
ಬೆಂಗಳೂರು ಗ್ರಾಮಾಂತರ: ರಾಜ್ಯ ರಾಜಕೀಯದಲ್ಲಿ ಸದ್ದು ಮಾಡುತ್ತಿರುವ ಸಿಎಂ ಕುರ್ಚಿ ಕಾದಾಟಕ್ಕೆ ಕಾಂಗ್ರೆಸ್ ಹೈಕಮಾಂಡ್ ಅಂತಿಮ ಸ್ಪರ್ಶ ನೀಡುವ ಲಕ್ಷಣಗಳು ಗೋಚರಿಸುತ್ತಿವೆ. ಹಿರಿಯ ಸಚಿವರ ಹೇಳಿಕೆಗಳು ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಖುರ್ಚಿ ಕದನಕ್ಕೆ ಬ್ರೇಕ್ ಬೀಳುವ ಸೂಚನೆಗಳು ಕಾಣಿಸುತ್ತಿವೆ.
ದೇವನಹಳ್ಳಿ ಪಟ್ಟಣದಲ್ಲಿ ಮಾತನಾಡಿದ ಆಹಾರ ಸಚಿವ ಕೆ.ಎಚ್. ಮುನಿಯಪ್ಪ, ಸಿಎಂ ಖುರ್ಚಿ ಕದನ ವಿಚಾರ ಈ ತಿಂಗಳೊಳಗೆ ಪೈಸ್ಲಾಗುತ್ತೆ ಎಂದು ಮಹತ್ವದ ಹೇಳಿಕೆ ನೀಡಿದ್ದಾರೆ.
ಸಿಎಂ ಕುರ್ಚಿ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಳ್ಳಲಿದೆ, ಇದೇ ವೇಳೆ ಸಂಪುಟ ಪುನರ್ರಚನೆ ಕುರಿತಾದ ಚರ್ಚೆಯೂ ಅಂತಿಮ ಹಂತದಲ್ಲಿದ್ದು, ಅದರ ಬಗ್ಗೆಯೂ ಹೈಕಮಾಂಡ್ ಮಟ್ಟದಲ್ಲಿ ನಿರ್ಧಾರವಾಗಲಿದೆ. ಮುಂದಿನ 15 ರಿಂದ 20 ದಿನಗಳೊಳಗೆ ಸ್ಪಷ್ಟ ನಿರ್ಧಾರ ಹೊರಬೀಳಲಿದೆ ಎಂದು ಹೇಳಿದರು.
ಮುಂದಿನ ವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ವರಿಷ್ಠರನ್ನು ಭೇಟಿಯಾಗಲಿರುವ ಹಿನ್ನೆಲೆ, ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇತ್ತ ತೆರೆಮರೆಯಲ್ಲಿ ಸಿಎಂ ಕುರ್ಚಿ ವಿವಾದಕ್ಕೆ ತಾರ್ಕಿಕ ಅಂತ್ಯ ಕಾಣಿಸಲು ಕಾಂಗ್ರೆಸ್ ನಾಯಕತ್ವ ತೀವ್ರ ಚಟುವಟಿಕೆ ನಡೆಸುತ್ತಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ಸಚಿವ ಮುನಿಯಪ್ಪ ಅವರ ಹೇಳಿಕೆ ರಾಜ್ಯ ಕಾಂಗ್ರೆಸ್ನಲ್ಲಿ ಬದಲಾವಣೆಯ ಮುನ್ಸೂಚನೆಯೇ ಎಂಬ ಚರ್ಚೆಗೆ ಮತ್ತಷ್ಟು ಬಲ ನೀಡಿದೆ.