Categories: ಲೇಖನ

ಸಾವಿನ ಮಾರ್ಗಗಳ ಹುಡುಕಾಟದಲ್ಲಿ ಮಾನವ ಜನಾಂಗ…..

ಬಟ್ಟೆ ಇಲ್ಲದೆ, ಊಟವಿಲ್ಲದೆ, ವಸತಿ ಇಲ್ಲದೆ, ಕುಟುಂಬಗಳಿಲ್ಲದೆ, ವಾಹನಗಳಿಲ್ಲದೆ, ಶಾಲಾ-ಕಾಲೇಜುಗಳಿಲ್ಲದೆ, ಆಸ್ಪತ್ರೆ, ಸರ್ಕಾರಗಳಿಲ್ಲದೆ ಹೇಗೋ ಬದುಕುತ್ತಿದ್ದ ಮಾನವ ಅತ್ಯಂತ ವೇಗವಾಗಿ ತನ್ನ ಸುಖ ಭೋಗಕ್ಕೆ ಎಷ್ಟೆಲ್ಲಾ ಸಾಧ್ಯವೋ ಅಷ್ಟೆಲ್ಲಾ ಅನುಕೂಲಗಳನ್ನು ಮಾಡಿಕೊಳ್ಳುತ್ತಾ ಇಂದಿನ ಪರಿಸ್ಥಿತಿ ತಲುಪಿದ್ದಾನೆ……

ಗಂಟೆಗೆ ನಾಲ್ಕು ಸಾವಿರಕ್ಕೂ ಹೆಚ್ಚು ಕಿಲೋಮೀಟರ್ ವೇಗದಲ್ಲಿ ಸಂಚರಿಸಬಹುದಾದ ಯುದ್ಧ ವಿಮಾನಗಳು, ಚಂದ್ರಗ್ರಹ, ಮಂಗಳ ಲೋಕಕ್ಕೆ ಹೋಗಬಹುದಾದ ರಾಕೆಟ್ ಗಳು, ವಿಶ್ವದ ಯಾವ ಜಾಗವನ್ನು ಬೇಕಾದರೂ ಮನೆಯಲ್ಲಿ ಕುಳಿತು ನೋಡಬಹುದಾದ ಸಂಪರ್ಕ ಸಾಧನಗಳು, ಯಾರೊಂದಿಗೆ ಬೇಕಾದರೂ ಸಂವಹನ ನಡೆಸಬಹುದಾದ ಮಾಧ್ಯಮಗಳು, ಇನ್ನೂ ಮುಂದುವರೆದು ಇತ್ತೀಚೆಗೆ ಬೆಳವಣಿಗೆ ಆಗುತ್ತಿರುವ ಎಐ ತಂತ್ರಜ್ಞಾನ, ಜೊತೆಗೆ ವಿಧವಿಧದ ಭಕ್ಷ್ಯ ಭೋಜನಗಳನ್ನು, ಬಣ್ಣ ಬಣ್ಣದ ಬಟ್ಟೆಗಳನ್ನು, ಮಾದಕ ಪಾನೀಯಗಳನ್ನು, ಅತ್ಯುತ್ತಮ ಸಂಬಂಧಗಳನ್ನು, ವೈಭವೋಪೇತ ಮನೆಗಳು ಎಲ್ಲವನ್ನು ಇಟ್ಟುಕೊಂಡು, ಸುಖಪಡಬೇಕಾದ ಕಾಲದಲ್ಲಿ ಮನುಷ್ಯ ಸಾವಿನ ಮಾರ್ಗಗಳ ಹುಡುಕಾಟದಲ್ಲಿರುವುದು
” ನಗೆಯು ಬರುತಿದೆ ಎನಗೆ ನಗೆಯು ಬರುತಿದೆ ” ಎಂಬ ದಾಸವಾಣಿ ನೆನಪಾಗುತ್ತಿದೆ.

ಧರ್ಮಕ್ಕಾಗಿ, ಭಾಷೆಗಾಗಿ, ಪ್ರದೇಶಕ್ಕಾಗಿ, ಅಧಿಕಾರಕ್ಕಾಗಿ ಒಬ್ಬರನ್ನು ಒಬ್ಬರು ಕೊಂದು ಮಾನವ ಜನಾಂಗವನ್ನೇ ವಿನಾಶ ಮಾಡಿಕೊಳ್ಳುವ ಸಂಶೋಧನೆಯಲ್ಲಿ ಮಾನವ ತೊಡಗಿದ್ದಾನೆ. ಮೊದಲು ಸಮಾಜದ ನೆಮ್ಮದಿಗಾಗಿ, ಕ್ರಮಬದ್ಧ ಮುಂದುವರಿಕೆಗಾಗಿ ಧರ್ಮಗಳನ್ನು, ದೇವರುಗಳನ್ನು, ಪ್ರದೇಶಗಳನ್ನು, ಭಾಷೆಗಳನ್ನು, ಆಡಳಿತ ವ್ಯವಸ್ಥೆಗಳನ್ನು ಕಂಡುಹಿಡಿದು ಸುಂದರ ಬದುಕು ಕಾಣುವ ಸಮಯದಲ್ಲಿ ಬಂದೂಕುಗಳನ್ನು, ಬಾಂಬುಗಳನ್ನು, ಅಣು ವಿಕಿರಣಗಳನ್ನು, ವೈರಸ್ ಗಳನ್ನು ಕಂಡುಹಿಡಿದು ಇದೀಗ ಒಬ್ಬರ ಮೇಲೆ ಒಬ್ಬರು ಅದನ್ನು ಪ್ರಯೋಗಿಸಿ ನಾಶ ಹೊಂದುವ ಪರಿಸ್ಥಿತಿ ನಿರ್ಮಾಣವಾಗಿದೆ…..

ಹುಚ್ಚರ ಸಂತೆ ಕಣಣ್ಣ ಇದು ಹುಚ್ಚರ ಸಂತೆ…….

ಯಾರದೋ ನೀರು, ಯಾರದೋ ಗಾಳಿ, ಯಾರದೋ ಆಹಾರ, ಜೀವವೆಂಬುದು ಯಾರದೋ ಭಿಕ್ಷೆ. ಅದನ್ನ ಅನುಭವಿಸುವುದನ್ನು ಬಿಟ್ಟು ಇದು ನನ್ನದು, ಇದು ನನ್ನದು, ನಾನೇ ಶ್ರೇಷ್ಠ, ನನ್ನ ಧರ್ಮವೇ ಶ್ರೇಷ್ಠ, ನನ್ನ ದೇವರೇ ಶ್ರೇಷ್ಠ, ನನ್ನ ಪ್ರದೇಶವೇ ಶ್ರೇಷ್ಠ ಎಂಬ ಹುಚ್ಚು ಕಲ್ಪನೆಯಿಂದ ತಾನೇ ನಾಶ ಹೊಂದುತ್ತಿದ್ದಾನೆ.
ಇದಕ್ಕಿಂತ ಹುಚ್ಚು ಬೇಕೇ…….

ಆಶ್ಚರ್ಯವೆಂದರೆ ಇತ್ತೀಚಿನ ವರ್ಷಗಳಲ್ಲಿ ವಿಶ್ವದ ಕೆಲವು ರಾಷ್ಟ್ರಗಳಲ್ಲಿ ಸರ್ವಾಧಿಕಾರಿ ಮನೋಭಾವದ, ತಿಕ್ಕಲುತನದ, ವ್ಯಾಪಾರಿ ಗುಣದ ನಾಯಕರುಗಳನ್ನೇ ಜನರು ಸಹ ತಮ್ಮ ಅಧ್ಯಕ್ಷರಾಗಿಯೋ, ಪ್ರಧಾನಿಗಳಾಗಿಯೋ, ಜನಪ್ರತಿನಿಧಿಗಳಾಗಿಯೋ ಆಯ್ಕೆ ಮಾಡಿಕೊಳ್ಳುತ್ತಿರುವುದು ಅತ್ಯಂತ ಆಘಾತಕಾರಿ ಮತ್ತು ವಿಷಾದನೀಯ. ವಿಶ್ವ ಶಾಂತಿಗೆ ಪಣತೊಟ್ಟ ಕೆಲವು ನಾಯಕರ ನಡುವೆ ವಿಶ್ವವನ್ನೇ ಧ್ವಂಸ ಮಾಡುವ ತಿಕ್ಕಲುತನದ ನಾಯಕರುಗಳ ಆಯ್ಕೆ ಜನರು ಸಹ ವಿನಾಶವನ್ನೇ ಬಯಸುತ್ತಿರುವಂತಿದೆ. ಯೋಚನೆಯ ಮಟ್ಟ ಕುಸಿಯುತ್ತಿದೆ. ಸೇಡಿಗೆ ಸೇಡು, ಅವನಿಗೆ ಇವನು ಪಾಠ ಕಲಿಸುತ್ತಾನಂತೆ, ಇವನಿಗೆ ಅವನು ಪಾಠ ಕಲಿಸುತ್ತಾನಂತೆ. ಆದರೆ ಪ್ರಕೃತಿ ಇಡೀ ಮಾನವ ಜನಾಂಗಕ್ಕೆ ಪಾಠ ಕಲಿಸುತ್ತಿದೆ. ಇನ್ನೆಷ್ಟು ರಕ್ತಪಾತಗಳನ್ನು ನಮ್ಮ ಕಣ್ಣ ಮುಂದೆ ನೋಡಬೇಕೋ ಏನೋ……

ಹೌದು ವಿಶ್ವ ಇತಿಹಾಸ ರಕ್ತದ ಕಲೆಗಳಲ್ಲಿಯೇ ಬೆಳವಣಿಗೆ ಹೊಂದಿದೆ. ಆದರೆ ಆ ಅನುಭವದ ಪಾಠ ನಮಗೆ ಮಾದರಿಯಾಗಿ ಒಂದು ಶಾಂತಿಯುತ ವಿಶ್ವಕಟ್ಟಬಹುದಾದ ಸಾಧ್ಯತೆ ಇತ್ತು. ಇಡೀ ಜಾಗತಿಕ ವಿದ್ಯಮಾನ, ನಮ್ಮ ಭಾರತ ವಿದ್ಯಮಾನವನ್ನೇ ತೆಗೆದುಕೊಳ್ಳಿ. ಕರ್ನಾಟಕದ ವಿದ್ಯಮಾನವನ್ನೇ ತೆಗೆದುಕೊಳ್ಳಿ, ಇತ್ತೀಚಿನ ವರ್ಷಗಳಲ್ಲಿ ಹಿಂಸೆ, ಕ್ರೌರ್ಯ, ದ್ವೇಷ ಇಡೀ ಸಮಾಜದಲ್ಲಿ ತಾಂಡವವಾಡುತ್ತಿದೆ. ತಾಳ್ಮೆಯು ಇಲ್ಲ, ಪ್ರಬುದ್ಧತೆಯೂ ಇಲ್ಲ. ಹೊಡೆದಾಟ ಬಡೆದಾಟಗಳೇ ಪ್ರತಿನಿತ್ಯದ ಸುದ್ದಿಗಳು. ಮನೆಯಿಂದ ವಿಶ್ವ ಸಂಸ್ಥೆಯವರೆಗೆ ಎಲ್ಲವೂ ವಿವಾದಗಳೇ……..

ಇಸ್ರೇಲ್, ಹಮಾಸ್, ಇರಾನ್, ರಷ್ಯಾ, ಉಕ್ರೇನ್ ನಡುವಿನ ಯುದ್ಧವನ್ನು ಅದರ ಭೀಕರತೆಯನ್ನು ನೋಡಿದರೆ ಬಹುಶಃ ಸಾವಿನ ಮಾರ್ಗಗಳ ಹುಡುಕಾಟದಲ್ಲಿ ಎಲ್ಲರೂ ಇರುವಂತೆ ತೋರುತ್ತಿದೆ. ಒಬ್ಬರ ನಾಶವನ್ನು ಇನ್ನೊಬ್ಬರು ಬಯಸುತ್ತಿದ್ದಾರೆ. ತಾವೂ ನಾಶ ಹೊಂದುತ್ತಿದ್ದಾರೆ…….

ಕುಳಿತು ಮಾತನಾಡಬಹುದಾದ ಸಾಧ್ಯತೆಗಳೇ ಎಲ್ಲಾ ಕಡೆ ಕ್ಷೀಣಿಸುತ್ತಿದೆ. ವಿಶ್ವಕ್ಕೆ ಶಾಂತಿಯ ಸಂದೇಶ ಕಳಿಸಬಹುದಾದ ಭಾರತ ಪಾಕಿಸ್ತಾನದೊಂದಿಗೆ ಸಂಘರ್ಷದಲ್ಲಿ ತೊಡಗಿದೆ ಅಥವಾ ಪಾಕಿಸ್ತಾನ ಭಾರತದ ಮೇಲೆ ಸದಾ ಭಯೋತ್ಪಾದಕ ದಾಳಿ ನಡೆಸುತ್ತದೆ. ಎರಡೂ ದೇಶಗಳು ನಿಯೋಗಗಳನ್ನು ಮಾಡಿಕೊಂಡು ವಿಶ್ವದ ಬೇರೆಬೇರೆ ದೇಶಗಳಿಗೆ ಒಬ್ಬರ ಮೇಲೆ ಒಬ್ಬರು ಚಾಡಿ ಹೇಳಿಕೊಂಡು ಬರುತ್ತಿದ್ದಾರೆ. ಅಷ್ಟೇ ಶ್ರಮವನ್ನು ಇಬ್ಬರೇ ದ್ವಿಪಕ್ಷೀಯವಾಗಿ ಕುಳಿತು ಮಾತನಾಡಿ ಒಂದಷ್ಟು ಸಮಸ್ಯೆ ಬಗೆಹರಿಸಿಕೊಳ್ಳಬಹುದಾಗಿತ್ತು. ಅದಕ್ಕೆ ಅವಕಾಶವೇ ಆಗುತ್ತಿಲ್ಲ……..

ಒಟ್ಟಿನಲ್ಲಿ ದ್ವೇಷವೇ ಮನುಷ್ಯನನ್ನು ಕುರುಡಾಗಿಸಿದೆ. ಅಮೆರಿಕಾದಂತ ದೇಶದ ಘನತೆಯನ್ನೇ ಮಣ್ಣು ಪಾಲು ಮಾಡಿ ವಿಶ್ವವನ್ನು ಮೂರನೇ ಮಹಾಯುದ್ಧದತ್ತ ಕೊಂಡೊಯ್ಯುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೊಡ್ಡಣ್ಣನ ಸ್ಥಾನದಲ್ಲಿ ನಿಂತು ವಿಕೃತವಾಗಿ ವರ್ತಿಸುತ್ತಿರುವುದು ಈ ಜಗತ್ತಿಗೆ ಒಳ್ಳೆಯ ಲಕ್ಷಣವಲ್ಲ. ರಾಕ್ಷಸ ರಷ್ಯಾ ಅಧ್ಯಕ್ಷ ಪುಟಿನ್, ಮತ್ತೊಬ್ಬ ಕ್ರೂರಿ ಉತ್ತರ ಕೊರಿಯಾ ಅಧ್ಯಕ್ಷ ಇವರೆಲ್ಲ ಮತ್ತಷ್ಟು ಉದ್ವೇಗಗೊಂಡರೆ ಪರಿಣಾಮಗಳು ಎತ್ತ ಸಾಗಬಹುದು ಯೋಚಿಸಿ……

ಚೀನಾ ಮತ್ತು ಭಾರತ ವ್ಯಾಪಾರದ ದೃಷ್ಟಿಯಿಂದ ತಮಗೆ ಎಷ್ಟು ಲಾಭವಾಗಬಹುದು ಎಂಬ ಯೋಚನೆಯಲ್ಲಿ ಇದ್ದಂತಿದೆ. ಮನುಷ್ಯ ಜನಾಂಗವೇ ವಿನಾಶದ ಅಂಚಿಗೆ ಬಂದು ನಿಂತಿರುವಾಗ ಹಣದಿಂದ ಮಾಡುವುದೇನು…….

ಇತ್ತೀಚಿನ ವರದಿಗಳಂತೆ ಇಸ್ರೇಲ್ ಇರಾನಿನ ಮೇಲೆ ಅಣ್ವಸ್ತ್ರಗಳನ್ನು ಪ್ರಯೋಗಿಸುವ ಸಾಧ್ಯತೆ ಇದೆಯಂತೆ. ಹಾಗೇನಾದರೂ ಆದರೆ ಆ ವಿಕಿರಣಗಳು ಮಾನವ ಜಗತ್ತಿನ ವಿನಾಶಕ್ಕೆ ಮುನ್ನುಡಿ ಬರೆಯಬಹುದು. ಅದರಿಂದ ಪ್ರೇರಣೆಗೊಂಡು ರಷ್ಯಾ ಉಕ್ರೇನ್ ಮೇಲೆ ಅಣು ಬಾಂಬ್ ಪ್ರಯೋಗಿಸಬಹುದು. ಮಾನವ ತನ್ನ ವಿನಾಶಕ್ಕೆ ತಾನೇ ಮಾರ್ಗಗಳ ಸಂಶೋಧನೆಯಲ್ಲಿರುವುದು ಈ ಕಾಲಘಟ್ಟದ ವಿಚಿತ್ರ ಸತ್ಯ……

ಶಾಂತಿಗಾಗಿ ಸಾಮಾನ್ಯ ಜನರ ಹೋರಾಟಗಳು, ಧ್ವನಿಗಳು ಕೇಳುತ್ತಲೇ ಇಲ್ಲ. ಬಹುಶಃ ಎಲ್ಲರೂ ಸಾಯಲು ಸಿದ್ದರಾಗಿದ್ದಾರೆನೋ, ನೋಡೋಣ ಮುಂದೆ………..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಸುಮಾರು 500 ಕೋಟಿ ಮೌಲ್ಯದ ಜಮೀನು ಖಾತೆ ಬದಲಾವಣೆ ಆರೋಪ: ದೊಡ್ಡಬಳ್ಳಾಪುರ ಉಪವಿಭಾಗದ ಹಿಂದಿನ ಎಸಿ ದುರ್ಗಾಶ್ರೀ ಹಾಗೂ ಕಚೇರಿ ಸಿಬ್ಬಂದಿ ವಿರುದ್ದ ಲೋಕಾಯುಕ್ತ ಸ್ವಯಂಪ್ರೇರಿತ ಪ್ರಕರಣ ದಾಖಲು

ದೇವನಹಳ್ಳಿ ತಾಲೂಕಿನ ಸಣ್ಣ ಅಮಾನಿಕೆರೆ, ಬೈಚಾಪುರ ಹಾಗೂ ಪ್ರಸನ್ನಹಳ್ಳಿ ಗ್ರಾಮಗಳ 62.20 ಎಕರೆ ಖಾಸಗಿ ಜಮೀನಿನ ಖಾತೆ ಬದಲಾವಣೆಯಲ್ಲಿ ಅಕ್ರಮ…

6 hours ago

ಹೂ ಕೀಳುವಾಗ ಹಾವು ಕಚ್ಚಿ ಮಹಿಳೆ ಸಾವು

ದೊಡ್ಡಬಳ್ಳಾಪುರ: ತೋಟದಲ್ಲಿ ಸುಗಂಧರಾಜ ಹೂ ಕೀಳುವಾಗ ಹಾವು ಕಚ್ಚಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ಸಮೀಪದ ಪಚ್ಚಾರ್ಲಳ್ಳಿ…

7 hours ago

ದೇವರಾಜ ಅರಸು ಅವರ ಆಶಯಗಳಿಗೆ ಧ್ವನಿಯಾಗೋಣ-ಡಿಸಿ ಡಾ. ಕೆ.ಎನ್ ಅನುರಾಧ

ಕರ್ನಾಟಕ ಕಂಡ ಧೀಮಂತ ನಾಯಕ, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಜನಪರ ಯೋಜನೆಗಳು, ಆಶೋತ್ತರಗಳಿಗೆ ನಾವೆಲ್ಲರೂ ಧ್ವನಿಯಾಗಿ ಮುಂದಿನ…

8 hours ago

ಅಂಗನವಾಡಿ ಕಟ್ಟಡ ಅರ್ಧಕ್ಕೆ; ಬಾಡಿಗೆ ಮನೆಯಲ್ಲಿ 30 ಕಂದಮ್ಮಗಳ ಪರದಾಟ: 17.50 ಲಕ್ಷ ವೆಚ್ಚದ ಕಾಮಗಾರಿ ಪೂರ್ಣಗೊಳಿಸದೆ ನಿರ್ಲಕ್ಷ್ಯ ಆರೋಪ

ಮನೆಯಲ್ಲಿ ಆಟವಾಡಿಕೊಂಡು ಕಾಲ ಕಳೆಯುತ್ತಿದ್ದ ಪುಟ್ಟ ಕಂದಮ್ಮಗಳನ್ನು ಪೋಷಕರು ಉತ್ತಮ ಶಿಕ್ಷಣ ದೊರೆಯಲಿ ಎಂಬ ಆಶಯದಿಂದ ಅಂಗನವಾಡಿ ಕೇಂದ್ರಕ್ಕೆ ಕಳುಹಿಸುತ್ತಿದ್ದಾರೆ.…

9 hours ago

ಮೀಸಲಾತಿ ಘೋಷಣೆ ಬೆನ್ನಲ್ಲೇ ಗ್ರಾಮಾಂತರದಲ್ಲಿ ಚುನಾವಣಾ ಕಾವು: ಹಳ್ಳಿಗಳಲ್ಲಿ ಚುರುಕಾದ ರಾಜಕೀಯ ಚಟುವಟಿಕೆ: ಆಕಾಂಕ್ಷಿಗಳಿಂದ ಲೆಕ್ಕಾಚಾರ ಆರಂಭ

  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗ್ರಾಮ ಪಂಚಾಯಿತಿಗಳ ಚುನಾವಣೆಗೆ ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಗ್ರಾಮೀಣ ಭಾಗದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಯಾವ…

16 hours ago

ಹೆದ್ದಾರಿ ಸರ್ವೀಸ್ ರಸ್ತೆಗಳಲ್ಲಿ ಭಾರೀ ವಾಹನಗಳ ಅನಧಿಕೃತ ನಿಲುಗಡೆ: ಸಾರ್ವಜನಿಕರ ಜೀವದೊಂದಿಗೆ ಚೆಲ್ಲಾಟ

  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮೂಲಕ ಹಾದುಹೋಗುವ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳ ಸರ್ವೀಸ್ ರಸ್ತೆಗಳು ದಿನದಿಂದ ದಿನಕ್ಕೆ ಭಾರಿ…

2 days ago