲ್ಲೂ ಇನ್ನೂ ಅಧಿಕಾರದಲ್ಲಿ ಮುಂದುವರಿಯುತ್ತಿರುವ ವ್ಯಕ್ತಿಯ ಬಗ್ಗೆ ವಿಮರ್ಶೆ ಮಾಡುವುದು ಒಂದು ದೊಡ್ಡ ಸವಾಲು. ಇದು ಅಷ್ಟು ಸುಲಭದ ಕೆಲಸವಲ್ಲ. ಏಕೆಂದರೆ ಇದರ ವಿಮರ್ಶೆಯ ಮಾನದಂಡಗಳೇನು ? ವಿಮರ್ಶೆಯನ್ನು ಯಾವ ದೃಷ್ಟಿಕೋನದಲ್ಲಿ ತೆಗೆದುಕೊಂಡು ಹೋಗಬೇಕು ? ಯಾವ ಆಧಾರದ ಮೇಲೆ ಇವರ ಕೊಡುಗೆಗಳನ್ನು ಹೇಗೆ ವಿಮರ್ಷಿಸಬೇಕು ? ಹಾಗೆಯೇ ಇವರ ದೌರ್ಬಲ್ಯಗಳನ್ನು ಹೇಗೆ ಪಟ್ಟಿ ಮಾಡಬೇಕು ಎಂಬುದು ಒಂದು ಸವಾಲಾಗಿಯೇ ಉಳಿಯುತ್ತದೆ. ಜೊತೆಗೆ ಸಹಜವಾಗಿಯೇ ಇಂದಿನ ಚುನಾವಣಾ ರಾಜಕೀಯದಲ್ಲಿ ಮನಸ್ಸುಗಳು ಒಡೆದು ಸೈದ್ಧಾಂತಿಕವಾಗಿಯೂ, ಪಕ್ಷವಾಗಿಯೂ ಎರಡು ಭಿನ್ನ ನೆಲೆಗಳು ಸೃಷ್ಠಿಯಾಗಿವೆ. ಒಂದು ಸೈದ್ಧಾಂತಿಕತೆ ಮತ್ತು ಅದರ ಅಭಿಮಾನಿಗಳಿಗೆ ಸಿದ್ದರಾಮಯ್ಯನವರದು ಮಹಾನ್ ಸಾಧನೆ ಎನಿಸಿದರೆ, ಸಹಜವಾಗಿಯೇ ಅವರ ವಿರೋಧಿಗಳಿಗೆ ಇದೊಂದು ದುರದೃಷ್ಟಕರ ದುಃಸ್ವಪ್ನ ಎಂಬಂತೆ ಟೀಕೆಗಳ ಸುರಿಮಳೆಯೇ ಆಗುತ್ತದೆ.

ಹಾಗೆಂದು ದಾಖಲೆ ಮಾಡಿದ ಈ ಕ್ಷಣದ ಮುಖ್ಯಮಂತ್ರಿಯ ಬಗ್ಗೆ ವಿಮರ್ಶೆ ಮಾಡಲು ಹೆದರಬಾರದು. ಆಸಕ್ತಿ ಇರುವವರು ನಮ್ಮ ನಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾ ಸಾಗೋಣ. ಇತಿಹಾಸವೂ ಕೂಡ ಕೆಲವೊಮ್ಮೆ ಕೆಲವು ಅಧೀಕೃತ ಘಟನೆಗಳನ್ನು, ದಾಖಲೆಗಳನ್ನು ಹೊರತುಪಡಿಸಿ ಸಾಂದರ್ಭಿಕ ಸಾಕ್ಷ್ಯಗಳ ಆಧಾರದ ಮೇಲೆಯೂ ದಾಖಲಾಗುತ್ತದೆ. ಅದು ಐತಿಹಾಸಿಕ ವ್ಯಕ್ತಿಗಳೇ ಇರಬಹುದು, ಈ ಕ್ಷಣದ ಕೇಂದ್ರ, ರಾಜ್ಯಗಳ ಅಧಿಕಾರಸ್ಥ ಪ್ರಮುಖರೇ ಆಗಿರಬಹುದು ಅಥವಾ ಬೇರೆ ಯಾರೋ ಆಗಿರಬಹುದು, ನಮಗೆ ಸಾಧನೆಗಳ ಪಟ್ಟಿ ಮಾಡಿದರೆ ಒಂದಷ್ಟು ಅಂಶಗಳು, ವಿರೋಧದ ಪಟ್ಟಿ ಮಾಡಿದರೆ ಇನ್ನೊಂದಿಷ್ಟು ಅಂಶಗಳು ಸಹಜವಾಗಿಯೇ ದೊರೆಯುತ್ತದೆ. ಎಲ್ಲರನ್ನೂ ಸಂಪೂರ್ಣ ತೃಪ್ತಿಪಡಿಸಲು ಸಾಧ್ಯವಿಲ್ಲ.

ಒಂದು ಸರ್ಕಾರದ ಮುಖ್ಯ ಜವಾಬ್ದಾರಿ, ನಾನು ಭಾವಿಸಿದಂತೆ, ಒಂದು ಪ್ರದೇಶದ ಸಂಪನ್ಮೂಲಗಳನ್ನು ಹೆಚ್ಚು ಕಡಿಮೆ ಆ ಪ್ರದೇಶದ ಎಲ್ಲಾ ಜನರಿಗೂ ಸಮನಾಗಿ ಹಂಚುವ, ಉಳಿಸುವ ಮತ್ತು ಬೆಳೆಸುವ, ಹಾಗೆಯೇ ಅತಿ ಮುಖ್ಯವಾಗಿ ಸಾಮಾಜಿಕ, ಆರ್ಥಿಕ ಅಸಮತೋಲನವನ್ನು ಸಾಧ್ಯವಾದಷ್ಟು ತೊಡೆದುಹಾಕಿ, ದುರ್ಬಲರ, ಶೋಷಿತರ ಪರವಾಗಿ ಹೆಚ್ಚು ಕೆಲಸ ಮಾಡುವ ಹಾಗೆ ಆಡಳಿತ ಮಾಡಿದರೆ ಅದನ್ನು ಅತ್ಯುತ್ತಮ ಸರ್ಕಾರ ಮತ್ತು ಆಡಳಿತ ವ್ಯವಸ್ಥೆ ಎಂದು ಹೇಳಬಹುದು. ಆ ಆಡಳಿತ ವ್ಯವಸ್ಥೆ ಹೆಚ್ಚು ಪಾರದರ್ಶಕವೂ, ವೈಜ್ಞಾನಿಕವೂ ಆಗಿದ್ದರೆ ಅದರ ಆಳ ಅಗಲಗಳ ಪ್ರಭಾವ ದೀರ್ಘಕಾಲವಿರುತ್ತದೆ.

ಈ ದೃಷ್ಟಿಯಿಂದ ಸಿದ್ದರಾಮಯ್ಯನವರ ಆಡಳಿತವನ್ನು ವಿಮರ್ಶಿಸುವುದಾದರೆ ಸ್ವಲ್ಪಮಟ್ಟಿಗೆ ಸಮಾಧಾನಕರ ಎಂದು ನಿಶ್ಚಿತವಾಗಿ ಕೇಳಬಹುದು. ಏಕೆಂದರೆ ಸಾಮಾನ್ಯವಾಗಿ ಅವರ ಮಾತು, ಅವರ ಆಡಳಿತ ವಿಧಾನ ಮತ್ತು ಅವರ ಯೋಜನೆಗಳು ಹೆಚ್ಚು ಕಡಿಮೆ ಸಾಮಾಜಿಕ ನ್ಯಾಯದ ಪರವಾಗಿಯೇ ಇರುವುದನ್ನು ಗಮನಿಸಬಹುದು. ಅದು ಎಷ್ಟರ ಮಟ್ಟಿಗೆ ಅನುಷ್ಠಾನವಾಗಿದೆ, ಅವರು ಎಷ್ಟು ಪ್ರಾಮಾಣಿಕರು ಮತ್ತು ಪಾರದರ್ಶಕತೆಯಿಂದ ವರ್ತಿಸಿದರು ಎಂಬುದು ಚರ್ಚಾಸ್ಪದ ವಿಷಯ‌. ಈ ವ್ಯವಸ್ಥೆಯಲ್ಲಿ ಅಷ್ಟು ಸುಲಭವಾಗಿ ಸಮ ಪ್ರಮಾಣದ ಅನುಷ್ಠಾನ ಖಂಡಿತ ಸಾಧ್ಯವಿಲ್ಲ. ಏಕೆಂದರೆ ಕೇವಲ ರಾಜಕಾರಣಿಗಳು, ಅಧಿಕಾರಿಗಳು ಮಾತ್ರ ಭ್ರಷ್ಟರಾಗಿಲ್ಲ. ಜನರೂ ಸೇರಿ ಇಡೀ ವ್ಯವಸ್ಥೆಯೇ ಬಹುತೇಕ ಭ್ರಷ್ಟವಾಗಿರುವಾಗ ಯೋಜನೆಗಳು ಅಷ್ಟಾಗಿ ತಲುಪುವುದಿಲ್ಲ. ಆದ್ದರಿಂದ ಯೋಜನೆಗಳ ಅನುಷ್ಠಾನವನ್ನು ತೆಗೆದುಕೊಂಡರೆ ಖಂಡಿತವಾಗಲೂ ಸಿದ್ದರಾಮಯ್ಯನವರ ಆಡಳಿತ ವ್ಯವಸ್ಥೆ ತೃಪ್ತಿಕರವಾಗಿಲ್ಲ. ಹಾಗೆಯೇ ಒಬ್ಬ ಮುಖ್ಯಮಂತ್ರಿಯನ್ನು ಇಷ್ಟೊಂದು ವಿಶಾಲವಾಗಿ ವಿಮರ್ಶೆ ಮಾಡುವುದನ್ನು ಬಿಟ್ಟು ಇತರ ಮುಖ್ಯಮಂತ್ರಿಗಳಿಗೆ ಹೋಲಿಕೆ ಮಾಡಿ ವಿಮರ್ಶೆ ಮಾಡಿದರೆ ಆಗ ಇನ್ನೊಂದಿಷ್ಟು ವಾಸ್ತವಕ್ಕೆ ಹತ್ತಿರ ಹೋಗಬಹುದು. ವಿಮರ್ಶೆಯ ಹಾದಿಯಲ್ಲಿ ಹೋಲಿಕೆಯು ಮುಖ್ಯವಾಗುತ್ತದೆ. ಏಕೆಂದರೆ ಇದು ಸಾರ್ವಜನಿಕ ಆಡಳಿತದ ವಿಷಯ, ಜನರ ಜೀವನ ಮಟ್ಟ ಸುಧಾರಣೆಯ ವಿಷಯ. ಕರ್ನಾಟಕದಲ್ಲಿ ಇಲ್ಲಿಯವರೆಗೆ 24 ಮುಖ್ಯ ಮಂತ್ರಿಗಳು ಆಡಳಿತ ನಡೆಸಿದ್ದಾರೆ. ಕೆಲವರು ತೀರಾ ಕಡಿಮೆ ಅವಧಿಗೆ, ಕೆಲವರು ಮಧ್ಯಮಾವಧಿಗೆ ಹಾಗೂ ದೇವರಾಜ ಅರಸು ಮತ್ತು ಸಿದ್ದರಾಮಯ್ಯನವರು ದೀರ್ಘಾವಧಿಗೆ ಆಡಳಿತ ನಡೆಸಿದ್ದಾರೆ. ಆ ಪಟ್ಟಿ ಹೀಗಿದೆ..

ಕೆ. ಚೆಂಗಲರಾಯ ರೆಡ್ಡಿ,
ಕೆಂಗಲ್ ಹನುಮಂತಯ್ಯ,
ಕಡಿದಾಳ್ ಮಂಜಪ್ಪ,
ಎಸ್. ನಿಜಲಿಂಗಪ್ಪ,
ಬಿ. ಡಿ. ಜತ್ತಿ,
ಎಸ್. ಆರ್. ಕಂಠಿ,
ವೀರೇಂದ್ರ ಪಾಟೀಲ್,
ಡಿ. ದೇವರಾಜ ಅರಸು,
ಆರ್. ಗುಂಡೂರಾವ್,
ರಾಮಕೃಷ್ಣ ಹೆಗಡೆ,
ಎಸ್. ಆರ್. ಬೊಮ್ಮಾಯಿ,
ಎಸ್. ಬಂಗಾರಪ್ಪ,
ಎಂ. ವೀರಪ್ಪ ಮೊಯ್ಲಿ,
ಎಚ್‍. ಡಿ. ದೇವೇಗೌಡ,
ಜೆ. ಎಚ್. ಪಟೇಲ್,
ಎಸ್.ಎಂ, ಕೃಷ್ಣ,
ಎನ್. ಧರ್ಮಸಿಂಗ್,
ಎಚ್. ಡಿ. ಕುಮಾರಸ್ವಾಮಿ,
ಬಿ. ಎಸ್. ಯಡಿಯೂರಪ್ಪ,
ಡಿ. ವಿ. ಸದಾನಂದ ಗೌಡ,
ಜಗದೀಶ್ ಶೆಟ್ಟರ್,
ಬಸವರಾಜ ಬೊಮ್ಮಾಯಿ,
ಸಿದ್ದರಾಮಯ್ಯ……..

ಇವರಲ್ಲಿ ಸಾಮಾನ್ಯವಾಗಿ ಜನ ಬೇರೆ ಬೇರೆ ಪ್ರಮುಖ ಕಾರಣಗಳಿಗಾಗಿ ಹೆಚ್ಚಾಗಿ ನೆನಪಿಸಿಕೊಳ್ಳುವ ಪ್ರಮುಖ ಹೆಸರುಗಳು
ಕೆಂಗಲ್ ಹನುಮಂತಯ್ಯ, ನಿಜಲಿಂಗಪ್ಪ, ದೇವರಾಜ ಅರಸು, ವೀರೇಂದ್ರ ಪಾಟೀಲ್, ರಾಮಕೃಷ್ಣ ಹೆಗಡೆ, ಬಂಗಾರಪ್ಪ, ವೀರಪ್ಪ ಮೊಯ್ಲಿ, ದೇವೇಗೌಡ, ಎಸ್ ಎಂ ಕೃಷ್ಣ, ಎಚ್ ಡಿ ಕುಮಾರಸ್ವಾಮಿ, ಯಡ್ಯೂರಪ್ಪ ಮತ್ತು ಸಿದ್ದರಾಮಯ್ಯ.

ಅದರಲ್ಲೂ ಮುಖ್ಯವಾಗಿ ನಿಜಲಿಂಗಪ್ಪ, ದೇವರಾಜ ಅರಸು, ರಾಮಕೃಷ್ಣ ಹೆಗಡೆ, ಎಸ್ ಎಂ ಕೃಷ್ಣ ಮತ್ತು ಸಿದ್ದರಾಮಯ್ಯ. ಮುಖ್ಯರಾಗುತ್ತಾರೆ. ಮತ್ತೆ ಇವರಲ್ಲಿ ದೇವರಾಜ್ ಅರಸು, ರಾಮಕೃಷ್ಣ ಹೆಗಡೆ, ಸಿದ್ದರಾಮಯ್ಯ ಈ ಮೂವರು ಸ್ಪರ್ಧೆಯಲ್ಲಿ ಇರುತ್ತಾರೆ.

ಇದು ಒಟ್ಟು ಪರಿಣಾಮದ ದೃಷ್ಟಿಯಿಂದ ಆಯ್ಕೆ ಮಾಡಿಕೊಂಡ ಹೆಸರುಗಳು. ಈ ವಿಷಯದಲ್ಲಿ ರಾಜಕೀಯ ಪಂಡಿತರು, ಆಡಳಿತ ತಜ್ಞರು, ರಾಜ್ಯದ ಒಟ್ಟು ಹಿತಾಸಕ್ತಿಯ ವಿಶ್ಲೇಷಕರು, ಸಾರ್ವಜನಿಕರ ಆಯ್ಕೆಗಳು ಬೇರೆ ಬೇರೆ ಇರಲೂಬಹುದು. ಮೊದಲೇ ಹೇಳಿದಂತೆ ಯಾವುದೋ ಕೆಲವು ಯೋಜನೆಗಳನ್ನು, ಪ್ರಾಮಾಣಿಕತೆಯನ್ನು, ಆದರ್ಶವನ್ನು, ಪಾರದರ್ಶಕತೆಯನ್ನು, ಸರಳತೆಯನ್ನು, ಜನಪ್ರಿಯತೆಯನ್ನು ಮಾನದಂಡವಾಗಿಟ್ಟುಕೊಂಡು ಬೇರೆಯವರ ಹೆಸರನ್ನು ಸಹ ಸ್ಪರ್ಧೆಯಲ್ಲಿ ಮೇಲಿನ ಮೂರು ಸ್ಥಾನದಲ್ಲಿ ಇಡಬಹುದು. ಅದು ಅವರವರ ವಿವೇಚನೆಗೆ ಬಿಟ್ಟದ್ದು…

ಒಟ್ಟಿನಲ್ಲಿ, ಸರಳವಾಗಿ ಇದರ ಸಾರಾಂಶವನ್ನು ಹೇಳಬೇಕೆಂದರೆ, ಕರ್ನಾಟಕದ ಅತ್ಯುತ್ತಮ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಸಿದ್ದರಾಮಯ್ಯನವರು ಕನಿಷ್ಠ ಐದು ಹೆಸರುಗಳಲ್ಲಿ ಒಬ್ಬರಾಗುವುದು ನಿಶ್ಚಿತವೆನಿಸುತ್ತದೆ. ಈ ಕ್ಷಣದಲ್ಲಿ ಸಿದ್ದರಾಮಯ್ಯನವರು ಇನ್ನೂ ಅಧಿಕಾರದಲ್ಲಿ ಇರುವುದರಿಂದ, ಬೇರೆ ಬೇರೆ ಕಾರಣಗಳಿಗಾಗಿ ಅವರನ್ನು ವಿರೋಧಿಸುವವರ ಸಂಖ್ಯೆ ಹೆಚ್ಚಾಗಿರಬಹುದು. ಹಾಗೆಯೇ ಕೆಲವರಿಗೆ ಸತ್ತ ಅಥವಾ ಮರೆಯಾದ ಮಾಜಿ ಮುಖ್ಯಮಂತ್ರಿಗಳ ಬಗ್ಗೆ ಅನುಕಂಪ ಮತ್ತು ಸಹಾನುಭೂತಿ ಸ್ವಲ್ಪ ಹೆಚ್ಚಾಗಿ ಇರಬಹುದು. ಆದ್ದರಿಂದಲೇ ಹೇಳಿದ್ದು ವಿಮರ್ಶೆ ಮಾಡುವಾಗ ನಮ್ಮ ಮನಸ್ಥಿತಿ ತುಂಬಾ ತುಂಬಾ ತಟಸ್ಥವಾಗಿ ಇರಬೇಕಾಗುತ್ತದೆ. ವಿರೋಧಿಗಳನ್ನು, ಶತ್ರುಗಳನ್ನು, ಭಿನ್ನ ಸೈದ್ಧಾಂತಿಕ ಹಿನ್ನೆಲೆಯವರನ್ನು ಮತ್ತು ನಮ್ಮ ವೈಯಕ್ತಿಕ ಹಿತಾಸಕ್ತಿಗೆ ಧಕ್ಕೆ ತಂದವರನ್ನು ನ್ಯಾಯದ, ಸಮಾನತೆಯ ದೃಷ್ಟಿಕೋನದಲ್ಲಿ ನೋಡಬೇಕಾದ ಬಹುದೊಡ್ಡ ಸವಾಲು ವಿಮರ್ಶಕರ ಮೇಲಿರುತ್ತದೆ.

ಸಾಧನೆಗಳ ಪಟ್ಟಿ, ಹಗರಣಗಳ ಪಟ್ಟಿ, ಯೋಜನೆಗಳ ಪಟ್ಟಿ,
ಅನುಷ್ಠಾನಗಳ ಕಾರ್ಯಕ್ಷಮತೆಯ ಪಟ್ಟಿ, ಪರಿಣಾಮ, ಫಲಿತಾಂಶಗಳ ಪಟ್ಟಿ ಇಟ್ಟುಕೊಂಡು ವಿಮರ್ಶೆ ಮಾಡುವುದು ಸುಲಭವಿರಬಹುದು. ಒಟ್ಟು ವ್ಯಕ್ತಿತ್ವ ಮತ್ತು ವ್ಯವಸ್ಥೆ, ಆಯಾ ಕಾಲಘಟ್ಟಗಳು, ಸಮಯದೊಂದಿಗೆ ಪ್ರಯಾಣ ಎಲ್ಲವನ್ನೂ ಯೋಚಿಸಿ ಸಮಗ್ರವಾಗಿ ವಿಮರ್ಶಿಸುವುದು ತುಂಬಾ ತುಂಬಾ ಕಷ್ಟ ಮತ್ತು ಜನರನ್ನು ಒಪ್ಪಿಸುವುದು ಅಷ್ಟು ಸುಲಭವಲ್ಲ. ಏಕೆಂದರೆ ರಾಜಕೀಯವೆಂಬುದೇ ಅತ್ಯಂತ ಸಂಕೀರ್ಣ ವಿಷಯ. ಯಾವ ಯಾವ ಮಾನದಂಡಗಳು, ಯಾರ ಯಾರ ಪರವಾಗಿ, ಯಾರ ಯಾರ ವಿರುದ್ಧವಾಗಿ ಕೆಲಸ ಮಾಡುತ್ತದೆಯೋ ಆಗಿನ ಸಂದರ್ಭವನ್ನು ಅವಲಂಬಿಸಿರುತ್ತದೆ. ಅಲ್ಲದೆ ಅದರ ಪರಿಣಾಮ ಗೊತ್ತಾಗಲು ಸಮಯ ಬೇಕಾಗುತ್ತದೆ.

ಏನೇ ಆಗಲಿ ಈ ಕ್ಷಣದಲ್ಲಿ ಕೆಲವು ಪ್ರಮುಖ ಆಡಳಿತಾತ್ಮಕ ನಿರ್ಧಾರಗಳನ್ನು ಇಟ್ಟುಕೊಂಡು, ೧೬ ಭಾರಿ ಬಜೆಟ್ ಮಂಡಿಸಿ ರಾಜ್ಯದ ಸ್ವಾತಂತ್ರ್ಯ ನಂತರದ ರಾಜಕೀಯ ಇತಿಹಾಸದಲ್ಲಿ ಅತ್ಯಂತ ಪ್ರಮುಖ ವ್ಯಕ್ತಿಯಾದ ಸಿದ್ದರಾಮಯ್ಯನವರದು ಆ ಕ್ಷೇತ್ರದಲ್ಲಿ ಬಹುದೊಡ್ಡ ಸಾಧನೆ ಎಂಬುದು ನಿಜ. ಅದಕ್ಕೆ ಅವರು ಅಭಿನಂದನೆಗೆ ಅರ್ಹರು. ಹಾಗೆಯೇ ಕೆಲವರಿಗೆ ಅವರ ಕೆಲವು ನಿರ್ಧಾರಗಳು ಇಷ್ಟವಾಗದಿದ್ದರೆ ಟೇಕೆಗೂ ಅರ್ಹರು. ಉಳಿದದ್ದು ಅವರವರ ಭಾವಕ್ಕೆ ಬಿಡುತ್ತಾ….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಭಗತ್ ಸಿಂಗ್ ಕ್ರೀಡಾಂಗಣದಲ್ಲಿ 77ನೇ ಗಣರಾಜ್ಯೋತ್ಸವ ದಿನಾಚರಣೆ: ವೈದ್ಯ, ಪತ್ರಕರ್ತ, ಪೊಲೀಸ್, ಪೌರಕಾರ್ಮಿಕರಿಗೆ ಸನ್ಮಾನ

"77ನೇ ಗಣರಾಜ್ಯೋತ್ಸವ”ದ ಅಂಗವಾಗಿ ದೊಡ್ಡಬಳ್ಳಾಪುರ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾದ…

18 hours ago

ಭಗತ್ ಸಿಂಗ್ ಕ್ರೀಡಾಂಗಣದಲ್ಲಿ 77ನೇ ಗಣರಾಜ್ಯೋತ್ಸವ ದಿನಾಚರಣೆ: ಪತ್ರಕರ್ತ, ಪೊಲೀಸ್, ಪೌರಕಾರ್ಮಿಕರು ಸೇರಿದಂತೆ ಇತರೆ ಸಾಧಕರಿಗೆ ಸನ್ಮಾನ

"77ನೇ ಗಣರಾಜ್ಯೋತ್ಸವ”ದ ಅಂಗವಾಗಿ ದೊಡ್ಡಬಳ್ಳಾಪುರ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾದ…

19 hours ago

ಬೆಳಗಾವಿಯ ಚೋರ್ಲಾ ಘಾಟ್‌ನಲ್ಲಿ ₹400 ಕೋಟಿ ದರೋಡೆ ಪ್ರಕರಣ: ದಟ್ಟಾರಣ್ಯದ ಮೌನದಲ್ಲಿ ಅಡಗಿದ್ದ ಭೀಕರ ರಹಸ್ಯ..ಬೆಚ್ಚಿಬೀಳಿಸುವ ಪ್ರಮುಖ ಅಂಶಗಳು…ಇಲ್ಲಿವೆ ಓದಿ…

ಬೆಳಗಾವಿಯ ದಟ್ಟ ಅರಣ್ಯ ಪ್ರದೇಶದ ನಡುವೆ ಸಾಗುವ ಚೋರ್ಲಾ ಘಾಟ್‌ನ ರಸ್ತೆಗಳು ಸಾಮಾನ್ಯವಾಗಿ ಮೌನದಿಂದ ಕೂಡಿರುತ್ತವೆ. ಆದರೆ, ಆ ಮೌನದಲ್ಲೇ…

1 day ago

2026ನೇ ಸಾಲಿನ ಪದ್ಮ ಪ್ರಶಸ್ತಿ ಪ್ರಕಟ: ಕರ್ನಾಟಕದ 8 ಮಂದಿಯು ಈ ನಾಗರಿಕ ಗೌರವಕ್ಕೆ ಭಾಜನ

2026ನೇ ಸಾಲಿನ ಪದ್ಮ ಪ್ರಶಸ್ತಿ ಪ್ರಕಟವಾಗಿದೆ. ಒಟ್ಟು 131 ಮಂದಿ ಪದ್ಮ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕರ್ನಾಟಕದ 8 ಮಂದಿಯು ಈ…

2 days ago

ಹುಲುಕುಡಿ ವೀರಭದ್ರಸ್ವಾಮಿ ಮತ್ತು ಪ್ರಸನ್ನ ಭದ್ರಕಾಳಮ್ಮ ರಥೋತ್ಸವ

ದೊಡ್ಡಬಳ್ಳಾಪುರ ತಾಲ್ಲೂಕಿನ ಹುಲುಕುಡಿ ವೀರಭದ್ರಸ್ವಾಮಿ ಕ್ಷೇತ್ರದಲ್ಲಿ ಕ್ಷೇತ್ರಾಭಿವೃದ್ಧಿ ಟ್ರಸ್ಟ್ ವತಿಯಿಂದ ರಥಸಪ್ತಮಿ ಅಂಗವಾಗಿ ಇಂದು (ಜ.25) ವೀರಭದ್ರಸ್ವಾಮಿ ಮತ್ತು ಪ್ರಸನ್ನ…

2 days ago

ರಘುನಾಥಪುರ ಬಳಿ ಪಿಕಪ್ ವಾಹನ, ಆಟೋ ಹಾಗೂ ಬೈಕ್ ನಡುವೆ ಅಪಘಾತ: ಓರ್ವ ಬೈಕ್ ಸವಾರ ಸ್ಥಳದಲ್ಲೇ ಸಾವು

ಪಿಕಪ್ ವಾಹನ, ಆಟೋ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಓರ್ವ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ…

2 days ago